Search This Blog

Wednesday, October 6, 2010


ಗ್ರೀಷ್ಮ ವಸಂತ

ಬಾಳ ಗ್ರೀಷ್ಮದ ಪಥದೆ,  ಪ್ರೀತಿ ಬದುಕಿನ ಮರವೇ
ನಲ್ಲೆಯೊಲವಿನ ಮತ್ತೇ ನೆರಳಿನಂತೆ

ಚಿಗುರಿದೆಲೆಯಾ ಮರದ ಹಳೆಯ ಬೇರಿನ ನೆನಪೇ
ಒಲವಿನುಯ್ಯಾಲೆಯನೇ ಜೀಕಿದಂತೆ

ಎದೆಯ ಭಾವನೆ ಬಸಿರು ರಾಗ ತಾನದ  ಉಸಿರು
ತನುವು ತನುವಲಿ ಬೆರೆತ  ನೆನಪೆ ಹಸಿರು

ಕಾಲ ಕಾಲಕೂ ನಿಲುವ ಮನದ ಬಯಲಲಿ ಸಿಗುವ
ಅವಳ ಚೆಲುವಿನ ಸಿರಿಯು  ಹರಿವ ತನುವ

ಕೋಗಿಲೆಯ ಪಂಚಮದ ಮಧುರ ಮಂಜುಳ ಗಾನ
ನಮ್ಮ  ಒಲವಿನ ಸವಿಯ ಕುರುಹು ತಾನ

ಹಳೆಯ ನೆನಪಿನ ಬುತ್ತಿ , ಬಿಚ್ಚಿ ತೆನ್ನನು ಮುತ್ತಿ
ಮನೆ ಮನದ ತುಂಬೆಲ್ಲಾ ನೆನಪು ಸುತ್ತಿ

ಪ್ರೀತಿ ನೆಮ್ಮದಿ ಭರಿತ ಬದುಕೇ ಸಾರ್ಥಕ ಪಥವು
ಸ್ನೇಹದೊಲವಿನ ನೆರಳಲಿನ್ನು  ಹರಿವು

ಉಕ್ಕಿ ಹರಿಯಲಿ ಒಲವು ವಿಶ್ವ ದೊಳಗೆಲ್ಲೆಲ್ಲೂ
ಪ್ರಕೃತಿ ಮನುಜನ ಸನಿಹ ಬಾಳ್ವೆಯಲ್ಲೂ

Sunday, October 3, 2010

ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ

 
 
ಹಣಕಾಸಿನ ಕೀರ್ತಿ ಯಶಸ್ಸಿನ
ವಿಷಯದಲ್ಲಂತೂ ಸಂಶಯವೇ ಇಲ್ಲವಂತೆ
ಮನೆ  ಮನಸ್ಸೂ ಮತ್ತು ಆರೋಗ್ಯ,
ಎಂದೆಂದಿಗಿಂತಲೂ ಉತ್ತಮವಂತೆ
ಮನೆಯವರು ಮಕ್ಕಳೂ ತುಂಬಾನೇ ಖುಷ್
ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ
ಅಮ್ಮ ಹೇಳ್ತಾ ಇದ್ದಳು ಮೊನ್ನೆ

ಎರಡು ತಿಂಗಳಿಂದ ಸಂಬಳ ಸಿಗ್ತಾ ಇಲ್ಲ
ರಿಸೆಷನ್ ಇನ್ನೂ  ಮುಗಿದಿಲ್ಲವಂತೆ
ಇದು ಹೀಗೇ ಮುಂದುವರಿಯುತ್ತಂತೆ
ಕೇಳಲೇ ಬೇಡಿ ಇಡೀ ವರ್ಷ  ಮತ್ತೆ
ಇಂಕ್ರಿಮೆಂಟೂ ಭಡ್ತಿಯೂ, ಬೋನಸ್ಸೂ ಭತ್ಯೆ,
ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ
ಅಮ್ಮ ಹೇಳ್ತಾ ಇದ್ದಳು ಮೊನ್ನೆ

ಈಗಂತೂ ಎಟಿಎಮ್ ಮಿಷನ್ನೂ
ಮೊನ್ನೆ ಕಿಚಾಯಿಸಿತು ನನ್ನನ್ನು
ಎಲ್ಲಿಂದಾದರೂ  ಹಾಕಿ ನೋಡು ಹಣ
ಮತ್ತೆ ಬೇಕಾದರೆ ಮಾಡು ತಪಾಸಣೆ
ಇದ್ದರಲ್ವಾ ಕೊಡೋಕೆ ನಿನ್ನ  ಹಣ
ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ
ಅಮ್ಮ ಹೇಳ್ತಾ ಇದ್ದಳು ಮೊನ್ನೆ

ಕಳೆದ ಸಾರಿ ತಗೊಂಡ ಸಾಲ
ಇನ್ನೂ ತೀರಿಸಿ ಆಗಿಲ್ಲ
ಮತ್ತೆ ಯಾರು ಕೊಡ್ತಾರೆ ಅಲ್ಲಾ
ಕೆಲಸ ಜಾಸ್ತಿಯೇ ಎಂದಿನಂತೆಯೇ ಎಲ್ಲಾ
ರಿಸೆಷನ್ ರಿಸೆಷನ್ ರಿಸೆಷನ್ ಅಲ್ಲಾ
ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ
ಅಮ್ಮ ಹೇಳ್ತಾ ಇದ್ದಳು ಮೊನ್ನೆ

ಮಾಲೀಕ ಮನೆ ಬಾಡಿಗೆ ಏರಿಸಿದ ಮೊನ್ನೆ
ಎಲ್ಲಾ ವಸ್ತುಗಳ ಬೆಲೆಯೂ ಜಾಸ್ತಿಯೇ ಇನ್ನೂ
ಊಟ ತಿಂಡಿ ಬಿಡಲು ಸಾಧ್ಯವಿಲ್ಲ ವಲ್ಲ
ನಾವು ಮಕ್ಕಳೊಂದಿಗಿನ, ಸಂಸಾರಸ್ಥರಲ್ವಾ
ಗಾಣದೆತ್ತಿನ ರೀತಿ ದುಡಿಯುವಂತಹರಲ್ವಾ
ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ
ಅಮ್ಮ ಹೇಳ್ತಾ ಇದ್ದಳು ಮೊನ್ನೆ


ಆರೋಗ್ಯ ಸರಿ ಯಾಗಿಯೇ ಇದೆ ಇನ್ನೂ
ಆದರೂ ಮೊನ್ನೆಯಿಂದ  ಸಣ್ಣಕ್ಕೆ  ಜ್ವರ ತಲೆನೋವು
ಇದೆಲ್ಲಾ ಏನಿಲ್ಲ ಬಿಡಿ ನಮಗೆ ಮಾಮೂಲು
 ಇದೆ ಕೆಲವೊಮ್ಮೆ ಬೀಪಿ ಎದೆ ನೋವೂ
ನಡೆದರೂ ಸರಿ ದಮ್ಮೂ ಸ್ವಲ್ಪ ಕೆಮ್ಮೂ
ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ
ಅಮ್ಮ ಹೇಳ್ತಾ ಇದ್ದಳು ಮೊನ್ನೆ

Monday, September 27, 2010

ಗ್ರೀಷ್ಮದ ಮೆ(ಮು)ಲುಕಾಟ

ಗ್ರೀಷ್ಮದ ಮೆ(ಮು)ಲುಕಾಟ






ಮತ್ತೆ ಗತಿಸಿತು ಇನ್ನೊಂದು ಸಂವತ್ಸರವು
ಮತ್ತು ಸ್ವಲ್ಪ ಜಾಸ್ತಿ ಹಳಬರಾದೆವು ನಾವು
ಈ ಸಾರಿ ಬೇಸಗೆ ಸ್ವಲ್ಪ ಜಾಸ್ತಿ ಬಿಸಿಯಾಯ್ತು
 ಚಳಿಗಾಲ ಸ್ವಲ್ಪ ಜಾಸ್ತಿಯೇ ಚಳಿಯಾಯ್ತು

ಅಷ್ಟೇನೂ ಅತೀ ಹಿಂದಿನ ಅನುಭವ ಅಲ್ಲ ಇದು
ಭರ್ತಿ ಹುರುಪಿದ್ದ ಕಾಲವಿತ್ತು ಆಗ ಅದು
ಗತ ವೈಭವದ ನೆನಪು ಯಾರಾದ್ರೂ ಎಂದದ್ದೇ
ಪ್ರತಿ ಬಾರಿ ಅದರ ಮೆಲುಕಲ್ಲೇ ನಾನಿದ್ದೆ

ಆಗೆಲ್ಲಾ ನಮ್ಮ ಲಗ್ಗೆಯಿತ್ತು ಮದುವೆ ಮುಂಜಿಗಳಲ್ಲೂ
ಫುಟ್ ಬಾಲ್ ಕ್ರಿಕೆಟ್ ಮತ್ತಿತರ ಚಟುವಟಿಕೆ ಗಳಲ್ಲೂ
ಈಗ ಬರೇ ಅಂತ್ಯ ಸಂಸ್ಕಾರ, ಶೋಕಾಚರಣೆಗಳು
ಮತ್ತು ಅಗಾಗ್ಗೆ ಬೊಜ್ಜ  ತಿಥಿ ಊಟ  ಗಳು

ಆಗೆಲ್ಲಾ ಪಾರ್ಟಿ ನಗೆಕೂಟಗಳ ಸಂಭ್ರಮವಿತ್ತು
ಅದರ ಸ್ಮೃತಿಗಳ ಅಗಾಗ್ಗೆ ಮೆಲುಕಾಟವಿತ್ತು
ಈಗಂತೂ ಮೈ ಕೈ ನೋವುಗಳ ಭರ್ಜರಿಯೂಟ
ಮತ್ತು ನಿಶೆಯ ರಾತ್ರೆಗಳ ನಿದ್ರಾಭಂಗ ಕಾಟ

ಹೊರ ಏಕಾಂತವಾಸಗಳ ಸವಿಯಲ್ಲಿ
ರಾತ್ರೆಯ ಒಡನಾಟಗಳ ಸಂಭ್ರಮದ ಕುಷಿಯಲ್ಲಿ
ಸಂಜೆಯ ನಡುಗೆ ಅಜೀರ್ಣ ಕಡಿಮೆ ಮಾಡೋದಕ್ಕೆ
ಮತ್ತೆ ಗುಳಿಗೆ ರಾತ್ರೆಯ ನಿದ್ದೆ ಮಾಡಿಸೋದಕ್ಕೆ

ಆಗೆಲ್ಲಾ ನಮ್ಮ ಪ್ರೋತ್ಸಾಹದ ಪ್ರವಾಸವಿತ್ತು
ಹತ್ತಿರ ದೂರದ ಪ್ರೇಕ್ಷಣೀಯ ಸ್ಥಳಗಳತ್ತ
ಈಗಂತೂ ಪ್ರತಿ ಯಾನ ವೂ ತುಂಬುತ್ತಿದೆ
ನಮ್ಮ ದೇಹವ ನೋವಿನ ಮಹಾ ಪೂರದೆ

ರಾತ್ರೆ ಕ್ಲಬ್ಬಿನ ನಮ್ಮ ಅವಿರತ  ಭೇಟಿಯ
ಸ್ವಲ್ಪ ಜಾಸ್ತಿಯೇ ಮೈ ಮರೆವ ಆ ಪೇಯ
ಈಗಿನ ರಾತ್ರೆಯ  ಮನೆವಾಸ ಲೇಸು
ಕೇಳುತ ಕಳೆಯಲು ಸಂಜೆಯ ನ್ಯೂಸು

ಹೀಗಿದೆ ಜೀವನ  ನಮ್ಮದು ಗೆಳೆಯ
ಹಳತಾಗಿದೆ ಈ ಗೋಳಿನ ಕಥೆಯ
ಈಗಿನ ಪ್ರತಿದಿನ ಕಳೆ ನೀ  ನಗುತಲು
ಮುಲುಕುವ ನನ್ನಂತಾಗುವ ಮೊದಲು

Sunday, September 26, 2010

ಶ್ರೀಯುತ ಡಿ ಎಸ್ ರಾಮಸ್ವಾಮಿಯವರಿಗೆ ೨೦೧೦ ರ " ವಿಭಾ ಸಾಹಿತ್ಯ ಪ್ರಶಸ್ತಿ"

ಶ್ರೀಯುತ ಡಿ ಎಸ್ ರಾಮಸ್ವಾಮಿಯವರಿಗೆ ೨೦೧೦ ರ " ವಿಭಾ ಸಾಹಿತ್ಯ ಪ್ರಶಸ್ತಿ"




ಮಿತ್ರರೇ

ಒಂದು ಅತ್ಯಂತ ಶುಭ ಹಾಗೂ ಖುಶಿ ಸಮಾಚಾರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನ್ನ  ಮನಸ್ಸು ತವಕಿಸುತ್ತಿದೆ.

ಸಂಪದಿಗರಾದ  ಡಿ ಎಸ್ ರಾಮಸ್ವಾಮಿಯವರಿಗೆ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ನೀಡಲಾಗುವ ೨೦೧೦ ರ "ವಿಭಾ ಸಾಹಿತ್ಯ ಪ್ರಶಸ್ತಿ" ಅವರ "ತೆರೆದರಷ್ಟೇ ಬಾಗಿಲು" ಕೃತಿಗೆ ಲಭಿಸಿದೆ.

ಇವರ "ಮರೆತ ಮಾತು’(೨೦೦೨);’ಉಳಿದ ಪ್ರತಿಮೆಗಳು’(೨೦೦೭) ಎರಡು ಕವನ ಸಂಕಲನಗಳು ಪ್ರಕಟಗೊಂಡಿವೆ.

ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ ಮತ್ತು ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯ ಪ್ರಶಸ್ತಿಗಳು ಲಭಿಸಿವೆ.

ಪ್ರಜಾವಾಣಿ ದೀಪಾವಳಿ ಕವನಸ್ಪರ್ಧೆ ೨೦೦೪,೨೦೦೫ ಮತ್ತು ೨೦೦೮ರ ಬಹುಮಾನ. ಆಕಾಶವಾಣಿ ಹಾಸನಕೇಂದ್ರದಿಂದ ಇವರ  ೧೦೦ಕ್ಕೂ ಹೆಚ್ಚು ಚಿಂತನ ಬರಹಗಳು ಪ್ರಸಾರಗೊಂಡಿವೆ.

ಭಾರತೀಯ ಜೀವ ವಿಮಾನಿಗಮದ ಅರಸೀಕೆರೆ ಶಾಖೆಯಲ್ಲಿ ಉದ್ಯೋಗದಲ್ಲಿರುವ ಶ್ರೀಯುತ ರಾಮಸ್ವಾಮಿಯವರು ಇತ್ತೀಚೆಗಷ್ಟೇ ಬೆಂಗಳೂರಿಗೆ ವರ್ಗವಾಗಿ ಅಧಿಕಾರ ಸ್ವೀಕರಿಸಿದ್ದಾರೆ .


ನಮ್ಮ ನಿಮ್ಮೆಲ್ಲರ ಮೆಚ್ಚುಗೆಗೆ ಪ್ರಶಂಶೆಗೆ ಪಾತ್ರರಾಗಿರುವ  ಇವರ ಲೇಖನಿಯಿಂದ ಇನ್ನೂ ಇಂತಹ ಹಲವಾರು ಕೃತಿಗಳು ಉದ್ಭವಿಸಲಿ ಮತ್ತು ಇನ್ನೂ ಇಂತಹ ಹತ್ತು ಹಲವಾರು  ಪ್ರಶಸ್ತಿಗಳು ಇವರಿಗೆ ಲಭಿಸಲಿ

ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ.

Friday, September 24, 2010

ಬಸ್ಸಿನಲ್ಲಿ ತನ್ನದಲ್ಲದ್ದು


ತ್ಯಾಂಪ
ಕೈ ಹಾಕಿದ ಜೇಬಿಗೆ
ಪಾಕೀಟು,
ಅಧರ ವರ್ಣ  ದಂಡ
ಕತ್ತರಿ,
ಉಗುರ  ವರ್ಣ ಲೇಪ
ಬಾಚಣಿಗೆ
ಚಿಲ್ಲರೆ
ಬಿಸ್ಕತ್ತು
ಇನ್ನೂ ಏನೇನೋ
ಒಂದೊಂದಾಗಿ
ಸಿಗುತ್ತಿರಲು
 ಇದೇನಿದು
ನನ್ನ ಕಿಸೆಯಲ್ಲಿ
ಅಂದುಕೊಳ್ಳುತ್ತಿರುವಾಗಲೇ
ಚಟೀರ್ ಅಂತ ಪೆಟ್ಟು ಕೂಡಾ
ಆಗಲೇ ಗೊತ್ತಾದದ್ದು
ಇದು ತನ್ನದಲ್ಲ
ಅಂತ

ಮಹಾ ತಿಮಿರ

ಮಹಾ ತಿಮಿರ

ಹೊರಗೆ ಕವಿಯುತ್ತಿದೆ
ಸಂಜೆಯ ಕತ್ತಲು
ಜತೆಗೆ ಸುರಿಯುವ
ಸೋನೆ ಮಳೆ
ಮನದ ಬಾನಲೂ
ಆತಂಕದ ಛಾಯೆ
ನಾಳಿನ ಚಿಂತೆಯ
ಮಹಾ ತಿಮಿರ
ಮಾಯೆಯ ಮುಸುಕು
ಅಂದರೂ
ಪ್ರಕೃತಿಯ ಕೋಪ ಎಂದರೂ
ಕವಿಯುವುದು
ನನ್ನ ಮೇಲೇಯೇ ಎಲ್ಲ
ಮನೆಯೊಳಕ್ಕೆ
ಧಾವಿಸಲೂ ಮನಸ್ಸಿಲ್ಲ
ಅಲ್ಲೂ ಕತ್ತಲೆಯೇ
ಯಾಕೆಂದರೆ
ಕರೆಂಟಿಲ್ಲ

ಒಬ್ಬ ವ್ಯಾಪಾರಿ ದಿವಾಳಿಯಾಗುವ ಸ್ಥಿತಿ ತಲುಪಿದ್ದ.
ಸಾಲಗಾರರ ಕಾಟ ಆತ ತಡೆಯಲಾರದೇ ಹೋದ. ಇವೇ ತನ್ನ ಬದುಕಿನ ಕೊನೆಯ ದಿನಗಳಂತೆ ಅನ್ನಿಸಿತು ಅವನಿಗೆ. ಬೇರೆ ದಾರಿಯೇ ಕಾಣದೇ ಒಂದು ಪಾರ್ಕ ನ ಬೆಂಚಿನ ಮೇ ಲೆ ತನ್ನ ಎರಡೂ ಕೈಗಳನ್ನು ತಲೆಯ ಮೇಲಿಟ್ಟು ಕುಳಿತಿದ್ದ,  ಸಹಾಯದ ಏನಾದರೂ ಹೊಸ ಕಿರಣ ಸಿಗಬಹುದೇ ಎಂದು ಯೋಚಿಸುತ್ತಾ....
ಅಕಾಸ್ಮಾತ್ತಾಗಿ ಒಬ್ಬ ವೃದ್ಧ ಆತನೆದುರಿಗೆ ಬಂದು ಕೇಳಿದ " ಏನು ... ತುಂಬಾ ಚಿಂತೆಯಲ್ಲಿರೋ ಹಾಗಿದೆ?"
ಈತ ತನ್ನ ಕಷ್ಟಗಳನ್ನೆಲ್ಲಾ ಅವನಿಗೆ ತಿಳಿಸಿದ.
ತುಂಬಾ ಸಮಾಧಾನದಿಂದ ಕೇಳಿದ ವೃದ್ಧ " ನಾನು ನಿನಗೆ ಸಹಾಯ ಮಾಡ ಬಲ್ಲೆ ಎನ್ನಿಸುತ್ತಿದೆ" ಎಂದ
ಈತನ ಹೆಸರು ಕೇಳಿದ ವೃದ್ಧ ಒಂದು ಚೆಕ್ ಬರೆದು ಆತನ ಕೈಗಿತ್ತು ಹೇಳಿದ " ಇಗೋ ಇದನ್ನು ತೆಗೆದುಕೋ, ಇವತ್ತಿಂದ ಸರಿಯಾಗಿ ಒಂದು ವರುಷದ ಬಳಿಕ ನಾವು ಇದೇ ಜಾಗದಲ್ಲಿ ಸಿಗೋಣ, ಆಗ ನೀನು ಈ ಹಣ ನನಗೆ ವಾಪಾಸ್ಸು ಕೊಟ್ಟರೆ ಸಾಕು" ಎಂದ.
ಆತ ಹೇಗೆ ಬಂದಿದ್ದನೋ ಹಾಗೇ ವಾಪಾಸ್ಸು ಹೋದ.
ಈತ ತನ್ನ ಕೈಯ್ಯಲ್ಲಿದ್ದ ಚೆಕ್ ನೋಡಿದ, ಅದು ೫,೦೦,೦೦ ಡಾಲರ್ ಚೆಕ್, ರುಜು ಹಾಕಿದಾತ ಆಗಿನ ಅತ್ಯಂತ ದೊಡ್ಡ ಶ್ರೀಮಂತರ ಸಾಲಿನ ಜೋನ್ ಡಿ ರಾಕ್ ಫೆಲ್ಲರ್.
"ನನ್ನ ಜೀವನದ ಅತ್ಯಂತ ಯಾತನಾಮಯ ದಿನಗಳು ತೊಲಗಿದವು" ಈತನೆಂದುಕೊಂಡ,
ಆದರೆ ಆತನು ಆತ ಈ  ಚೆಕ್ಕನ್ನು ತನ್ನ ತಿಜೋರಿಯಲ್ಲಿಯೇ ಇಟ್ಟುಕೊಂಡು, ಅದು ತನ್ನ ಬಳಿಯಿದೆ ಎನ್ನುವ ಯೋಚನೆಯೇ ತನಗೆ ತನ್ನ ಬುಸಿನೆಸ್ ನಲ್ಲಿ ಈ ದುರ್ವಿಧಿಯಿಂದ ಪಾರಾಗಲು ಏನಾದರೊಂದು ಹೊಸ ಯೋಚನೆ ಹೊಳೆಸೀತು ಎಂದುಕೊಂಡ.
ಅದು ಹಾಗೆಯೇ ಆಯ್ತು, ಆತನ ಈ ಹೊಸ ಆಲೋಚನೆಯೇ ಆತನ ವ್ಯಾಪಾರೀ ಮನೋಭಾವನೆಯನ್ನು  ಎದ್ದೇಳಿಸಿ ಹೊಸ ಶಕ್ತಿ ತುಂಬಿತು ಮತ್ತು ಕೆಲವೇ ತಿಂಗಳಲ್ಲಿ ಆತ ತನ್ನ ಹಳೆಯ ಸಾಲದಿಂದ ಮುಕ್ತನಾಗಿದ್ದ, ಮತ್ತು ಆತನ ಲಾಭ ದ್ವಿಗುಣವಾಗತೊಡಗಿತು.
ಸರಿಯಾಗಿ ಒಂದು ವರುಷದ ಬಳಿಕ ಆತ ಅದೇ ಪಾರ್ಕನಲ್ಲಿ ಹಳೆಯ ಚೆಕ್ ಹಿಡಿದುಕೊಂದು ಆ ವೃದ್ಧನಿಗಾಗಿ ಕಾಯುತ್ತಿದ್ದ. ಹೇಳಿದ ಸಮಯಕ್ಕೆ ಸರಿಯಾಗಿ ಆ ವೃದ್ಧ ಹಾಜರಾಗಿದ್ದ.
ಆದರೆ ಇನ್ನೇನು ವ್ಯಾಪಾರಿ ತನ್ನ ಏಳಿಗೆಯ ಕಥೆ ಅವನಿಗೆ ಹೇಳಿ ಧನ್ಯವಾಅದಾ ಸಮರ್ಪಿಸಿ ಅವನ  ಚೆಕ್ ವಾಪಾಸು ಕೊಡಬೇಕೆಂದು ಕೊಂಡಿದ್ದ.
ಅಷ್ಟರಲ್ಲಿ ಒಬ್ಬ ದಾದಿ ಓಡುತ್ತ  ಬಂದು ಆ ವೃದ್ಧನನ್ನು ಹಿಡಿದುಕೊಂಡಳು.
"ಅಂತೂ ನಾನು ಅವನನ್ನು ಹಿಡಿದು ಬಿಟ್ಟೆ, ಆತನು ನಿಮಗೇನೂತೊಂದರೆ ಕೊಡಲಿಲ್ಲ  ತಾನೇ, ಆತ ವೃದ್ಧಾಶ್ರಮದಿಂದ ತಪ್ಪಿಸಿಕೊಂಡು ಬಂದು ತಾನು ಶ್ರೀಮಂತ ಜೋನ್ ಡಿ ರಾಕ್ ಫೆಲ್ಲರ್ ಎಂದೇ ಹೇಳುತ್ತಾನೆ" ಹೇಳಿ ಆಕೆ ಆತನನ್ನು ತನ್ನ  ಜತೆ ಕರೆದೊಯ್ದಳು.
ವ್ಯಾಪಾರಿ ಸ್ಥಂಭೀಭೂತನಾದ.
ಹಾಗಾದರೆ ಇಡೀ ಒಂದು ವರ್ಷ ತನ್ನ ವ್ಯಾಪಾರವನ್ನು ಉತ್ತುಂಗಕ್ಕೇರಿಸಿದ್ದು ತನ್ನ ಹತ್ತಿರವಿದ್ದ  ಈ ೫ ಲಕ್ಷದ ಚೆಕ್ಕೇ ಅಲ್ಲವೇ.
ಆಗಲೇ ಆತನಿಗೆ ಅರಿವಾದದ್ದು ತನ್ನ ವ್ಯಾಪಾರದ ಏಳಿಗೆಗೆ ಕಾರಣ ತನ್ನ ಹತ್ತಿರವಿದ್ದ ಹಣವಲ್ಲ,
ಬದಲು ಆತನನ್ನು ಹೊಸದಾಗಿ ಹೊಸ ರೀತಿ ಯೋಚಿಸಲು ಪ್ರೇರೇಪಿಸಿದ್ದ ಮಾನಸಿಕ ಶಕ್ತಿ  ಆತನ ನಂಬುಗೆ.

(ನೆಟ್ ಕಥೆ  ಆಧಾರಿತ)

ಬರೇ ನನ್ನೊಬ್ಬನಿಂದೇನಾಗುವುದು!!!!!!

ಬರೇ ನನ್ನೊಬ್ಬನಿಂದೇನಾಗುವುದು!!!!!!



ಮರಳಿನ ಕಣ ಕಣ ಹೀಗೆಂದಿದ್ದರೆ
ಪ್ರಥ್ವಿಗೆ ನೆಲವು ಎಲ್ಲಿರುತ್ತಿತ್ತು?
ನೀರಿನ ಪ್ರತಿ ಅಣು ಹೀಗೆಂದಿದ್ದರೆ
ಇಹದಾ ಸಾಗರಕರ್ಥವು ಇತ್ತೆ?


ಸ್ವರವೊಂದೊಂದೂ ಹೀಗೆಂದಿದ್ದರೆ
ಸಂಗೀತವಂತೂ ಎಲ್ಲಿರುತ್ತಿತ್ತು?
ಅಕ್ಷರವೊಂದು ಹೀಗೆಂದಿದ್ದರೆ
ಓದಲು ನಮಗೆ ಏನಿರುತ್ತಿತ್ತು?



ಪೈರು ಪಚ್ಛೆಗಳೆಲ್ಲಿಯ ಬಯಲು,
ಧಾನ್ಯದ ಕಾಳೂ ಹೀಗೆಂದಿದ್ದರೆ
ಮನೆಯೇ ಇರುವುದು ಸಂಶಯವಿತ್ತು
ಇಟ್ಟಿಗೆಯಂತೂ ಹೀಗೆಂದಿದ್ದರೆ


ನಮ್ಮಲ್ಲೆಲ್ಲರೂ ಹೀಗೆಂದಿದ್ದರೆ
ಶಾಂತಿ ಪ್ರೀತಿಯ ಹೆಸರಿರುತ್ತಿತ್ತೇ?
ಈ ವ್ಯತ್ಯಯವರಿತರೆ ನಾವೂ
ನಡುವಿನ ಅಂತರ ನೀಗದೇ ಮತ್ತೇ

ತ್ಯಾಂಪನ ರಾಮಾಯಣ



ಕಾರು ತುಂಬಾ ಹಸಿರಾದ ವಾತಾವರಣದಲ್ಲಿ ಹೊಕ್ಕ ಹಾಗಿತ್ತು, ವಿಶಾಲವಾದ ಜಾಗ ಆವರಣದಲ್ಲಿ ಕಾರು ನಿಂತಿತು. ಕಾರಿನಿಂದ ಕೆಳಗಿಳಿಯುತ್ತಲೇ ದೂರದಲ್ಲಿ ದೊಡ್ಡದಾಗಿ ಬರೆದ " ನಿಮಾನ್ಸ್ ಮಾನಸ ಚಿಕಿತ್ಸಾಲಯ" ಕಂಡಿತು.
ಪಕ್ಕ ತಿರುಗಿದೆ ದೊಡ್ಡ ದೊಡ್ಡ ಸರಳುಗಳ ಮುಚ್ಚಿದ ಬಾಗಿಲಿನ ಹಿಂದೆ ಒಬ್ಬನನ್ನು ಹಿಡಿದು ಎಳೆಯುತ್ತಿದ್ದರು ಇಬ್ಬರು, "ನಾನು ಹುಚ್ಚ ಅಲ್ಲ ನಾನು ಹುಚ್ಚ ಅಲ್ಲ " ಎನ್ನುವ ಮಾತು ಆರೋಗಿಯ ಬಾಯಿಂದ.
ಯಾಕೋ ಸ್ವರ ಕೇಳಿದ ಹಾಗೆಯೇ ಇತ್ತು. ಸ್ವಲ್ಪ ಈ ಕಡೆ ತಿರುಗಿದ ಮುಖ ನೋಡಿ ಬೆಚ್ಚಿದೆ!!! ತ್ಯಾಂಪ....ಅವನಿಗೇನಾಯ್ತು... ? ಆತನೂ ಈ ಕಡೆ ತಿರುಗಿ... ಸೀನಾ ನಾನು ಹುಚ್ಚ ಅಲ್ಲ ಕಣೋ ಇವರು ಸುಮ್ಮನೇ ಕರೆತಂದಿದ್ದಾರೆ ನನ್ನ ಬಾರೋ ಇಲ್ಲಿಂದ ಬಿಡಿಸೋ ಅನ್ನುತ್ತಿದ್ದ.....
ಥಟ್ಟನೆ ಎಚ್ಚರಾಯ್ತು..
ಹೌದು ಇದು ಕನಸೇ...
ಪಕ್ಕದಲ್ಲೇ ದೂರವಾಣಿಯ ಸದ್ದು.. ಅದೇ ಸ್ವರ ಸೀನನದ್ದು
ತ್ಯಾಂಪನ್ನ ಕಂಡಿದ್ಯಾ..?
ಇಲ್ಲೆ ಯಾಕೆ...?
ಹುಶಾರಿಲ್ಲೆ ಅಂಬ್ರ...
ಎಂತ ಆಯ್ತಾ..?
ನೀ ಹೋಯ್ ಕಾಣ ಅಕ್ಕಾ... ನಾನ್ ಕಡಿಗ್ ಬತ್ತೆ.
ಏನು ಮಾಡಲೂ ಗೊತ್ತಾಗದೇ ಅವನ ಮನೆಗೆ ಫೋನಾಯ್ಸಿದೆ. ಯಾರೋ ಎತ್ತಿದರು. ಯಾರು ಮಾತಾಡೋದು?...ತ್ಯಾಂಪ....
ತ್ಯಾಂಪಾ... ಏನಾಯ್ತೋ ಹುಷಾರಿಲ್ಲ ಅಂಬ್ರಲ್ಲ ಏನಾಯ್ತು..?
ಯಾರು ತ್ಯಾಂಪ..? ಇಲ್ಲಿಯಾರೂ ತ್ಯಾಂಪ ಇಲ್ಲಲ್ಲ..
ಮತ್ತೆ ನೀವು ಯಾರು..? ನಾನು ಮಂಗ್ಯಾ...

ನಂಬರ್ ಪುನಹ ತಾಳೆ ನೋಡಿದೆ ಅದೇ ಇದೆ ಮತ್ತೆ ಸ್ವರ ಅವನದ್ದೇ ಆದರೆ ಯಾಕೆ ಮಂಗ್ಯಾ ಅಂದ...
ಅಂದರೆ ಕೇಸು ಸೀರಿಯಸ್ಸೇ... ಅಲ್ಲಿಗೇ ಹೋಗ ಬೇಕಾಗಿದೆ

ಅವನ ಚಿಕ್ಕಂದಿನ ಕಥೆಯಿದು. ಅವನಿಗೊಂದು ಅಭ್ಯಾಸ ಇತ್ತು. ಬೆಳಿಗ್ಗೆ ಎದ್ದ ಕೂಡಲೇ ಮೊದಲು ಆತ ಯಾರನ್ನ ನೋಡುತ್ತಾನೋ , ಯಾರೇ ಸಿಗಲಿ, ಅವರ ಹತ್ತಿರ ಇವ ನಾನು ಯಾರು? ಅಂತ ಕೇಳುವ. ಉತ್ತರಕ್ಕೆ ಅವರು ಏನೇ ಹೇಳಲಿ ಆ ದಿನವಿಡೀ ಮನೆಯಲ್ಲಿ ಎಲ್ಲರೂ ಅದೇ ಹೆಸರು ಹಿಡಿದೇ ಕರೆಯ ಬೇಕು. ಬೇರೆ ಯಾವ ಹೆಸರೂ ಕರೆಯ ಕೂಡದು. ಯಾರೋ ಬೆಳಿಗ್ಗೆಮಕ್ಕಳು ತಮಾಷೆಗೆ "ನಿನ್ನ ಹೆಸರು ನಾಯಿ" ಅಂದಿದ್ದರು. ಎಲ್ಲರೂ ಅವನನ್ನು ಆ ದಿನವಿಡೀ ನಾಯಿ ಅಂತಲೇ ಕರೆಯ ಬೇಕಲ್ಲ. ಅವನಿಗೇನೂ ಬೇಸರವಿಲ್ಲ, ಬೇಸರವೆಂದರೆಹಾಗೆ ಕರೆಯದಿದ್ದರೆ ಮಾತ್ರ. ಕೆಲವೊಮ್ಮೆ ಇದು ವಿಪರಿತಕ್ಕೆ ಹೋಗಿ ಬೆಳಿಗ್ಗೆ ಅವನಿಗೆ ಏನಂತ ಹೆಸರು ಹೇಳಿದ್ದರೋ ಅದು ಮರೆತು ಹೋಗಿ, ಆ ಹೆಸರು ಕರೆಯದಿದ್ದುದ್ದಕ್ಕಾಗಿ ಇಡೀ ದಿನ ಆತ ಅಳುತ್ತಿದ್ದೂ ಉಂಟು.

ಮನೆಯಲ್ಲಿ ಆತನೇ ಇದಿರ್ಗೊಂಡ . ಏನಾಯ್ತಪ್ಪಾ ತ್ಯಾಂಪ ಎಂದರೆ ತ್ಯಾಂಪ ಯಾರು? ನಾನು ಮಂಗ್ಯಾ ಅಂದ
ಸರಿ ಬಿಡು ಮಂಗ್ಯಾ..ನಿನ್ನ ಪತ್ನಿ ಎಲ್ಲಿ" ಕೇಳಿದೆ
ಅಷ್ಟರಲ್ಲಿ ಅವನ ಹೆಂಡತಿ..
"ಇಲ್ಲಣ್ಣಾ ಅವರು ಬೇರೆಯೇ ಆಗಿದ್ದಾರೆ, ಈಗ ಯಾವಾಗಲೂ ಮಂಕಾಗಿ ಕುಳ್ತಿರ್ತಾರೆ, ಏನಾಯ್ತು ಅಂತ ಕೇಳಿದರೆ ಹೇಳೋಲ್ಲ"
"ಒಂದುಉಪಾಯ ಮಾಡು ಮಾವಿನಕಾಯಿ ತಂಬುಳಿ ಮತ್ತಿ ಹುರುಳಿ ಚಟ್ನಿ ಬೆಳ್ಳುಲ್ಲಿ ಹಾಕಿ ಊಟ ಮಾಡಿಸು, ಸರಿ ಹೋಗ್ತಾನೆ ಬಿಡು."
"ಪ್ರಯೋಜನ ಇಲ್ಲೆ, ಮೊನ್ನೆ ಏನಾಯ್ತು ಗೊತ್ತಾ? ಇವರು ಹೊರಗಡೆ ಹೋಗಿದ್ದರು!!!"
"ಯಾಕೆ ಮನೆಯಲ್ಲಿ ಪಾಯಿಖಾನೆ ಇತ್ತಲ್ಲಾ..?"
"ಅಲ್ಲಣ್ಣಾ...... ಹಾಗೇ ಅಡ್ಡಾಡಲು ಹೋಗಿದ್ದರು. ಮನೆಗೆ ಬರುವಾಗ ಮರೆತು ಹೋಗಿ ದಾರಿ ತಪ್ಪಿ ತು ಪಕ್ಕದ ಮನೆಯವರಿಗೆ ಅಂತ ಕೊಟ್ಟ ಕಾಗದ ಅವರ ಕೈಯಲ್ಲೇ ಇತ್ತು, ಅದರಲ್ಲಿದ್ದ ವಿಳಾಸ ಯಾರ್ಯಾರ ಹತ್ರಾನೋ ಕೇಳ್ಕಂಡು ಬಂದು ಪಕ್ಕದ ಮನೇನೇ ತಮ್ ಮನೆ ಅಂತ ತಿಳ್ಕೋಂಡು ಮಧ್ಯಾಹ್ನದ ವರೆಗೆ ಅಲ್ಲಿಯೇ ಆರಾಮ್ ಆಗಿ ಇದ್ದರು,ಸಂಜೆ ಮನೆ ಹೆಂಗ್ಸಿಗೇ ಏನಮ್ಮ ಬೆಳಗಿಂದ ಇಲ್ಲೇ ಇದ್ದೀಯಲ್ಲ ನಿಮ್ ಗಂಡ ನೋಡಿದ್ರೆ ಏನ್ ಅಂದ್ಕೊಳ್ಳೊಲ್ಲ ಅಂತ ಕೇಳೋದೇ..ಅಷ್ಟೇ ಆದ್ರೆ ಚಿಂತೆ ಇಲ್ಲಾ"
"ಹೇಳಿ ಹೇಳಿ"
"ಮೊನ್ನೆ ನಮ್ಮ ಮಗನ್ನ ಪಕ್ಕದಮನೆ ಹುಡುಗ ಅಂತ ಮಾತಾಡ್ಸಿದ್ರು, ಕೆಲವು ಸಾರಿ ನನ್ನನ್ನೇ ಯಾರು ಅಂತ ಕೇಳೋರು. . ಕಳೆದ ಹದಿನೈದ್ ದಿನದಿಂದ ಕಲ್ಲೂರಾಮ್ ರವರ ಆಫೀಸಿಗೆ ಇವ್ರ ಹೋಗಿಯೇ ಇಲ್ಲವಂತೆ , ಮನೆಯಿಂದ ದಿನಾ ಬೆಳಿಗ್ಗೆ ಹೊರಟು ಸಂಜೆ ಬರ್ತಾ ಇದ್ರು , ಎಲ್ಲಿಗೆಲ್ಲ ಹೋಗಿ ಎನೇನ್ ಮಾಡಿ ಬಂದ್ರೋ ಗೊತ್ತಿಲ್ಲ. ಈಗ ತಲೆಗೊಬ್ರ ಮಾತಾಡೋರು"
"ಯಾಕೆ ಡಾಕ್ಟ್ರ ಹತ್ರ ಹೋಗ್ಲಿಲ್ಲವಾ?"
"ಅದೇ ದೊಡ್ಡ ಕಥಿ, ನನ್ನ ಅಕ್ಕ ಡಾಕ್ಟ್ರ ಬೇಡ, ಗುರುಗಳಹತ್ರ ಹೋಗೋಣ ಅಂತ ಹೇಳಿ ಯಾವ್ದೋ ಗುರುಗಳ ಹೋಗಿ ಅವ್ರ ಹೇಳಿದ್ದ ಕೇಳ್ಕಂಡ್ ಬಂದ್ವಿ"
"ಸರಿ ಆಮೇಲೆ..?"
"ಆಮೇಲೆಂತ...? ನವಗೃಹರಿಗೆ ೯ ಸುತ್ತು, ಅಶ್ವತ್ಥನಿಗೆ ೭ ಸುತ್ತು ಅಂತ ಅಲ್ಲೆಲ್ಲ ಹೋಗಿ ತಿರುಗಿ ತಿರುಗಿ ಯಾರ್ಯಾರಿಗೋ ಡ್ಯಾಷ್ ಹೊಡ್ದ ಚಪ್ಪಲಿ ಸೇವೆ ಮಾಡ್ಕಂಡ್ ಬಂದದ್ದಾಯ್ತ್.
"ಅಯ್ಯೋ ಪಾಪ"
"ಅನುಭವಿಸ್ದೋರಿಗೇ ಗೊತ್ತು ಸಂಕಟ ,ಮೊನ್ನೆ ಇದೆಲ್ಲ ಬ್ಯಾಡ ಅಂತೇಳಿ ಯಾವ್ದೋ ಗಲ್ಲಿ ಡಾಕ್ಟ್ರ ಹತ್ರ ಹೋಯ್ತ್ ,ಅವ್ರ್ ೧೦-೧೫ ಬೇರೆ ಬೇರೆ ಮಾತ್ರೆ ಕೊಟ್ಟಿದ್ರ. ಮೊನ್ನೆ ನಾನಿಲ್ಲೆ ಅಂತೇಳಿ ಯ್ವ್ಯಾವ್ದೋ ಮಾತ್ರೆ ಎಲ್ಲ ಒಟ್ಟಿಗೇ ತಿಂದರು. ಅದ್ಕೇ ಈಗ ಬೆಳಿಗ್ಗೆ ಎದ್ದ ಕೂಡ್ಲೇ ನಾನ್ ಯಾರ?ನನ್ನ ಹೆಸರು ಎಂತ..? ಅಂತ ಕೇಳೋದು, ಎಂತ ಹೆಸರ್ ಕೇಳ್ತ್ರೋ ,ಅದೇ ಹೆಸ್ರ ದಿನಾ ಇಡೀ ಕರೆಯ ಬೇಕು
ಪಕ್ಕದ್ಮನೆ ಖಿಲಾಡಿ ಮಕ್ಕಳು ಎಂತೆಂತದ್ದೋ ಹೆಸ್ರ್ ಹೇಳಿ ಅದನ್ನ ಕರೆಯಕಾಗ್ದೇ ನಮ್ಗೆ ಪಜೀತಿ. ನನ್ನ ಖರ್ಮ

ಮೊನ್ನೆ ಆ ಗುರುಗಳು ಬಂದ್, ಡಾಕ್ಟ್ರ ಕೊಟ್ಟ ಆ ಮಾತ್ರೆ ತಿನ್ನಿಸ ಬೇಡಿ ಅಂದ್ರ ಅವನು ಹಾಗೇ ಸರಿಯಾಗ್ತಾನೆ ಅಂದ್ರು

ಇಲ್ಲ ನೀವೇ ಹೇಳಿ ಅಣ್ಣಾ..? ನಾನು ಯಾರ ಮಾತು ಕೇಳೋದು?

ನಿನ್ನೆ ನನ್ನ ಅಪ್ಪ ಇವರನ್ನು ನಿಮ್ಹಾನ್ಸ್ ಗೆ ತೋರಿಸಿ ಅಂದರು


ನಿಮ್ಹಾನ್ಸ್ ಗಾ" ಎಂದೆ ಗಾಬರಿಯಿಂದ.


-2-

ಹೌದು..ನಿಮ್ಹಾನ್ಸ್ ಗೆ"
ಯಾಕೆಂದರೆ ಅಲ್ಲಿನ ನರತಜ್ಞರು ಇವನನ್ನು ಸರಿಯಾಗಿ ಪರೀಕ್ಷಿಸಿ ಚಿಕಿತ್ಸೆ ಕೊಡಿಸುತ್ತಾರೆ ಅಂತ ಇರಬಹುದು.
ಅದೆಲ್ಲ ಸರಿ ನಿಜವಾಗಿ ಇದು ಹೇಗೆ ಶುರುವಾಯ್ತು..? ಯಾಕೆ ತ್ಯಾಂಪ ಹೀಗಾದ ಹೇಳಿ ನನಗೆ... ಮೊದಲಿಂದ." ನಾನೆಂದೆ.
ತ್ಯಾಂಪನ ಹೆಂಡತಿ ಅರ್ಥಾತ್ ತ್ಯಾಂಪಿ ಇದಕ್ಕೆ ಕಾರಣವಾದಘಟನೆಯನ್ನು ವಿವರಿಸಿದ್ದು ಹೀಗೆ
." ಆ ದಿನ ಅಂದರೆ ರವಿವಾರ ೧.೦೮.೧೦ ರಂದು. . ನಮಗೆ ಮಂತ್ರಿ ಮಾಲ್ ನಲ್ಲಿ ಸ್ವಲ್ಪ ಕೆಲಸವಿತ್ತು.ನಾನೂ ಅವರೂ ಹೊರಗಡೆ ಹೋಗಿದ್ದವು
ಹಿಂದಿನ ದಿನ ಸಂಪದದಲ್ಲಿ ಬಂದ ದುಬೈ ಮಂಜಣ್ಣನ " ನೆನಪಿನಾಳದಿಂದ...೧೧, ೧೨ " ಲೇಖನ ( http://sampada.net/blog/manju787/31/07/2010/27204), ಓದಿ ಭಾರೀ ಖುಷಿಯಲ್ಲಿದ್ದರು, ತಾವೇ ಮಂಜಣ್ಣನಾದ ಹಾಗೆ ಅವರ ಫೈಟಿಂಗ್ ಶೈಲಿ ನನಗೆ ಮತ್ತೆ ಮತ್ತೆ ವಿವರಿಸುತ್ತಿದ್ದರು. ಅದು ಅವರು ತನ್ನ ಅಕ್ಕನ ಮರಣದ ದುಃಖಾತಿರೇಕದಿಂದ ಆಗಿದ್ದೆಂದರೂ ಅವರು ಕೇಳಲಿಲ್ಲ. ಅಂತ ಅಲ್ಲಿಗೆ ಹೋದೆವು. ಅಲ್ಲಿ ಮೊದಲಿಂದ್ಲೂ ಅವರಿಗೆ ಆ "ಎತ್ತಣೆ " ನೋಡಿದರೆ ಹೆದರಿಕೆ. ಅದರಲ್ಲಿ ಎಂದೂ ಹೋಗೋದೇ ಇಲ್ಲ. ಆ ದಿನ ಪಕ್ಕದ ಮನೆಯ ಮಕ್ಕಳೂ ಜತೆಗಿದ್ದವು.ಅದರಲ್ಲೇ ಹೋಗೋಣ ಅಂತ ಅವುಗಳ ಒತ್ತಾಯ ಬೇರೆ.ಸರಿ
ಒಂದು ಕೈಯ್ಯಲ್ಲಿ ಬಕೇಟು ಹಿಡಿದು ಇನ್ನೇನು ಬೇಕೋ ಬೇಡವೋ ಅಂತ ಇನ್ನೇನು ಮೊದಲ ಹೆಜ್ಜೆ ಮೆಟ್ಟಲಿನ ಮೇಲೆ ಇಡಬೇಕು, ಪಕ್ಕದಲ್ಲೇ ಒಂದು ಹೆಂಗಸಿಗೂ ಗಂಡಸಿಗೂ ಜಗಳ( ಪ್ರಾಯಷಃ ಅವಳ ಗಂಡನೇ ಇರಬೇಕು) ಆಗುವುದನ್ನು ನೋಡಿದರು, ಇದನ್ನು ಬಿಟ್ಟು ಅವರ ಜಗಳ ಬಿಡಿಸಲು ಹೊರಟರು. ತಾನೇ ದುಬಾಯಿ ಮಂಜಣ್ಣ ಅಂದ್ಕೊಂಡು ಅದೇ ಶೈಲಿಯಲ್ಲಿ ಹೊರಟರು. ಆದರೆ ಅದದ್ದೇ ಬೇರೆ. ಆತ ಇವರನ್ನೇ ತಪ್ಪು ತಿಳಕೊಂಡು , ಇವರ ಮೇಲೆ ಏರಿಬಂದ ಮೊದಲ ಪೆಟ್ಟು ಅವನೇ ತಿಂದ ಜೋರಾಗಿಯೇ, ಆದರೆ ನಂತರದ್ದು ಮಾತ್ರ ಇವರ ಬಾರಿ, ಉಪ್ಪಿನಲ್ಲಿ ಹಾಕಿದ ಮಾವಿನ ಕಾಯಿಯಾಯ್ತು ಇವರ ಗತಿ,
ಅದೂ ಅಲ್ಲದೇ ನಂತರ ಇವರು "ಎತ್ತಣೆ" ( ಎಲಿವೇಟರ್) ಮೇಲೆ ಯಾವ ಧ್ಯಾನದಲ್ಲಿ ನಿಂತರೋ, ಅದರ ಮೇಲೆ ಒಂದು ಕಾಲು ಮಾತ್ರ ಇತ್ತು, ಅನಂತರ ಏನಾಯ್ತೊ ಗೊತ್ತಿಲ್ಲ, ಕಾಲು ಮೇಲೆ ತಲೆ ಕೆಳಗೆ ಆಗಿ , ಬಕೇಟು ನೆಲಕ್ಕೆ ತಾಗಿದ ಶಬ್ದ ( ಜತೆಯಲ್ಲಿ ಇವರೂ ಇದ್ದರಲ್ಲ) ಸ್ವಲ್ಪ ಜೋರಾಗಿಯೇ ಇತ್ತು, ಪಕ್ಕದಲ್ಲೇ ನಿಂತಿದ್ದ ಗೂರ್ಖಾ "ಎತ್ತಣೆ" ( ಎಲಿವೇಟರ್).... ಯನ್ನು ನಿಲ್ಲಿಸದಿದ್ದರೆ ಗೊತ್ತಿಲ್ಲ ಏನಾಗುತ್ತಿತ್ತೋ. ಅಂತು ಹಿಡಿದು ಎತ್ತಿದೆವು ಆಗೇನೋ ಸರಿಯಿದ್ದ ಹಾಗೆ ಅನ್ನಿಸಿತ್ತು .
ಸ್ವಲ್ಪ ಕಾಲ ಅವರನ್ನು ಅಲ್ಲಿಯೇ ಪಕ್ಕದ ಮನೆಯಮಕ್ಕಳ ಜತೆ ಬಿಟ್ಟು ನಾನು ನನ್ನ ಪರ್ಚೇಸಿಂಗ್ ಗೆ ಸ್ವಲ್ಪ ಕಾಲ ಬೇರೆ ಫ್ಲೋರ್ ಗೆ ಹೋಗಿದ್ದೆ. ವಾಪಾಸ್ಸು ಬಂದು ನೋಡಿದರೆ ... ಪೂರ್ತಿ ಬದಲಾಗಿದ್ದಾರೆ ಅನ್ನಿಸಿತು.್
"ಸ್ವಲ್ಪ ಕಾಲ ಎಂದರೆ ನಾನು ಕೇಳಿದೆ...?"
ಬರೇ ನನ್ನ ಎರಡು ಐಟಮ್ ಖರೀಧಿಸಿದೆ ಅಷ್ಟೇ,
ಅಂದರೆ ಸುಮಾರು ಎರಡು ಮೂರು ಗಂಟೆಗಳಾಗಿದ್ದಿರಬಹುದು ಅಷ್ಟೇ
ಸರಿ ನೀವು ಬಂದು ನೋಡಿದಾಗ ಏನಾಗಿತ್ತು..?
ನಾನು ಬಂದು ನೋಡುವಾಗ ಪ್ರಳಯವೇ ಬಂದಂತಾಗಿತ್ತು
ಯಾಕೆ..?
ನನ್ನವರನ್ನು ಮಂತ್ರಿ ಮಾಲ್ ನ ಗೇಟ್ ನ ಹೊರಗಡೆ ಕಳುಹಿಸಿದ್ದರು, ಅಲ್ಲಿಯೇ ಪುನಹ ಒಳಕ್ಕೆ ಬರ ಬಾರದ ಹಾಗೆ ಪಕ್ಕದಲ್ಲೇ ಸೆಕ್ಯುರಿಟಿ ಕೂಡಾ ಕಾಯುತ್ತಿದ್ದರು.
ಸರಿ ಆಮೇಲೆ..?
ಅವರ ಕೈಯ್ಯಲ್ಲೊಂದು ಪತ್ರವಿತ್ತು.
ಪತ್ರವಾ ? ಯಾವ ಪತ್ರ..?
ತ್ಯಾಂಪನ ಹೆಂಡತಿ ಕೊಟ್ಟ ಪತ್ರ ಓದಿದೆ ಒಕ್ಕಣೆ ಸರಿ ಸುಮಾರು ಹೀಗಿತ್ತು
ನನಗೂ ಅವರಿಗೂ ಮುಂದಿನ ೬ ತಿಂಗಳು ಮಾಲ್ ನೊಳಕ್ಕೆ ಪ್ರವೇಶ ನಿಷೇಧ ಹೇರಿದ್ದ ಪತ್ರವದು. ಆ ಪತ್ರದ ಒಕ್ಕಣೆ ಹೀಗಿತ್ತು.
ಮಿ ತ್ಯಾಂಪ ಹಾಗೂ ಅವರ ಧರ್ಮ ಪತ್ನಿಗೆ ಮುಂದಿನ ಆರು ತಿಂಗಳ ಕಾಲ ಮಂತ್ರಿ ಮಾಲ್ ನೊಳಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಕಾರಣ ಹೀಗಿದೆ
೧. ಹೆಂಗಸರ ಬಾಸ್ಕೇಟಿನಲ್ಲಿ ರೇಝರ್ ಗಳನ್ನೂ ಗಂಡಸರ ಬಾಸ್ಕೇಟಿನಲ್ಲಿ ಹೆಂಗಸರ ಒಳ ಉಡುಪುಗಳನ್ನೂ ಅವರ ವಸ್ತುಗಳ ಜತೆ ಸೇರಿಸಿ ಕೋಲಾಹಲವನ್ನುಂಟು ಮಾಡಿದ್ದಾರೆ.
೨. ಕೆಲವು ಗ್ರಾಹಕರ ಕಾಲ ಕೆಳಗಿನಿಂದ ಟೋಮೇಟೋ ಸಾಸ್ ಉದ್ದಕ್ಕೂ ಚೆಲ್ಲಿ ಅವರಲ್ಲಿ ಹಾಗೂ ನಮ್ಮ ಸ್ಟಾಫ್ ನವರಲ್ಲಿ ಆತಂಕ ಸೃಷ್ಟಿಸಿದ್ದಾರೆ.
೩. ಡ್ರೆಸ್ಸಿಂಗ್ ರೂಮ್ ನಲ್ಲಿ ಕೆಲಕಾಲವಿದ್ದು ಅಲ್ಲಿಂದ "ಹೇಯ್ ಇಲ್ಲಿ ಟೊಯ್ಲೆಟ್ ಪೇಪರ್ ಇಟ್ಟಿಲ್ಲ " ಅಂತ ಗಲಾಟೆ ಮಾಡಿದ್ದಾರೆ.
೪. ಮಕ್ಕಳ ಆಟಿಕೆಯ ವಿಭಾಗದಲ್ಲಿ ಎಲ್ಲಾ ಹಲವಾರು ಆಟಿಕೆಗಳ ಸ್ವಿಚ್ಚುಗಳನ್ನು ಅದುಮಿ ಅಲ್ಲಿಗೆ ಬಂದ ಮಕ್ಕಳನ್ನೂ ದೊಡ್ದವರನ್ನೂ ಕಂಗಾಲು ಮಾಡಿಸಿದ್ದಾರೆ
೫. ಹೆಂಗಸರು ಮಕ್ಕಳ ಮೇಲೆ ಎಲ್ಲೆಂಲ್ಲಿಂದಲೋ ಹಾವು ಜಿರಲೆ ಹಲ್ಲಿ( ಕೃತಿಮ) ಬೀಳಿಸಿ ಹಂಗಾಮಾ ಮಾಡಿದ್ದಾರೆ.
೬. ಹೆಂಗಸರು ಗಂಡಸರು ಎಂತ ಚೇಂಜ್ ರೂಮಿನ ಹೊಸ ಬೋರ್ಡಗಳನ್ನು ಬದಲಿಸಿ ಹಲವರನ್ನು ಬೆಚ್ಚಿ ಬೀಳಿಸಿದ್ದಾರೆ.
೭. ಮಕ್ಕಳ ವಿಭಾಗದ ಎಲ್ಲಾ ಮಕ್ಕಳಿಗೂ ಒಂದೊಂದು ಐಸ್ ಕ್ರೀಂ ಉಚಿತ ಎಂದು ಧ್ವನಿವರ್ಧಕದಲ್ಲಿ ಮಕ್ಕಳ ದನಿಯಲ್ಲಿ ಹೇಳಿಸಿ ಕೊಡದೇ ಇದ್ದಾಗ ಅವರೆಲ್ಲಾ ಅಳುವಂತೆ ಮಾಡಿ ಸತ್ಯಾ ನಾಶ್ ಮಾಡಿದ್ದಾರೆ
೮. ಪ್ರಿಂಟರ್ ಪೇಪರಗಳನ್ನು ಟೋಯ್ಲೆಟ್ ಪೇಪರ್ಗಳನ್ನೂ ಬದಲಿಸಿ ನಮ್ಮ ಸ್ಟಾಫ್ ಗಳನ್ನು ಬೇಸ್ತು ಬೀಳಿಸಿದ್ದಾರೆ.
೯. ಮಾಲ್ ನೊಳಗಿನ ಎಲ್ಲಾ ಗ್ರಾಹಕರ ಬಾಸ್ಕೇಟಿನಲ್ಲಿ ಮಿ ತ್ಯಾಂಪನವರು ಒಂದೊಂದು ಕಂಡೋಮ್ ಪ್ಯಾಕೇಟನ್ನು ಅವರಿಗೆ ಗೊತ್ತಿಲ್ಲದ ಹಾಗೆ ಹಾಕಿ ಅವರಲ್ಲಿ ಗಲಿಬಿಲಿ ಮೂಡಿಸಿರುತ್ತಾರೆ
೧೦. ಇಷ್ಟೂ ಸಾಲದೆಂಬಂತೆ ನಿಂತ ಫ್ಯಾನುಗಳನ್ನು ಒಮ್ಮೆಲೇ ಚಾಲೂ ಮಾಡಿಸಿ ಹಲವರ ವಿಗ್ ಗಳನ್ನು ಉದುರಿಸಿ ಅವರ ಮಂಡೆ ಬೋಳು ಮಾಡಿ ಎಲ್ಲರೂ ನಗುವಂತೆ ಮಾಡಿದ್ದಾರೆ.
ಈ ಎಲ್ಲಾ ಮೇಲಿನ ಕಾರಣಗಳಿಂದ ನಮ್ಮ ಎಲ್ಲಾ ಗ್ರಾಹಕರ ಸುಖ ಹಾಗೂ ಸಂತೋಷಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಎಲ್ಲಾ ಬ್ರಾಂಡ್ ಮಾಲುಗಳಲ್ಲಿ ತಮ್ಮ ಹಾಗೂ ತಮ್ಮವರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ದಯವಿಟ್ಟು ಸಹಕರಿಸ ತಕ್ಕದ್ದು.
ನನಗೆ ಸಂಶಯಬಂತು ಈ ಮೇಲಿನವುಗಳು ತ್ಯಾಂಪನ ಕೆಲಸವಾಗಿರಲು ಸಾಧ್ಯವೇ ಇಲ್ಲ, ತ್ಯಾಂಪ ಇನ್ನೊಬ್ಬರನ್ನು ಹಳ್ಳಕೆ ಬೀಳಿಸಿ ತಾನು ಎಂದೂ ನಗಲಾರ, ಬೇಕಾದರೆ ತಾನೇ ಬಿದ್ದು ನಕ್ಕಾನು...

ಸೀನ ಬಸ್ಸಿನಿಂದಿಳಿದು ಅಟೋರಿಕ್ಷಾ ದತ್ತ ನಡೆದ.
ಬರ್ತೀಯೇನಪ್ಪಾ..
ಸರಿ ಎಲ್ಲಿಗೆ ಸಾರ್
ಹೇಳಿದ
ಆಟೋ ಹೊರಟಿತು.
ಅದು ಹೋಗುವ ರಭಸ ಸೀನನಿಗೆ ಸಂಶಯಕ್ಕಿಟ್ಟುಕೊಂಡಿತು.
ಬೆಳಗಿನ ಹೊತ್ತು, ಅಲ್ಲೊಂದು ಇಲ್ಲೋಂದು ವಾಹನ ಮಾತ್ರ ರಸ್ತೆಯಲ್ಲಿ ಓಡಾಡುತ್ತಿವೆ, ಆದರೂ ಈತ ಒಂಬತ್ತೂವರೆ ಹತ್ತು ಗಂಟೆಯ ರಸ್ತೆಯಲ್ಲಿದ್ದಹಾಗೆ ಓಡಿಸುತ್ತಿದ್ದಾನೆ, ಅದೂ ಅರ್ಧ ಕಣ್ಣು ಮುಚ್ಚಿ, ನಿದ್ದೆಯಲ್ಲಿದ್ದಾನಾ ಹೇಗೆ ಅಂತ ಸೀನನಿಗೆ ಸಂಶಯವೂ ಬಂತು.ಅತ್ತಿನಿಂದ ಇತ್ತ ಇತ್ತಿಂದತ್ತ, ಹೀಗೇ ಇದ್ದರೆ ತನ್ನ ಅಸ್ತಿತ್ವಕ್ಕೆ ಸಂಚಕಾರ ವೆಂದರಿತ ಸೀನ ಮಿಣ್ಣಕ್ಕೆ ಅದರಿಂದ ಇಳಿದು ಸ್ವಲ್ಪ ಹೊತ್ತು ನಿಂತ. ಅದೃಷ್ಟಕ್ಕೆ ಸ್ವಲ್ಪ ದೂರದಲ್ಲಿ ಇನ್ನೊಂದು ಅಟೋ ಬರುವುದು ಕಂಡಿತು.ಅದರಲ್ಲಿ ಕುಳಿತು ಮೊದಲಿನದ್ದನ್ನು ಹಿಂಬಾಲಿಸಲು ಹೇಳಿದ. ಮುಂದಿನ ವ್ರತ್ತದಲ್ಲಿ ಮೊದಲಿನ ಆಟೋದವ ಹಿಂದಕ್ಕೆ ನೋಡಿ ಗಾಬರಿಯಿಂದ ತನ್ನ ಆಟೋದಿಂದ ಇಳಿದು ಅರ್ಧ ಆಶ್ಚರ್ಯ, ಅರ್ಧ ಹೆದರಿಕೆಯಿಂದ ಅದರ ಸುತ್ತ ತಿರುಗುತ್ತ ಇದ್ದು ಬಿಟ್ಟ.

ಸರಿಯಪ್ಪ ಇನ್ನು ಮುಂದೆ ಸೀದಾ ಹೋಗಿ ಬಲಗಡೆ ತಿರುಗು ಎಂದ ಸೀನ

ಗೆಳೆಯರೇ ಮರೆತಿರಾ ಆ ಸಂಜೆ ?

ಗೆಳೆಯರೇ ಮರೆತಿರಾ ಆ ಸಂಜೆ ?


ಬಾಳಿನ
ವಿಷಣ್ಣತೆಯ
ಮಾನದಂಡ
ಖಾಲಿಖಾಲಿ
ಬೆಂಚುಗಳು
ಭಣಗುಡುವ
ಏಕಾಂತ
ಗೆಳೆಯರೇ
ಇನ್ನೂ
ನೆನಪಿಗೆ
ಬರುತ್ತಿಲ್ಲವೇ
ಆ ಸಂಜೆಯ
ಸವಿಮಾತಿನ
ವಿಹಾರ
ಕೂಟ
ನಲಿವಾಟ
ನೀವೆಲ್ಲ
ಮರೆತರೂ,
ನಿಮ್ಮೆಲ್ಲರ
ಮತ್ತೊಮ್ಮೆ
ಒಂದಾಗೋ
ಸುದಿನಗಳ
ನಿರೀಕ್ಷೆಯಲ್ಲೇ
ತಾನು ಮಾತ್ರ
ದಿನಾ
ಇಲ್ಲೇ ಎನ್ನುವ
ಮೈಯೆಲ್ಲಾ
ಬೀಳಲು ಬಿಟ್ಟ

ದೊಡ್ಡಾಲ
ಉಧ್ಯಾನ
ಮತ್ತು
ನಾನು

Thursday, July 8, 2010

ಪ್ರಪಂಚದ ಅತ್ಯಂತ ಎತ್ತರದ ದೊಡ್ಡ ಹೊರಾಂಗಣ ಈಜುಕೊಳ


ನಿಮಗೆ ೫೫ ಮಹಡಿಗಳಷ್ಟು ಎತ್ತರದಲ್ಲಿ ನೀರಿಗೆ ಧುಮುಕುವ ಕನಸಿದೆಯೇ.
ಅದಿನ್ನು ನೆನಸಾಗುವ ಹೊತ್ತು ದೂರವಿಲ್ಲ.

ಸಿಂಗಾಪುರದಲ್ಲಿ ಮಿನುಗುವ ಈ ಈಜುಕೊಳ ಒಲಿಂಪಿಕ್ ಈಜುಕೊಳದ ಮೂರು ಪಟ್ಟು ಉದ್ದವಾಗಿದ್ದು ೬೫೦ಅಡಿಗಳಷ್ಟು ಎತ್ತರದಲ್ಲಿದೆ.ಈ ಕೊಳ ಪ್ರಪಂಚದ ಈ ಎತ್ತರದಲ್ಲಿನ ಮೊದಲನೆಯ ಹೊರಾಂಗಣ ಈಜು ಕೊಳವಾಗಿದೆ.





ಅನಂತತೆಯ ಕ್ಷಿತಿಜಕ್ಕೆ............. ೧೫೦ ಮೀಟರ್ ಉದ್ದದ ಕೊಳ



ನಿಮಗೆ ಈಗ ಕಾಣುವಷ್ಟು ಅಪಾಯದೇನಲ್ಲ ಈ ಕೊಳದ ಅಂಚು. ಅನಂತತೆಯ ಅಂಚು ಹೊಂದಿರುವ (ನೀರು ಅನಂತತೆಯ ಕ್ಷಿತಿಜ ಹೊಂದಿದಂತೆ ಕಾಣುವ) ಈ ಕೊಳ ನಿಜವಾಗಿ ಪಕ್ಕದಲಿನ ನೀರು ಹಿಡಿಸುವ ಹೌದಿ"ಗೆ ಬೀಳುತ್ತದೆ.
ಹಡಗಿನ ಆಕಾರದ, ಅಕಾಶೋಧ್ಯಾನದ ಈ ಸುಂದರ ಕೊಳ ಮೂರು ಗೋಪುರಗಳ ತುದಿಯಲ್ಲಿದ್ದು ಪ್ರಪಂಚದ ಅತ್ಯಂತ ದುಬಾರಿ ಹೋಟೆಲ್.(the £4billion Marina Bay Sands development in Singapore) .

ಈ ಹೋಟೆಲ್ ೨೫೬೦ ರೂಮುಗಳಿದ್ದು ಒಂದು ರೂಮಿಗೆ ೩೫೦ ಯೂರೋ. ನಿನ್ನೆ ತಾನೇ ಶುಭಾರಂಭವಾಯ್ತು ಡಯಾನಾ ರೋಸ್ ಕನ್ಸರ್ಟ್ನೊಂದಿಗೆ.


ನಿಮಗೆ ಈಗ ಕಾಣುವಷ್ಟು ಅಪಾಯದೇನಲ್ಲ ಈ ಕೊಳದ ಅಂಚು. ಅನಂತತೆಯ ಅಂಚು ಹೊಂದಿರುವ (ನೀರು ಅನಂತತೆಯ ಕ್ಷಿತಿಜ ಹೊಂದಿದಂತೆ ಕಾಣುವ) ಈ ಕೊಳ ನಿಜವಾಗಿ ಪಕ್ಕದಲಿನ ನೀರು ಹಿಡಿಸುವ ಹೌದಿ"ಗೆ ಬೀಳುತ್ತದೆ.
ಹಡಗಿನ ಆಕಾರದ, ಅಕಾಶೋಧ್ಯಾನದ ಈ ಸುಂದರ ಕೊಳ ಮೂರು ಗೋಪುರಗಳ ತುದಿಯಲ್ಲಿದ್ದು ಪ್ರಪಂಚದ ಅತ್ಯಂತ ದುಬಾರಿ ಹೋಟೆಲ್.(the £4billion Marina Bay Sands development in Singapore) .

ಈ ಹೋಟೆಲ್ ೨೫೬೦ ರೂಮುಗಳಿದ್ದು ಒಂದು ರೂಮಿಗೆ ೩೫೦ ಯೂರೋ. ನಿನ್ನೆ ತಾನೇ ಶುಭಾರಂಭವಾಯ್ತು ಡಯಾನಾ ರೋಸ್ ಕನ್ಸರ್ಟ್ನೊಂದಿಗೆ.



ಅನಂತತೆಯ ಕ್ಷಿತಿಜಕ್ಕೆ............. ೧೫೦ ಮೀಟರ್ ಉದ್ದದ ಕೊಳ





ಒಂದು ಅಂದಾಜಿನಂತೆ ದಿನಕ್ಕೆ ೭೦,೦೦೦ ನೋಡುಗರನ್ನು ಆಕರ್ಷಿಸುತ್ತದಂತೆ, ೨೦೦೯ ರಲ್ಲಿ ಶುಭಾರಂಭವಾಗಬೇಕಿದ್ದುದು ಆರ್ಥಿಕ ಮುಗ್ಗಟ್ಟು ,ಕೆಲಸದವರ ತೊಂದರೆ ಮುಂತಾದ ಹತ್ತು ಹಲವಾರು ತೊಂದರೆಯಿಂದಾಗಿ ತಡವಾಯ್ತು.

Wednesday, July 7, 2010

Tuesday, June 29, 2010

ಶಿಸ್ತಿನ ಕೋಟೆಯಲ್ಲೊಂದು ಬಿರುಕು

   ೩. ಪಂಥಾಹ್ವಾನ:

ಆದಿನ ರವಿವಾರ, ಬಾಕಿ ದಿನಗಳ ಹಾಗೆ ಇಲ್ಲಿ ಅಷ್ಟೇನೂ ಸಿಶ್ತಿನ ಮಿಲಿಟರಿಯ ದಿರುಸು ತೊಡಬೇಕೆಂಬ ಆದೇಶವಿಲ್ಲ , ಆದರೆ ನಮ್ಮ ಸೀನಿಯರ್ ತನ್ನ ಹೆಚ್ಚುಗಾರಿಕೆಗಾಗಿ ಎಲ್ಲರಿಗೂ ಆದೇಶ ಕೊಡುತ್ತಾನಷ್ಟೇ, ವಿನಹ. ಅಲ್ಲದೇ ಪ್ರತಿದಿನದ ಕರಾರುವಾಕ್ಕಾದ ಬದ್ಧತೆಯ ಕಾರ್ಯಕ್ರಮವಿಲ್ಲ.ಸ್ವಲ್ಪವಾದರೂ ಬಿಡುವಿರಬಹುದು ಅಂತ ಅಷ್ಟೇ. ನನಗೇನೂ ಸಾಮಾನ್ಯ ಧಿರುಸು ತೊಡಲೇ ಬೇಕೆಂದೇನೂ ಇಲ್ಲದಿದ್ದರೂ ಮಿಲಿಟರಿ ಧಿರುಸು ತೊಟ್ಟರೆ ಅದು ON DUTY ಅಂತ ಆಗಿ " ಸ್ವತಂತ್ರ್ಯ " ವಾಗಿ ಇರುವುದಕ್ಕೆ ಆಗಲ್ಲ ಅಷ್ಟೇ.ಅಲ್ಲವಾದರೆ ಅಲ್ಲಿ ಎಲ್ಲರೂ "ಅಂಕಲ್ ಮತ್ತು ಬಯ್ಯ" ರೇ ಆದುದರಿಂದ ....

(ಇಲ್ಲಿ ಎರಡು ಜೋಕ್ ನೆನಪಿಗೆ ಬರ್ತಾ ಇದೆ ಮೊದಲಿನದ್ದು ನೈಜ ಕಥೆ. ಆಗ ನಾವು ಮುಂಬಯಿಲ್ಲಿದ್ದೆವು. ನನ್ನ ಮೊದಲ ಮಗ ಆಗ ೩-೪ ವರುಷ ಪ್ರಾಯ ಆತನಿಗೆ. ನಾವು ಎಲ್ಲಿಯೇ ಇರಲಿ ನಮ್ಮ ರವಿವಾರ ಮಾತ್ರ ಕನ್ನಡದವರಿಗೆ ಮೀಸಲು. ಅಲ್ಲಿನ ಮಿಲಿಟರಿಯವರಾದ ಶೇಖರ್ ಚಂದ್ರೂ ಮುಂತಾದ ಹುಡುಗರು ನಮ್ಮ ಮನೆಗೆ ಬರುತ್ತಿದ್ದರು. ಆಗ ಕನ್ನಡದವರು ಜಾಸ್ತಿ. ನನ ಹುಡುಗ ಗುಂಡಗೆ ಮುದ್ದು ಮುದ್ದಾಗಿ ಯಾರು ನೋಡಿದರೂ ಕಣ್ಣಿಗೆ ತಾಕುವ ಹಾಗೆ ಇದ್ದ. ಎಲ್ಲರ ಜತೆ ಬೆರೆಯುತ್ತಿದ್ದ ಕೂಡಾ. ಹೀಗೇ ಒಮ್ಮೆ ಅವನನ್ನು ಚಂದ್ರೂ ತನ್ನ ಜತೆ ಕರಕೊಂಡು ಹೋದ ಅವನ ಬ್ಯಾರಕ್ ಗೆ. ಸ್ವಲ್ಪ ಸಮಯದ ಬಳಿಕ ಬಂದವ " ಮಮ್ಮೀ ಅಲ್ಲಿ ಬರೇ ಅಂಕಲ್ ಮಾತ್ರ ಇದ್ದಾರೆ , ಒಂದೇ ಒಂದು ಆಂಟೀನೂ ಇಲ್ಲ್ ಎಂದಿದ್ದ, ನಾವು ನಕ್ಕಿದ್ದೆವು
ಇನ್ನೊಂದು ,
ಒಂದು ಗಂಡಸಿನಲ್ಲಿ ಪ್ರಪಂಚದಲ್ಲಿ ಹೆಂಗಸರೇ ಇಲ್ಲದಿದ್ದರೆ ನೀವು ಯಾವ ಉಡುಪು ತೊಡುತ್ತಿದ್ದೀರಿ ಎಂತ ಪ್ರಶ್ನೆ ಕೇಳಿದ್ದಕ್ಕೆ , ಹೆಂಗಸರು ಇಲ್ಲದೇ ಹೋದರೆ ಯ್ಯಾರು ಉಡುಪು ತೊಡುತ್ತಾರೆ ಮೇಡಮ್ ಎಂದಿದ್ದರಂತೆ.)

ನಾನು ಇದ್ದುದರಲ್ಲಿಯೇ ಉತ್ತಮ ಉಡುಪು ಧರಿಸಿ ಹೊರ ಬಂದಿದ್ದೆ.
ನಮ್ಮ ಸೀನಿಯರ ದೂರದಿಂದಲೇ ನನ್ನ ನೋಡಿ ಹತ್ತಿರ ಕರೆಸಿ ಕೊಂಡ " ಯಾಕ್ರೀ ಸಿವಿಲ್ ನಲ್ಲಿದ್ದೀರಾ ಎಂತ ಕೇಳಿದ.
ನೀವೇನು ನನಗೆ ಮೊದಲು ಹೇಳಿದ್ದಿರಾ ಮಿಲಿಟರಿ ದಿರುಸಿನಲ್ಲಿ ಬರಲು" ಎಂದು ಕೇಳಿದೆ.
ಅವನು ಏನೂ ಅನ್ನುವ ಮೊದಲೇ ಕಮಾಂಡೆಂಟ್ ಕರೀತಾರಂತೆ ಅನ್ನುವ ಆದೇಶ ಬಂದು ಬಿಟ್ಟಿತು. ಆತ ನನ್ನನ್ನೇ ತೀಕ್ಷ್ಣವಾಗಿ ನೋಡುತ್ತಾ ನೋಡಿದೆಯಾ?
ಇದೆ ನಿನಗೆ ಗೃಹಚಾರ ಎಂದ. ನಾನು ಇದ್ದ ಹಾಗೆಯೇ ಅಲ್ಲಿಂದ ಕಮಾಂಡೆಂಟ್ ನತ್ತ ನಡೆದೆ.ಜತೆಯಲ್ಲೇ ನನ್ನ ಸೀನಿಯರ್ರೂ.
ಜೀಪ್ ತಲುಪಿ, ಸೆಲ್ಯೂಟ್ ಕೊಟ್ಟು "ಸರ್ ಇದೇ ದಿರುಸು ಇರಲಾ ಅಥವಾ ನೀವು ಸಮಯ ಕೊಟ್ಟರೆ ಕೂಡಲೇ ಮಿಲಿಟರಿ ಧಿರುಸು ತೊಟ್ಟು ಬರುತ್ತೇನೆ "ಎಂದೆ .
"ಬೇಡಬೇಡ ಹಾಗೇ ಬಾ" ಎಂದನಾತ.
ನಾನು ಜೀಪ್ ಹತ್ತಿದೆ, ನನ್ನ ಸೀನಿಯರ್ ಗೆ ನೀನು ಬರುವುದು ಬೇಡ ಎಂಬಂತೆ ಸನ್ನೆ ಮಾಡಿದರು ಕಮಾಂಡೆಂಟ್.
ಜೀಪು ಹೊರಟಿತು.
ಕಮಾಂಡೆಂಟ್ ಕರ್ನಲ್, ಸರ್ದಾರ್ಜಿ.
ನನ್ನ ನೋಡಿ ನೋಡಿ ಒಂದು ಅರ್ಜೆಂಟ್ ಕೆಲಸವಿದೆ, ಅದನ್ನು ಮುಗಿಸಲು ನಿಮಗೆ ೨೪ ಗಂಟೆ ಕಾಲಾವಕಾಶವಿದೆ.
ನಿಮ್ಮ ಅನುಭವ ಮತ್ತು ಕಾರ್ಯ ಕ್ಷಮತೆಯ ಪರೀಕ್ಷೆ ಅಂದು ಕೊಳ್ಳಿ, ಎಂದರಾತ.
ಕೆಲಸ ಏನು ಹೇಳಿ ಸರ್ ಎಂದೆ. ಹೇಳುವುದಲ್ಲ ತೋರಿಸುತ್ತೇನೆ ಎಂದರು ಆತ.


ದೊಡ್ಡ ಪರ್ವತದ ಬದಿಯಿಂದ ಹಾದು ಹೋಗುತ್ತಿತ್ತು ನಮ್ಮ ಜೀಪು.
ಪಕ್ಕದಲ್ಲಿ ಕೆಳಗೆ ತೀರಾ ಕೆಳಗೆ ಸಿಂಧೂ ನದಿ ಬೆಳ್ಳಗೆ ಜುಳುಜುಳು ಹರಿಯುತ್ತಿದ್ದಳು ,
ನಮಗೆ ಕೈ ಹಾಕಲೂ ಅಸಾಧ್ಯ ಚಳಿ ಇರುವ ಆ ನೀರಿನಲ್ಲಿ ಅಲ್ಲಿನ ಹೆಂಗಸರು ಬಟ್ಟೆ ತೊಳೆಯುತ್ತಿದ್ದರು.
ಮರ ಗಿಡಗಳು ಅಷ್ಟಾಗಿ ಕಾಣ ಸಿಗುವುದಿಲ್ಲ ಇಲ್ಲಿ.
ನನ್ನ ಇಲ್ಲಿಯವರೆಗಿನ ಸರ್ವಿಸ್ ಬಗ್ಗೆ ಕೇಳಿ, ನನ್ನಂತಹವರು ತಮ್ಮ ಯುನಿಟಿಗೆ ಅಗತ್ಯ ಅಂತಲೂ ನನ್ನೆಲ್ಲಾ ಅನುಭವಗಳ ಆಧಾರದ ಮೇಲೆ ಬಹಳಷ್ಟು ಕೆಲಸ ಕಾರ್ಯಗಳನ್ನು ಮಾಡಬಹುದೆಂತಲೂ ನನ್ನ ಅಟ್ಟಕ್ಕೇರಿಸಿದ ಆತ.

ಇದೊಂದು ಇವರ ಜಾಣತನ.
ಅವರ ಕೆಲ್ಸ ಮಾಡಿಸಿಕೊಳ್ಳುವುದು ಒಂದಾದರೆ, ಜೊಳ್ಳು ಮತ್ತು ಕಾಳು ಬೇರ್ಪಡಿಸುವದೂ ಇದರಲ್ಲಿ ಸೇರಿರುತ್ತದಲ್ಲ (ಇದಿರಿರುವನವನನ್ನು ಅಳೆಯುವ ಪರಿ).

ಅಂತೂ ಜಾಗಕ್ಕೆ ಬಂದು ಸೇರಿದೆವು, ನಮ್ಮದು ಇಂಜಿನಿಯರ್ ಯುನಿಟ್ ಆದುದರಿಂದ ಇಲ್ಲಿನ ಒಂದು ಹೊಸದಾಗಿ ಬಂದ ಸಿಗ್ನಲ್ ಯುನಿಟೊಂದಕ್ಕೆ ಆಫೀಸು ಸರಂಜಾಮು ಹೊಂದಿಸುವ ಕೆಲಸ ನಮ್ಮ ಸುಫರ್ಧಿಯಲ್ಲಿ ಬಂದಿತ್ತು.
ಅದಕ್ಕೆಂದೇ ಸಿವಿಲ್ ಇಂಜಿನಿಯರ್ ಆದ ನನ್ನನ್ನು ಕರೆದಿದ್ದರು.
ಮುಂದಿನ ಇಪ್ಪತ್ನಾಲ್ಕು ಘಂಟೆಯ ಒಳಗೆ ಆಅವರ ಆಫೀಸನ್ನು ಸರಿಪಡಿಸಿ ಕೊಡಬೇಕಾಗಿತ್ತು. ಗಾರೆಯ ಕೆಲಸ ಸುಣ್ಣ ಬಣ್ಣ ಹೊಡೆಯುವ ಕೆಲಸ ಮತ್ತು ವಿದ್ಯುತಕೆಲಸವೂ ಸೇರಿಸಿ ಒಟ್ಟಾರೆಯಾಗಿ ೨೪ ಘಂಟೆಗಳವಳಗೆ ಎಲ್ಲವನ್ನೂ ಮಾಡಿಕೊಡಬೇಕಾಗಿತ್ತು. ಎಲ್ಲವೂ ಸರಿಯಾಗಿ ಸಿಕ್ಕಿದ್ದಲ್ಲಿ...
ನನಗೆ ಬೇಕಾದ ಸಾಮಾನು ಸಿಕ್ಕಿದಲ್ಲಿ ನಾನು ೨೦ ಗಂಟೆ ಯಲ್ಲೇ ಮಾಡಿಕೊಡುತ್ತೇನೆ ಸರ್ ಎಂದಿದ್ದೆ ನಾನು ಸ್ಥಿರವಾದ ದನಿಯಲ್ಲಿ .

ಆದರೆ ಅಂತಹಾ ಲೇಹ್ ಗುಡ್ಡದ ಬಳಿಯಲ್ಲಿ ಬೇಕಾದ ಸಾಮಾನು ಸರಂಜಾಮು ಹೊಂದಿಸುವುದು ಹೇಗೆ?
ಅವರು ಹೇಳಿದ್ದಕ್ಕೆಲ್ಲಾ ತಲೆಯಾಡಿಸಿದೆ. ಆದಿನ ರವಿವಾರ ಬೇರೆ.
ನಮ್ಮ ಕಮಾಂಡೆಂಟ್ ನನ್ನನ್ನು ಪಕ್ಕಕ್ಕೆ ಕರೆದು ನನಗೆ ಬೇಕಾದ ಎಲ್ಲಾ ವಸ್ತುಗಳ ಪಟ್ಟಿ ತಯಾರಿಸಿಕೊಳ್ಳಲು ತಿಳಿಸಿದ.
ನಾನು ಕೂಡಲೇ ತಯಾರಿಸಿದೆ. ಅದನ್ನು ಸೀದಾ ಅಲ್ಲಿಂದ ಯುನಿಟಿಗೆ ಬಂದು ಸೀನಿಯರ್ ಗೆ ಪಟ್ಟಿ ಕೊಟ್ಟೆ.
ಆತ ಹೇಳಿದ ಅದೆಲ್ಲಾ ಸರಿ ನಿನಗೆ ಇಡೀ ಲೇಹ್ ಪಟ್ಟಣ "out of bond" ಹೇಗೆ ಸಾಮಾನು ತೆಗೆದುಕೊಳ್ಳುತ್ತೀ,
ಯಾವಾಗ ನೀನು ಸಾಮಾನು ತರುವುದು ಮತ್ತು ಇದನ್ನು ಕಂಪ್ಲೀಟ್ ಮಾಡುವುದು ಅದೇನು ನಿನ್ನ ಬೆಂಗಳೂರು ಅಂದ್ಕೊಂಡ್ಯಾ,ಮುಗಿಯಿತು ನಿನ್ನ ಕಥೆ, ಇಲ್ಲಿ ಮಾಡಿ ತೋರಿಸು , ಅಂತ ನೋಡೋಣ ಅಹ್ವಾನ ಕೊಟ್ಟು
ಲೇವಡಿ ಮಾಡಿದ.
ಕಾರಣ ವೆಂದರೆ ಇಲ್ಲಿಯ ಹಾಗೆ ಬೇಕಾದ ಹಾಗೆ ಪೇಟೆಗೆ ಹೋಗಿ ತರಲಾಗುವುದಿಲ್ಲವಲ್ಲ , ಇದ್ದ ಸಾಮಾನಲ್ಲೇ ಹೊಮ್ದಿಸಿಕೊಮ್ದು ಕೆಲಸ ಮಾಡಬೇಕು , ನಮ್ಮಲ್ಲಿ ಏನಿದೆ ಏನಿಲ್ಲ ಎನ್ನುವುದು ತಿಳಿದುಕೊಳ್ಳದೆ ನಾನು ಮಾತು ಕೊಟ್ಟು ಬಿಟ್ಟೆನಲ್ಲ ಆ ಆಫಿಸರ್ ಗೆ , ಅಂದರೆ ನನ್ನ ಮಾತು ಉಳಿಸಿಕೊಳ್ಳಲು ಆಗುವುದಿಲ್ಲ ಅಂತ ಇತನಿಗೆ ಖುಷಿ .

Monday, June 28, 2010

ಸಿಪಾಯಿ ಸದಾ ಸಿದ್ಧ!!!

೧. ಅನುಕರಣ
ಸದಾ ಸಿದ್ಧ
ಯುದ್ಧ ಸನ್ನದ್ಧ
ಬಿಸಿಲಲ್ಲಿ, ಮಳೆಯಲ್ಲಿ
ಚುಮುಚುಮು ಬೆಳಕಲ್ಲಿ, ಕಟಗುಡುವಚಳಿಯಲ್ಲಿ,
ಶಿಸ್ತಿನ  ನಡಿಗೆ
ಗೈರತ್ತಿನ ದರ್ಪ  ಶಿಷ್ಟಾಚಾರ
ನಿಷ್ಟುರ ನಡವಳಿಕೆಯ ಶಿಕ್ಷೆಯ ಚೌಕಟ್ಟು
ಒಗ್ಗಟ್ಟಿನ,ಮುಂದಾಳುತ್ವದ ಸೂತ್ರ ಕಲಿಕೆ
ಕೃಮಬದ್ದ ಅನುಕರಣೆಯ ಸೂತ್ರದ ಬೊಂಬೆ
ಜೀವನುದ್ದಕ್ಕೂ, ಅಣಕು ಯುದ್ಧಕ್ಕೂ
ದೇಶ ಪ್ರೇಮ, ಕರ್ತವ್ಯ ನಿಷ್ಠೆ
ನಿಜಕ್ಕೂ...   ಸಿಪಾಯಿ
ಸದಾ  ಸಿದ್ಧ
ಯುದ್ಧ   ಸನ್ನದ್ಧ


೨.  ಅನುಸರಣ

ಮಲಗಿ  ಸೂರೆಣಿಸುವಾಗ
ಮೊಂಬತ್ತಿಯ  ಬೆಳಕಿಗೂ  ಕರಗಿ
ತೊಟ್ಟಿಕ್ಕುವ  ಮಂಜುಗಲ್ಲುಗಳು,
ತಿನ್ನಲೂ,  ಅರಗಿಸಲೂ ತಿಣುಕಾಡಬೇಕಾದ ಪರಿಸ್ಥಿತಿ
ಮೈಯ್ಯ  ಮೂಳೆಮಜ್ಜೆಗಳೂ  ಕರಗುವಂತಿಹ ಚಳಿಯ ಪಾಶ
ಕೃಶವಾಗಿ ನಿರ್ವರ್ಣವಾಗುತ್ತಿರುವ ದೇಹ
ಆದರೂ ಸಿಪಾಯಿ ಸದಾ ಸಿದ್ಧ

ಮಳೆಯಲ್ಲೋ ಬಿಸಿಲಲ್ಲೋ
ಬರದಲ್ಲೋ ನೆರೆಯಲ್ಲೋ
ಸಹಾಯ ಹಸ್ತದ ಮಹಾಪೂರ
ಕರ್ತವ್ಯನಿಷ್ಠೆಯ ಸಾಕಾರ
ಸಾವಿಗೂ ಜೀವನಕ್ಕೂ ಇರುವ
ಕ್ಷಣಗಳ  ಅಂತರದರಿವು ಅನುದಿನ  ಪ್ರತಿಕ್ಷಣ
ತನ್ನವರ ವಿರಹದುರಿಯ
ಕಣ್ಣಾಳದ ನೋವಿನಲ್ಲೂ
ಬಿಡುವಿಲ್ಲದ ಶ್ರಮದಲ್ಲೂ
ಸಿಪಾಯಿ ಸದಾ  ಸಿದ್ಧ
ಯುದ್ಧ   ಸನ್ನದ್ಧ



೩.  ಅನುಭೋಗ (ವಾನಪ್ರಸ್ಥ)

ಸ್ವಾರ್ಥ  ಸಾಧಕರ ನಡುವೆ
ಮರೆತ ಬದುಕಿನ ವಿದ್ಯೆ
ಬೊಗಸೆ ತುಂಬದ ಖುಶಿಯ
ಪ್ರೀತಿಯ ಎಲ್ಲೆಯಲ್ಲಿ
ಕಾನೂನಿನ ಚೌಕಟ್ಟು
ಮನದ ನಿರ್ವರ್ಣ ಘಾಯದಲ್ಲಿ
ಸವೆದೀತು ಬದುಕು
ಯುದ್ಧ  ವಿರಾಮದಲ್ಲಿ
ವಿಷಣ್ಣ  ಬದುಕಿನ
ಚರಮ  ಗೀತೆಯಲ್ಲಿ

ಸಿಪಾಯಿ ಸದಾ ಸಿದ್ಧ!!!
ಅದರೆ...... ಇಲ್ಲಿ
(ತನ್ನವರಲ್ಲೇ)

ಯುದ್ಧ ನಿಶಿದ್ಧ!!

ನಿಜವಾದ ಬಾಸ್ ಹೇಗಿರಬೇಕು...?

ಅದೊಂದು ದೊಡ್ಡ ಪ್ರೊಜೆಕ್ಟ್. ಸುಮಾರು ೭೦ ಜನ ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದಾರೆ, ಹಗಲೂ ರಾತ್ರಿ, ತುಂಬಾನೆ ವಿಶೇಷ, ಮತ್ತು ಗೌಪ್ಯದ ಕಾರ್ಯವಾದುದರಿಂದ, ಅವರೆಲ್ಲರ ಮೇಲೆ ಕೆಲಸದ ಮತ್ತು ಅವರ ಬಾಸ್ನ ಮಾನಸಿಕ ಒತ್ತಡವೂ ಜಾಸ್ತಿಯೆ ಇದೆ. ಆದರೆ ಅವರೆಲ್ಲರೂ ಅವರ ಬಾಸ್ ನ ಮೇಲಿನ ಗೌರವಾದರದಿಂದಅಂತಹಾ ಮಾನಸಿಕ ಒತ್ತಡದ ನಡುವೆಯೂ ಕೆಲಸ ಬಿಟ್ಟು ಹೋಗುವ ಯೋಚನೆ ಕೂಡಾ ಮಾಡುತ್ತಿಲ್ಲ.

ಹೀಗಿರುವಾಗ ಒಂದು ದಿನ ಬೆಳಿಗ್ಗೆ ಒಬ್ಬ ವಿಜ್ಞಾನಿ ಬಾಸ್ ಬಳಿ ಬಂದು " ಸರ್ ನಾನು ಇವತ್ತು ನನ್ನ ಮಕ್ಕಳನ್ನು "ಪ್ರದರ್ಶಿನಿಗೆ" ಕರೆದು ಕೊಂಡು ಹೋಗುತ್ತೇನೆಂತ ಮಾತು ಕೊಟ್ಟು ಬಂದಿದೇನೆ ಅದಕ್ಕೇ ಮನೆಗೆ ೫:೩೦ ಕ್ಕೆ ಹೋಗ ಬೇಕಾಗಿದೆ" ಎಂದು ಕೇಳಿಕೊಂಡ. ಅದಕ್ಕೆ ಬಾಸ್ ಮನೆಗೆ ಬೇಗ ಹೋಗಲು ಆತನಿಗೆ ಒಪ್ಪಿಗೆ  ಕೊಟ್ಟರು.

ಆತ ತನ್ನ ಕೆಲಸದಲ್ಲಿ ಮಗ್ನನಾದ. ಮಧ್ಯಾಹ್ನದ ಊಟ ಮುಗಿಸಿ ಪುನಃ ಆತ ಕೆಲ್ಸಕ್ಕೆ ಕುಳಿತ. ಆತ ತನ್ನ ಕೆಲ್ಸದಲ್ಲಿ ಎಷ್ಟು ಮಗ್ನನಾದ, ಎಂದರೆ ಅದು ಇನ್ನೇನು ಮುಗಿಯಿತು ಎನ್ನುವಾಗ ಆತ ತನ್ನ ಕೈಗಡಿಯಾರದ ಕಡೆ ಗಮನ ಹರಿಸಿದ, ಸಮಯ ೮:೩೦!! ಅಕಾಸ್ಮಾತ್  ಆಗ  ಅವನಿಗೆ ಬೆಳಿಗ್ಗೆ ತಾನು ಮಕ್ಕಳಿಗೆ ಕೊಟ್ಟಿದ್ದ ಮಾತು ನೆನಪಿಗೆ ಬಂತು
ಆತ ತಲೆಯೆತ್ತಿ ತನ್ನ ಬಾಸ್ ನ ಕಡೆ ನೋಡುತ್ತಾನೆ, ಬೆಳಿಗ್ಗೆ ಯೇ ಆತ ಒಪ್ಪಿಗೆ ಕೊಟ್ಟಾಗಿತ್ತಲ್ಲ!! ಬಾಸ್  ಚೇಂಬರ್ ಖಾಲಿ !!.
ಮನದ ತುಂಬಾ ತಪ್ಪಿತಸ್ಥ ಬಾವನೆ ತುಂಬಿಕೊಂಡಾತ ಮನೆಗೆ ತಲುಪುತ್ತಾನೆ. ಮನೆಯಲ್ಲಿ ಹೆಂಡತಿಯೊಬ್ಬಳೇ ಹಾಲ್ ನಲ್ಲಿ ಯಾವುದೋ ಪೇಪರ್ ಓದುತ್ತಾ ಕುಳಿತ್ತಿದ್ದಳು, ಮಕ್ಕಳ ಸುಳಿವೇ ಇಲ್ಲ.

 ಮಹಾ ಸ್ಫೋಟಕ ಸನ್ನಿವೇಶ, ಈಗಿನ  ತನ್ನ  ಒಂದು ತಪ್ಪು ಮಾತು ಕೂಡಾ ತಿರುಗುಬಾಣ ವಾಗ ಬಲ್ಲುದು ಎಂದರಿತಿದ್ದ.
ಹೆಂಡತಿ ಇವನತ್ತ ದೃಷ್ಠಿ ಬೀರಿ  "ಈಗ ಕಾಫಿ ಮಾಡಲೋ ಅದವಾ ಹಸಿದಿದ್ದರೆ ಊಟ ಬಡಿಸಲೋ" ಎಂದು ಕೇಳಿದಳು.
ಈತನೆಂದ" ನಿನಗೆ ಕಾಫಿ ಸರಿಯೆಂದಾದರೆ ನನಗೂ ಕೂಡಾ, ಆದರೆ ಮಕ್ಕಳೆಲ್ಲಿ?"
" ನಿನಗೆ ಗೊತ್ತಿಲವಾ? ನಿನ್ನ ಮೆನೇಜರ್ ಬಂದಿದ್ದರು, ೫:೧೫ ಕ್ಕೆ, ಮಕ್ಕಳನ್ನು ಅವರು ಕರೆದೊಯ್ದರು"  ಎಂದಳು ಆಶ್ಚರ್ಯದಿಂದ!!

ನಿಜವಾಗಿಯೂ ಏನಾಗಿತ್ತು ಎಂದರೆ.. ಇವನಿಗೆ ಒಪ್ಪಿಗೆ ಕೊಟ್ಟ ಈತನ ಬಾಸ್ ಗಂಟೆ ಐದರಿಂದ ಈತನನ್ನು ಗಮನಿಸುತ್ತಿದ್ದರು, ಈತನ ಗಮನವು ಕೆಲಸದಲ್ಲಿ ಸಂಪೂರ‍್ಣವಾಗಿ ಕೇಂದ್ರೀಕೃತವಾದುದನ್ನು ಗಮನಿಸಿದವರಿಗೆ, ಈತನ ಮಕ್ಕಳು ಏಕೆ ತಮ್ಮ ಅಧಿಕಾರದಿಂದ ವಂಚಿತರಾಗಬೇಕು ಎನ್ನಿಸಿ ತಾವೇ ಅವರನ್ನು ಕರೆದೊಯ್ಯುವ ನಿರ್ಧಾರವನ್ನು ಅಮಲಿಗೆ ತಂದರು.
ಬಾಸ್ ಇಂತಹ ಕಾರ್ಯಗಳನ್ನು  ಮಾಡಲೇ ಬೇಕೆಂದಿಲ್ಲ, ಮಾಡಿದರೆ  ಮಾತ್ರ     ಅದರ ಫಲಿತಾಂಶ ವರ್ಣನಾತೀತ......

ಇಂತಹಾ ಬಾಸ್ ನ್ನು ಹೊಂದಿದ್ದ  " ತುಂಬಾ " ಪ್ರೊಜೆಕ್ಟ್  ಅತೀ ಮಾನಸಿಕ ಒತ್ತಡಗಳ ನಡುವೆಯೂ ಯಶಸ್ವೀ ಶಿಖರವನ್ನೇರಿತು.


ಅಂದ ಹಾಗೆ ಈ ಮೇಲಿನ ಬಾಸ್ ಯಾರಿರಬಹುದು?  .

ಅವರೇ ನಮ್ಮ  ಪೂರ್ವ ರಾಷ್ಟ್ರಪತಿ ಎ.ಪಿ ಜೆ ಅಬ್ದುಲ್ ಕಲಾಮ್

Saturday, June 26, 2010


ಒಬ್ಬ ವ್ಯಾಪಾರಿ ದಿವಾಳಿಯಾಗುವ ಸ್ಥಿತಿ ತಲುಪಿದ್ದ.
ಸಾಲಗಾರರ ಕಾಟ ಆತ ತಡೆಯಲಾರದೇ ಹೋದ. ಇವೇ ತನ್ನ ಬದುಕಿನ ಕೊನೆಯ ದಿನಗಳಂತೆ ಅನ್ನಿಸಿತು ಅವನಿಗೆ. ಬೇರೆ ದಾರಿಯೇ ಕಾಣದೇ ಒಂದು ಪಾರ್ಕ ನ ಬೆಂಚಿನ ಮೇ ಲೆ ತನ್ನ ಎರಡೂ ಕೈಗಳನ್ನು ತಲೆಯ ಮೇಲಿಟ್ಟು ಕುಳಿತಿದ್ದ,  ಸಹಾಯದ ಏನಾದರೂ ಹೊಸ ಕಿರಣ ಸಿಗಬಹುದೇ ಎಂದು ಯೋಚಿಸುತ್ತಾ....
ಅಕಾಸ್ಮಾತ್ತಾಗಿ ಒಬ್ಬ ವೃದ್ಧ ಆತನೆದುರಿಗೆ ಬಂದು ಕೇಳಿದ " ಏನು ... ತುಂಬಾ ಚಿಂತೆಯಲ್ಲಿರೋ ಹಾಗಿದೆ?"
ಈತ ತನ್ನ ಕಷ್ಟಗಳನ್ನೆಲ್ಲಾ ಅವನಿಗೆ ತಿಳಿಸಿದ.
ತುಂಬಾ ಸಮಾಧಾನದಿಂದ ಕೇಳಿದ ವೃದ್ಧ " ನಾನು ನಿನಗೆ ಸಹಾಯ ಮಾಡ ಬಲ್ಲೆ ಎನ್ನಿಸುತ್ತಿದೆ" ಎಂದ
ಈತನ ಹೆಸರು ಕೇಳಿದ ವೃದ್ಧ ಒಂದು ಚೆಕ್ ಬರೆದು ಆತನ ಕೈಗಿತ್ತು ಹೇಳಿದ " ಇಗೋ ಇದನ್ನು ತೆಗೆದುಕೋ, ಇವತ್ತಿಂದ ಸರಿಯಾಗಿ ಒಂದು ವರುಷದ ಬಳಿಕ ನಾವು ಇದೇ ಜಾಗದಲ್ಲಿ ಸಿಗೋಣ, ಆಗ ನೀನು ಈ ಹಣ ನನಗೆ ವಾಪಾಸ್ಸು ಕೊಟ್ಟರೆ ಸಾಕು" ಎಂದ.
ಆತ ಹೇಗೆ ಬಂದಿದ್ದನೋ ಹಾಗೇ ವಾಪಾಸ್ಸು ಹೋದ.
ಈತ ತನ್ನ ಕೈಯ್ಯಲ್ಲಿದ್ದ ಚೆಕ್ ನೋಡಿದ, ಅದು ೫,೦೦,೦೦ ಡಾಲರ್ ಚೆಕ್, ರುಜು ಹಾಕಿದಾತ ಆಗಿನ ಅತ್ಯಂತ ದೊಡ್ಡ ಶ್ರೀಮಂತರ ಸಾಲಿನ ಜೋನ್ ಡಿ ರಾಕ್ ಫೆಲ್ಲರ್.
"ನನ್ನ ಜೀವನದ ಅತ್ಯಂತ ಯಾತನಾಮಯ ದಿನಗಳು ತೊಲಗಿದವು" ಈತನೆಂದುಕೊಂಡ,
ಆದರೆ ಆತನು ಆತ ಈ  ಚೆಕ್ಕನ್ನು ತನ್ನ ತಿಜೋರಿಯಲ್ಲಿಯೇ ಇಟ್ಟುಕೊಂಡು, ಅದು ತನ್ನ ಬಳಿಯಿದೆ ಎನ್ನುವ ಯೋಚನೆಯೇ ತನಗೆ ತನ್ನ ಬುಸಿನೆಸ್ ನಲ್ಲಿ ಈ ದುರ್ವಿಧಿಯಿಂದ ಪಾರಾಗಲು ಏನಾದರೊಂದು ಹೊಸ ಯೋಚನೆ ಹೊಳೆಸೀತು ಎಂದುಕೊಂಡ.
ಅದು ಹಾಗೆಯೇ ಆಯ್ತು, ಆತನ ಈ ಹೊಸ ಆಲೋಚನೆಯೇ ಆತನ ವ್ಯಾಪಾರೀ ಮನೋಭಾವನೆಯನ್ನು  ಎದ್ದೇಳಿಸಿ ಹೊಸ ಶಕ್ತಿ ತುಂಬಿತು ಮತ್ತು ಕೆಲವೇ ತಿಂಗಳಲ್ಲಿ ಆತ ತನ್ನ ಹಳೆಯ ಸಾಲದಿಂದ ಮುಕ್ತನಾಗಿದ್ದ, ಮತ್ತು ಆತನ ಲಾಭ ದ್ವಿಗುಣವಾಗತೊಡಗಿತು.
ಸರಿಯಾಗಿ ಒಂದು ವರುಷದ ಬಳಿಕ ಆತ ಅದೇ ಪಾರ್ಕನಲ್ಲಿ ಹಳೆಯ ಚೆಕ್ ಹಿಡಿದುಕೊಂದು ಆ ವೃದ್ಧನಿಗಾಗಿ ಕಾಯುತ್ತಿದ್ದ. ಹೇಳಿದ ಸಮಯಕ್ಕೆ ಸರಿಯಾಗಿ ಆ ವೃದ್ಧ ಹಾಜರಾಗಿದ್ದ.
ಆದರೆ ಇನ್ನೇನು ವ್ಯಾಪಾರಿ ತನ್ನ ಏಳಿಗೆಯ ಕಥೆ ಅವನಿಗೆ ಹೇಳಿ ಧನ್ಯವಾಅದಾ ಸಮರ್ಪಿಸಿ ಅವನ  ಚೆಕ್ ವಾಪಾಸು ಕೊಡಬೇಕೆಂದು ಕೊಂಡಿದ್ದ.
ಅಷ್ಟರಲ್ಲಿ ಒಬ್ಬ ದಾದಿ ಓಡುತ್ತ  ಬಂದು ಆ ವೃದ್ಧನನ್ನು ಹಿಡಿದುಕೊಂಡಳು.
"ಅಂತೂ ನಾನು ಅವನನ್ನು ಹಿಡಿದು ಬಿಟ್ಟೆ, ಆತನು ನಿಮಗೇನೂತೊಂದರೆ ಕೊಡಲಿಲ್ಲ  ತಾನೇ, ಆತ ವೃದ್ಧಾಶ್ರಮದಿಂದ ತಪ್ಪಿಸಿಕೊಂಡು ಬಂದು ತಾನು ಶ್ರೀಮಂತ ಜೋನ್ ಡಿ ರಾಕ್ ಫೆಲ್ಲರ್ ಎಂದೇ ಹೇಳುತ್ತಾನೆ" ಹೇಳಿ ಆಕೆ ಆತನನ್ನು ತನ್ನ  ಜತೆ ಕರೆದೊಯ್ದಳು.
ವ್ಯಾಪಾರಿ ಸ್ಥಂಭೀಭೂತನಾದ.
ಹಾಗಾದರೆ ಇಡೀ ಒಂದು ವರ್ಷ ತನ್ನ ವ್ಯಾಪಾರವನ್ನು ಉತ್ತುಂಗಕ್ಕೇರಿಸಿದ್ದು ತನ್ನ ಹತ್ತಿರವಿದ್ದ  ಈ ೫ ಲಕ್ಷದ ಚೆಕ್ಕೇ ಅಲ್ಲವೇ.
ಆಗಲೇ ಆತನಿಗೆ ಅರಿವಾದದ್ದು ತನ್ನ ವ್ಯಾಪಾರದ ಏಳಿಗೆಗೆ ಕಾರಣ ತನ್ನ ಹತ್ತಿರವಿದ್ದ ಹಣವಲ್ಲ,
ಬದಲು ಆತನನ್ನು ಹೊಸದಾಗಿ ಹೊಸ ರೀತಿ ಯೋಚಿಸಲು ಪ್ರೇರೇಪಿಸಿದ್ದ ಮಾನಸಿಕ ಶಕ್ತಿ  ಆತನ ನಂಬುಗೆ.

(ನೆಟ್ ಕಥೆ  ಆಧಾರಿತ)
ಈ ಇಂಜಿನೀಯರ್ ನುಡಿಯುವುದು ನಿಜವಾದಲ್ಲಿ ನಿಜವಾಗಿಯೂ ಇದೋದು ಅತೀ ಭಯಂಕರ ಮತ್ತು ದಾರುಣ ಕಲ್ಪನಾತೀತ ದೃಶ್ಯ!! ಇಲ್ಲಿದೆ ಅವನ  ಹೇಳಿಕೆ!!!!





ಮೆಕ್ಸಿಕೋದಲ್ಲಿ ನಡೆದ ತೈಲ ದುರಂತದ ಬಗ್ಗೆ ನೀವೆಲ್ಲಾ ತಿಳಿದೇ ಇದ್ದೀರಿ, ಆದರೆ ಅದು ನಿಜವಾಗಿಯೂ ಈ ದುರಂತ ಎಷ್ಟು ದೊಡ್ಡದು ಮತ್ತು ಅದರ ಪರಿಣಾಮ ಎಷ್ಟು ಭೀಕರ  ಎನ್ನುವಕಲ್ಪನೆ ನಿಮಗ್ಯಾರಿಗೂ ಪ್ರಾಯಶಃ ಇರಲಾರದು. ಮೊದಲ ಸತ್ಯ, ಮೊದಲ ಅಂದಾಜು ಸುಮಾರು ದಿನಕ್ಕೆ ಐದು ಸಾವಿರ ಗ್ಯಾಲನ್ ಕಚ್ಚಾ ತೈಲ ಸಾಗರಕ್ಕೆ ಸೇರುತ್ತಿದೆ ಎಂದರು.

ಈಗ ಅವರೇ ,ಅಲ್ಲ  ಎರಡು ಲಕ್ಷ ಗ್ಯಾಲನ್ ಗಳು ಅನ್ನುತ್ತಿದ್ದಾರೆ ಅಂದರೆ ಒಂದು ವಾರಕ್ಕೆ ಹದಿನಾಲ್ಕು ಲಕ್ಷ ಗ್ಯಾಲನ್  ಕಚ್ಚಾ ತೈಲ ಸಾಗರಕ್ಕೆ ಸೇರುತ್ತಿದೆ ಎಂದ ಹಾಗಾಯ್ತು.

ನಾನೊಬ್ಬ ೨೫ ವರ್ಷದ ಅನುಭವ ಹೊತ್ತ ಇಂಜಿನೀಯರ್,  ನಾನು ತುಂಬಾ ದೊಡ್ಡದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಾಯಶಃ ಅದಕ್ಕೇ ನಾನು ಇದರ ಬ್ರಹತ್ತತೆಯನ್ನು ಊಹಿಸಿಕೊಳ್ಳಬಲ್ಲೆ.
ಮೊದಲಿನದಾಗಿ ಈ ಬಿ ಪಿ ಕಂಪೆನಿಯ "ಆಳ ಕೊರೆತ" ಎಂದರೆ ಸುಮಾರು ೫ ಸಾವಿರ ಅಡಿಗಳಷ್ಟು ಆಳದಲ್ಲಿ. ಮತ್ತು ಅಲ್ಲಿಂದ ಮತ್ತೆ ಸುಮಾರು ೩೦ ಸಾವಿರ ಅಡಿಗಳಷ್ಟು ಆಳಕ್ಕೆ ಕೊರೆಯುವರು, ಅಂದರೆ ಭೂಮಿಯ ಹೊರ ಪದರದಿಂದಲೂ ಒಳಕ್ಕೆ,ನಮ್ಮಲ್ಲಿನ ಇಲ್ಲಿಯವರೆಗಿನ ಯಾಂತ್ರಿಕತೆಯು ತಲುಪಲಾಗುವಷ್ಟು. ಈ ಸಾರಿ ಅವರು ಕುಟುಕಿದ ಜಾಗದಲ್ಲಿನ ಕಚ್ಚಾ ತೈಲದ ಒತ್ತಡ ಎಷ್ಟಿತ್ತೆಂದರೆ ಅದು ಅವರ ಎಲ್ಲಾ ಸುರಕ್ಷಾ ಕವಾಟಗಳನ್ನೂ ಒಡೆದು
ಅವರ ಕೊರೆಯುವ ರಿಗ್ ಗಳನ್ನೂ ಧ್ವಂಸ ಮಾಡಿ ಮುಳುಗುವಂತೆ ಮಾಡಿತ್ತು. ಈ ಸ್ಥಿತಿಯನ್ನೊಮ್ಮೆ ಮನನ ಮಾಡಿಕೊಳ್ಳಿ, ಈ ತೈಲದ ಒತ್ತಡವೆಷ್ಟಿತ್ತೆಂದರೆ ನಮ್ಮ ಇಲ್ಲಿಯವರೆಗಿನ ಎಲ್ಲಾ ಸುರಕ್ಷಾ ಯಂತ್ರೋಪಕರಣಗಳೂ ಮತ್ತು ನಮ್ಮ ಇಲ್ಲಿಯವರೆಗಿನ ಈ ತೈಲದ ಚಿಮ್ಮುವಿಕೆ ( ಪ್ರಸರಣ)ಯನ್ನು ನಿಲ್ಲಿಸಲು ಮಾಡಿದ ಪ್ರಯತ್ನಗಳೆಲ್ಲವನ್ನೂ ಅದು ನಿಷ್ಕಿಯವನ್ನಾಗಿಸಿದೆ.
ಈ ರಂದ್ರ ೫ ಸಾವಿರ ಅಡಿ, ಸಾಗರದಾಳದಲ್ಲಿದ್ದು ದಿನಕ್ಕೆ ಎರಡು ಲಕ್ಷ ಲೀಟರ್ ಕಚ್ಚಾ ತೈಲವನ್ನು ಸಮುದ್ರಕ್ಕೆ ಸೇರಿಸುತ್ತಿದೆ.

ಈಗ  ಅವರು ಸಮುದ್ರದಾಳದ ರಂದ್ರ ಮುಚ್ಚಲು ೫ ಸಾವಿರ ಅಡಿ ಯಲ್ಲಿದ್ದ ಭಗ್ನ ರಿಗ್ ನ್ನು ತೆಗೆಯಬೇಕು,
ಭಗ್ನ ರಿಗ್ ನ್ನು ತೆಗೆಯಲೇ ವರ್ಷಗಟ್ಟಲೆ ಸಮಯ ಹಾಗೂ ಕೋಟಿಗಟ್ಟಲೆ ಹಣ ಬೇಕಾದೀತು.
ಅದಲ್ಲ ವಿಷಯ ಸಮುದ್ರದಾಳದಲ್ಲಿನ ಆ  ಕೆಸರುರಂದ್ರ ಮುಚ್ಚುವುದು ಹೇಗೆ? ಸಾಧ್ಯವೇ ಇಲ್ಲ!!!ಸಾಧ್ಯವೇ ಇಲ್ಲ!!!
ನಾನು ತಮಾಷೆ ಮಾಡುವುದಲ್ಲ, ಇದನ್ನು ಮುಚ್ಚಲು ಅಣು ಬಾಂಬೇ ಉಪಯೋಗಿಸ ಬೇಕಾದೀತು,ಆ ರಂದ್ರವನ್ನು ಮುಚ್ಚಲು, ಆದರೆ ಇದಾವುದೂ ಕಾರ್ಯ ಸಾಧು ಉಪಾಯವಲ್ಲ.

ಈ ರಂದ್ರವನ್ನು ಮುಚ್ಚಲು ಸಾಧ್ಯವಾಗದೇ ಹೋದಲ್ಲಿ ಈ ತೈಲ ಪ್ರಸರಣ ಇಡೀ ಸಾಗರ ಪ್ರಪಂಚವನ್ನೇ ನಾಶ ಮಾಡಬಲ್ಲಂತಹದು. ಒಮ್ಮೆ ಯೋಚಿಸಿ ಬರೇ ಒಂದು ಕ್ವಾರ್ಟ( ೦.೯೧೪ ಮಿ ಲೀ) ತೈಲ ಎರಡೂವರೆ ಲಕ್ಷ ಲೀಟರ್ ನೀರನ್ನು ವಿಷಮಯ ಮಾಡುತ್ತಾ ಸಾಗರದ ಜೀವಿಗಳನ್ನು ನಾಷ ಮಾಡುತ್ತದೆ, ಈಗ ನಿಮಗೆ ಇದರ ಬ್ರಹತ್ತತೆ ಅರ್ಥವಾಗುತ್ತಿದೆಯೇ?

ನಮ್ಮ ಕಲುಷಿತಮನದ ರಾಜಕೀಯ ಧುರೀಣರ ತಮ್ಮ  ತಪ್ಪು ಮುಚ್ಚಲು ಹರಡಿಸುವಂತಹ  ಕುಹಕ ಮಾತು ಮತ್ತು ಹಗರಣಗಳನ್ನೇ ನೋಡುತ್ತಾ ದಿನ  ಕಳೆಯುವ ನಮಗೆ ಪ್ರಾಯಶ: ಇಲ್ಲಿಯವರೆಗಿನ ಮನುಕುಲದ ಬಹು ದೊಡ್ಡದುರಂತದತ್ತ ಸಾಗುತಿರುವೆಂಬ ಅರಿವಿದೆಯೇ?
ಈ ತೈಲ ದುರಂತ ಮತ್ತು ಹರಡುವಿಕೆ ಎಲ್ಲಿಯವರೆಗೆನಿಲ್ಲಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಇದು ಸಾಗರದ ಜೀವಿಗಳ ಸಂಪೂರ್ಣ ನಾಶದ ಹೊಣೆ ಹೊತ್ತುಕೊಂಡಿರುತ್ತದೆ, ಯಾರಿಗೆ ಗೊತ್ತು ಆ ರಂದ್ರದಡಿಯಲ್ಲಿನ ತೈಲ ಸರೋವರದ ಗಾತ್ರ?

ನಮ್ಮ ವಾತಾವರಣದಲ್ಲಿನ ಆಮ್ಲಜನಕದ ಪ್ರಮಾಣವನ್ನು ಸರಿದೂಗಿಸಲು ಈ ಸಾಗರ ಎಷ್ಟು ಮಹತ್ವದ್ದೆಂಬುದು ನಿಮಗೆ ತಿಳಿದೇ ಇದೆ.

ಈ ವಿನಾಶ ತಪ್ಪಿಸಲು ದೇವರೇ ಬರಬೇಕೇನೋ, ಮನುಷ್ಯರಿಂದಲಂತೂ ಸಾಧ್ಯವೇ ಇಲ್ಲ ಇದು.


ಚಿತ್ರ ಕ್ರಪೆ :

(W: MOST  SCARY  EMAIL YOU HAVE READ......... pass  it on (source not validated))

Monday, May 31, 2010

ಪ್ರಹರಿ

ಪ್ರಹರಿ


ಅರಿವಿಲ್ಲದವನೆಡೆಗೆ ಎಸೆಯದಿರಿ ಹೂವುಗಳ
ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ
ಕಾರ್ಗಿಲ್ನ ಅಘಾತ ಮರೆಸಿತ್ತು ಅರಿವುಗಳ
ಕರಟಿಸಿ ಕದಿರೊಡೆದ ಭಾವನೆಯ ಚಿಗುರುಗಳ

ಪ್ರಹರಿಯಾದ ನನ್ನಾಸೆ ಅರಳಿತ್ತು ಆಗೊಮ್ಮೆ
ಟಿಸಿಲೊಡೆದ ಭಾವನೆಯ ಚಿಗುರುಗಳ ಕಡೆಗೊಮ್ಮೆ
ಹಸಿರುನೆಲ ತಿಳಿನೀಲದಂಬರದ ರಕ್ಷೆಯಲಿ
ತನ್ನವರ ಸ್ಥಿರನೆಲೆಯ ಸುಖನಗೆಯ ಕಕ್ಷೆಯಲಿ

ಸುಡುಸುಡುವ ಬಿಸಿಲಿರಲಿ ಮೈಕೊರೆವ ಚಳಿಯಿರಲಿ
ಬಸಿದ ಕಣ್ಣೀರಿರಲಿ ಹರಿದ ಕೆನ್ನೀರಿರಲಿ
ನೊವಿರಲಿ ನಲಿವಿರಲಿ ತನ್ನವರ ನೆನಪಿನಲಿ
ಕಾವನೀ ಪರಿ ಪ್ರಹರಿ ಬತ್ತದಾವೇಶದಲಿ

ಕೊಚ್ಚಿ ಬಿಸುಟರೂ ಸಖರ, ಮತ್ತೆ ತರಿದರೂ ಹಲರ
ಒರಸಿ ನಡೆವರು ಮುಂದೆ ಸೆಲೆಯೊಡೆವ ಕಣ್ಣೀರ
ತಮ್ಮೊಡಲ ಪ್ರಿಯಸಖರ ,ಏಕಾಂಗೀ ಕಳೆವರವ
ಬಿಟ್ಟು ಕೊಡುವರು ಜೀವ, ಕಾಯೆ ತಾಯಿಯ ನೆಲವ

ಯಾರದೋ ಸ್ವಾರ್ಥಕ್ಕೆ ಕಾಟ ಸೆಣಸಾಟಕ್ಕೆ
ಸೆಣೆಸಿ ನಿಲುವರು ತಮ್ಮ ಪ್ರಾಣ ಬಲಿದಾನಕ್ಕೆ
ಉಳಿಯೆ ಕಾಯ್ವರು ಮತ್ತೆ ಮಲೆ ಹತ್ತಿ ಗಡಿ ಸುತ್ತೆ
ಅಳಿದುಳಿವ ಕೆಚ್ಚೊಲವು ಇದುವೆ ಪ್ರಹರಿಯ ನಿತ್ತೆ

ಮುಗಿಯದೀ ಸೆಣಸಾಟ ಈ ಹೂಟ ಕೆಣಕಾಟ
ಅಳಿದವರ ಮನೆಮನೆಯ ಕಣ್ಣೊರಸೋ ಹೆಣಗಾಟ
ಮತ್ತೆ ದುರ್ಲಭ ಅವರ ಹೆತ್ತೊಡಲ ಸರಸಾಟ
ಪ್ರಹರಿಯಾ ಪ್ರಿಯಜನರ ಹುಸಿನಗೆಯ ಸವಿಯೂಟ

ನನಗೀಗ ಬಲುದೂರ ಕರಗುವಾ ಬೆಳ್ಸೆರಗು
ಮಿಡುಕುವಾ ಹಸಿರೆಲೆಯ ಪ್ರಕೃತಿಯ ನಲ್ಸೆರಗು
ಅರಿವಿಲ್ಲದವನೆಡೆಗೆ ಎಸೆಯದಿರಿ ಪುಷ್ಪಗಳ
ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ


 (ಸಮಗ್ರ ಕರ್ನಾಟಕದ ಕವಿತೆ ಸ್ಪರ್ದೆಯಲ್ಲಿ ದೊಡ್ಡ ರಂಗೆ ಗೌಡರ ಮೆಚ್ಚುಗೆ ಪಡೆದ ಕವಿತೆ )

ಶಿಸ್ತಿನ ಕೋಟೆಯಲ್ಲೊಂದು ಬಿರುಕು


ಶಿಸ್ತಿನ ಕೋಟೆಯಲ್ಲೊಂದು ಬಿರುಕು
-೧-

ನಾನು ಹೊರಗಿಳಿಯುತ್ತಿದ್ದಂತೆ ಹೊರಗಿನ ಚಳಿ ಕೆನ್ನೆಗೆ ರಪ್ಪನೆ ಬಾರಿಸಿದಂತಾಯಿತು. ಮೊದಲನೆಯ ಸಾರಿ ಇಲ್ಲಿ ಇಳಿಯುತ್ತಿದ್ದೇನೆ. ಆದರೆ ನನ್ನೊಳಗಿನ ಸಿಪಾಯಿಗೆ ಹಾಗೆ ಅನ್ನಿಸಲೇ ಇಲ್ಲ, ಕಾರಣ ಎಲ್ಲಿಯೂ ಯಾವ ಸ್ಥಿತಿಯಲ್ಲೂ ಯಾವ ಗಳಿಗೆಯಲ್ಲೂ, ಎಲ್ಲಾಕಡೆಯಲ್ಲೂ, ಸನ್ನದ್ಧನಾಗಿರೋದೇ ಸಿಪಾಯಿಯ ಮುಖ್ಯ ಗುರಿ.ಇದನ್ನು ಸರಿ ಸುಮಾರು ಒಂದು ವರುಷ ತರಭೇತಿ ಕೊಡುತ್ತಾರಲ್ಲ, ಅದರಲ್ಲಿ ನಮಗೆ ಅದನ್ನೇ ಕಲಿಸುತ್ತಾರಲ್ಲ.
ನನ್ನ ಜತೆಗೆ ಬಂದಿದ್ದ ಅಧಿಕಾರಿ ನನ್ನ ಕೈ ಕುಲುಕಿ, ತನ್ನ ಗಮ್ಯದ ತಾಣ ತೋರಿಸಿ ತನ್ನ ಚಾಲಕನನ್ನು ಕರೆದು ನನ್ನ ರೆಜಿಮೆಂಟಿಗೆ ಬಿಡಲು ಹೇಳಿದ. ಎಲ್ಲೆಲ್ಲೂ ಹಸಿರು , ಹಸಿರು ಹಸಿರು.ಗಾಡಿಗಳು, ಸೈನಿಕರು.


ಗಾಡಿ ಒಂದು ದೊಡ್ಡ ಮಹಾದ್ವಾರವೊಂದು ನನ್ನ ರೆಜಿಮೆಂಟಿನ ಫಲಕ ಸೂಚಿಸುತ್ತಿತ್ತು, ಅದೆಲ್ಲಾ ಇಲ್ಲಿನವರೇ ಮಾಡಿದ್ದು, ಅದರ ಮೂಲಕ ಒಳ ನುಗ್ಗಿ, ಅನತಿ ದೂರದಲ್ಲಿನ ಸಣ್ಣ ಗೇಟಿನ ಮುಂದೆ ನಿಲ್ಲಿಸಿ ನನ್ನಿಂದ ಬೀಳ್ಕೊಂಡ.ನಾನು ನನ್ನ ಬೆಡ್ ಹೋಲ್ಡಾಲ್ ಮತ್ತು ಸೂಟ್ ಕೇಸ್ ಕೆಳಗಿಳಿಸಿಕೊಂಡು ಕೆಳಗಿಳಿದ ನಾನು ಬರೇ ನಾಲ್ಕು ಹೆಜ್ಜೆ ಹಾಕಿದ್ದೆನಷ್ಟೆ.ಬವಳಿಬಂದಂತಾಯ್ತು, ನನಗರ್ಥವಾಗಲಿಲ್ಲ, ಯಾಕೆ ಇವತ್ತಿಷ್ಟು ಕ್ಷೀಣತೆ? ಗೇಟ್ ಕಾಯುತಲಿದ್ದ ಜವಾನನೊಭ್ಭ ಓಡಿ ಬಂದಿದ್ದ. ನಾನಿಳಿದಿದ್ದ ಗಾಡಿಯಿಂದ ನನ್ನನಳೆದಿದ್ದನಾತ.ನನ್ನ ಕೈಯಲ್ಲಿದ್ದ ಅಧಿಕಾರಪತ್ರ ಆತನಿಗಿತ್ತೆ, ನೋಡಿದ ಆತ ನನಗೆ ಸೆಲೂಟ್ ಕೊಟ್ಟ.ನನ್ನ ಸಾಮಾನು ಸರಂಜಾಮು ತಾನು ತೆಗೆದುಕೊಂಡು ನನ್ನನ್ನು ಕರೆದೊಯ್ದ. ಆದರೆ ನಾನು ಅಂತಹ ಸ್ವಲ್ಪ ಏರಿಳಿತದ ದಾರಿಯಲ್ಲೂ ನನಗ್ಯಾಕೆ ನಡೆಯಲಾಗಲಿಲ್ಲ. ಯಾಕೆ ಹೀಗೆ? ಆಗಲೇ ಕಥೆಯಲ್ಲೆಲ್ಲಾ ಓದಿದ್ದು ನೆನಪಿಗೆ ಬಂತು , ಓಹ್ ಇದು ಲೇಹ್!!! ಆಮ್ಲಜನಕದ ಕೊರತೆಯಿಲ್ಲಿ ಮೊದಲ ಬಾರಿಗೆ ಹೋಗುತ್ತಿರುವ ಎಲ್ಲರಿಗೂ ಬಾಧಿಸದೇ ಇರದು.ನಾಲ್ಕಾರು ಹೆಜ್ಜೆ ನಡೆದಮೇಲೆ ಸ್ವಲ್ಪ ಧೀರ್ಘ ಉಸಿರು ತೆಗೆದುಕೊಳ್ಳಲೇ ಬೇಕಾಗುತ್ತದೆ.

ಪರವಾನಿಗೆ ಪತ್ರ ತೆಗೆದುಕೊಂಡವ ನನ್ನನ್ನೂ ಸಿದಾ ಅಲ್ಲಿನ ಮುಖ್ಯಸ್ಥರ ಬಳಿ ಕರೆದೊಯ್ದ.ಆದರದಿಂದ ಬರಮಾಡಿಕೊಂಡ ಆತನನಗೆ ಕುಡಿಯಲು ನೀರು ಕೊಡಿಸಿದ. ಚಹ ಬೇಡವೆಂದೆ, ಕಾಫಿ ಇರಲಿಲ್ಲವಲ್ಲ.
ಆರ್ಡರ್ಲಿಯನ್ನು ಕರೆದು ನನಗೆ ನನ್ನ ರೂಮು ತೋರಿಸಲು ಕಳುಹಿಸಿಕೊಟ್ಟ.
ಗೂಡು ಅದು!!!
ಶಿಸ್ತಿನ ಕೋಟೆಯಲ್ಲೊಂದು ಬಿರುಕು  (೧ ಅ)



ಟಿನ್ ಶೀಟುಗಳಿಂದ ಮಾಡಿದ ಗೋಡೆಯ ಮತ್ತು ಮಾಡಿನ ಹೊದಿಕೆಯುಳ್ಳ ಆ ತಾತ್ಕಾಲಿಕ ಶೆಡ್ ನಮ್ಮ ಹೊಲಗದ್ದೆಗಳ ತಾತ್ಕಾಲಿಕ ಹಳ್ಳಿಮನೆಗಳನ್ನು ನೆನಪಿಸುತ್ತಿತ್ತು. ಪಕ್ಕದ ಕಕ್ಕಸ್ಸು ಖಾನೆಯೊ ದೇವರೇ ಗತಿ. ನಾನು ಯಾಕಯ್ಯಾ ? ನನ್ನ ಅಂತಸ್ತಿಗೆ ತಕ್ಕಂತಹ ರೂಮಾದರು ಕೊಡಬಾರದಾ? ಎಂದು ಕೇಳಿದ್ದಕ್ಕೆ ತಾತ್ಕಾಲಿಕವಾಗಿ ಬರುವವರಿಗಾಗಿರುವ ಟೆಂಟ್ ಇದೇ ಸರ್ ಎಂದನಾತ.
ಅಯ್ಯೋ ನಾನೆಲ್ಲಯ್ಯಾ ತಾತ್ಕಾಲಿಕ ? ಇಲ್ಲಿಯೇ ಶಾಶ್ವತವಾಗಿ ಮೂರೂವರೆ ನಾಲ್ಕು ವರುಷ ನಿಮ್ಮ ಜತೆಗಿರಲು ಬಂದವನು ನಾನು ಎಂದೆ ಗಾಬರಿಯಿಂದ.
ದಿನದ ಹನ್ನೊಂದೂವರೆಯ ಸಮಯವದು, ಚಳಿಯ ಕುಹರ ನನ್ನ ದೇಹದ ಅಂಗಾಂಗಗಳನ್ನು ಬಾಧಿಸುತ್ತಿತ್ತು. ಈಗಲೇ ಹೀಗಿದ್ದರೆ ರಾತ್ರೆಯು ಹೇಗೋ..?
ನನ್ನ ಮನಸ್ಸು ಇನ್ನೂ ನನ್ನ ಮಡದಿ ಮಕ್ಕಳ ಜತೆಗೆ ಕಳೆದ ಆ ಅಬಾದಿತ ನೆನಪುಗಳ ಗೃಅಂಥಿಯಿಂದ ಹೊರಬರಲು ಅಧ್ವಾನ ಪಡುತ್ತಿತ್ತು, ಇಲ್ಲಿನ ಈಗಿನ ಚಳಿಯೇ ವರ್ಣನಾತೀತ ಇನ್ನು ರಾತ್ರೆಯ ನವೆಂಬರ ದ ನಂತರದ ಫೆಬ್ರವರಿ ಮಾರ್ಚನ ವರೆಗಿನ ಕಾಲವಂತೂ ಅಮ್ಮಮ್ಮಾ, ಅದು ಹೇಗೆ ಕಳೆದೇನು..?
ಈಗಿನ ನಿಮಿಷವು ದುಸ್ತರವಾಗಿರುವಾಗ ನಾಳೆ ನಾಡಿದ್ದನ್ನು ನೆನಸುವುದರಲ್ಲಿ ಅರ್ಥವೆಲ್ಲಿದೆ.
ಮತ್ತೆ ಎನೂ ಅನ್ನದೇ ಆತ ಹೊರಟು ಹೋದ. ಹೋಗುವ ಮೊದಲು ಆತ ಹೇಳಿದ ಮಾತು ನನ್ನನ್ನು ದಿಗಿಲುಗೊಳಿಸಿತ್ತು. ಇನ್ನು ೬ ದಿನ ನಾನು ಈ ರೂಮಿನಲ್ಲೇ ಇರಬೇಕು , ಹೊತ್ತಿಗೆ ಸರಿಯಾಗಿ ಊಟತಿಂಡಿ ಇಲ್ಲಿಗೇ ಬರುತ್ತೆ.ಸಂಜೆ ನನ್ನ ಹೊಸ ಅತೀ ಶೀತಕಾಲೀನ ಉಡುಪುಗಳನ್ನು ಅವರ "ಧಿರುಸಾಗಾರ"ದಿಂದ ಪಡೆದುಕೊಳ್ಳಬೇಕು. ಹೊಸದಾಗಿ ಲೇಹ್ ಬಂದವರಿಗೆ ೭ ದಿನಗಳ ಕಾಲದ ಒಂದು ಕವಾಯತು ಇದೆ,
ಅದಕ್ಕೆ ಇಲ್ಲಿನ "ಪರಿಸರಕ್ಕೆ ಹೊಂದಿಕೊಳ್ಳಲು  ನಮ್ಮ ದೇಹಕ್ಕೆ ಆಸ್ಪದಕೊಡುವ ಹೊಂದಾಣಿಕೆಯ ಕವಾಯತು", ಅದು ಸರಿಯಾಗಿ ನಮ್ಮ ದೇಹ ಹೊಂದಿಕೊಳ್ಳದೇ ಇದ್ದರೆ..ಮತ್ತೆ ವಾಪಾಸು ಬಂದಲ್ಲಿಗೇ ಹೊರಡಬೇಕು.
ಈ ಹಳ್ಳಿಮನೆಯಲ್ಲಿ ನಾನು ಒಬ್ಬಂತಿಗನಾಗಿ ೭ ದಿನ ಇರಬೇಕು, ನನ್ನ ದೇಹ ಇಲ್ಲಿಗೆ ಹೊಂದಿಕೊಳ್ಳಲು ದಿನಾ ಸ್ವಲ್ಪ ಸ್ವಲ್ಪವೇ ಕವಾಯತನ್ನು ಜಾಸ್ತಿ ಮಾಡಿಸಿಕೊಳ್ಳುತ್ತಾ ೭ ನೇ ದಿನ ಸರಿಯಾಗಿ ಇಲ್ಲಿನವನೇ ಆಗಿಹೋಗುತ್ತೆನೆ.
ಇಲ್ಲದಿದ್ದರೆ...     ಅದೇಕೋ ಆ ಸ್ಥಿತಿಯಲ್ಲೂ ನನಗೆ ಒಳ್ಲೆಯದೆನ್ನಿಸಲಿಲ್ಲ ಇಂತಹ ಅಲೋಚನೆ, ನಾನು ನಮ್ಮವರೊಡನೆ ಸೇರ ಬಹುದಾಗಿತ್ತಾದರೂ.
ಇದೇ ಅಲ್ಲವೇ ಒಬ್ಬ  ನಿಜವಾದ ಸೈನಿಕನ ಮನಸ್ಥಿತಿ. ನನ್ನ ಎರಡೂವರೆ ವರುಷದ ರಾಗು ತನ್ನ ಅತ್ಯಂತ ಪ್ರೀಪಾತ್ರ ಆ ಆಟಿಕೆಯ ಕೋವಿಯನ್ನೆತ್ತಿ ನನಗೆ ಕೊಡುತ್ತಾ ಪಪ್ಪಾ ತಗೊ ಇದನ್ನು ತೆಗೆದುಕೊಂಡು ಹೋಗು ತೇರಾ ಕಾಮ್ ಆಯೇಗಾ, ಅಂದದ್ದು ನೆನಪಾಗಿ ಹೃದಯ ದೃವಿಸಿತು. ಹೇಗಿರಬಹುದು ಈಗ ಅವರೆಲ್ಲಾ...?
ಈಗಲೇ ಹಾರಿ ಹೋಗಿ ಅವರನ್ನು ನೋಡುವ ಹಾಗಿದ್ದರೆ... ಎಲ್ಲಾ ರೆ ಗಳ ಪ್ರಪಂಚವೇ....
ಅವರನ್ನೆಲ್ಲಾ ಪುನ ಯಾವಾಗ ನೋಡುತ್ತೇನೆಯೋ...?
 ಅಥವಾ ಇಲ್ಲವೋ ಯಾರಿಗೆ ಗೊತ್ತು..?

ಪ್ರಹರಿ

ತನ್ನವರೆಲ್ಲರನ್ನೂ ಮರೆತು ದೇಶಕ್ಕೋಸ್ಕರ ತನ್ನ ಪ್ರಾಣವನ್ನು ಬೇಕಾದರೂ ಅವಶ್ಯಕಥೆ ಬಂದರೆ ಬಲಿಕೊಡಬಲ್ಲ ಹೃದಯವಂತನಿಗೆ ಈ ತಾಣ ಮೀಸಲು