Search This Blog

Saturday, June 17, 2017

ಜಾಸ್ತಿ ಅಪಾಯ ಯಾವುದು..?


ಕುಡುಕನೊಬ್ಬ ಹಾಡ ಹಗಲೇ ಪ್ರೊಫೆಸರೊಬ್ಬರಲ್ಲಿ ತಗಲಿ ಹಾಕಿಕೊಂಡ.
ಅವರು ಕೇಳಿದರು " ಅಲ್ಲಯ್ಯಾ, ನೀನೇ ಹೇಳು, ನೀರು ಜಾಸ್ತಿ ಅಪಾಯಾನಾ? ಶರಾಬು ಜಾಸ್ತಿ ಅಪಾಯವಾ? ..?"
ಶರಾಬಿಯೆಂದ "ನಿಸ್ಸಂಶಯವಾಗಿಯೂ ನೀರೇ!!"
ಯಾಕೆ ಹಾಗೆ ಹೇಳುವಿ?" ಕೇಳಿದರಿವರು.
"ಈಗ ನೋಡಿ" ಕುಡುಕನೆಂದ
"ಕಳೇದ ವರ್ಷ ಶರಾಬು ಕುಡಿದು ಎಷ್ಟು ಜನ ಸತ್ತರು ಗೊತ್ತಿದೆಯಾ ನಿಮಗೆ? ....ಬರೇ ನೂರು ಜನರು ಅಷ್ಟೇ!,
ಆದರೆ ಅದೇ ನೆರೆಯಿಂದಾಗಿ ಅದರ ಹತ್ತು ಪಟ್ಟು ಜನರು ಸತ್ತಿದ್ದಾರೆ ಗೊತ್ತಾ?.... ಹಾಗಿರುವಾಗ.....ನೀರೇ ಜಾಸ್ತಿ ಅಪಾಯ ಕಾರಿ ಅಂತ ಆಯ್ತಲ್ಲಾ?"

ಹಣ ಇಡೋ ಜಾಗ..?


ತ್ಯಾಂಪಿ: ಅಲ್ಲಾರಿ ಏನು ಮಾಡೋದೋ ಗೊತ್ತಾಗ್ತಾ ಇಲ್ಲ. ನಿಮ್ ಮಗ ನಾನು ಎಲ್ಲಿ ಹಣ ಇಟ್ರೂ ತೆಗೆದು ಬಿಡ್ತಾನೆ..
ತ್ಯಾಂಪ: ನಿಂದೇ ಮಗ ...ನಂಗೂ ಅದೇ ಸಮಸ್ಯೆ ಇತ್ತು ಅಲ್ವಾ..? ಎಲ್ಲಿಟ್ರೂ ಕ್ಷಣಾರ್ಧದಲ್ಲಿ ನೀನೂ ಮಾಯ ಮಾಡ್ತಿದ್ದೆ..?
ತ್ಯಾಂಪಿ: ಏನಂದ್ರೀ..
ತ್ಯಾಂಪ: ಅಲ್ಲಾ, ಹೌದೂ ಅದೇ ಆಲೋಚನೆ ಮಾಡ್ತಾ ಇದ್ದೆ, ಎಲ್ಲಾ ನಿನ್ ಹಂಗೇ ಇದ್ದಾನೆ ಅಂದೆ..
ತ್ಯಾಂಪಿ : ಅದಿರಲಿ, ಈಗ ಏನು ಮಾಡೋದೂ ಹೇಳಿ..
ತ್ಯಾಂಪ : ಒಂದುಪಾಯ ಮಾಡು..
ತ್ಯಾಂಪಿ: ಏನದು ಬೇಗ ಹೇಳಿ..
ತ್ಯಾಂಪ: ಮರಿ ತ್ಯಾಂಪನ ಪಠ್ಯ ಪುಸ್ತಕದಲ್ಲಿ ಅಡಗಿಸಿ ಇಟ್ಟರೆ..?
ತ್ಯಾಂಪಿ: ಹೇಳಿ ಕೇಳಿ.... ಅವನ್ ಕೈಗೇ ಕೊಡೋದಾ..?
ತ್ಯಾಂಪ: ಹೌದು ಅಲ್ಲೇ ಅಡಗಿಸಿ ಇಡು.. ಅವನಂತೂ ಪುಸ್ತಕ ಮುಟ್ಟಿ ಕೂಡಾ ನೋಡಲ್ಲ..

International Peace day

ತ್ಯಾಂಪಿ : ರ್ರೀ . ಕೇಳಿದ್ರಾ . . . ?
ತ್ಯಾಂಪ : . . ಹೌದು . . ಕರೆಕ್ಟ್ . !!
ತ್ಯಾಂಪಿ : ಅರೇ . . ನಾನೇನೂ ಹೇಳೇ ಇಲ್ಲವಲ್ಲ . . . ??!!??
ತ್ಯಾಂಪ : ನೀನೇನು ಹೇಳ್ತೀಯೋ . ಅದು ಸರಿಯಾಗೇ ಇರುತ್ತೆ ಬಿಡು . . ಡಾರ್ಲಿಂಗ್ . .
ಅಂತಾರಾಷ್ಟ್ರೀಯ ಶಾಂತಿ ಕಾಪಾಡೋ . . . ದಿನದ ಶುಭಾಶಯಗಳು

ಉಪ್ಪಿನ ಡಬ್ಬಿ ಎಲ್ಲಿ..?


ತ್ಯಾಂಪಿ ಊಟ ಮಾಡುತ್ತಿದ್ದವಳು ತ್ಯಾಂಪನನ್ನು ಕರೆದಳು
ರೀ ಇಲ್ಲಿ ಬನ್ರಿ
ಬರಲೇ ಬೇಕಲ್ಲ ಬಂದ ಆ ಬಡಪಾಯಿ..
ಒಳಗೆ ಅಡುಗೆ ಕೋಣೆಗೆ ಹೋಗಿ ಸ್ವಲ್ಪ ಉಪ್ಪು ತೆಗೆದುಕೊಂಡು ಬನ್ನಿ..
ಹೋಗಿ ನಿಮಿಷ ಐದಾಯ್ತು ಹತ್ತಾಯ್ತು ....
ಹುಡುಕಿದ ಹುಡುಕಿದ ಹುಡುಕುತ್ತಾ....ಎಷ್ಟು ತಲೆ ಕೆರೆದುಕೊಂಡರೂ ಆತನಿಗೆ ಉಪ್ಪು ಸಿಗಲೇ ಇಲ್ಲ..
ಅಲ್ಲಿಂದಲೇ ಪತ್ನಿಯನ್ನು ಕರೆದು ಕೇಳಿದ ಲೇ ಇವಳೇ ಎಲ್ಲಿದೆಯೇ ಇಲ್ಲಿ - ಈ ಕಸದ ಕೋಣೆಯಲ್ಲಿ ಅಲ್ಲಲ್ಲ ಅಡುಗೆ ಕೋಣೆಯಲ್ಲಿ ಉಪ್ಪಿನ ಡಬ್ಬಿ..?
ಕಾಣ್ತಾನೇ ಇಲ್ಲ..?
ತ್ಯಾಂಪಿ ಉರಿದು ಬಿದ್ದಳು
ಏನ್ ಗಂಡಾ... ರೀ ನೀವು ಅಲ್ಲಾ ಚಿನ್ನ ಬೆಳ್ಳಿನಾ... ಬರೇ ಉಪ್ಪು ಕೇಳಿದೆ ನಾನು ಅದೂ ಅಡುಗೆ ಮನೆಯಿಂದಾ ಅದೂ ನಿಮ್ ಕೈಯ್ಯಲಿ ತರೋಕೆ ಆಗಲ್ಲ...
ಇಡೀ ದಿನ ಆ ಹಾಳು ಮೋಬಾಯಿಲ್ಲು ಕೈಲಿ, ಆ ಅಪ್ಪು ಈ ಅಪ್ಪು, ಆ ಪುಸ್ತಕದ ಮುಖ ಪಕ್ಕದ ಮನೆಯವರ ಮುಖ ಅಷ್ಟೆ ನಿಮ್ಮ ಕೈಲಿ ನೋಡೋಕ್ಕೆ ಆಗೋದು
ನೀವು ಮತ್ತು ನಿಮ್ಮ ಆ ಕೆಲಸಕ್ಕೆ ಬಾರದ ಸ್ನೇಹಿತರು...
ಹಾಳು ಗೊಡ್ಡು ಹರಟೆ ಬಿಟ್ಟು ಇನ್ನೇನಾದ್ರೂ ಮಾಡ್ತೀರಾ ನೀವೆಲ್ಲಾ..
ನಿಮ್ಮ ಈ ಕೈಲಾಗದ ತನದ ಕೆಲ್ಸ ನನಗೆ ಗೊತ್ತೂ ರೀ..
ಅದಕ್ಕೇ ನಾನು ಮೊದಲೇ ಅಡುಗೆ ಮನೆಯಿಂದ ಉಪ್ಪಿನ ಡಬ್ಬಿ ತಂದು ನನ್ನ ಹತ್ರಾನೇ ಇಟ್ಟುಕೊಂಡಿದ್ದೇನೆ..ಇಕಾ..
ನಿಮ್.....
...................................
# #
ತ್ಯಾಂಪ... ಪಾಪ!!!!

ಹುಟ್ಟು ಹಬ್ಬದ ಗಿಫ್ಟ್


ತ್ಯಾಂಪಿ: ನೀನು ನನ್ನ ಅಮ್ಮನಿಗೆ ಅವಳ ಹುಟ್ಟು ಹಬ್ಬಕ್ಕೆ ಯಾವ ಗಿಪ್ಟ್ ಕೊಡ್ತೀಯಾ..?
ತ್ಯಾಂಪ: ನಾನಾ ..? ಅವಳಿಗೊಂದು ಕ್ರಿಕೆಟ್ ಬ್ಯಾಟ್ ಕೊಡ್ತೀನಿ..
ತ್ಯಾಂಪಿ: ಆದರೆ ಅಮ್ಮ ಕ್ರಿಕೆಟ್ ಎಲ್ಲಿ ಆಡ್ತಾಳೆ..?
ತ್ಯಾಂಪ: ನನ್ನದೇನು ಭಗವದ್ ಗೀತೆ ಓದೋ ವಯಸ್ಸಾ..?
ತ್ಯಾಂಪಿ: ಯಾಕೆ ಎನಾಯ್ತೀಗ..?
ತ್ಯಾಂಪ: ಯಾಕೆ ನನ್ನ ಹುಟ್ಟು ಹಬ್ಬಕ್ಕೆ ನಿನ್ನಮ್ಮ ಏನು ಕೊಟ್ಟಿದ್ದರು ಗೊತ್ತಲ್ಲ ನಿಂಗೆ..?
ತ್ಯಾಂಪಿ: ಇಲ್ಲ ಏನು ಕೊಟ್ಟಿದ್ದಳು
ತ್ಯಾಂಪ: ಭಗವದ್ ಗೀತಾ..?

ಮೂಗು ತೂರಿಸೋ... ನೀತಿ ..


ಪಾರ್ಕ್ ಬೆಂಚಿನಲ್ಲಿ ಕುಳಿತು
ತನ್ನದೇ ಗುಂಗಿನಲ್ಲಿ ಮರಿತ್ಯಾಂಪ ಚಾಕಲೇಟ್ ಮುಕ್ಕುತ್ತಿದ್ದ.
ಒಂದಾಯ್ತು ಎರಡಾಯ್ತು ಮೂರಾಯ್ತು ನಾಲ್ಕಾಯ್ತು..
ಅವನಲ್ಲಿದ್ದ ಚಾಕಲೇಟ್ ಗಳ ಸಂಖ್ಯೆ ಕಮ್ಮಿಯಾಯ್ತೇ ವಿನಃ
ಅವನ ಬಾಯ್ ಚಪಲ ಕಮ್ಮಿಯಾಗಲೇ ಇಲ್ಲ
ಪಾರ್ಕನ ಅದೇ ಬೆಂಚನ ಪಕ್ಕದಲ್ಲಿ ಕುಳಿತಿರೋ ವೃದ್ಧರೊಬ್ಬರು
ಅವನನ್ನು ಕೇಳಿದರು...
"ಹೀಗೆ ಚಾಕಲೇಟ್ ತಿನ್ನುತ್ತಾ ಇದ್ದರೆ ನಿನ್ನ ಹಲ್ಲುಗಳ ಕಥೆ ಏನಾಗುತ್ತೆ ಗೊತ್ತಾ..?"
"ನನ್ನ ಮುತ್ತಜ್ಜ ನೂರಾ ಇಪ್ಪತ್ತು ವರ್ಷ ಬದುಕಿದ್ದರು ಗೊತ್ತಾ..?"
"ಯಾಕೆ ಅವರೂ ಚಾಕಲೇಟ್ ತಿಂತಾ ಇದ್ದರಾ..?"
ಮುದುಕರಿಗೆ ಆಶ್ಚರ್ಯ..??
"ಅಲ್ಲ ಅವರಿಗೆ ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸೋ ಅಭ್ಯಾಸ ಇದ್ದಿರಲಿಲ್ಲ.."..
ಮರಿತ್ಯಾಂಪ ಯಾವಾಗಲೂ ಎರಡು ತಲೆಮಾರು ಮುಂದಿರ್ತಾನೆ.......

ಒಂದೆ ಕಾರಣ

ಒಂದೆ ಕಾರಣ
ಇಬ್ಬರು ಮಾತನಾಡುತ್ತಿದ್ದರು.
ಒಬ್ಬ: ನಾನು ಹೊರಗಡೆ ತಿನ್ನುವುದು, ಮನೆ ತೊಳೆಯುವುದು,ಇಸ್ತ್ರಿ ಮುಂತಾದ ಕೆಲಸಗಳಿಂದ ಬೇಸತ್ತು ಮದುವೆಯಾದೆ.
ಇನ್ನೊಬ್ಬ: ಪರಮಾಶ್ಚರ್ಯ, ನಾನೂ ಇವೇ ಕೆಲಸಗಳಿಂದ ಬೇಸತ್ತು ವಿಛ್ಚೇದನ ಪಡೆದಿದ್ದೆ.
2
ಸಾಯೋ ಮಾರ್ಗ
ಸಾಯಲು ತುಂಬಾ ಮಾರ್ಗಗಳಿವೆ : ವಿಷ, ನಿದ್ರೆಯ ಮಾತ್ರೆ, ನೇಣು, ದೊಡ್ಡ ಕಟ್ಟಡದಿಂದ ಹಾರುವುದು, ರೈಲ್ವೇ ಹಳಿಯ ಮೇಲೆ ಮಲಗುವುದು, ಆದರೆ ಕೆಲವರಿಗೆ ಮದುವೆ: ನಿಧಾನ ಅದರೂ ಖಂಡಿತ

ಮೂಲ ಬೇರು


ಮರಿ ತ್ಯಾಂಪ:
ಪಪ್ಪಾ . ನೀವು ಹೇಳೋದು ನಮ್ಮನ್ನು ಸೃಷ್ಟಿಸಿದ್ದು ದೇವರು ಅಂತ ಅಮ್ಮ ಹೇಳ್ತಾಳೆ ಮಂಗನಿಂದ ಆಗಿದ್ದು ನಾವೆಲ್ಲಾ ಅಂತ ಯಾವುದು ಸರಿ . . ನಂಗೆ ಫುಲ್ ಕನ್ಫ್ಯೂಶನ್ . . .
ತ್ಯಾಂಪ: . . ಎರಡೂ ಸರಿ .
ಮರಿ ತ್ಯಾಂಪ : ಅದು ಹೇಗೆ . . ??
ತ್ಯಾಂಪ : ನೋಡು ಮರಿ . ನಾನು ಹೇಳಿದ್ದು . ನಮ್ಮ ಕಡೆಯವರಬಗ್ಗೆ . . . ನಿನ್ನಮ್ಮ . ಅವಳ ಸಂಬಂಧಿಕರ ಬಗ್ಗೆ . . .

ಡಾ . ಪೀಕೆ . ಗಿರೆ .


ಒಂದು ಸಲ ಜೋಗ ಈ ಡಾ ಬಳಿ ಹೋದ.
ಎಡ ಕಾಲು ಪೂರ್ತಿ ನೀಲಿ ಕಟ್ಟಿತ್ತು. ಪರೀಕ್ಷಿಸಿ ಹೇಳಿದರು 
ಮಳೆಗಾಲ ಹಾವು ಚೇಳು ಜಾಸ್ತಿ . ವಿಷ ಏರಿದೆ
ಕಾಲು ಕತ್ತರಿಸ ಬೇಕಾಗುತ್ತೆ
ಮೂರು ದಿನದ ಬಳಿಕ ಕುಂಟುತ್ತಾ ಬಂದ ಜೋಗ
ಪುನಃ . ಈ ಬಾರಿ ಬಲ ಗಾಲು . .
ಪಾಪ . ಡಾಕ್ಟರ್ ಹೇಳಿದ ಮೇಲೆ . ಉಳಿಗಾಲ ಇಲ್ಲವಲ್ಲಾ
ಬಲಗಾಲೂ ತೆಗೆದು ಕೃತಕ ಕಾಲು ಜೋಡಿಸಿದರು
ಒಂದೇ ವಾರ . ಮತ್ತೆ ಬಂದ ಜೋಗ
ಅವನ ಎರಡೂ ಮರದ ಕಾಲೂ ನೀಲಿಗಟ್ಟಿವೆ!!!
ಪರೀಕ್ಷಿಸಿ . ಡಾಕ್ಟರಿಗೆ ಖುಷೀ ಆಯ್ತು ನೋಬೆಲ್ಲೇ ಸಿಕ್ಕಿದಂತೆ
ಫರ್ಮಾನು ಹೊರಡಿಸಿದರು
ಏನಪ್ಪಾ . ಅಂತಿದ್ದೆ . ನಿನ್ನ ನೀಲಿ ಕಾಲಿನ ರಹಸ್ಯ ತಿಳಿಯಿತು ಬಿಡು . . ನಿನ್ನ ಲುಂಗಿ ಬಣ್ಣ ಬಿಡುತ್ತಿದೆ!!!!

ಮನಮುಟ್ಟಿದ ಸಾಲುಗಳು..


1." ನೀವೇನನ್ನು ಬಯಸುತ್ತೀರೋ
ಅದನ್ನು ಪಡೆಯಲಾರಿರಿ. ಏನನ್ನು ಪಡೆದಿದ್ದೀರೋ ಅದನ್ನು ಅನುಭವಿಸಲಾರಿರಿ. ಏನನ್ನು ಅನುಭವಿಸುತ್ತಿದ್ದೀರೋ ಅದು ಶಾಶ್ವತವಲ್ಲ. ಯಾವುದು ಶಾಶ್ವತವೋ ಅದು ಬೇಸರ.
ಅದೇ ಬದುಕು"...
●●●●●●●
2. "ಎಲ್ಲಾ ಬೆರಳುಗಳೂ ಒಂದೇ ರೀತಿಯ ಅಳತೆಯನ್ನು ಹೊಂದಿಲ್ಲ.ಆದರೆ ಅವು ಬಗ್ಗಿ ನಿಂತರೆ ಎಲ್ಲವೂ ಒಂದೇ ಸಮನಾದೀತು. ಬದುಕಿನಲ್ಲೂ ಹಾಗೆ ನಾವು ಬಾಗುವುದಾದರೆ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳುವುದಾದರೆ ಬದುಕು ತುಂಬಾ ಸರಳ"..
●●●●●●●
3. "ಜೀವನದ ಎಲ್ಲಾ ಕ್ಷಣಗಳೂ ನಿಮಗೆ ಸಂತೋಷದಾಯಕ ಆಗಲಾರದು. ದಿನದ ಎಲ್ಲಾ ಘಟನೆಗಳು ನಿಮಗೆ
ಸಮಧಾನವೆನಿಸಲಾರದು. ಆದರೆ ಒಂದು ಸಂಗತಿ ಮಾತ್ರ ನಿಮಗೆ ಅತ್ಯಂತ ಖುಷಿಯೆನಿಸುವದು.
ಅದು ಯಾವುದೆಂದರೆ ಬೇರೆಯವರ
ಕಣ್ಣುಗಳಲಿ ನೀವು ಕಾಣುವ ನಿಮ್ಮ ಬಗೆಗಿನ ಕಾಳಜಿ"...
●●●●●●●
4. "ಒಂದು ಪಾತರಗಿತ್ತಿ 14 ದಿನಗಳ ಕಾಲ ಮಾತ್ರ ಬದುಕುಳಿಯುವದು. ಆದರೆ ಅದು ಪ್ರತಿದಿನ ಅತ್ಯಂತ ಸಂತೋಷದಿಂದ ಹಾರಾಡುವದು ಮತ್ತು ಹಲವರ ಹೃದಯಗಳನ್ನ ಗೆಲ್ಲುವುದು ಪ್ರತಿ ಕ್ಷಣವೂ ಅತ್ಯಂತ ಪ್ರಮುಖ. ಯಾವಾಗಲೂ ಸುಖ ಸಂತೋಷದಿಂದಿರಿ"...
●●●●●●
5. "ಕಾಲಿಗೆ ಬೂಟುಗಳಿಲ್ಲವೆಂದು ನಾನು ಅಳುತ್ತಿದ್ದೆ. ಆದರೆ ಕಾಲುಗಳೇ ಇಲ್ಲದ ವ್ಯಕ್ತಿಯನು ಕಂಡಾಗ ನಾನು ಅಳುವುದನ್ನು ನಿಲ್ಲಿಸಿಬಿಟ್ಟೆ. ಬದುಕು ಆಶೀರ್ವಾದಗಳ ಸಂತೆ.ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು"...
●●●●●●●
6. "ಯಾರಾದರೂ ಬಹು ಬೇಗ ಸತ್ತು
ಹೋದರೆ ದೇವರು ಅವನನ್ನು ತುಂಬಾ ಪ್ರೀತಿಸುತ್ತಾನೆಂದು ಜನ ಅಭಿಪ್ರಾಯ ಪಡುತ್ತಾರೆ. ಆದರೆ ಭೂಮಿಯ ಮೇಲೆ ಇನ್ನೂ ಬದುಕಿದ್ದೇವೆಂದರೆ ಏನರ್ಥ?
ಈ ಭೂಮಿಯ ಮೇಲೆ ಯಾರೋ ದೇವರಿಗಿಂತ ನಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಎಂದರ್ಥ"...
●●●●●●●
7. "ನೋವುಂಡ ಹೃದಯ ಸಣ್ಣ ಮಕ್ಕಳಂತೆ. ಅದು ಅಳಬಹುದೇ ಹೊರತು ತನ್ನ ಭಾವನೆಗಳನು ಹಂಚಿಕೊಳ್ಳದು .ಆದ್ದರಿಂದ ನಿಮ್ಮನ್ನು ಪ್ರೀತಿಸುವ ಮತ್ತು ನಿಮ್ಮ ಮೇಲೆ ಕಾಳಜಿ ತೋರುವ ಯಾರನ್ನು ನೋಯಿಸಬೇಡಿ"...
●●●●●●●
8. "ಒಳ್ಳೆಯ ರಸ್ತೆ ಒಬ್ಬ ಒಳ್ಳೆಯ ಚಾಲಕನನ್ನು ರೂಪಿಸಲಾರದು. ಶಾಂತವಾಗಿರುವ ಸಾಗರ ಒಬ್ಬ ಒಳ್ಳೆಯ ನಾವಿಕನನು ರೂಪಿಸಲಾರದು. ತಿಳಿಯಾದ ಆಕಾಶ ಒಬ್ಬ ಒಳ್ಳೆಯ ವಿಮಾನ ಚಾಲಕನನ್ನು ರೂಪಿಸಲಾರದು. ಸಮಸ್ಯೆಗಳೇ ಇಲ್ಲದ ಜೀವನ ಎಂದಿಗೂ ಸಾಧಕರನು ರೂಪಿಸದು"...
●●●●●●●
9. "ಸಮಯ ನಮಗಾಗಿ ಕಾಯುವುದಿಲ್ಲ ಎಂದಾದರೆ ನಾವೇಕೆ ಯೋಗ್ಯ ಸಮಯಕ್ಕಾಗಿ ಯಾವಾಗಲೂ ಕಾಯಬೇಕು?
ಒಳ್ಳೆಯ ಕೆಲಸ ಮಾಡುವುದಕೆ ಯಾವಾಗಲೂ ಕೆಟ್ಟ ಸಮಯ ಎಂದಿರುವದಿಲ್ಲ"...
●●●●●●

ತ್ಯಾಂಪಿ ಮೆಟ್ಟಿನ ಅಂಗಡಿಯಲ್ಲಿ.....


ಅಂಗಡಿಯವ: ಅಮ್ಮಾ ತಾಯೀ ನಾನು ನನ್ನ ಅಂಗಡಿಯಲ್ಲಿರೋ ಪ್ರತೀ ಚಪ್ಪಲ್ಲುಗಳನ್ನೂ ತಮಗೆ ತೋರಿಸಿ ಆಯ್ತು,
ಇನ್ನೇನೂ ಉಳಿದಿಲ್ಲ ತಮಗೆ ತೋರಿಸಲು, ಕ್ಷಮಿಸಿ.
ತ್ಯಾಂಪಿ: ಅಲ್ಲಿ ಮೇಜಿನ ಮೇಲೆ ಒಂದು ಕಾರ್ಟೂನ್ ಇದೆಯಲ್ಲ ಅದೇನದು..?
ಅಂಗಡಿಯಾತ: ಮಹಾತಾಯಿ, ನನ್ನ ಮೇಲೆ ಸ್ವಲ್ಪವಾದರೂ ಕರುಣೆಯಿರಲಿ......ಅದು ನನ್ನ ಊಟದ ಡಬ್ಬಿ,

ಹೊಸ ಎತ್ತರದವಳು


ಪಕ್ಕದ ಮನೆಯವಳು: ಹೇಗಿದ್ದಾಳೆ ನಿಮ್ಮ ಹೊಸ ಸೊಸೆ..?
ಅತ್ತೆ: ಏನ್ ಕೇಳ್ತೀರಾ..? ಸ್ವಲ್ಪ ಕೂಡ ಸುಮ್ಮನೇ ಕುತ್ಕೊಳ್ಳಲ್ಲ ಅವಳು...
ಯಾವಾಗಲೂ ಏನಾದ್ರೂ ಮಾಡ್ತಾನೇ ಇರ್ತಾಳೆ.. ಭೂತದ ಹಾಗೆ ಕೆಲ್ಸ ಮಾಡ್ತಾನೇ ಇರ್ತಾಳೆ ಗೊತ್ತ..?
ಕ್ಯಾಂಡಿ ಕ್ರಷನ ೪೫೨ ನೇ ಲವೆಲ್ಲಿಗೆ ತಲುಪಿದ್ದಾಳೆವಾಟ್ಸ್ ಅಪ್ಪ್ ನಲ್ಲಿ ೨೫ ಗ್ರೂಪ್ ನಡೆಸ್ತಾ ಇದ್ದಾಳೆ
ಫೇಸ್ ಬುಕ್ ನಲ್ಲೂ ೫೦೦೦ ಸ್ನೇಹಿತರಿದ್ದಾರೆಮತ್ತು ಹತ್ತುಸಾವಿರ ಹಿಂಬಾಲಕರಿದ್ದಾರೆ..
೧೬ ಗ್ರೂಪ್ ನಲ್ಲಿ ಅಡ್ಮಿನ್ ಆಗಿದ್ದಾಳೆ ಮತ್ತು ೩೬ ಪುಟ ನಡೆಸ್ತಾ ಇದ್ದಾಲೆ ಯೋಚಿಸುತ್ತಿದ್ದೇನೆ ದಿನಾ ಬೆಳಿಗ್ಗೆ ಹಾಲಿನಲ್ಲಿ ಬಾದಾಮಿ ಹಾಕಿ ಕೊಡಲಾ . . . ಅಥವಾ . . ಕೆಸರಿಯನ್ನಾ...ಅವಳು . . ಇನ್ನೂ ಮುಂದೆ ಬರಲು....
ಕೇಳಿದವಳು ಮೂರ್ಚೆ ಹೋದವಳು ಇನ್ನೂ ಎದ್ದಿಲ್ಲ.ಅಂತೆ...

ಹೊಸ ಜಂಗಮವಾಣಿ ಮತ್ತು ಸೀನ


ನನ್ ಹೊಸ ಮೊಬಯಿಲ್ ಕಂಡ್ಯನಾ? ಚೆಂದ ಗೊಂಪಿ ಇತ್ ಕಾಣ್ ಅಲ್ದನಾ?
ಶೀನ ನನ್ ಹತ್ರ ಬಂದ್ ಜೋರ್ ಶಬ್ದ ಮಾಡ್ತಾ ಹೇಳ್ತಾ ಇದ್ದ.
ಅತ್ತ ತಿರುಗಿದೆ, ಕಿವಿಯಲ್ಲಿ ತನ್ನ ಜಂಗಮವಾಣಿಯ ಎರಡು ವಯರ್ ಗಳು ನೇತಾಡುತ್ತಿದ್ದವು. ಇದ್ರ್ ಶಬ್ದ ಗೊತ್ತಿತ್ತನ ಆ ಬಟ್ರ ಮೈಕ್ ಗಿಂತ ಗಟ್ಟಿ ಕಣಾ
ಕಾಂತ್ಯಾ..ಇಗಾ ತನ್ನ ಕಿವಿಯಿಂದ ತೆಗೆದು ಆ ಪ್ರೇಷಕವನ್ನು ನನ್ನ ಕಿವಿಗಿಡಲು ಹೋದ ಅಷ್ಟರಲ್ಲಿ ಅದರ ಮತ್ತು ಅವನ ಜಂಗಮವಾಣಿಯ ಜತೆ ಬಿಟ್ಟು ಹೋಯ್ತು.
ಪುನಃ ಅದನ್ನ ತೆಗೆದು ಅದರ ವಾಯರ್ ಸಿಕ್ಕಿಸಲು ಹೋದ,
ಅವನ ಸ್ವರವೇ ಬಲು ಜೋರು ಅದರಲ್ಲೂ ಪ್ರಾಯಶಃ ಆತನಿಗೆ ನಮ್ಮ ಮಾತು ಸ್ವಲ್ಪ ನಿಧಾನವಾಗಿ ಕೇಳಿಸುತ್ತೆ ಅದಕ್ಕೆ ನಮಗೂ ಹಾಗೇ ಅಂತ ಅಂದುಕೊಂಡ ಪ್ರಾಣಿ ತನ್ನ ಗಲಾಟೆ ತಾರಕಕ್ಕೇರಿಸಿತ್ತು.
ಇಲ್ಲ ಈ ಸಾರಿ ನನಗೆ ಕೇಳುವ ಹಾಗೆ ಗಟ್ಟಿಯಾಗಿಟ್ಟು ಪ್ರೇಶಕವನ್ನು ಕಿವಿಗೇರಿಸಿದ್ದ, ಅಲ್ಲ ಜಂಗಮವಾಣಿಯನ್ನು ಗಟ್ಟಿಯಾಗಿ ಊರೆಲ್ಲಾ ಕೇಳುವ ಹಾಗೆ ಇಟ್ಟುಅದರ ಪ್ರೇಷಕವನ್ನು ತನ್ನ ಕಿವಿಗೇರಿಸಿಕೊಳ್ಳುವುದರಲ್ಲಿ ಯಾವ ಅರ್ಥ ಇದೆ ಅನ್ನಿಸಿತು,
ಅಷ್ಟರಲ್ಲೇ ಆತನೇ ಕೇಳಿದ, ಏಯ್ ಕೇಳ್ತಾ ಇದೆಯಾ?
ಇಡೀ ಊರಿಗೇ ಕೇಳ್ತಾ ಇದೆ, ಅಲ್ಲ ನೀನ್ಯಾಕೆ ಅಷ್ಟು ಗಟ್ಟಿ ವರ್ಲ್ತಾ ಇದ್ದೆಯಲ್ಲಾ ಯಾಕೆ?
ಯಾಕೋ ನಂಗೆ ಕೇಳ್ತಾ ಇಲ್ಲ ಯಾಕೆ?
ಆ ವಯರ್ ನ್ನು ಸರಿಯಾಗಿಸಿಕ್ಕಿಸಿಕೋ, ಆಗ ಕೇಳುತ್ತೆ ಅಂದೆ ನಗುತ್ತಾ.
ಅದೇ ಕಂಡ್ಯಾ ಯಾಕೆ ಕೇಳಲಿಲ್ಲ ಅಂತ ಎಣಿಸ್ತಾ ಇದ್ದೆ ಈಗ ಗೊತ್ತಾಯ್ತ್ ಕಾಣ್.
ಚೆಂದ ಇತ್ತಲ್ದಾ.... ಅಷ್ಟರಲ್ಲಿ ಯಾರದ್ದೋ ಕರೆ ಬಂತು ಅಂತ ಕಾಣತ್ತೆ...
ಅವನ ಹಾಡು ನಿಂತಿತು.
ಏಯ್ ಆ ಕಾಲ್ ಎತ್ತುದ್ ಹ್ಯಾಂಗೆ ಮಾರಾಯಾ?
ಯಾವ ಕಾಲು ಬಲದ್ದಾ ಎಡದ್ದಾ?
ನಿನ್ ವಾಲಿ ಕಳೀತ್, ಅಲ್ದಾ ಯಾರದ್ದೋ ಫೋನ್ ಬಂತಲ್ಲೆ ಮರಾಯಾ ಅದ್ ಹ್ಯಾಂಗ್ ಎತ್ತೂದ್ ಹೇಳ್ ಅಂದ

ಆ ಒಂದು ಸುಳ್ಳು............


ಹುಡುಗ: ನನ್ನ ನಿನ್ನ ಮದುವೆಗೆ ವಿರೋಧಿಸುತ್ತಿದ್ದ ನಿಮ್ಮನೆಯಲ್ಲಿ ಎಲ್ಲರೂ ಒಮ್ಮೇಗೇ ಹೇಗೆ ಒಪ್ಪಿಕೊಂಡರು..?
ಹುಡುಗಿ: ನನ್ನ ಒಂದೇ ಒಂದು ಉತ್ತರಕ್ಕೇ ಆ ಪವಾಡ ನಡೆಯಿತು...
ಹುಡುಗ: ಹೌದಾ..? ಅವರು ಏನು ಕೇಳಿದರು ನೀನು ಏನು ಉತ್ತರ ಕೊಟ್ಟೆ..?
ಹುಡುಗಿ: ಅವರು ಹುಡುಗ ಏನು ಮಾಡಿಕೊಂಡಿದ್ದಾನೆ ಅಂತ ಕೇಳಿದರು..
ಹುಡುಗ: ನೀನು ಏನುತ್ತರ ಕೊಟ್ಟೆ..?
ಹುಡುಗಿ: ಹೊಟ್ಟೆಯಲ್ಲಿ ತುಳೀತಾ ಇದ್ದಾನೆ ಎಂದಿದ್ದೆ..!!!

ಯಾರ ಹಾಗೇ..?


ಮರಿ ತ್ಯಾಂಪನನ್ನು ತ್ಯಾಂಪಿ ಕೇಳಿದಳು
 ಮಗಾ ಮಾವು ತಿಂತೀಯಾ..
ಮರಿ ತ್ಯಾಂಪ:ಇಲ್ಲ
ಕೇಳಿದಳು ತ್ಯಾಂಪಿ:
 ಮತ್ತೆ ಬಾಳೆ ಹಣ್ಣು ತಿಂತೀಯಾ..?
ಮತ್ಯಾ: ಇಲ್ಲ
ತ್ಯಾಂಪಿ: ಸೇಬು ..?
ಮತ್ಯಾ: ಇಲ್ಲ
ತ್ಯಾಂಪಿ: ತುಥ್, ನೀನು ನಿನ್ನ ಅಪ್ಪನ ಹಾಗೇ, ನಿನಗೇ ಸೇರೋದು ನನ್ನ ಬೈಗುಳ ಮಾತ್ರ...
**********
ತ್ಯಾಂಪ ಕೇಳಿದ
ಮಗಾ ಹಾಲು ಕುಡೀತೀಯಾ..?
ಮತ್ಯಾ: ಇಲ್ಲ
ತ್ಯಾಂಪ: ಮಜ್ಜಿಗೆ..?
ಮತ್ಯಾ: ಇಲ್ಲ
ತ್ಯಾಂಪ: ಜ್ಯೂಸು..?
ಮತ್ಯಾ: ಇಲ್ಲ
ತ್ಯಾಂಪ: ತುಥ್, ನೀನು ಅಮ್ಮನ ಹಾಗೇ, ನನ್ನ ನೆತ್ತರೇ ನೀನು ಕುಡೀಯೋದು....?

ವಿಸ್ಫೋಟಕ ಸಾಮಗ್ರಿ..


ಪೋಲೀಸರು ತ್ಯಾಂಪನ ಮನೆಯ ಬಾಗಿಲು ಬಡಿದರು
ತ್ಯಾಂಪ: ಯಾರು ಬಾಗಿಲು ಬಡಿಯುವುದು..?
ಪೋಲೀಸರು: ನಾವು ಪೋಲೀಸರು, ಬಾಗಿಲು ತೆರೆಯಿರಿ..
ತ್ಯಾಂಪ: ಯಾಕೆ.... ಯಾಕೆ ಬಾಗಿಲು ತೆರೆಯಬೇಕು..?
ಪೋಲೀಸರು: ನಿಮ್ಮಲ್ಲಿ ಮಾತಾಡಬೇಕಿತ್ತು...
ತ್ಯಾಂಪ: ನೀವೆಷ್ಟು ಜನರಿದ್ದೀರಿ..?
ಪೋಲೀಸರು: ಮೂರು ಜನ..
ತ್ಯಾಂಪ: ನನಗೆ ಸಮಯವಿಲ್ಲ, ನೀವು ನೀವೇ ಮಾತಾಡಿಕೊಳ್ಳಿ..?
ಪೋಲಿಸರು: ನಿಮ್ಮ ಮನೆಯಲ್ಲಿ ವಿಸ್ಫೋಟಕ ಇದೆಯಂತ ಸುದ್ದಿ ಬಂದಿದೆ, ಅದನ್ನೇ ಹುಡುಕಲು ಬಂದಿದ್ದೇವೆ..
ತ್ಯಾಂಪ: ಸುದ್ದಿ ಅಕ್ಷರಶಃ ಸರಿಯಾಗಿದೆ, ಆದರೆ
.
.
.
.
.
.
.
.
.
.
.
.
.
.
ಅವಳು ತವರು ಮನೆಗೆ ಹೋಗಿದ್ದಾಳೆ...

Fit ಆಗಲು


ತ್ಯಾಂಪಿ:
ಡಾರ್ಲಿಂಗ್ ನನ್ನ ಹೊಸ ಡ್ರೆಸ್ ಈ ಸಾಬೂನಿನಿಂದ ಒಗೆದಾಗ ಚಿಕ್ಕದಾಗಿ ಬಿಟ್ಟಿತಲ್ಲ ಏನು ಮಾಡಲಿ . ??
ತ್ಯಾಂಪ:
ಇನ್ನೇನು ಮಾಡೋದು . . ಹ್ಞಾ . . ಒಂದು ಉಪಾಯ ಮಾಡು . ನೀನೂ ಅದೇ ಸಾಬೂನಿಂದ ಸ್ನಾನ ಮಾಡಿ ಬಿಡು . . ಫಿಟ್ ಆಗಬಹುದು . . .

ಒನೆ ವೇ....ವಿರೋಧಿ...


ತ್ಯಾಂಪಿ ಮೊದಲಬಾರಿ ಕಾರು ತಗೊಂಡು ಹೋಗಿದ್ದಳು.
ಸುಮಾರು ಗಂಟೆಗಳ ನಂತರ ತ್ಯಾಂಪ ಕರೆ ಮಾಡಿದ...
ತ್ಯಾಂಪ: ಎಲ್ಲಿದ್ದೀಯಾ..?
ತ್ಯಾಂಪಿ: ನೈಸ್ ರಸ್ತೆಯಲ್ಲಿ ಬರ್ತಾ ಇದ್ದೇನೆ....
ತ್ಯಾಂಪ: ಡಾರ್ಲಿಂಗ್ ಸ್ವಲ್ಪ ಜಾಗ್ರತೆ, ಎಫ್ ಎಮ್ ನೋರು ಹೇಳ್ತಾ ಇದ್ದಾರೆ ಯಾರೋ ನೀ ಬರುವ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಕಾರು ಚಲಾಯಿಸಿಕೊಂಡು ಬರ್ತಾ ಇದ್ದಾರಂತೆ...
ತ್ಯಾಂಪಿ: ಯಾರೊ ಒಬ್ಬರಲ್ಲ, ನಾ ಬರುತ್ತಿರೋ ದಾರಿಯಲ್ಲಿ ಪ್ರತಿಯೊಬ್ಬರೂ ನನ್ನ ಇದಿರಿನಿಂದಲೇ ಬರ್ತಾ ಇದ್ದಾರೆ ಕಳ್ಳರು....
ತ್ಯಾಂಪ:

ಎಲ್ಲಾ ಮರೆಗಾಗಿ....


ಒಬ್ಬ ಕುಡುಕ ಕೈಯ್ಯಲ್ಲಿ ಬಟ್ಟೆ ಹಿಡಿದುಕೊಂಡು ಒಂದೇ ಸಮನೆ ಓಡುತ್ತಿದ್ದಬೆತ್ತಲೆಯಾಗಿ,
ಪೋಲೀಸನೊಬ್ಬ ಅಟಕಾಯಿಸಿಕೊಂಡ.
ಯಾಕೋ ತಿಮ್ಮಾ, ಹಂಗೇ ಓಡ್ತಾ ಇದ್ದೀಯಾ, ನಾಚಿಕೆಯಾಗಲ್ವಾ ನಿಂಗೆ..
ಕೈಯ್ಯಲ್ಲಿರೋ ಬಟ್ಟೆ ತೊಟ್ಟು ಕ್ಕೊಳ್ಳಬಾರದಾ..? ಥೂ ಹಾಳಾದೋನೇ
ತಿಮ್ಮ ಓಡುತ್ತಲೇ ಉತ್ತರಿಸಿದ...
ನೀವೂ ಸರಿ ಸಾಮಿ, ಹಂಗೆಲ್ಲಾ ಮರ್ವಾದೆ ಕಳ್ಕೊಳ್ಳೋಕಾಯ್ತದಾ..?
ನಾನೂ ನೋಡ್ತಾ ಇದ್ದೀನಿ ಬಟ್ಟೆ ಹಾಕ್ಕೊಳ್ಳೋಣ ಅಂದ್ರೆ ಒಂದಾದರೂ ಮರೆನೇ ಸಿಕ್ಕಾಕಿಲ್ಲ,
ಅದನ್ನೇ ಅಂತ ಹುಡುಕ್ತಾ ಇದ್ದೇನೆ...

ಇನ್ನೂರು ಕೇಜಿ ಕಾಫಿ ಪುಡಿ ಕೊಡಿ......

ಇನ್ನೂರು ಕೇಜಿ ಕಾಫಿ ಪುಡಿ ಕೊಡಿ......
ಕಿರಾಣಿ ಅಂಗಡಿ ನಾಯ್ಕರ ತಲೆ ಬೆಚ್ಚ!!!!
"ಮಾಣಿ ನಾನು ನನ್ನ ಅಂಗಡಿಗೇ ತಿಂಗಳಿಗೆ ಎರಡು ಕೇ ಜಿ ತರ್ತೇನೆ, ಅದೇ ಸರಿಯಾಗಿ ಮಾರಾಟ ಆಗಲ್ಲ...
ಅದೂ ಅಲ್ಲದೇ . ಕಾಫಿ ಮಾಡೋರ ಗೋದಾಮಿನಲ್ಲೇ ಅಷ್ಟು ಇರಲಿಕ್ಕಿಲ್ಲ...
ಅಥವಾ . . ನಿಮ್ಮ ಮನೆಯಲ್ಲಿ ಯಾರದ್ದಾದರೂ ಮದುವೆ ಇದೆಯಾ..? ಅಲ್ಲಲ್ಲ ಮದುವೆಗೂ ಅಷ್ಟು ಬೇಕಾಗಲಿಕ್ಕಿಲ್ಲ...
ತಡೆ . . ಹಾಗಿರುವಾಗ ಅದು ಇನ್ನೂರು ಗ್ರಾಮ್ ಇರಬೇಕು ನೋಡು..."
ನಗುತ್ತಾ ಅವರೆಂದರು
ಮಾಣಿ ಯಾವುದಕ್ಕೂ ಒಪ್ಪಿದ್ರೆ . ತಾನೇ . . "ಅದೆಲ್ಲಾ ಆಗಲ್ಲ, ಅಮ್ಮ ಕೇಳಿದ್ದೇ ಅಷ್ಟು ನೀವು ಕೊಡಲೇ ಬೇಕು... ಕೊಟ್ಟರೆ ಮಾತ್ರ ತಕೊಂಡು ಹೋಗ್ಟೇನೆ" ಅಂತಿದ್ದ
ಆಗ ನಾಯ್ಕರೇ
"ನೋಡು ಇನ್ನೂರು ಕೇಜಿ ನಿನಗೆ ತೆಗೆದುಕೊಂಡು ಹೋಗಲೂ ಸಾಧ್ಯವಿಲ್ಲ, ಈಗ ಈ ಇನ್ನೂರು ಗ್ರಾಮ್ ತಕೊಂಡು ಹೋಗು, ಮತ್ತೆ ಅಮ್ಮನಲ್ಲಿ ಕೇಳಿ ನೋಡು "
ಅಂದರು..
ಮಾಣಿ ಮನಸ್ಸಿಲ್ಲದ ಮನಸ್ಸಿಂದ ಅವರು ಕೊಟ್ಟದ್ದನ್ನು ತಕೊಂಡು ಮನೆಗೆ ಬಂದಿದ್ದ
ಮನೆಯಲ್ಲಿ ವಿಷಯ ಕೇಳಿ ಎಲ್ಲರೂ ನಗಾಡಿದ್ದೇ ನಗಾಡಿದ್ದು.....
............
ನಾನು ಚಿಕ್ಕವನಿರಬೇಕಾದರೆ ನಡೆದ ಘಟನೆ ಇದು.. ಇದನ್ನು ಬರೆದಾತನೇ ಆ ಮಾಣಿ
ಇವತ್ತು ಅಣ್ಣಯ್ಯನ ಮನೆಯಲ್ಲಿ ಲೋಕಾಭಿರಾಮವಾಗಿ ಬಾಲ್ಯದ ವಿಷಯ ಮಾತನಾಡುವಾಗ ನೆನಪಿಗೆ ಬಂತು..
ನಿಮ್ಮಲ್ಲಿ ಹೇಳಿಕೊಳ್ಳಬೇಕೆಂದೆನಿಸಿತು...

ಮೈ ವರಸೋ ಬಟ್ಟೆ ಕೊಳೆ ಯಾಕೆ ಆಗತ್ತೆ..?


ತ್ಯಾಂಪಿ: ಮರೀ ಬಾರೊ ಸ್ನಾನ ಮಾಡ್ಕೋ ಸ್ಕೂಲ್ ಗೆ ಲೇಟಾಗುತ್ತೆ..
ಮರಿ ತ್ಯಾಂಪ: ಇಲ್ಲಮ್ಮ ಇವತ್ತು ಸ್ಕೂಲ್ ರಜೆ.
ತ್ಯಾಂಪಿ: ಯಾಕೆ ? 
ಮರಿ ತ್ಯಾಂಪ: ನಮ್ಮ್ ತರಗತಿಯ ಮಾಸ್ತ್ರ ಅಮ್ಮ ತೀರಿಕೊಂಡರಂತೆ..
ತ್ಯಾಂಪಿ: ಕಳೆದ ಸಲಾನೂ ಅದೇ ಹೇಳಿದ್ದೆ...
ಮರಿ ತ್ಯಾಂಪ: ಅಲ್ಲ, ಇವತ್ತು ಸ್ಕೂಲ್ ಡೇ..
ತ್ಯಾಂಪಿ: ಸುಳ್ಳು ಹೇಳಿದ್ರೆ ಹಾಕ್ತೀನ್ನೋಡು, ಹಾಗೆ ಅಂತ ನಿನ್ನ ಪುಸ್ತಕದಲ್ಲಿ ಬರೆದಿಲ್ಲ..?
ಮರಿ ತ್ಯಾಂಪ: ನಂಗೆ ಸ್ನಾನ ಮಾಡಲು ಮನಸ್ಸಿಲ್ಲ...
ತ್ಯಾಂಪಿ: ಹಾಗೆಲ್ಲಾ ಅನ್ನಬಾರದು..
ಮರಿ ತ್ಯಾಂಪ: ಸ್ನಾನ ಯಾಕೆ ಮಾಡಬೇಕು..? ನಿನ್ನೆ ಮಾಡಿದ್ದೆನಲ್ಲ...
ತ್ಯಾಂಪಿ: ನಿನ್ನೆ ಊಟ ಮಾಡಿದ್ದೆಯಲ್ಲ ಇವತ್ತು ಬೇಡವಾ ಹಾಗಾದ್ರೆ..?
ಮರಿ ತ್ಯಾಂಪ: ಸ್ನಾನ ಯಾಕೆ ಮಾಡ್ಬೇಕು, ನಾನೇನು ಮಣ್ಣಲ್ಲಿ ಆಡಿ ಬಂದೆನಾ..?
ತ್ಯಾಂಪಿ: ಅಲ್ಲಪ್ಪಾ ಹೊರಗಡೆ ಹೋದಾಗ ಧೂಳೆಲ್ಲ ಅಂಟಿ ಕೊಳ್ಳುತ್ವೆ, ಸ್ನಾನ ಮಾಡಿದ್ರೆ ನಮ್ಮ ಕೊಳೆಯೆಲ್ಲ ಹೋಗಿ ಮೈ ಮತ್ತು ಮನಸ್ಸು ಸ್ವಚ್ಛವಾಗುತ್ತೆ..
ಮರಿ ತ್ಯಾಂಪ: ಸುಳ್ಳು ಹೇಳ್ತಾ ಇದ್ದೀಯಾ..?
ತ್ಯಾಂಪಿ : ಯಾಕೆ ನಾನೇನು ಸುಳ್ಳು ಹೇಳಿದ್ದೆ..?
ಮರಿ ತ್ಯಾಂಪ: ಅಮ್ಮಾ,
ತ್ಯಾಂಪಿ:ಹೇಳು..
ಮರಿ ತ್ಯಾಂಪ: ಸ್ನಾನ ಮಾಡಿದ್ರೆ ಕೊಳೆ ಎಲ್ಲಾ ಹೋಗೋದಾದ್ರೆ, ನಮ್ ಸ್ನಾನದ ಪಂಚೆ ಯಾಕೆ ಅಷ್ಟು ಬೇಗ ಕೊಳಕಾಗುತ್ತೆ..?
.
.
.
.
.
.
ತ್ಯಾಂಪಿ: !!???!!! ###, 

ಅಜೀವ ಪರ್ಯಂತ - ಖರ್ಚಿನ ಕಾರ್ಡು


ತ್ಯಾಂಪಿಗೊಂದು ಕರೆ ಬಂತು.
ಕರೆ ದನಿ: ಮೇಡಮ್ ಒಂದು ಹೊಸಾ ಸಾಲದ ಕಾರ್ಡು ಬಂದಿದೆ ತಗೋತೀರಾ, ತುಂಬಾನೇ ಒಳ್ಳೆಯದಿದೆ..
ತ್ಯಾಂಪಿ: ಏನದು, ಹೇಳಿ ನೋಡುವಾ..
ಕರೆ ದನಿ: ಇದಕ್ಕೆ ವಾರ್ಷಿಕ ಖರ್ಚಿಲ್ಲ, ನೀವು ಮಾಡಿದ ಸಾಲಕ್ಕೆ ಮೂರು ತಿಂಗಳವರೆಗೆ ಬಡ್ಡಿ ಕಟ್ಟಬೇಕಾದದ್ದಿಲ್ಲ. ಜಾಸ್ತಿ ಸಾಲದ ಭರವಸೆಯಿದೆ. ಖರ್ಚು ಮಿತಿಗಿಂತ ಜಾಸ್ತಿ ಮಾಡಿದರೂ ಶಿಕ್ಷೆ( ಪೆನಾಲ್ಟಿ) ಇಲ್ಲವೇ ಇಲ್ಲ. ಮಾರ್ಕೇಟಿನಲ್ಲಿ ಇದಕ್ಕಿಂತ ಒಳ್ಳೆಯ ಕಾರ್ಡು ಇಲ್ಲವೇ ಇಲ್ಲ. ನೀವು ತೋರ್ಸಿದರೆಂದರೆ ನಿಮಗೆ ಸಾವಿರ ರೂಪಾಯಿ ನಮ್ಮ ಕಡೆಯಿಂದ ಬಹುಮಾನ.
ತ್ಯಾಂಪಿ: ಹಾಗಾದರೆ ಆ ಸಾವಿರ ರೂಪಾಯಿ ನನಗೇ ಸಿಗಬೇಕು, ಯಾಕೆಂದರೆ ನನ್ನ ಬಳಿ ಇದಕ್ಕಿಂತ ಒಳ್ಳೆಯ ಖರ್ಚಿನ ಕಾರ್ಡಿದೆ.
ಕರೆ ದನಿ: ಯಾವ ಕಾರ್ಡು ಮೇಡಮ್..?
ತ್ಯಾಂಪಿ: ಮೊದಲು ಅದರ ಗುಣ ಲಕ್ಷಣ ಕೇಳು, ನಾನು ಜೀವಮಾನವಿಡೀ ಎಷ್ಟು ಬೇಕಾದರೂ ಮಾಡುತ್ತಲೇ ಇರಬಹುದು. ನನ್ನ ಖರ್ಚಿನ ಮಿತಿ ನಾನೇ ಬೇಕಿದ್ದರೆ ಹಾಕಿಕೊಳ್ಳಬಹುದು ಇಲ್ಲವಾದರೆ ಇಲ್ಲ. ಎಷ್ಟು ಹೆಚ್ಚು ಖರ್ಚು ಮಾಡಿದ್ರೂ ಪೆನಾಲ್ಟಿ ಹಾಕೋ ಧೈರ್ಯ ಇಲ್ಲ. ಎಲ್ಲಕ್ಕಿಂತ ಹೆಚ್ಚು ಈ ಮಾಡಿದ ಸಾಲನ ತೀರಿಸಬೇಕೆಂತಲೂ ಇಲ್ಲ.
ಕರೆದನಿ: ಯಾವ ಕಾರ್ಡದು ಮೇಡಮ್
ತ್ಯಾಂಪಿ: ನನ್ನ ಗಂಡ ತ್ಯಾಂಪ, ಕೊಡಿ ನನ್ನ ಸಾವಿರ ರೂಪಾಯಿ.
.
.
.
.
.
.
.
.
.
ಕರೆ ಕಟ್ಟಾಯ್ತು.....

ತ್ಯಾಂಪನ ಸಂದೇಶ ೧


ಯಾರೋ ಬಾಗಿಲನ್ನು ದಬದಬನೆ ಗುದ್ದುತ್ತಿದ್ದರು.
ರಾತ್ರೆ ಅಲ್ಲವಾ, ಕನಸೆಂದುಕೊಂಡೆ.,
ಪುನಃ ಪುನಃ ಇನ್ನೂ ಜೋರಾಗಿ....
ಅಲ್ಲ ಅಲ್ಲ
ನಿಜವಾಗಿಯೂ ಅದೂ ನಮ್ಮ ಮನೆಯ ಬಾಗಿಲನ್ನೇ, ಯಾಕೆಂದರೆ ಪಕ್ಕದಲ್ಲಿನ ನನ್ನವಳೂ ಕೂಗಿ ಕೇಳಿದಳು.
ಯಾರೋ ಬಾಗಿಲನ್ನು ಬಡಿಯುತ್ತಿದ್ದಾರೆ, ಅಲ್ಲಲ್ಲ ಗುದ್ದುತ್ತಿದ್ದಾರೆ.
ಒಡೆದೇ ಹೋದರೆ ನಮ್ಮ ಮನೆಯ ಓನರ್ ಬೈದಾನು ಅನ್ನಿಸಿತು, ಅದು ಬಿಡಿ ನಾವೇ ಹೊಸತು ಬಾಗಿಲು ಮಾಡಿಸಿ ಹಾಕಬೇಕಲ್ಲ
ಎದ್ದೆ ಬೆಳಕು ಹಾಕಿ ಬಾಗಿಲು ತೆರೆದೆ
ಇದಿರಲ್ಲಿ ಸೀನ
ಯಾಕೋ ಏನಾಯ್ತೋ
ಏನಿದು? ಕೈಯ್ಯಲ್ಲಿದ್ದ ಜಂಗಮವಾಣಿಯನ್ನ ನನ್ನೆದುರು ಹಿಡಿದ
ಎಷ್ಟು ಹತ್ತಿರ ಹಿಡಿದಿದ್ದ ಎಂದರೆ ಅದು ನನಗೆ ಕಾಣುತ್ತಲೇ ಇರಲಿಲ್ಲ.
ಸ್ವಲ್ಪ ದೂರ ಹಿಡ್ಕೊ ಮರಾಯ ನನಗೇನೂ ಹತ್ತಿರ ದೃಷ್ಟಿ ದೋಷ ಇಲ್ಲ ಬಿಡು ಎಂದೆ.
ಏನದು..? ಕೇಳಿದ
ನೀನೇ ಹೇಳಬೇಕು, ಅದು ನಿನ್ನ ಜಂಗಮವಾಣಿ ಅಲ್ಲವಾ..? ನಾನೆಂದೆ
ಸೀನ: ಅಲ್ಲ ಬಂದದ್ದು ಯಾರಿಂದ ನೋಡೋ..
ನೋಡಿದೆ ಗೊತ್ತಾಗಲಿಲ್ಲ, ಅದನ್ನೇ ಹೇಳಿದೆ..
ಬಡ್ಕೊಂಡ್ರು ನಿನ್ ಬುದ್ದಿಗೆ, ಅಲ್ಲಯಾ ನಮ್ ತ್ಯಾಂಪನ ನಂಬರ್ ಅದು,
ಅದು ತ್ಯಾಂಪನ ಹೆಸರು ತೋರಿಸುತ್ತಿಲ್ಲವಲ್ಲ, ನನಗೆ ಹೇಗೆ ಗೊತ್ತಾಗಬೇಕು..?
ನನ್ನ ಜಂಗಮವಾಣಿಯಲ್ಲಿ ಆದರೆ ಅದೇ ಹೇಳುತ್ತೆ ಯಾರದ್ದು ಅಂತ..
ಸೀನ ರೇಗಿದ ಈ ಬಾರಿ ಜೋರಾಗೇ
ಅದಕ್ಕೇ ಅಲ್ಲಯ್ಯ ಹತ್ತಿರದವರ ನಂಬರಾದರೂ ಬಾಯಿ ಪಾಠ ಮಾಡ್ಕೋ ಬಾರ್ದಾ..?..?
ಇವನು ಹೇಳುತ್ತಿರುವುದೇನೋ ಸರಿ, ಆದರೆ ಈ ಗಡಿಬಿಡಿಯ ಜೀವನದಲ್ಲಿ ಯಾವ ಯಾವುದನ್ನು ನೆನಪಲ್ಲಿಟ್ಟುಕೊಳ್ಳಬಲ್ಲೆವು..?
ಆದರೆ ಸೀನ ಹಾಗಲ್ಲ, ಅವನಿ ನಮ್ಮೆಲ್ಲರ ೨೦- ಮೂವತ್ತು ಅವನ ಹತ್ತಿರದವರೆಲ್ಲರ ನಂಬರ್ ನೆನಪಲ್ಲಿರುತ್ತೆ..
ಕಲಿತವನಲ್ಲವಲ್ಲ.ಅದಕ್ಕೇ..
ನೋಡಿದೆ
ಅರ್ಥ ಆಗಲಿಲ್ಲ..
ಏನಪ್ಪಾ ಇದು..?
Pdaagdd paddw
ಗೊತ್ತಾಗಲಿಲ್ಲ
ಸೀನ: ನನಗೂ ಗೊತ್ತಾಗಲಿಲ್ಲ, ನೀನು ಕಲಿತವನು ಅದಕ್ಕೇ ನಿನ್ನಲ್ಲಿಗೆ ಬಂದೆ , ಏನಿದು ಅದಾದರೂ ಹೇಳು..ತ್ಯಾಂಪ ಕಳಿಸಿಕೊಟ್ಟ ಸಂದೇಶ ಕಣೋ..
ಅಲ್ಲಾ ಯಾವ ಭಾಷೆಯಲ್ಲಿದೆ ಅದಾದರೂ ಹೇಳೊ..
ನಾನು: ಗೊತ್ತಿಲ್ಲ.. ಅವನೆಲ್ಲಿದ್ದಾನೆ ಈಗ..?
ಸೀನ: ಹಳ್ಳೀಗೆ ಹೋಗ್ತೇನೆ ಅಂದಿದ್ದ...
ನಾನು: ನಿಮ್ಮಲ್ಲಿಗಾ..?
ಸೀನ: ಅಲ್ಲ ಜೋಗನ ಮನೆಗೆ...
ಅಲ್ಲಿ ನೆಟ್ ವರ್ಕ್ ಇರಲ್ಲ!!
ಅದಕ್ಕೇ ಈತ ಸಂದೇಶ ಕಳಿಸಿದ್ದಾನೆ..?
ಏನಾದರೂ ಆಗಿದ್ದರೆ..?
ಪಾಪ..
ಜೋಗನಿಗೆ ಕರೆ ಮಾಡಿ ನೋಡೋಣವಾ..?
ಅದೇ ಸರಿ ಕಣೋ..
ಮಾಡಿದರೂ ಮೊದಲೆರಡು ಬಾರಿ ಸರಿಯಾಗಿ ಲೈನು ಸಿಗಲಿಲ್ಲ..
ಆಮೇಲೆ ಸಿಕ್ಕಿತು..
ಗೋಪೂ..
ಹೌದು ಜೋಗ..
ನಮಸ್ಕಾರ
ತ್ಯಾಂಪ ಅಲ್ಲಿಗೆ ಬಂದನಾ..?
ಇಲ್ಲ ...
ಕರೆ ಕಟ್ಟಾಯ್ತು..
ಗೋವಿಂದ!!! ಅಲ್ಲಿಗೂ ಹೋಗಿಲ್ಲವಾ..? ದೇವರೇ... ಪಾಪ
ಯಾರು ಪಾಪ..? ದೇವರಾ..? ಸೀನನಿಗೆ ಸ್ವಲ್ಪ ಸಿಟ್ಟು ಜಾಸ್ತಿಯಾಯ್ತು, ಆತನ ಬಾಮೈದನಲ್ಲವಾ..?
ಏನೂ ಅಂತ ಅಂದ್ಕೊಳ್ಳೋದು..?
ಸೀನ: ನಾವೂ ಅಲ್ಲಿಗೇ ಹೋಗೋಣ ಬಾ...
ನಾನು: ನಾನಾ..? ಈ ರಾತ್ರೆಯಲ್ಲಿ ನಾ.....
ಸೀನ: ಸರಿ ಹೋಯ್ತು... ನೀನೆಂತ ಗೆಳೆಯನಯ್ಯಾ..?
ಮತ್ತೊಮ್ಮೆ ಸದ್ದಾಯ್ತು... ಏನದು...
ಗುಂಡಿನ ಸದ್ದಾ..?
ತನ್ನ ಜಂಗಮವಾಣಿಯನ್ನು ಪುನಃ ನೋಡಿದ ಸೀನ ಮತ್ತೊಮ್ಮೆ ಹರಳೆಣ್ಣೆ ಕುಡಿದ ಮುಖ ಮಾಡಿದ..
ಈಗೇನಾಯ್ತು....?
ಮತ್ತೊಂದು ಸಂದೇಶ...
Wajj ammd adtdp 7 dawp wmt dmmt ammd, g m dgmd gdpd
ಎಲ್ಲೋ ಅರಬ್ಬೀಗಳ ಹತ್ರ ಸಿಕ್ ಹಾಕೊಂಡ್ನಾ..?
ತಲೆ ಕೆಟ್ಟೋಯ್ತು..
( ಮುಂದು ವರಿಯಿತು)

ಅಂಗಡಿ ಸರಕು...


ಮಾಣಿ ಪೇಟೆಗೆ ಹೋಗಿ ಎರ್ಡ್ ಕಾಯ್ ತಕಂಬಾ..
ಅಡಿಕೆ ಹಾಳೆಯಲ್ಲಿ ಸಗಣಿ ನೀರಿನಿಂದ ನೆಲ ಒರೆಸುತ್ತಿದ್ದ ಅಕ್ಕ ಹೇಳಿದಳು...
ಇಲ್ಲ ನಂಗೆ ಓದಲಿಕ್ಕಿದೆ, ನಾಳೆ ಪರೀಕ್ಷೆ.. ಮಾಣಿಯೆಂದ..
ನಿಂಗೆ ತಿಂಡಿ ಮಾಡಿ ಕೊಡ್ತೇನೆ..
ಎಂತ ತಿಂಡಿ
ಪಾಯಸ...
ಮಾಣಿ ಪೇಟೆಗೆ ಹೊರಟ..
ಅಲ್ಲ ಅಕ್ಕ, ಕಾಯಿಗೆ ಎಷ್ಟ್ ರುಪಾಯಿ ಇರತ್ತೆ..?
ಮೂರೋ ನಾಲ್ಕೋ ಇದ್ದೀತು, ಕೇಳಿದ್ರೆ ಅವ್ರೇ ಹೇಳ್ತ್ರ್
ಮತ್ತೆ ದುಡ್ಡು..?
ದುಡ್ಡು ಬ್ಯಾಡ ಲೆಕ್ಕಕ್ಕೆ ಬರೆದುಕೊಳ್ಳಲು ಹೇಳು..
ಆಯ್ತು.
ಬಾಳಿಗರ ಅಂಗಡಿಯಲ್ಲಿ..
ಬಾಳಿಗರೆ ಮೂರ್ ರುಪಾಯಿ ಕಾಯಿ ಕೊಡಿ..ಎರ್ಡ್ ಕಾಯ್ ಬೇಕ್...
ಮೂರ್ ರುಪಾಯಿ ಕಾಯಾ..? ಬಾಳಿಗರಿಗೆ ಇಲ್ಲಿಯವರೆಗೆ ಯಾರೂ ಹಾಗೆ ಕೇಳಿದ್ದಿಲ್ಲ..
ನೀನ್ ಹೀಂಗ್ ಯಾಪಾರ್ ಮಾಡ್ರ್ ಹೆಂಗೆ ಮಾರಾಯಾ..?
ಬಾಳಿಗ್ರೆ ಈ ಕಾಯಿಗೆ ಎಷ್ಟ್ ಅಂತ ತೋರಿಸಿ ಕೇಳಬೇಕು, ಇಲ್ಲದಿದ್ದರೆ ಎರಡು ರುಪಾಯಿ ಕಾಯಿಯನ್ನೇ ಮೂರು ರುಪಾಯಿ ಅಂತ ನಿನಗೆ ಯಾಮಾರಿಸಿಯಾರು..ಯಾರಾದರು, ಮಾಸ್ಟ್ರ್ ಮಗ ಅಂತ ಹೀಗೆ ಹೇಳ್ತಾ ಇದ್ದೇನೆ...
ಬಾಳಿಗರೆಂದಿದ್ದರು...
ಮೊದಲ ವ್ಯಾಪಾರ ಕಲಿತದ್ದು ಹೀಗೆ ನಾನು ಎರಡನೇ ತರಗತಿಯಲ್ಲಿರುವಾಗ...

ಟಾಟಾ ಆಕಾಶ ಮತ್ತು ಒದ್ದೆ ಕಾಲೊರಸು....


ರಾತ್ರೆ ಮನೆಗೆ ಬರುವಾಗಲೇ ತಡವಾಗಿತ್ತು..
ರಾತ್ರೆ ಅಡುಗೆ ಏನು ಕೇಳಿದೆ..

ಮೆನು ತುಂಬಾನೆ ದೊಡ್ಡದಿತ್ತು.. 

ಬಲಗಡೆ ತಿರುಗಿದೆ 

ಟಿವಿ ಸುಮ್ಮನೇ ಮಲಗಿತ್ತು...

ಅರೆರೇ ತಲೆ ಚೆಚ್ಚಿಕೊಂಡೆ

ಅನಂತರವೇ ನೆನಪಾಗಿದ್ದು..

ಮನೆಯವರು ಬೆಳಿಗ್ಗೇನೇ ಹೇಳಿದ್ದರು, ನಮ್ಮ ಟಾಟಾ ಆಕಾಶ ಹಾಳಾಗಿದೆ,
ಬೆಳಿಗ್ಗೇನೇ ಒಂದು ಗಂಟೆಯೊಳಗೆ ಸರಿಯಾಗುತ್ತೆ ಅಂದಿರಿ...

ಸ್ವಲ್ಪ ಕಚೇರಿಯಲ್ಲಿ ಕೆಲಸವಿತ್ತು , ಅಲ್ಲಿಗೆ ಹೋದರೆ ಬೇರೆ ಎ
ಲ್ಲಾ ಮರೆತು ಹೋಗುತ್ತೆ ಕಣೇ ಅಂದೆ,

ಗೊತ್ತಿತ್ತು ಬಿಡಿ ನೀವು ಸತ್ಯವಾಗಿ ಮಾಡ್ತೇನೆ ಅಂತ ಹೇಳಿದ್ದು ಯಾವುದೂ ಆ ಸಮಯಕ್ಕೆ ಆಗದು ಎಂದು
ಪ್ರಪಂಚದ ಗಂಡಂದಿರ ಸತ್ಯ ಬಯಲು ಮಾಡಿದಳು
 ಏನನ್ನಲು ಸಾಧ್ಯ..?

ಸರಿ ನನ್ನ ಲಾಟು ಪೂಟು ತೆಗೆದು ಅದರಲ್ಲಿ ಆಕಾಶ ಟಾಟಾ ಅಂತ ಬರೆದೆ,,

ಸರಿ ಒಂದು ಚೀಟಿಯಲ್ಲಿ ಹಲ್ಲೋ ಗೋಪೀನಾಥ, ನಾನು ಗಾಯತ್ರಿ ಏನು ವಿಷಯ ಅಂತ ಕೇಳಿದಳು
ಅಮ್ಮ ನಿನ್ನೆಯಿಂದ ನಮ್ಮ ಮನೆಯಲ್ಲಿ ಯಾರೂ ಕಾಣ್ತಾ ಇಲ್ಲ ಪತ್ತೇದಾರಿ ಪ್ರತಿಭಾನ್ನ ಕೇಳೋಣ ಎಂದರೆ ಅವಳೂ ರಜೆಯಲ್ಲಿದ್ದಾಳೆ ಎಂದೆ..

ಹಣ ಸರಿಯಾಗಿ ಕಟ್ಟಿದ್ದೀರಾ ಕೇಳಿದಳು..

ಸರಿಯಾಗಿ ನೋಡಿ ಯಾವಾಗಲೂ ನನ್ನ ಖಾತೆ ತುಂಬಿ ತುಳುಕುತ್ತಿರುತ್ತೆ ಎಂದೆ

ಸರಿಯಾಗಿ ಕಾಲ ಕಾಲಕ್ಕೆ ಊಟ ತಿಂಡೀ ಇನ್ನೇನೇನೋ ಬೇಕಿದ್ದಲ್ಲಿ ಅದು ಮನೆಯವರ ಮೊದಲ ಆಧ್ಯತೆ ಗಣನೆಗೆ ತೆಗೆದುಕೊಳ್ಳಲೇ ಬೇಕಲ್ಲ...

ಹಾಗಾದರೆ ಏನೋ ತಾಂತ್ರಿಕ ದೋಷ ಇರಬಹುದು ಎಂದಳು..

ಮೊನ್ನೆ ಮೊನ್ನೆಯ ವರೆಗೆ ಸರಿಯಾಗಿ ಬರ್ತಾ ಇತ್ತಲ್ಲ ಎಂದೆ

ಸರಿಯಾಗಿ ನಿಮ್ಮ ಟೀವಿ ಯ ಪರದೆ ಏನು ಹೇಳ್ತಾ ಇದೆ ಅಂತ ಹೇಳಿ ಅಂದಳು ಗಾಯತ್ರಿ

ಹೊರಗಡೆ ಮಳೆ ಬರ್ತಾ ಇದೆಯಾ ನೋಡಿ, ಇಲ್ಲವಾದರೆ ನಿಮ್ಮ ಆಕಾಶವನ್ನು ಒಮ್ಮೆ ಬಂದು ಮಾಡಿ ಪುನಃ ತೆರೆದು ನೋಡಿ ಅಂತಾ ಇದೆ..

ಹಾಗೆ ಮಾಡಿದಿರಾ..? ಅಂತ ಕೇಳಿದಳು.

ಈ ಕವಾಯತು ಬೆಳಿಗ್ಗೆಯಿಂದ ಸಾವಿರದ ಐನೂರು ಬಾರಿ ಮಾಡಿ ಆಯ್ತು ಎಂದೆ..

ಹಾಗಾದರೆ ನಿಮ್ಮ ದೂರನ್ನು ಗಣನೆಗೆ ಅಂತ ತೆಗೆದುಕೊಂಡು ನಂಬರ್ ಕೊಡ್ತೇನೆ ಮುಂದಿನ ೨೪ ಗಂಟೆಯ ಒಳಗೆ ನಮ್ಮ ತಾಂತ್ರಿಕಾಧಿಕಾರಿ ಬಂದು ಸರಿ ಮಾಡ್ತಾನೆ, ಆದರೆ ನೀವು ಇನ್ನೂರು ರೂಪಾಯಿ ಕೊಡಬೇಕಾಗುತ್ತೆ ಅಂತು ಗಾಯತ್ರಿ ಅಮ್ಮ..

ಅಲ್ಲಮ್ಮಾ ಏನಾದರೂ ದೋಷ ಇದ್ದರೆ ನೀವು ನಮಗೆ ಅದನ್ನು ಫ್ರೀಯಾಗಿ ಮಾಡಿಕೊಡಬೇಕು ನಾವು ನಿಮ್ಮ ಸುಸ್ತಿದಾರರಲ್ವಾ.. ? ಅಂದೆ..

ಸ್ವಾಮೀ ನಮ್ಮ ಫ್ರೀ ಅನ್ನೋದು ಬರೇ ಒಂದು ವರ್ಷಕ್ಕೆ ಮಾತ್ರ ನಂತರವಾದರೆ ನಮ್ಮ ಅಧಿಕಾರಿ ನಿಮ್ಮಲ್ಲಿಗೆ ಬಂದರೆ ಅವನಿಗೆ ಹೋಗಿ ಬರೋ ಖರ್ಚು ಕೊಡಬೇಕು, ಹಾಗಿದ್ದಲ್ಲಿ ಮಾತ್ರ ಕಳುಹಿಸುತ್ತೇನೆ ಎಂದಳು ಮಹಾ ತಾಯಿ, 

 ಹಾಗಾದರೆ ನಿಮ್ಮ ಆಕಾಶ ಕಾಯವನ್ನೇ ಯಾಕೆ ತಕೋಬೇಕು ಬೇರೆ ನೋಡಿದರಾಗದಾ ಅಂದೆ ಜೋರಾಗಿ..
ನಿಮ್ಮ ಬವಣೆ ನಮ್ಮ ಅನುದಿನ, ಮತ್ತೆ ನಿಮ್ಮ ಇಷ್ಟಎಂದಳು...

ಸರಿ ಆದರೆ ಒಂದು ವೇಳೆ ನಿಮ್ಮದೇ ತಪ್ಪು ಅಂತ ಕಂಡು ಬಂದರೆ ಒಂದು ಪೈಸಾ ಕೊಡಲ್ಲ ಅಂತ ಬರೆದೆ ಕ್ರೇಜೀವಾಲನ ಇಸ್ಟಾಯಿಲ್ನಲ್ಲಿ..ನನ್ನ ಲಾಟು ಪೂಟು ಬಂದು ಮಾಡಿದೆ..

ಪ್ರತಿಭಾ ಅವಳ ತಂಗಿ ನಂದಿನಿ ಯಾರೂ ಬರ್ತಾ ಇಲ್ಲ ಹೌದು .. ಅದೆಲ್ಲಾ ಸಾಯಲಿ, ದನದ ಸ್ವಾಮಿಯ ಗಲಾಟೆಯೂ ಕೇಳಲು ಇಲ್ಲ ಅಂದರೆ ಹ್ಯಾಗೆ..?

ಹೋಗಲಿ ಬಿಡು ಇಂದಾದರೂ ಹಳೇ ಚಿತ್ರ ಗೀತೆ ಹೇಳುತ್ತ ನೆನಪು ಮಾಡಿಕೊಳ್ಳೋಣ ಎಂದೆ,,
ಅದಕ್ಕೆ ತೊಂದರೆಯಿಲ್ಲ ಅಂತ ಹಂಗಿಸಿದಳು...

***************************
ಬೆಳಿಗ್ಗೆ ಬೇಗನೇ ಎಚ್ಚರಾಯ್ತು, ನಿತ್ಯ ವಿಧಿಗಳನ್ನು ಮುಗಿಸಿ ಬೆಳಗಿನ ಲಿಂಬೂ ಪಾನಿ ಕುಡಿದು ರಾತ್ರಿ ಧಿರುಸು ತೊಟ್ಟೆ..

ಎಲ್ಲಿಗೆ ಅಂತ ಹುಬ್ಬು ಕುಣಿಸಿದಳು..

ಒಮ್ಮೆ ಮೇಲೆ ನಮ್ಮ ಆಕಾಶಕಾಯವನ್ನು ಕಂಡು ಬರೋಣ.. ಯಾರಿಗೆ ಗೊತ್ತು ನಮ್ಮ ಗೇರ್ ಸೈಕಲ್ಲನ್ನೇ ಮಾಯ ಮಾಡಿದ ಹಾಗೆ ಇಲ್ಲೂ ಏನಾದರೂ ಆದರೆ..?

ಅಂದೆ ನಾನೂ ಬರ್ತೀನಿ ಬಿಡಿ ಮೇಲ್ಮನೆಯವರು ನಿಮ್ಮನ್ನು ಯಾರೋ ಅಂದುಕೊಂಡು ಬೇರೇನೋ ಆದರೆ ಕಷ್ಟ ಅಂದಳು ಹುಬ್ಬೇರಿಸಿದಳು .. ..

ಆ ಮಾತಿನಲ್ಲೇ ನೂರಾರು ಅರ್ಥ ಇದೆಯಾ ಅಂತ ನೋಡಲು ಹೋದೆ, ನಡೀರಿ ಅಂದಳು..

ಮೊದಲ ಮಹಡಿಯಲ್ಲಿ ನಮ್ಮ ಮನೆಯ ಯಜಮಾನರ ಧರ್ಮ ಪತ್ನಿ ಇದ್ದರು ನಮ್ಮ ಮೆರವಣಿಗೆ ನೋಡಿ ಏನು ಅಂತ ಕೇಳಿದರು ಹಿಂದೆಯೇ ಅವರ ಯಜಮಾನರು..


ಮೊನ್ನೆಯಿಂದ ನಮ್ಮ ಟೀವಿ ಮಾತನಾಡ್ತಾ ಇಲ್ಲ ಅಂತ ಮೇಲೆ ನಡೆದೆ

ಮೇಲೆ ಹೋಗಿ ನಮ್ಮ ಚಾವಣಿಯಲ್ಲಿ ನೋಡಿದರೆ ಐದಾರು ಆಕಾಶಕಾಯಗಳು ...........ಇದರಲ್ಲಿ ನಮ್ಮದು ಯಾವುದು,,,?

ವರ್ಷಕ್ಕೊಮ್ಮೆಯೂ ಬರದಿದ್ದರೆ ಹೀಗೇ ಆಗೋದು ಅಂದಳು..
ಇದರಲ್ಲೇನಾದರು ಗೂಢಾರ್ಥ ಇದೆಯಾ ಅಂತ ಯೋಚಿಸಿದೆ... ತಲೆ ಓಡಲೇ ಇಲ್ಲ.

ಅದು ಬಿಡಿ ದೋಸೆ ಬಾವಡಿಯನ್ನು ಅಂಗಾತ್ತಲ ಹಾಕಿ ಅದರ ಮಧ್ಯೆಯೊಂದು ಪತಂಜಲಿ ರಸಾಯನದ ಬಾಟ್ಲಿ ಇಟ್ಟ ಹಾಗೆ ಕಂಡಿತು

ಎಲ್ಲವೂ ಅವರವರ ಸ್ಥಾನದಲ್ಲಿ ಭಧ್ರ ನನಗೇನು ಗೊತ್ತಾಗುತ್ತೆ............
ಯಾಕೆ ನಮ್ಮ ಪ್ರತಿಭಾ ಬರೋದಿಲ್ಲ ಅಂತ..?

ಪಕ್ಕದಲ್ಲೇ ಮೂಲೆಯಲ್ಲಿ ಎರಡೇ ಎರಡು ಆಕಾಶ ಕಾಯ ಕಂಡೆ ಅದರಲ್ಲೊಂದು ನಮ್ಮ ದಿರಬಹುದು ಆದರೆ ಯಾವುದು..?

ಒಂದರ ಮೇಲೆ ಕಾಲೊರಸೋ ಬಟ್ಟೆ ಒಣಗಲು ಹಾಕಿದ್ದರು... ಇನ್ನೊಂದು ಟಾ ಟಾ 

ಅದೇ ನಮ್ಮದಿರಬಹುದು ಅಂತ ಅದನ್ನು ಚೆಕ್ ಮಾಡಲು ಸುರು ಮಾಡಿದೆ..

ಆ ಪತಂಜಲಿ ಬಾಟ್ಲಿ ಮುಚ್ಚಳ ಏನು ಮಾಡಿದರು ತೆಗೆಯಲಾಗಲಿಲ್ಲ, ಅಲ್ಲೇ ಬಿಟ್ಟೆ..

ಅಷ್ಟರಲ್ಲೇ ಓನರಮ್ಮ ಬಂತು..

ಇನ್ನೊಂದು ಟಾಟಾ ಆಕಾಶದ ಮೇಲಿದ್ದ ಒದ್ದೆ ಕಾಲೊರೆಸೋ ಬಟ್ಟೆ ತೆಗೆದುಕೊಂಡು ಹೋಯ್ತು...
ಅದನ್ನು ನೋಡುತ್ತೇನೆ ಟಾಟಾ ಎಚ್ ಡಿ ಅಂತ ಇತ್ತು , 

ನಮ್ಮದು ಇದೇ ಅಲ್ಲವಾ...

ಬಲ್ಪು ಹೊತ್ತಿತು....

ಕೆಳಗೆ ಹೋಗಿ ನಿನ್ನ ಪ್ರತಿಭಾ ಬಂದಳಾ ನೋಡು ಎಂದೆ,

ಅಲ್ಲಿಂದ ನೆಲವಾಣಿ

"ಬಂತು .."

ನಾನೂ ಕೆಳಗಿಳಿದೆ....
ಸರಿಆಯ್ತಲ್ಲಾ, ಇನ್ನು ಆ ತಾಂತ್ರಿಕಾಧಿಕಾರಿ ಬಂದರೆ ..?

ಇನ್ನೂರು ಕೊಟ್ಟು ಓನರ್ ಗೆ ಕೊಡೋ ಮುಂದಿನ ತಿಂಗಳ ಬಾಡಿಗೆಯಲ್ಲಿ ಮುರಿದುಕೋ ಎಂದೆ...
ಅಲ್ಲಾ ಎಲ್ಲಾ ಬಿಟ್ಟು ನಮ್ಮ ಆಕಾಶ ಕಾಯದಮೇಲೆ ಭಂಗಿ ನೆಟ್ಟರೆ..?
ಹಾಗೆ ಆಗುತ್ತಾ..??????
##

ಸಾಬೂನು ಕಳ್ಳ



ತಗೋ ಗೊಪೂ ನಿನ್ನ ಚಂದ್ರಿಕ ಸಾಬೂನು

ಅಪ್ಪಯ್ಯ ಸಂಜೆ ಬಂದು ಗೋಪೂ ಕೈಗೆ ಚಂದ್ರಿಕ ಸಾಬೂನು ಕೊಡುವಾಗ ಇಡೀ ಪ್ರಪಂಚ ತನಗೇ ಸಿಕ್ಕಿತು ಎಂಬ ಹಾಗೆ ಆತ ಖುಷಿಪಟ್ಟಿದ್ದರೆ, ಮನೆಯವರೆಲ್ಲರಿಗೂ ಒಂದೇ ಸಾಬೂನು ಉಪಯೋಗಿಸುವ ಆ ಕಾಲದಲ್ಲಿ ಅಣ್ಣ ಅಕ್ಕಂದಿರಿಗೆ ಅಸೂಯೆಯಾಗೋದು ಸಹಜ..
ಹಾಗಂತ ಈ ಸಾಬೂನೂ ಸುಮ್ಮನೇ ಕೈಗೆ ಬಂದಿರಲಿಲ್ಲ... ಅದರ ಹಿಂದೆ ಆತನ ಹತ್ತು ಹದಿನೈದು ದಿನಗಳ ಪ್ರಯತ್ನವಿತ್ತು. ಸುಮಾರು ಸಂಭಂದಿಗಳ, ಸ್ನೇಹಿತರ ವಶೀಲಿ ಇತ್ತು,
ಅದಕ್ಕೂ ಒಂದು ಸಕಾರಣವಿತ್ತು...


ಅದೇಕೋ ಮುಖದಲ್ಲಿ ಬೆಳ್ಳನೆಯ ಕಲೆ ( ಸಿಬ್ಬ) ಕಾಣ ತೊಡಗಿತ್ತು. ಪ್ರತಿ ಬಾರಿ ಕನ್ನಡಿ ನೋಡಿದಾಗಲೆಲ್ಲಾ ಗೋಪೂಗೆ, ಮತ್ತು ಪ್ರತಿ ಬಾರಿ ಬೇರೆಯವರು ಅದನ್ನೇ ತೋರಿಸಿ ಹಂಗಿಸಿದಾಗಲೆಲ್ಲಾ ಕಸಿವಿಸಿಯಾಗುತ್ತಿತ್ತು. ಹಲವಾರು ಬಾರಿ ಹಲವಾರು ಸನ್ನಿವೇಶಗಳಲ್ಲಿ ಖಳನಾಯಕನಾಗಿ ಕೆಲಸ ಮಾಡಿತ್ತದು. ಕಂಡ ಕಂಡವರೆಲ್ಲಾತಮ್ಮ ತಮ್ಮ ಸಲಹೆಗಳನ್ನು ಕೊಟ್ಟು, ಅವನ್ನು ಅನುಸರಿಸಿದರೂ ಮಾಯವಾಗದೇ ಜಾಸ್ತಿ ಹರಡತೊಡಗಿದಾಗ, ಅಸಹನೆಯಾಗಿ ಪರಿಣಮಿಸಿ, ಅಪ್ಪ ಅಮ್ಮ ಇಬ್ಬರೂ ಸುಮಾರು ದಿನದಿಂದ ಮಗ ಇಟ್ಟಿದ್ದ ಬೇಡಿಕೆಯನ್ನು ಈಡೇರಿಸಲು ನಿರ್ಧರಿಸಿದ್ದರು.
ಅದರ ಫಲಿತಾಂಶವೇ..
ಈ ಚಂದ್ರಿಕ ಸಾಬೂನು
ಮತ್ತೊಮ್ಮೆ ಅದನ್ನು ಬಿಚ್ಚುವ ಮೊದಲು ಆಘ್ರಾಣಿಸಿದ, ಬೇರೆ ಯಾರಿಗೂ ಇಲ್ಲ, ತನಗೆ ಮಾತ್ರ ಅನ್ನೋ ನೆನಪೇ ಎಷ್ಟು ಮಧುರ...
ಯಾವಾಗ ಅದನ್ನು ಉಪಯೋಗಿಸಿಯೇನು ಅನ್ನೋ ಆತುರ ಬೇರೆ..
ಏನು ಇದಂತೂ ಈಗಲೇ ಸ್ನಾನ ಮಾಡೋ ಹಾಗಿದೆ... ಅಂದಳು ಚಿಕ್ಕಕ್ಕ.. ಅವಳಿಗೆ ಮೊದಲು ಅಸೂಯೆ ಈತನ ಜಂಬ ನೋಡಿ..
ಆಗೆಲ್ಲಾ ಬೆಳಿಗ್ಗೆ ಎದ್ದ ಕೂಡಲೇ ಸ್ನಾನ ಮಾಡುವ ಅಭ್ಯಾಸ, ಈಗಿನ್ನೂ ಸಂಜೆ ಅಷ್ಟೇ, ಇನ್ನು ರಾತ್ರಿಯಾಗಿ.......
ಅದನ್ನುಹೊರಗಿನ ಕಾಗದ ಹರಿಯದೇ ತನ್ನ ಜಖೈರಿಯಲ್ಲಿನ ಹೊಸ ಸಾಬೂನು ಪೆಟ್ಟಿಗೆ ಹೊರತೆಗೆದ,
ಅದು ತರಗತಿಯಲ್ಲೇ ಮೊದಲಿಗನಾಗಿ ಬಂದದ್ದಕ್ಕೆ ಸಿಕ್ಕಿದ ಬಹುಮಾನ, ಅದೂ ತನ್ನ ಪ್ರೀತಿಯ ಮಾಸ್ಟ್ರು ಕೊಟ್ಟದ್ದು, ವಿಶೇಷವಾಗಿ ತನ್ನ ಎಲ್ಲರೊಡನೆ ಹೊಂದಿಕೊಂಡು ಹೋಗುವ ಅರಳು ಹುರಿದಂತೆ ಮಾತನಾಡುವ ಗುಣಕ್ಕೆ...ಮಾರು ಹೋಗಿ..
ಸಾಬೂನು ಪೆಟ್ಟಿಗೆಯಲ್ಲಿ ಇಟ್ಟು ಅದರ ಮುಚ್ಚಳ ಮುಚ್ಚಿ ಯೋಚಿಸಿದ ಇದನ್ನೀಗ ಎಲ್ಲಿ ಇಡೋದು..?
ಎಲ್ಲಿಟ್ಟರೆ ಯಾರ ಕಣ್ಣಿಗೂ ಬೀಳಲ್ಲ..?
ಆಗೆಲ್ಲಾ ಮನೆಗಳು ಹಂಚಿನ ಅಥವಾ ಒಣ ಹುಲ್ಲಿನ ಮನೆಗಳು...ಇವೆಲ್ಲಾ ಸುತ್ತಲಿನ ಗೋಡೆಯ ಮೇಲಿನಿಂದ ರೀಪು ಪಕ್ಕಾಸೆ ಮತ್ತು ಜಂತಿಯ ಜತೆ ಮಧ್ಯದಲ್ಲಿ ಎತ್ತರವಾಗಿರೋ ಇಳಿಜಾರು ಚಾವಣಿ..
ಮನೆಯ ಇದಿರು ಬಾಗಿಲು ದಾಟಿ ಒಳಗೆ ಬಂದರೆ ಹಜಾರ ಬಲಗಡೆ ಎರಡು ಕೋಣೆ, ಹಾಗೇ ಎಡಗಡೆ ಒಂದು ಕೋಣೆ. ಹಜಾರದ ಬಲ ಪಕ್ಕದಲ್ಲೇ ಒಳನುಗ್ಗಿದರೆ ನಮ್ಮ ಓದುವ ಕೋಣೆ ಅದರ ಹಿಂದೆ ಬಚ್ಚಲು ಮನೆ..
.................
ಮಾರನೆಯ ದಿನ ಬೆಳಗು ಎಲ್ಲಕ್ಕಿಂತ ಎಲ್ಲರಿಗಿಂತ..ಮುಂಚೆಯೇ...
ಗೋಪು ಎದ್ದು ಮೈ ಮುರಿದ...
ಎದ್ದವನೇ ಬಚ್ಚಲು ಮನೆಗೆ ಸವಾರಿ... ಸ್ನಾನಕ್ಕೆ ಬಿಸಿನೀರು ಬೇಕಲ್ಲ..
ಸಾಹೇಬರ ಅಂಗಡಿಯಿಂದ ತಂದ ಅಡಿಕೆ ಸಿಪ್ಪೆಯ ರಾಶಿಯಿಂದ ಸ್ವಲ್ಪ ತೆಗೆದು ಒಲೆಗೆ ಒಟ್ಟಿ ಅದರ ಮೇಲೆ ಒಣ ಸೌದೆ ಹಾಕಿ ಸಜ್ಜಾಗಿಸಿ, ಒಂದು ಚಿಮಣಿ ದೀಪ ಹಚ್ಚಿ ಒಂದು ತೆಂಗಿನ ಕಾಯಿಯ ಸಿಪ್ಪೆಯ ಮಧ್ಯ ಭಾಗದಲ್ಲಿ ಎರಡೇ ಎರಡು ಅಡಿಕೆ ಸಿಪ್ಪೆಯಿಟ್ಟು ಬೆಂಕಿ ಹೊತ್ತಿಸಿದ. ಈ ಬೆಂಕಿಯನ್ನುಮೊದಲು ಸಜ್ಜಾಗಿಸಿದ ಒಲೆಯೊಳಗಿನ ಒಣ ಸಲಕರಣೆ ಇದಿರು ಇಟ್ಟ,
ಬೆಂಕಿ ಭಗ್ಗನೆ ಹೊತ್ತಿಕೊಂಡಿತು..
ಇನ್ನು ಕೆಲವೇ ಹೊತ್ತು.. ಸೀದಾ ಹೊರಗೋಡಿ ಕಾಮತರ ಮನೆಯಂಗಳದಲ್ಲಿ ಬೆಳೆದಿದ್ದ ಮಾವಿನ ಎರಡು ಎಲೆ ತೆಗೆದುಕೊಂಡ, ಮಧ್ಯಕ್ಕೆ ಮಡಿಸಿ ಅದರ ದಂಟನ್ನು ಪರ್ರನೆ ಹರಿದು ಪಕ್ಕದಲ್ಲಿಟ್ಟ ನಾಲಗೆಯ ಅಗೃ ತೆಗೆಯಲು ಬರುತ್ತೆ.. ನಂತರ ಮಡಚಿದ ಎಲೆಯನ್ನು ಸುರುಳಿಯಾಗಿ ಸುತ್ತಿದ ಹಲ್ಲುಜ್ಜಲು...ಬ್ರಶ್ಷ್ ಅದು..
ಬಾವಿಯಿಂದ ಕೊಡಪಾನದಲ್ಲಿ ನೀರು ಸೇದಿ ಕೈಯಲ್ಲಿ ನೀರು ತುಂಬಿದ ಚೆಂಬು ಹಿಡಿದು ಬಯಲಿಗೆ ನಡೆದ ...
ಬರುವಷ್ಟರಲ್ಲಿ ನೀರು ಕಾದಿತ್ತು ..
ಪ್ರಪಂಚದ ಮೊದಲನೇ ಮನುಷ್ಯ ತನ್ನದೇ ಆದ ಬೇರೆ ಯಾರಿಗೂ ಇಲ್ಲದ ತನ್ನ ಸಾಬೂನಿನಿಂದ ನೊರೆ ನೊರೆ ಯಾಗಿ ಸ್ನಾನ ಮಾಡುತ್ತಾನೆ ಈಗ..
ತಾನು ಯಾರಿಗೂ ಸಿಗದಂತೆ ಅಡಗಿಸಿಟ್ಟ ಜಾಗಕ್ಕೆ ನಡೆದ....
ಜಂಘಾಬಲವೇ ಉಡುಗಿತು ಆತನ ಸಾಬೂನು ಅಲ್ಲಿಲ್ಲ...
ಪ್ರಪಂಚವೇ ಕೆಳಗೆ ಬಿದ್ದವರ ಹಾಗೆ ....
ಆಗಲೇ ಅಪ್ಪ ಎದ್ದಿದ್ದರು.. ವಿಷಯ ತಿಳಿಸಿ ಅತ್ತ,
ಅಪ್ಪಯ್ಯ ಮನೆಯವರೆಲ್ಲರನ್ನೂ ಎಬ್ಬಿಸಿ ವಿಚಾರಣೆ ಮಾಡಿಸಿದರು ಇಲ್ಲ ಇಲ್ಲ..
ಗೊತ್ತಾಗಲೇ ಇಲ್ಲ ಕಳ್ಳ ಸಿಗಲಿಲ್ಲ...
ಅಮ್ಮ ಅಲ್ಲಿಯೇ ಏಲಾನಿಸಿದಳು
ಇನ್ನು ನಿನಗೆ ಈ ಜನ್ಮದಲ್ಲಿ ಸಾಬೂನು ತಂದು ಕೊಡುವುದಿಲ್ಲ..
ಚಿಕ್ಕಕ್ಕ ನಕ್ಕಳು

ಕಳೆದುದು ಸಿಕ್ಕಿತು...ಆದರೆ..?

ಒಂದು ವಾರವಾದರೂ ಕಳ್ಳನ ಪತ್ತೆಯಾಗಲಿಲ್ಲ, ಮತ್ತು ಸಾಬೂನು ಕೈಗೆ ಬಂದರೂ ದಕ್ಕಲಿಲ್ಲ...
ನನಗೆ ಚಿಕ್ಕಕ್ಕನ ಮೇಲೆ ಸಂಶಯವಿದ್ದರೂ, ಅದಕ್ಕೆ ಆಧಾರವಿರಲಿಲ್ಲ..
ಮತ್ತೊಂದು ಸಾಬೂನಿನ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ
ಇನ್ನು, ಇನ್ನೇನಿದ್ದರೂ ನಾನಾಯ್ತು ನನ್ನ ಬಿಳಿ ಕಲೆ ಅಷ್ಟೇ...
ವಾರದ ಮ್ಲಾನವದನ ಕಂಡ  ಬಾವ ಕೇಳಿದರು ಏನಾಯ್ತು. ಮತ್ತೆ ಪ್ರವರ ಬಿಚ್ಚಿಕೊಂಡಿತು...
ಹೋಗಲಿ ಬಿಡು, ನೀನು ಒಂದು ಉಪಾಯ ಮಾಡು ಪೇಟೆಯಲ್ಲಿ ಫೋಟೋ ಗ್ರಾಫರ್ ಅಂಗಡಿಯಲ್ಲಿ
ಕೇಳಿದರೆ ಹೈಪೋ ( ರಾಸಾಯನಿಕ ) ಸಿಗುತ್ತೆ. ಅದನ್ನು ಹಚ್ಚಿಕೊಂಡರೆ ನಿನ್ನ ಮುಖದ ಬಿಳಿ ಕಲೆ ಶಾಶ್ವತವಾಗಿ ಮಾಯ ಆಗುತ್ತೆ..
ಅದೇ ದಿನ ಸಂಜೆ ಶಾಲೆಯಿಂದ ಬರುವಾಗ ಆ ಹೈಪೋ ತಂದೆ..
ಅಂತೂ ಕಲೆ ಮಾಯವಾಯ್ತು...

ಮೂರ್ನಾಲ್ಕು ತಿಂಗಳ ಬಳಿಕ ನಮ್ಮ ವಾರ್ಷಿಕ ರಜೆ ಆರಂಭವಾಯ್ತು..
ರಜೆಯಲ್ಲಿ ನಮ್ಮ ಉಗ್ರಾಣ ಅಂದರೆ ಅಟ್ಟವನ್ನು ಅರಟುವದೇ ಮಕ್ಕಳ ಕಾಯಕ...
ಅದರಲ್ಲೂ ನಾನಂತೂ ಪುಸ್ತಕದ ಹುಳು...
ತಿಂಡಿ ತಿಂದು ಅಟ್ಟ ಹತ್ತಿದರೆ ಮಧ್ಯಾಹ್ನ ಊಟಕ್ಕೆ ಕರೆಯಬೇಕು ಅಲ್ಲಿಯವರೆಗೆ ಉಗ್ರಾಣದಲ್ಲಿದ್ದ ಹಳೇ ಚಂದಮಾಮ, ಸುಧಾ, ದೀಪಾವಳಿ ಸಂಚಿಕೆ ಕಥೆ ಕಾದಂಬರಿ ಏನಿದ್ದರೂ ..ಬೇಕು

ಹೀಗೇ ಒಮ್ಮೆ ನಮ್ಮ ಮಾವನ ಮನೆಯ ಯಾವುದೋ ಸಮಾರಂಭದಲ್ಲಿ ಅವರ ಮನೆಯ ಅಟ್ಟದಿಂದ ಒಂದು ಪುಸ್ತಕ ಹೆಸರು ಹೆಣ್ಣು ತೋಳ ತೆಕ್ಕೆಯಲ್ಲಿ ಅದು ಯಾರು ಬರೆದದ್ದು ಏನು ಕಥೆ ನೆನಪಿಲ್ಲ, ತಂದು ಓದುತ್ತಿರಬೇಕಾದರೆ ಮನೆಯ ಹಿರಿಯರು ಬಂದು ನಾನು ಓದುವುದನ್ನು ಗಮನಿಸಿ ಹತ್ತಿರ ಬಂದರು, ಆ ಕಥೆ ಪುಸ್ತಕದ ತಲೆ ಬರಹ ಗಮನಿಸಿ, ಹೇಯ್ ಈ ಪುಸ್ತಕ ಯಾರು ಕೊಟ್ಟರು ಈ ಹುಡುಗನಿಗೆ ಅಂತ ಬೈದು ನನ್ನ ಕೈಯಿಂದ ಕಸಿದುಕೊಂಡರು. ಮತ್ತೆಲ್ಲೋ ಇಟ್ಟು ಬಿಟ್ಟಿದ್ದರು, ಅಂತಹದ್ದೇನಿತ್ತು ಅದರಲ್ಲಿ ನೆನಪಿಲ್ಲ...

ಹೀಗೇ ಎಲ್ಲವನ್ನು ಓದಿ ಮುಗಿಸುತ್ತಾ ಇರಬೇಕಾದರೆ..ಯಾವುದೋ ಒಂದು ಪರಿಚಿತ ಸುಗಂಧ ನನ್ನ ನಾಸಿಕಕ್ಕೆ ತಗುಲಿತು..
ಅರೆ ಚಂದ್ರಿಕಾ..??
ಹಳೆ ಪುಸ್ತಕದ ರಾಶಿಯನ್ನು ಕೆದಕಿ ನನ್ನ ನಾಸಿಕ ಅರಚುತಿದ್ದ    ನೇರ ದಾರಿಯಲ್ಲಿ....
ಎರಡು ಅಡ್ಡ ಜಂತಿ ಗಳ ನಡುವೆ ಬಿದ್ದುಕೊಂಡಿದೆ, ಅದನ್ನು ಸುತ್ತಿಟ್ಟ ಹೊರ ಕಾಗದಗಳನ್ನು ಸ್ವಲ್ಪವೇ ಕತ್ತರಿಸಿ
ಸಿಕ್ಕಿತು ಅನಾಘ್ರಾಣಿತ ಅಚೂತ ನನ್ನ ಚಂದ್ರಿಕಾ..
ಹೊಚ್ಚ ಹೊಸ ಚಂದ್ರಿಕಾನ ಮೇಲೆ ಎರಡು ಕಡೆಯ ಮುಕ್ಕೆದ್ದ ಇಲಿ ಹಲ್ಲಿನ ಗುರುತು....

ಆದರೇನು ಇನ್ನು ಇವಳ ಉಪಯೋಗವಿಲ್ಲವಲ್ಲ...