Search This Blog

Tuesday, June 17, 2014

ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..


ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..

೧೫ ಜೂನ್ ೨೦೧೪ ರವಿವಾರ ಶ್ರೀಯುತ "ಸತ್ಯೇಶ್ ಬೆಳ್ಳೂರ್" ರವರ ಮನೆಯಲ್ಲಿ

ಕನ್ನಡದ ಆಸ್ತಿ ಡಾಕ್ಟರ್ ಮಾಸ್ತಿಯವರ ನವರಾತ್ರಿ ಕಥನ ಸಂಕಲನ ಈ ಸಾರಿಯ ಅಭ್ಯಾಸದ ಮುಖ್ಯ ಪಾಠ ಪ್ರವಚನ ವಿಷಯವಾಗಿತ್ತು.
ಇವತ್ತಿನ ( ರವಿವಾರ ಜೂನ್ ೧೫ ೨೦೧೪ ರಂದು) ಅಭ್ಯಾಸದಲ್ಲಿ ನಮ್ಮ ಹೆಚ್ಚು ಸವಿ ಡಾ ಎಚೆಸ್ವೀಯವರು ಈ ಸಂಕಲನದ ಮಹತ್ವದ ತಾವೇ ಆರಿಸಿದ ನಾಲ್ಕು ಕಥನಗಳ ಬಗ್ಗೆ ಪ್ರವಚನ ಮಾಡುವರು.
ಇಲ್ಲಿ ನಾನು ಬರೆದ ಲೇಖನದ ಭಾವಾರ್ಥ ಅವರ ಮಾತುಗಳಲ್ಲೇ ತಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ. ಈ ಬರಹಗಳಲ್ಲಿ ನಿಮಗೆ ಹೊಸದೇನಾದರೂ ಗೋಚರಿಸಿದರೆ ಅದು ಅಕ್ಷರಶಃ ಮೇಸ್ಟ್ರದ್ದು,
ನಿಮಗೆ ಇದರಲ್ಲಿ ಏನಾದರೂ ತಪ್ಪು ನುಸುಳಿದ್ದು ಕಂಡು ಬಂದರೆ ಅದು ನನ್ನದು, ದಯವಿಟ್ಟು ನೀವು ಕ್ಷಮಿಸ ಬೇಕು ಯಾಕೆಂದರೆ ನನ್ನ ಉದ್ದೇಶ ಅಭ್ಯಾಸದ ಈ ಪಾಠದ ಉಪಯೋಗ ತಮಗೆಲ್ಲರಿಗೂ ಆಗಬೇಕು ಎಂಬುದೇ.





ಡಾ ಎಚೆಸ್ವೀಯವರು ೪೧ ತಿಂಗಳು ನಡೆದು ಬಂದ ಈ ಅಭ್ಯಾಸದ ಬಗ್ಗೆ ಮಾತನಾಡುತ್ತಾ ಅಭ್ಯಾಸ ಎಂದರೆ ಪಾಠ ಪ್ರವಚನ ಎಂದಿದ್ದರು,
ಅವರವರ ವೃತ್ತಿ ಗಳಲ್ಲಿ ಮುಳುಗಿ ಪ್ರವೃತ್ತಿಯ ಮರೆತ ನನ್ನಂತವರಿಗೆ ಇದೊಂದುಪೂರ್ಣ ಪ್ರಮಾಣದ ಪಾಠ ಶಾಲೆಯಾಗಿಯೇ ಕಾಣುತ್ತದೆ.
ಪೂರ್ತಿ ಕೌಟುಂಬಿಕ ವಾತಾವರಣದಲ್ಲಿ ಈ ಅಭ್ಯಾಸ ತರೋ ಸ್ಪುರಣವೇ ಬೇರೆ.
ಹಲವು ಹತ್ತು ಹಿರಿಯ ತಲೆಮಾರು ಕವಿಗಳನ್ನು ಅವರ ಅನರ್ಘ್ಯ ಕೃತಿಗಳನ್ನು ಅಭ್ಯಸಿಸುವ ಕಲಿಯುವ ಅವಕಾಶ ಪಾಠ ಪ್ರವಚನದಲ್ಲಿ ಅಭ್ಯಾಸದ ವಿಧ್ಯಾರ್ಥಿಗಳದ್ದಾಗಿರುತ್ತದೆ.
ಮಾಸ್ತಿಯವರು ತಮ್ಮ ಬರವಣಿಗೆ ಪಕ್ವವಾದ ಬಳಿಕ ಕವಿತೆ ಬರೆಯಲಾರಂಭಿಸಿದ್ದರು. ಅವರ ಕವಿತೆಗಳು ಸಮಸ್ತರದ ನದಿಯಂತೆ.
ಅವರೇ ಅಂದಂತೆ ಬರವಣಿಗೆಯಲ್ಲಿ ಸಂಗತಿಗಳು ಹೆಚ್ಚಿದ್ದರೆ ಅದು ಕಥನವಾಗುತ್ತದೆ ಮತ್ತು ಭಾವ ಹೆಚ್ಚಿದ್ದರೆ ಅದು ಕವನವಾಗುತ್ತದೆ. ಇದಕ್ಕೆ ಅಪವಾದವೂ ಇವೆ ಆ ಸಂಗತಿ ಬೇರೆ.
ಮಾಸ್ತಿಯವರ ಬರಹಗಳು ವಾಸ್ತವದಲ್ಲಿರುತ್ತವೆ. ಅವರೇ ಹೇಳಿಕೊಂಡಂತೆ ಹಾರಾಡುವ ಸಂಗತಿಗಳನ್ನು ನೆಲಕ್ಕಿಳಿಸಿದವುಗಳು.
ನಮ್ಮ ಮೇಶ್ಟ್ರೇ ಹೇಳಿದಂತೆ ಅವರ ರಾಮಾಯಣದ ಹನುಮಂತ ಸಮುದ್ರವನ್ನು ಈಜಿಕೊಂಡೇ ದಾಟಿದ್ದನಂತೆ. ಶ್ರೀರಾಮ ರಾವಣನೊಂದಿಗಿನ ಯುದ್ಧ ಮುಗಿಸಿ ಸೀತೆಯನ್ನು ಪುಷ್ಪಕ ವಿಮಾನದಲ್ಲಲ್ಲ ಹೇಸರ ಗತ್ತೆಗಳ ರಥದಲ್ಲಿ ಕರೆತಂದಿದ್ದನಂತೆ. ಹೀಗೆ ಮಾಸ್ತಿಯವರ ಸಂಗತಿಗಳೆಲ್ಲವು ವಾಸ್ತವ ಜಗತ್ತಿನ ಸಂಗತಿಗಳೇ ಆಗಿದ್ದು ಬೇರೆ ಕಾವ್ಯಗಳಲ್ಲಿದ್ದಂತೆ ಕಲ್ಪನೆಯ ರಮ್ಯತೆಯನ್ನು ಹೊಂದಿರುವುದಿಲ್ಲ ಬದಲಿವೆ ಅವಕ್ಕೆ ವಾಸ್ತವದ ಹೊದಿಕೆಯಿರುತ್ತದೆ.
ಮಾಸ್ತಿಯವರು ತಮ್ಮ ಜೊತೆಯಸಾಹಿತಿಗಳನ್ನು ಕುರಿತು ವ್ಯಕ್ತ ಪಡಿಸಿರುವ ಆತ್ಮೀಯತೆ ಅವರ ' ನವರಾತ್ರಿ' ಕೃತಿಯಲ್ಲಿಬಹಳ ವಿಷೇಷವಾಗಿ ಕಂಡು ಬರುತ್ತದೆ. ಹಲವು ಹಿರಿಯರು , ಹಲವು ಸಮವಯಸ್ಕರು, ಇನ್ನು ಕೆಲವು ಕಿರಿಯರನ್ನು ಉಲ್ಲೇಖಿಸಿ, ಬಣ್ಣಿಸಿ. ಅವರವರ ಶೈಲಿಗಳನ್ನು ಸುಮಾರು ಹೊಂದಿಸಿ, ಅವರವರುಗಳು ಒರೆದರೆಂಬಂತೆ ಕವನಗಳನ್ನು ಸೃಜಿಸಿ, ಕೆಲವರನ್ನು ಟೀಕೆ ಟಿಪ್ಪಣಿಗಳನ್ನು ಕೊಡಲು ನಿಯಮಿಸಿ ತಮ್ಮದೇ ತಂತ್ರದ ಅತೀ ವಿಶಿಷ್ಟ ೧೯ ಕಥನ ಕವನಗಳನ್ನು ಹೆಣೆದಿದ್ದಾರೆ. ಇವುಗಳನ್ನು ಓದಿದಾಗ ಉಲ್ಲೇಖಿಸಿರುವ ಎಲ್ಲ ವ್ಯಕ್ತಿಗಳೂ ಕಣ್ಣ ಮುಂದೆ ಬರುತ್ತಾರೆ. ಇದೇ ಶೈಲಿಯಲ್ಲಿ ಇನ್ನೂ ಮೂರು ಕಥನಕವನಗಳು ಮಾತ್ರ ( 'ಅರುಣ'- ಮದನ ಲಿಂಗನ ಕಣಿವೆ, 'ತಾವರೆ- ಕನಕದಾಸರ ಕಥೆಗಳು', 'ಸುನೀತ- ಹಲಸಂಗಿ ಜಕ್ಕವ್ವ'). ಅವರ ಬೃಹತ್ ಕಾವ್ಯವಾದ ' ಶ್ರೀರಾಮ ಪಟ್ಟಾಭಿಷೇಕ" ದಲ್ಲಿ ಇದೇ ಕಥನ ಕವನದ ಶೈಲಿಯನ್ನು ಗುರುತಿಸ ಬಹುದು.

ಸಮಾಧಿಯ ತತ್ವದ ಡಾಕ್ಟರೆಂದರೆ ಡಾ ಎಸ್ ಸುಬ್ಬರಾವ್
ಯದುವಿಜಯದ ಟಿಪ್ಪಣಿಕಾರ ಹಿರಿಯಣ್ಣನೆಂದರೆ ಶ್ರೀಯುತ ಭಿ ಎಮ್ ಶ್ರೀಕಂಠಯ್ಯ
ಅಂಗಡಿಯ ಸಾಧುಗಳು- ದಲ್ಲಿನ ಟಿಕಾಕಾರ ವೆಂಕಪ್ಪ ನೆಂದರೆ ಶ್ರೀಯುತ ಟಿ ಎಸ್ ವೆಂಕಣ್ಣಯ್ಯ
ರಾಮಕೃಷ್ಣಯ್ಯರೆಂದರೆ ಶ್ರೀಯುತ ಎ ಆರ್ ಕೃಷ್ಣ ಶಾಸ್ತ್ರಿ
ನಾರದರ ಅನುಭವದ ಸುಬ್ಬಯ್ಯ ರೆಂದರೆ ಡಾ ಎನ್ ಎಸ್ ಸುಬ್ಬರಾವ್
ಮುಸಿಲಮ್ಮದ ರಘುನಾಥಯ್ಯರೆಂದರೆ ಶ್ರೀಯುತ ಕೆ ಎಸ್ ರಾಘವಾಚಾರ್
ಸೋಜಿಗದ್ ಹೊಳಲಿನ ಮಂಗೇಶ ಮಮನೆಂದರೆ ಉಗ್ರಾಣದ ಮಂಗೇಶರಾಯರು.
ಕಪ್ಪೆ ಚೆನ್ನಿಗ ಮೂರ್ತಿಯ ಕೃಷ್ಣಮೂರ್ತಿ ಎಂದರೆ ಶ್ರೀಯುತ ಎಮ್ ಆರ್ ಶ್ರೀನಿವಾಸ್ಮೂರ್ತಿ
ನಾಮ ಮಹಿಮೆಯ ದತ್ತೋಜಿ ಎಂದರೆ ಶ್ರೀಯುತ ದ, ರಾ ಬೇಂದ್ರೆ
ನವರಾತ್ರಿಯ ಪದ್ಯ ಕಥನಗಳ ಗುಚ್ಛ ಮೈಸೂರಿನಲ್ಲಿ ಒಂದು ನವರಾತ್ರಿಯಲ್ಲಿ ನೆರೆದ ಗೆಳೆಯರ ಕಥೆಗಳಿಂದ ರೂಪುಗೊಂಡಿತೆನ್ನುವುದು ಬರಿಯ ಒಂದು ಕಲ್ಪನೆ . ಕಥೆ ಹೇಳಿದವರವು ಮತ್ತು ಟೀಕೆ ಮಾಡಿದವರವು ಎಂದು ಪ್ರಸ್ತವನಾ ಭಾಗದಲ್ಲಿ ಮಾಸ್ತಿಯವರೇ ಸ್ವತ ವ್ಯಕ್ತಿ ಚಿತ್ರಗಳು ತನ್ನ ಜೊತೆಯ ತನಗೆ ಹಿರಿಯರಾದ ಕನ್ನಡ ಸೇವಕರನೇಕರ ಶೀಲವನ್ನು ಆಧರಿಸಿ ಬರೆದಕಲ್ಪಿತ ಚಿತ್ರಗಳು ಎಂದೂ ಅಲ್ಲಿ ಇಲ್ಲಿ ಮಾತು ತಪ್ಪಿದ್ದರೆ ಆಯಾ ಹಿರಿಯರೂ ಗೆಳೆಯರೂ ಮನ್ನಿಸ ಬೇಕು ಎಂತಲೂ ಬರೆದಿದ್ದು ಅವರವಿನಮೃತೆಯನ್ನು ತೋರುತ್ತದೆ.
ನವರಾತ್ರಿ ಮಾಸ್ತಿಯವರ ಮಹಾನ್ ಮಾರ್ಗ ಕೃತಿ. ಮಾಸ್ತಿಯವರು ಮತ್ತು ಅವರ ಸಮಕಾಲೀನ ಲೇಖಕರ ಉದ್ದೇಶ ಬದುಕಿನ ಅನುಕ್ಷಣದ ಸೂಕ್ಷ್ಮ ನೆಲೆಗಳನ್ನು ಅರಸುವವರಿಗೆ ತಿಳಿಸಬೇಕು ಎಂಬುದಾಗಿದೆ.
ಮಾರ್ಗ ಪ್ರವರ್ತಕರಿಗೆ ತಮಗಾಗುವ ಅನುಭವಗಳನ್ನು ತಿಳಿಸಬೇಕು ಹೊಸ ಜನಾಂಗಕ್ಕೆ ಈ ಹೊಳಲುಗಳನ್ನು ಅರಿವಾಗಿಸಬೇಕು, ಆಂಗ್ಲ ಸಾಹಿತ್ಯದ ಮಹಾ ವಿಸ್ತಾರವಾದ ಮಾರ್ಗದಿಂದ ತಾವು ಕಂಡುಕೊಂಡದ್ದನ್ನು ನಮ್ಮಲ್ಲಿ ಕನ್ನಡದಲ್ಲಿ ನೆಲೆಸೋ ಹಾಗೆ ಮಾಡಬೇಕು. ಹೀಗೆ ಕನ್ನಡವೊಂದು ತುಂಬು ಮಾರ್ಗವಾಗಬೇಕು ಎಂಬುದೇ ಅವರೆಲ್ಲರ ಸದ್ದುದ್ದೇಶವಾಗಿತ್ತು.
ಆಂಗ್ಲ ಕವಿ ಚಾಸರ್ ಹದಿನಾಲ್ಕನೇ ಶತಮಾನದಲ್ಲಿ ಹೊಸ ಸಾಹಿತ್ಯದ ಅನ್ವೇಷಣೆ ಮಾಡಿ,ಜನಸಾಮಾನ್ಯರ ನೋವು ನಲಿವನ್ನೇ ಹೆಕ್ಕಿ ಬರೆದ ಹಾಗೆ, ಸಾಹಿತ್ಯ ಕ್ಷೇತ್ರದಲ್ಲೇ ಹೊಸ ಉನ್ಮಾದ ತಂದವರು.


ಅಭ್ಯಾಸದ ನಾಲ್ಕು ಕಥೆಗಳಲ್ಲಿ ಮೊದಲನೆಯ ಕಥನ ಕವನ

೧. ಸಮಾಧಿಯ ಸತ್ವ:

ಈ ಕವನ ಕಥನ ಅಮೇರಿಕದ ಹಿರಿಯ ಉಪದೇಶಿ ಇಂಗರಸಾಲ ನಿಂದ ಪ್ರೇರಿತ ಕಥೆ
ಜಪಾನಿನ ಟೋಕೊಯೋ ನಗರದ ಹತ್ತಿರ ಒಂದು ಪವಿತ್ರ ಕ್ರೈಸ್ತ ಸಮಾಧಿಯಿತ್ತು ಭಕ್ತಿಯಿಂದ ಆರಾಧಿಸುವವರಿಗೆ ಇಷ್ಟಾರ್ಥ ಸಿದ್ಧಿಯುಂಟಾಗುತ್ತದೆಂಬ ಮಾತು ಮಾತಿಗೆ ಪ್ರಸಿದ್ಧಿಯಾಗಿತ್ತು. ಸನಿಹ ಬಂದವರ ಬೇಡಿಕೆ ಈಡೇರಿಸೋ ಆ ಸಮಾಧಿಯ ನೋಡಿಕೊಳ್ಳುತ್ತಿದ್ದ ಗುರುವಿಗೆ ನೂರಾರು ಮಂದಿ ಶಿಷ್ಯಂದಿರಿದ್ದರು. ಒಂದು ಕಾಲದಲ್ಲಿ ಭಕ್ತರ ಆರಾಧನೆಯ ಕೇಂದ್ರವಾಗಿದ್ದ ಆ ವೃಂದಾವನ ಒಮ್ಮೆ ಬಂದ ಭೀಕರ ಬರಗಾಲದಲ್ಲಿ ಕಂಗೆಟ್ಟಿತು. ಭಕ್ತರು ಬರುವವರಿಲ್ಲದೇ ವರಮಾನ ಕಡಿಮೆಯಾಗಿ ದಿನ ನಿತ್ಯದ ಖರ್ಚಿಗೂ ಅಕಾಲ ಬಂದೊದಗಿತು. ಅನ್ಯದಾರಿಕಾಣದೇ ಗುರುಗಳು ತನ್ನ ಶಿಷ್ಯಂದಿರಿಗೆ ತಮ್ಮತಮ್ಮ ದಾರಿ ತಾವೇ ಅರಸಲು ಅಪ್ಪಣೆ ಕೊಡಿಸಿದರು. ಅವರ ಪೈಕಿ ಅತ್ಯಂತ ಚಿಕ್ಕ ಶಿಷ್ಯನೊಬ್ಬ ಆ ಗುರುಗಳ ಪರಮ ಆಪ್ತನಾಗಿದ್ದ. ಅವನನ್ನು ಬರಿ ಕೈಯ್ಯಲ್ಲಿ ಹೋಗ ಗೊಡದೇ ಗುರುಗಳು ತನ್ನ ಬಳಿಯಿದ್ದ ಒಂದು ತನ್ನ ಬಳಿಯಿದ್ದ ಕತ್ತೆಯ ಮರಿಯನ್ನು ಪ್ರೀತಿಯ ದ್ಯೋತಕವಾಗಿ ಶಿಷ್ಯನಿಗಿತ್ತು ಜೋಪಾನವಾಗಿ ಸಾಕಿಕೊಳ್ಳಲು ಹೇಳುವರು.
ಅಂತೆಯೇ ಶಿಷ್ಯ ಗುರುಗಳಿತ್ತ ಕತ್ತೆಯ ಮರಿಯನ್ನು ಕರಕೊಂಡು ತನ್ನ ಉದರಂಭರಣೆಗಾಗಿ ಹೊರಡುತ್ತಾನೆ. ಭೀಕರ ಬರಗಾಲ, ಶಿಷ್ಯನಿಗೇ ತಿನ್ನಲು ಗತಿಯಿಲ್ಲ, ಇನ್ನು ಕತ್ತೆಯ ಮರಿಯ ಗತಿ? ಅನತಿ ಕಾಲದಲ್ಲೇ ಅದೂ ಕಾಲವಲಶವಾಗಿ ಬಿಡುತ್ತದೆ. ಗುರುಗಳಿತ್ತ ಪ್ರೀತಿಯ ಕಾಣಿಕೆಯನ್ನೂ ಸಾಕಲಾರದೇ ಕಳೆದುಕೊಂಡ ಶಿಷ್ಯ ಬೇರೇನೂ ಮಾಡಲೂ ತೋಚದೇ ಅದನ್ನು ದಾರಿಯಲ್ಲೇ ಒಂದೆಡೇ ಹೂಳಿ ಆಸ್ಥಾನದಲ್ಲಿ ಚಪ್ಪರವೊಂದನ್ನು ಕಟ್ಟಿಕೊಂಡು ಸ್ವಲ್ಪ ಕಾಲ ಅಲ್ಲಿರಲು ನಿರ್ಧರಿಸುತ್ತಾನೆ. ಮಾರನೆಯ ದಿನವೇ ಒಬ್ಬದಾರಿ ಹೋಕ ಈ ಶಿಷ್ಯನಿರುವ ಸಮಾಧಿಗೆ ಬಂದು ಧ್ಯಾನಸ್ಥನಾದ ಶಿಷ್ಯನನ್ನು ನೋಡಿ ಕೈಮುಗಿದು ತೆರಳುತ್ತಾನೆ. ಅವನ ಇಚ್ಚೆಯಂತೆ ಆತನಿಗೆ ಹಸನಾದಾಗ, ಬಾಯಿಂದ ಬಾಯಿಗೆ ಈ ವಿಷಯ ಹರಡಿ ಈ ಸಮಾಧಿಯೂ ಶಿಷ್ಯನೂ ಅತಿ ಬೇಗನೇ ಪ್ರಸಿದ್ಧಿ ಹೊಂದುತ್ತಾರೆ.
ಮಾತಿಗೆ ಮಾತು ಹರಡಿ ಅವನ ಗುರುಗಳಿಗೂ ಗೊತ್ತಾಗಿ ಅವರೂ ಇಲ್ಲಿಗೆ ಬರುತ್ತಾರೆ. ಮಾತು ಕಥೆಗಳೆಲ್ಲಾ ನಡೆದು ವಿಷಯ ಅರುಹುವಾಗ ಶಿಷ್ಯ ಒಳಗಿಂದೊಳಗೇ ಬೇಸರಿಸುತ್ತಾ ಕತ್ತೆ ಮರಿಯ ವಿಷಯ ಅವರಿಗೆ ತಿಳಿಸುತ್ತಾನೆ.
ಆಗ ಗುರುಗಳು ನಕ್ಕು ಎಲಾ ಹೈದನೇ ಅದಕ್ಯಾಕೆ ಬೇಸರ ನಾವಿದ್ದ ಮೊದಲ ವೃಂದಾವನ ಈ ಮರಿ ಕತ್ತೆಯ ತಾಯಿಯದ್ದಾಗಿತ್ತು ಎಂದು ನಗುತ್ತಾರೆ.
ಕಥೆ ಇಲ್ಲಿಗೆ ಮುಗಿಯಿತು ಆದರೆ ಮಾಸ್ತಿಯವರ ಕಥನ ತಂತ್ರ ಇನ್ನೂ ಮುಂದುವರಿಯುತ್ತದೆ.
ಪುಟ ೮೬
'ಹೋ' ಎಂದು ಗೊಳ್ಳೆಂದು ಕೇಳುತ್ತಿದ್ದವರೆಲ್ಲ
ನಕ್ಕು ಸಾಕಾಗಿ ಹೋದರು. ಸ್ವಲ್ಪ ಹೊತ್ತಿನಲಿ
ಎಲ್ಲ ಸುಮ್ಮನಾಗಲು, ಕಥೆಗೆ ಟಿಪ್ಪಣಿಯ
ವೆಂಕಪ್ಪ ಹೇಳುದರು: 'ಕಥೆ ಚೆನ್ನವಾಗಿಹುದು
ಮತದ ಹೆಸರಲಿ ಮೋಸ ಮಾಡುವವನು ಇನ್ನೆಲ್ಲ
ಮೋಸ ಮಾಡುವ ಜನರ ತೆರನೆ ತನ್ನೊಳಗಿರುವ
ದೌರಾತ್ಮ್ಯವನು ಹೊರಗೆ ಸೂಸುವನು. ಇದರಿಂದ
ನಿಜವಾದ ಮತಕೆ ಕೊರೆಯಡಸದು. ನಿಜದ ಮತ
ನಿಜವೇ ಸರಿ. ಅದರಿಂದ ಜನ ಒಳ್ಳೆಯವರಾಗಿ
ಬಾಳುವುದೇ ನಿಜ. ಬಣ್ಣಹಚ್ಚಿ ಮಾಡಿದ ಚಿನ್ನ
ದಿಟವಾಗಿ ಚಿನ್ನವಹುದೇ?. ಅಂತೆ ವೇಷದಲಿ
ಮತವೆಂದು ಕಾಣುವ ಭಿಭೀಷಿಕೆಯ ನಿಜವಾಗಿ
ಮತವೆನ್ನಬಾರದೆಲೆ, ಅದು ಭಿಭೀಷಿಕೆಯೆಂದು
ತೋರುವುದು ನಿಜವಾದ ಮತಕೆ ಬೆಲೆ ತಂದಂತೆ,
ಹಿರಿಯ ಉಪದೇಶಿ ಅಮೇರಿಕದ ಇಂಗರಸಾಲ
ನಿಜವಾದ ಮತಕೆ ಉಪಕಾರವನೇ ಮಾಡಿಹರು.
ಅಂತೆಯೇ ಇಂದು ಡಾಕ್ಟರು ನಮಗೆ ಆಕಥೆಯ
ಹೇಳಿ ನಿಜವಾಗಿ ಉಪಕಾರವನೇ ಮಾಡಿಹರು.
ಕಥೆಯೊರೆದ ಉಪದೇಶಿ ಒಬ್ಬ ನಾಸ್ತಿಕವಾದಿ.
ಕೇವಲ ವಿಚಾರ ವಿಶ್ವಾಸಿಗಳ ಗುಂಪಿನಲಿ
ಪ್ರಮುಖ ನಾಯಕ .................
ನಂಬಿಕೆಯ ತಳಹದಿಯೇ ಬದುಕು, ಸಮಾಜ. ನಂಬಿಕೆ ಮತ್ತು ಶೃದ್ಧೆ ಬದುಕನ್ನು ಹದ ಮಾಡುತ್ತದೆ ಅನ್ನೋದು ಈ ಕಥೆಯ ಸಾರಾಂಶ.
೨. ರಾಮ ಪ್ರಿಯ ಉಧಂತ
(ನಾಳೆಗೆ ಮುಂದುವರಿಯುವುದು)

Tuesday, April 29, 2014

ಬಾಲಾಟದ ಪ್ರಸಂಗಗಳು



ಮಕ್ಕಳ ತೊದಲ್ನುಡಿ ಎಷ್ಟು ಚೆಂದ. ಅವರ ಆಟಗಳು, ನಡೆ ನುಡಿಗಳು ಕೆಲವೊಮ್ಮೆ ದೊಡ್ಡವರನ್ನೂ ತುಂಬಾನೇ ಕಾಡಿಬಿಡುತ್ತವೆ. ಹೀಗೆ ಅವರ ಪ್ರಶ್ನೆಗಳೋ ಅಥವಾ ಮಾತುಗಳೋ ಎಲ್ಲರನ್ನೂ ಗೊಂದಲಕ್ಕೆಡವಿಬಿಡುತ್ತವೆ. ಯೋಚನೆಗೀಡು ಮಾಡುತ್ತವೆ. ನನ್ನ ಜೀವನದಲ್ಲಿನ ನಡೇದ ಕೇಳಿದ, ಇಂತಹ ಕೆಲವು ಘಟನೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.


೧. ಪಪ್ಪ ಸುಂದರ ಅಲ್ವಾ..?

ಹಳ್ಳಿಯ ಪ್ರಾಕೃತಿಕ ಸೌಂದರ್ಯ ,ಗಾಳಿ, ನೀರು ಮರಗಿಡ ಪ್ರಾಣಿ ಎಲ್ಲವೂ ವಾತಾವರಣದಲ್ಲಿ ಅಧಮ್ಯ ಅಗೋಚರ ಅನುಪಮ ಸಂಭಂಧಗಳನ್ನು ಕಲ್ಪಿಸಿ ಮನುಷ್ಯ ಪ್ರಕೃಯ ನಡುವಿನ ಸಮತೋಲನೆಯನ್ನು ಕಾಪಾಡುತ್ತವೆ ಅನ್ನಿಸುತ್ತೆ, ಅದಕ್ಕೇ ನಾವೆಲ್ಲಾ ಈಗಲೂ ಹಳ್ಳಿಗೆ ಹೋದರೆ ಆ ಭಾವನೆ ಮತ್ತೆ ಮತ್ತೆ ನಮ್ಮಿದುರು ಬಂದು ನಾವು ಹಳ್ಳಿಯಲ್ಲೇ ವಾಸಿಸುವಂತಾದರೆ ಎಷ್ಟು ಚೆನ್ನಿತ್ತು ಅನ್ನಿಸಿ ಬಿಡುತ್ತದೆ. ಆಗೆಲ್ಲಾ ಮನೆಯಲ್ಲಿ ಟೀವಿ ಯಂತಹ ಸಾಧನಗಳಿರಲಿಲ್ಲ. ರೇಡಿಯೋನೇ ನಮ್ಮೆಲ್ಲರ ಸಂಗಾತಿ. ಅದರಲ್ಲೇ ನಾವು ಸಿನೆಮಾ ಹಾಡು ಸಿನೇಮಾ,ನಾಟಕ ಮುಂತಾದುವನ್ನೆಲ್ಲಾ ನೋಡಿ ( ಗ್ರಹಿಸಿ ? ) ನಲಿಯುತ್ತಿದ್ದೆವು.

ವಿನು ಚಿಕ್ಕವನಿರುವಾಗ ತುಂಬಾ ತುಂಟ, ಅವನ ಪ್ರತೀ ಪ್ರಶ್ನೆಗಳಿಗೆ ಉತ್ತರ ಕೊಡಲೂ ಎಲ್ಲರೂ ತಡಕಾಡುವಂತಾಗುತ್ತಿತ್ತು.

ಆತನನ್ನು ಮಲಗಿಸುವಾಗ ತೊಟ್ಟಿಲು ತೂಗುತ್ತಾ ಯಾವುದಾದರೊಂದು ಹಾಡು ಹೇಳುವುದು ಪದ್ದತಿ. ಚಿಕ್ಕಮ್ಮನಾದ ನಾನು ಈ ಹಾಡು ಹೇಳುತ್ತಿದ್ದೆ.


ಒಲಿದ ಜೀವ ಜೊತೆಯಲಿರಲು ಬಾಳೂ ಸುಂದರ
ವಿಶ್ವವೆಲ್ಲಾ ಭವ್ಯವಾದ ಪ್ರೇಮ ಮಂದಿರಾ...

ಹಾಡು ಮೊದಲ ಚರಣದಲ್ಲಿತ್ತು.

ಅಷ್ಟರಲ್ಲೇ ವಿನು ಕೇಳಿಯೇ ಬಿಟ್ಟ
ಚಿಕ್ಕಮ್ಮ ಚಿಕ್ಕಮ್ಮ ಬಾಳು ಸುಂದರನಾ..?
ಪಪ್ಪ ಸುಂದರ ಅಲ್ವಾ..?

........................................................... ಏನು ಹೇಳಬೇಕು ಈ ಪ್ರಶ್ನೆಗುತ್ತರ,,..?????

ಮರೆತ ಮಾತು: ವಿನೂನ ತಂದೆಯ ಹೆಸರು ಸುಂದರ ರಾವ್



೨. ಅಪ್ಪ ಕಪ್ಪು ಅಲ್ಲ ದೊಡ್ಡಪ್ಪ

ಮಕ್ಕಳು ಯೋಚನೆಯ ಹರಹು ಎಲ್ಲಿಯವರೆಗೂ ಇರುತ್ತದೆ, ನಮಗೆ ಅದರ ಯೋಚನೆ ಸಹಾ ಇರಲ್ಲ.
ನಮಗಾರಿಗೂ ಕಾಣದ ಒಂದು ನೋಟ, ಅರ್ಥ ಅವರಿಗೆ ಸ್ಪುರಿಸಬಲ್ಲುದು.
ಅವರ ಗಮನ ಎಷ್ಟು ಆಳ ಇಲ್ಲಿನ ಉದಾಹರಣೆಯಲ್ಲಿ ನಿಮಗರಿವಾಗುತ್ತದೆ.

ಇನ್ನೊಂದು ದಿನ ಹಾಗೇ ವಿನೂನನ್ನು ತೊಟ್ಟಿಲು ತೂಗುತ್ತಿರಬೇಕಾದರೆ ಈ ಹಾಡು ಹಾಡುತ್ತಿದ್ದೆ.
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ...
-------------------------------------------------
ಹಾಗೇ ಮುಂದುವರಿದು------

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನ್ಯಾರಮ್ಮಾ..
.....
ಹಾಡು ಮುಂದುವರಿಯಬೇಕು , ಆಗಲೆ ಬಂತು ಬೇಡಿಕೆ..
ಚಿಕ್ಕಮ್ಮಚಿಕ್ಕಮ್ಮ
ಹೇಳು ಮರಿ
ನನ್ನ ಪಪ್ಪ ಅಲ್ಲ.. ದೊಡ್ಡಪ್ಪ
ಏನು ಮರಿ..?
ಅದೇ ಚಿಕ್ಕಮ್ಮ
ಕಪ್ಪು ಮೋರೆಯ ಭಾವ ನನ್ನ ಪಪ್ಪ ಅಲ್ಲ... ದೊಡ್ಡಪ್ಪ..

ಆತ ನಾನು ಹೇಳುವುದು ಆತನ ಪಪ್ಪನಿಗೆ ( ನನ್ನ ಭಾವ ) ಅಂತೆಣಿಸಿ ಕಪ್ಪು ಮೋರೆ ತನ್ನ ಪಪ್ಪನದ್ದು ಅಲ್ಲವಂತೆ.. ಅದಕ್ಕೂ
ಮುನ್ನ ಯಾರ ಮೋರೆ ಕಪ್ಪು ಅಂತ ಕೂಡಾ ಯೋಚಿಸಿಯೂ ಇದ್ದ..

ಗ್ರೇಟ್ ಅಲ್ವಾ..?



೩. ಇಳಿಯಲ್ಲ ಇಳಿಯಲ್ಲ

ಕುತೂಹಲ ಮಕ್ಕಳಲ್ಲಿ ಸದಾ ಮನೆಮಾಡಿಕೊಂಡಿರುತ್ತದೆ.
ಅಧಮ್ಯ ಎಲ್ಲವನ್ನೂ ಕಲಿಯಬೇಕೆಂಬ ಹಪ ಹಪಿ ಅದು.
ಖುರ್ಚಿಗೆಷ್ಟು ಕಾಲು ಅಂಬುದರಿಂದ ಹಿಡಿದು.... ಹೊರಗೆ ಹೋಗಬೇಡ ಮಗಾ ಮಳೆ ಬರ್ತಾ ಇದೆ ಅಂದ್ರೆ ತೋಚು ( ತೋರ್ಸು) ಅನ್ನುವಷ್ಟರ ವರೆಗೆ.
ಈಗ ನಾನು ಹೇಳುತ್ತ ಇರೋ ವಿಷಯವೂ ಹಾಗಿನದ್ದೇ..

ನಮ್ಮ ಜಯಕ್ಕ ಚಿಕ್ಕವಳಿರುವಾಗ ನಡೆದ ಘಟನೆ ಇದು, ನಾವೆಲ್ಲಾ ಹುಟ್ಟುವ ತುಂಬಾ ಮೊದಲು..
ಆಗೆಲ್ಲಾ ರೇಡಿಯೋ ಜಮಾನ
ಮೇಜಿನ ಪಕ್ಕದಲ್ಲಿದ್ದ ಕಪಾಟಿನ ಮೇಲಿಟ್ಟಿರುತ್ತಿದ್ದರು, ಆಯತಾಕಾರದ ಬಾಕ್ಸ್ ಅದರಿಂದ ಹಾಡು ಕಥೆ ಸಂಗೀತ ಮಾತು ಬರುವುದೇಆಗ ಎಲ್ಲರಿಗೂ ಚೋದ್ಯದ ವಿಷಯವಾಗಿತ್ತು.
ಮಕ್ಕಳು ಅದನ್ನೆಲ್ಲಾ ಕೆಳಗಡೆ ಬೀಳಿಸಬಹುದು, ಹಾಳು ಮಾಡಬಹುದು ಅಂತ ಅದನ್ನ ಚಿಕ್ಕವರಿಗೆಟುಕದ ಹಾಗೆ ಎತ್ತರದಲ್ಲಿಟ್ಟಿರುತ್ತಿದ್ದರು.
ಅದೂ ತನ್ನಷ್ಟಕ್ಕೇ ತಾನೇ ಯಾರಿರಲಿ ಇಲ್ಲದಿರಲಿ ಹೊಡೆದುಕೊಳ್ಳುತ್ತಿರುತ್ತಿತ್ತು. ಅದಕ್ಕೇ ಮಕ್ಕಳ ಮೊದಲ ಆಕರ್ಷಣಾ ವಸ್ತು.
ಪುಟ್ಟ ಜಯಕ್ಕ ಆತ ತಾನೇ ನಡೆಯಲು ಕಲಿತಿದ್ದಳು
ಕೈಗೆ ಸಿಕ್ಕಿದ ವಸ್ತುಗಳನ್ನು ಬೀಳಿಸಿ ಹಾಕುವುದು ತಾನೂ ಬಿದ್ದು ಅಳುವುದು,
ಇವೆಲ್ಲಾ ಮಕ್ಕಳ ಅತ್ಯಂತ ಸುಲಭದ ನಿತ್ಯದ ವ್ಯವಹಾರ.
ಮೊದಲನೆಯವಳಾದುದರಿಂದ ಮನೆಯಲ್ಲಿ ಎಲ್ಲರ ಅಕ್ಕರೆ ಬೇರೆ.
ಮನೆಯಲ್ಲಿ ಯಾರೂ ಕಾಣದ್ದನ್ನು ಕಂಡು ಪುಟ್ಟ ಜಯ ಕಷ್ಟಪಟ್ಟು ಖುರ್ಚಿ ಹತ್ತಿದಳು.
ಅಲ್ಲಿಂದ ಎತ್ತರದಲ್ಲಿ ಮೇಜಿನ ಪಕ್ಕದಲ್ಲೇ ಕವಾಟಿನ ಮೇಲಿಟ್ಟ ರೇಡಿಯೋ ಅವಳ ಟಾರ್ಗೆಟ್.
ಅವಳಏಕಾಗ್ರತೆ ಎಷ್ಟಿತ್ತೆಂದರೆ ಹೊರಗಿನಿಂದ ಅಪ್ಪ ಬರುತ್ತಿರುವುದು ಗೊತ್ತಾಗಲಿಲ್ಲ.
ಏನು ಮಾಡಬಹುದು ಅಂತ ನೋಡುವ ಕುತೂಹಲ ಅಪ್ಪನಿಗೆ ಸ್ವಾಭಾವಿಕವಾಗಿ.
ಪುಟ್ಟಿ ಹತ್ತಿದಳು ಮೇಜಿಗೆ.
ನಂತರ ಕೆಲವೇ ಕ್ಷಣ ಕವಾಟು..

ಹತ್ತಿ ಜಗವನ್ನೇ ಗೆದ್ದ ಖುಷಿ ಬೇರೆ...

ಇನ್ನೇನು ರೇಡಿಯೋಗೆ ಕೈ ಹಾಕಬೇಕು..

ಆಗ ಅದರಿಂದ ಹಾಡು ಹೊರಟಿತು

ಜಪರೇ ಜಪರೆ..ಜಪರೇ.....

ಸ್ವಲ್ಪ ಬೆಚ್ಚಿದ ಅವಳು ತಲೆ ಕೈ ಅಲ್ಲಾಡಿಸುತ್ತಾ ಉತ್ತರಿಸಿದಳು

ಜಪ್ಪಯೇ ಜಪ್ಪಯೆ

ಇಲ್ಲೊಂದು ವಿಷಯ ನಿಮಗೆ ಹೇಳಬೇಕಾಗುತ್ತೆ. ಅವರ ಮನೆಯ ಭಾಷೆ ತುಳು. ತುಳುವಿನಲ್ಲಿ ಜಪರೇ ಅಂದರೆ ಕೆಳಗಿಳಿ ಅಂತ ಆಗುತ್ತೆ,
ಕೆಳಗಿನಿಂದ ಕಷ್ಟ ಪಟ್ಟು ಹತ್ತಿ ಮೇಲೆ ಬಂದರೆ ಇಳಿ ಅಂದರೆ ಹೇಗಾಗಿರ ಬೇಡ

ಅಪ್ಪ ಹಿಂದೆ ಮಗಳು ರೇಡಿಯೋಕ್ಕೇ ಇಳಿಯಲ್ಲ ಇಳಿಯಲ್ಲ ಅನ್ನೋದನ್ನ ನೋಡಿ ನಗುತ್ತಾ ನಿಂತಿದ್ದರು.



೪. ಹಾಂ ನಂಗೆ ಇಲ್ಲವಾ

ಮಕ್ಕಳ ಮನಸ್ಸು ತುಂಬಾನೇ ಶುದ್ಧ ಸರಳ ,

ಹಳ್ಳಿಗಳಲ್ಲಿ ಪೇಟೆ ಯಲ್ಲಿದ್ದ ಹಾಗೆ ಮನೆ ಮನೆಗಳಲ್ಲಿ ಟಾಯಿಲೆಟ್ ಇರುತ್ತಿರಲಿಲ್ಲ ಮೊದಮೊದಲು .
ಆಗೆಲ್ಲಾ ಬಹಿರ್ದೆಸೆಗೆ ಚೆಂಬು ಹಿಡಿದು ತೋಟದ ಗುಡ್ಡದ ಅಥವಾ ಕೆರೆ ಅಥವಾ ತೊರೆಯ ಪಕ್ಕ ಹೋಗಿ ಬರುತ್ತಿದ್ದರು. ಹೆಂಗಸರಾದರೆ ಬೆಳಗಿನ ಅಥವಾ ಸಂಜೆಯ ನಸುಗತ್ತಲಿನ ಉಪಯೋಗ ಮಾಡಿಕೊಳ್ಳುತ್ತಿದ್ದರು.

ಇವತ್ತಿನ ವಿಷಯಕ್ಕೆ ಬಂದರೆ ಮನೆಯಲ್ಲಿನ ಪುಟ್ಟ ರಾಮು. ಎಲ್ಲರ ಪ್ರೀತಿಯ ದ್ಯೋತಕ.
ಒಬ್ಬನೇ ಆದುದರಿಂದ ತುಂಬಾನೇ ಅಕ್ಕರೆಯಿಂದ ಕಕ್ಕುಲಾತಿಯಿಂದ ಸಾಕುತ್ತಿದ್ದರು.
ಪ್ರತಿ ತಿಂಡಿ ತೀರ್ಥ ಗಳಲ್ಲಿ ಅವನಿಗೆ ಪಾಲು ಇರಲೇ ಬೇಕು .

ಹಿಗಿರುವಾಗಿನ ಒಂದು ಸಂಜೆ ಅಪ್ಪ ಹೊರಗೆ ಹೋಗಬೇಕೆಂದಿರುವಾಗ ರಾಮು ತಗಲಿಕೊಂಡ

ಅವನನ್ನು ಕರೆದುಕೊಂಡು ಹೊರಟರು ಅವರು ಕೈಯಲ್ಲಿ ಚೆಂಬು ಹಿಡಿದು ಗದ್ದೆ ಕಡೆ

ಅವರ ಜತೆಯಲ್ಲಿ ಅವರ ಸಾಕು ನಾಯಿ ಕೂರ ಕೂಡಾ. ಅದಕ್ಕಂತೂ ಇಂತದ್ದೆಲ್ಲಾ ಹಕ್ಕಿನ ಆಸ್ತಿಯಲ್ಲವೇ

ಅಂತು ತಂದೆಯವರ ಬಹಿರ್ದೆಸೆಯ ಕಾರ್ಯಕ್ರಮ ಮುಗಿಯುತ್ತಲಿರುವಾಗ ಪಕ್ಕದಲ್ಲಿಯೇ ಇದ್ದ ಕೂರ ಅದನ್ನ ಖಾಲಿ ಮಾಡುತ್ತಲಿತ್ತು

ಕೂರನ ಕೆಲಸ ಪೂರ್ತಿ ಮುಗಿದಿರಲಿಲ್ಲ ಇನ್ನು ಆಗಲೇ ಇತ್ತಲಿಂದ ಪುಟ್ಟ ರಾಮು ಕೂಗಿಕೊಂಡ

ಹಾಂ ಎಲ್ಲ ನೀನೇ ಖಾಲಿ ಮಾಡಿದ್ಯಾ ನಂಗೆ ಇಲ್ಲವಾ,,?



೫. ನನ್ನನು ಎತ್ತಿಕೋ...

ನಮ್ಮ ರಾಮು ಚಿಕ್ಕವನಿರುವಾಗ ತುಂಬಾ ತುಂಟ. ನೋಡಲೂ ತುಂಬಾನೇ ಸುಂದರವಾಗಿದ್ದ ಆತನನ್ನು ಕಂಡವರು ಎತ್ತಿಕೊಳ್ಳದೇ ಇರುವುದಿಲ್ಲವಿತ್ತು.
ಹಾಗೆಲ್ಲಾ ಹೊಸದಾಗಿ ಯಾರು ಬಂದರೂ ಅವನನ್ನು ಇಂಟ್ರೊಡ್ಯೂಸ್ ಮಾಡಿಸಿದಾಗ ಅವರೇನಾದರೂ ಎತ್ತಿಕೊಳ್ಳದೇ ಇದ್ದರೆ ಅವನೇ ತನ್ನ ಪುಟ್ಟ ಪುಟ್ಟ ಎರಡೂ ಕೈಗಳನ್ನೆತ್ತಿ ಅವರೆಡೆಗೆ ತೋರಿಸುತ್ತಾ, ತನ್ನ ನ್ನು ಎತ್ತಿಕೊಳ್ಳಲು ಪ್ರಚೋದಿಸುತ್ತಿದ್ದ. ಹಾಗಾಗಿ ಯಾರೇ ಹೊಸಬರು ಬಂದರೂ ಅವನನ್ನು ಎತ್ತಿಕೊಂಡು ಮುದ್ದು ಮಾಡುವುದು ಅನಿವಾರ್ಯವಾಗಿತ್ತು.

ಆ ದಿನವೂ ಹಾಗೇ ಆಯ್ತು.
ಅವರ ಮನೆಯಲ್ಲಿ ಗಂಗೆ ಒಂದು ಬಿಳಿ ಗಂಡು ಕರುವನ್ನು ಈದಳು.
ಕರು ಬಿಳೀಯಾಗಿ ಮುದ್ದು ಮುದ್ದಾಗಿತ್ತು. ಎಲ್ಲರಿಗೂ ದಿನವಿಡೀ ಪ್ರದರ್ಶಿನಿಯೇ ಆಯ್ತು, ಮನೆಯವರಿಗೆ ಇದೇ ಕಸುಬಾಯ್ತು. ಬಂದವರಿಗೆಲ್ಲಾ ತೋರಿಸುವದು. ಖುಷಿ ಪಡುವುದು ಅವರ ಜತೆಗೆ ಈ ರಾಮುವೂ ಇದ್ದ .
ಮಾರನೆಯ ದಿನ ಕರು ತನ್ನ ಕಾಲಮೇಲೆ ತಾನೇ ನಿಂತು ಕೊಂಡಿತು. ಅಮ್ಮನ ಹಾಲು ಕುಡಿಯಿತು. ಅದನ್ನ ಬೇರೆಯಾಗಿ ಹುಲ್ಲು ಹಾಸಿಗೆ ಮಾಡಿ ಮನೆಯ ಹೊರ ಗೂಟಕ್ಕೆ ಕಟ್ಟಲಾಯ್ತು.
ಅಪ್ಪನ ಜತೆಗೆ ನಮ್ಮ ಪುಟ್ಟ ರಾಮುವೂ ಅದರ ಬೆಳವಣಿಗೆ ನೋಡುತ್ತಲಿದ್ದ ತನ್ನ ಪುಟ್ಟ ಪುಟ್ಟ ಬೆರಗು ಗಣ್ಣುಗಳಿಂದ.
ಯಾವಾಗ ಆ ಬೆಳ್ಳಗಿನ ಕರು ಚೆಂಗು ಚೆಂಗಾಗಿ ಕುಣಿಯ ತೊಡಗಿತೋ, ರಾಮುವೂ ಅದರ ಪಕ್ಕಕ್ಕೇ ಹೋಗಿ ನಿಂತ...
ಅದೂ ಈತನನ್ನು ನೋಡಿ ಮೂಸಿ ನಾಲಗೆ ಹೊರತೆಗೆದು ಇವನತ್ತ ಚಾಚಿತು.
...
ಪುಟ್ಟ ರಾಮು ಅದರ ಇನ್ನೂ ಹತ್ತಿರ ಹೋಗಿ ತನ್ನ ಎರಡೂ ಕೈ ಚಾಚುತ್ತ ಹುಂ .. ಎಂದ....




೬. ಅಲರ್ಜಿ

ನಾನು ಬೊಂಬಾಯಿಯಲ್ಲಿ ಕೆಲಸ ಮಾಡುತ್ತಿರುವಾಗ ನಾನು ನನ್ನ ಸಹಧರ್ಮಿಣಿ ವಾಯು ಸೇನೆಯ ಕ್ವಾರ್ಟರಿನಲ್ಲಿದ್ದೆವು. ಅಲ್ಲಿರುವಾಗಲೇ ನನ್ನ ಮೊದಲ ಮಗ ಅನುದೀಪ್ ಹುಟ್ಟಿದ್ದು.
ಮೊದಲ ಮಗುವಾದುದರಿಂದ ಸಹಜವಾಗಿಯೇ ನಮ್ಮಿಬ್ಬರ ಅಕ್ಕರಾತಿ ಪ್ರೀತಿ ಅವನ ಮೇಲೆ ಜಾಸ್ತಿಯೇ ಇತ್ತು. ಹುಟ್ಟುವಾಗಲೇ ನಾಲ್ಕು ಕೇಜಿ ಇದ್ದ ಆತ ದಷ್ಟಪುಷ್ಟನಾಗಿದ್ದು ಪಕ್ಕದವರೆಲ್ಲರ ಪ್ರೀತಿ ಪಾತ್ರನೂ ಆಗಿದ್ದ. ಜಾಗೃತೆಗಳು ಬೇರೆಯವರಿಂದ ಕೇಳಿಸಿಕೊಳ್ಳುವುದು ಜಾಸ್ತಿಯೇ ಆಗಿತ್ತು ಆಗ. ಯಾರೇ ಹಿರಿಯರು ಬಂದರೂ ನಮಗಿಬ್ಬರಿಗೂ ಮಗುವನ್ನು ಹೇಗೆ ನೋಡಿಕೊಳ್ಳಬೇಕೆಂಬ ನಾವು ಹೇಗೆ ಇರಬೇಕೆಂಬ ಬುದ್ದಿವಾದ. ಯಾವುದು ತಪ್ಪು ಯಾವುದು ಮಾಡಬಾರದು ಇಂತದ್ದೇ ವರಾತಗಳು. ಒಂದು ಎರಡು ಮಕ್ಕಳಾದವರೂ ಸಹಜವಾಗಿ ನಮಗೆ ಬುದ್ದಿವಾದ ಹೇಳುತ್ತಿದ್ದರು, ನಮ್ಮ ಮನೆಯ ಗಟ್ಟಿ ಕಾಫಿಗಾಗಿ ಬರುವವರು ಹಲವಾದರೆ ತಮ್ಮ ಅಹವಾಲು ಹೇಳಿಕೊಳ್ಳುವವರೂ ಇದ್ದಾರೆನ್ನಿ,
ಇರಲಿ ಇದೆಲ್ಲ ಇಲ್ಲಿ ಬೇಡ

ನನ್ನ ಅಥವಾ ನನ್ನ ಸಹಧರ್ಮಿಣಿಯ ತಂದೆ ತಾಯಿ ಬಂದರೂ ಜಾಸ್ತಿ ಸಮಯ ಇರುತ್ತಿರಲಿಲ್ಲ ನಮ್ಮ ಜತೆ, ಹಾಗಾಗಿ ನಮಗೂ ಬೇರೆಯವರಿಂದ ಕೇಳಿಸಿಕೊಳ್ಳುವ ಅಭ್ಯಾಸ ಆಗಿತ್ತು.ನಾನೂ ಅಲ್ಲಲ್ಲಿಂದ ಓದಿಕೊಂಡು ಮಗು ಬೆಳೆಯುತ್ತಿದ್ದ ಹಾಗೇ - ಮಕ್ಕಳಿಗೆ ಎಲ್ಲವನ್ನೂ ಮುಟ್ಟಿ, ರುಚಿ ನೋಡಿ ಅನುಮಾನ ಬಗೆ ಹರಿಸುವ ಅಭ್ಯಾಸ ಇದ್ದುದ್ದರಿಂದ - ನೆಲವನ್ನು ಯಾವಾಗಲೂ ಶುಚಿಯಾಗಿಯೇ ಇಟ್ಟಿರಬೇಕು, ಯಾವುದೇ ಹರಿತವಾದ ಚೂರಿ ಬ್ಲೇಡ್ ಗುಂಡು ಸೂಜಿ, ಸೂಜಿ ದಬ್ಬಣ ಮುಂತಾದ ವಸ್ತುಗಳನ್ನು ನೆಲದಲ್ಲಿ ಬಿಟ್ಟಿರ ಬಾರದು ಅಂತ ಒತ್ತಿ ಒತ್ತಿ ಹೇಳುತ್ತಿದ್ದೆ. ಅದಕ್ಕೆನನ್ನ ಸಹಧರ್ಮಿಣಿ ಅವರೂ ಬಹುವಾಗಿಯೇ ಸ್ಪಂದಿಸುತ್ತಿದ್ದರು. ಆದಷ್ಟೂ ಚೆನ್ನಾಗಿ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದರು.
ಹೀಗಿರಲೊಂದು ದಿನ ನಾನೂ ನನ್ನವರೂ ಮಾತಾಡುತ್ತಿರಬೇಕಾದರೆ ನಮ್ಮ ಪುಟ್ಟ ಅನುವೇ ಒಂದು ಗುಂಡು ಸೂಜಿ ಕೈಯಲ್ಲಿ ಹಿಡಿದು ನಮ್ಮಿಬ್ಬರಲ್ಲಿಗೆ ಬಂದು

ಅಮ್ಮ ಎಲ್ಲೆಲ್ಲಾ ಹಾಕಬೇಡ ಪಪ್ಪ ಬೈತಾರೆ

ಅಂತ ಅಂದಿದ್ದ. ನಾವಿಬ್ಬರೂ ಆಶ್ಚರ್ಯ ಪಟ್ಟಿದ್ದೆವು.

ಮಗುವಿರಬೇಕಾದರೆ ಆತನಿಗೆ ನನ್ನ ತಿಳಿ ನೀಲ ಅಂಗಿಯೆಂದರೆ ಅಲರ್ಜಿ. ನಾನು ಆಫೀಸಿಗೆ ಹೊರಡುವ ಮೊದಲು ಅವನನ್ನು ಎತ್ತಿ ಮುದ್ದಾಡಿ ಹೊರಡಬೇಕಿತ್ತು. ಆದರೆ ನೀಲಿ ಅಂಗಿ ಹಾಕಿಕೊಂಡು ಆತನನ್ನು ಎತ್ತಿಕೊಂಡರೆ ನನ್ನ ಮೈಮೇಲೆ ವಾಂತಿ ಮಾಡಿ ಬಿಡುತ್ತಿದ್ದ. ಅಂಗಿ ಬದಲು ಮಾಡಲೇ ಬೇಕಲ್ಲ.

ಆತ ಸ್ವಲ್ಪ ದೊಡ್ಡವನಾಗುತ್ತಿದ್ದ ಹಾಗೆ ಅವನ ಅಭಿರುಚಿಗೆ ತಕ್ಕ ಹಾಗೆ ನಮ್ಮಲ್ಲೂ ಬದಲಾವಣೆ ಅನಿವಾರ್ಯವಾಗಿತ್ತು.

ಅದು ಬಿಡಿ ಸ್ವಲ್ಪ ಸಮಯದ ನಂತರ ನಮ್ಮ ಮನೆಯಲ್ಲಿ ವಿಚಿತ್ರ ಅನುಭವಗಳಾಗಲು ಆರಂಭವಾದವು. ಏಕಾಯೇಕಿ ಕೆಲವು ವಸ್ತುಗಳು ಮಾಯವಾಗುತ್ತಿದ್ದವು.

ಅದರಲ್ಲೂ ನನ್ನವರಿಗೆ ನಮ್ಮ ಮದುವೆಯಲ್ಲಿ ಉಡುಗೊರೆಯಾಗಿ ಸಿಕ್ಕಿದ ನನ್ನ ಪ್ರೀತಿ ಪಾತ್ರವಾದ ಒಂದು ಮೌತ್ ಆರ್ಗನ್ ಕಾಣೆಯಾಗಿದ್ದುದು ನನಗೆ ತುಂಬಾ ಬೇಸರ ಉಂಟು ಮಾಡಿತ್ತು. ಚಿತ್ರ ಬಿಡಿಸಲು ಉಪಯೋಗಿಸುವ ಪೆನ್ಸಿಲ್, ಪೆನ್ನು,ಬಣ್ಣ ಬಣ್ಣದ ಕ್ರೇಯಾನ್ಸ್ , ಪೆನ್ಸಿಲ್ ಗಳು ಇತ್ಯಾದಿ ಇತ್ಯಾದಿ .ನಮಗೆ ಅವೆಲ್ಲ ಹೇಗೆ ಮಾಯವಾದವೆಂಬುದರ ರ ಸುಳಿವೂ ಸಿಕ್ಕಿರಲಿಲ್ಲ, ನಾವು ನಮ್ಮ ಮನೆ ಸ್ಥಳಾಂತರಿಸುವ ವರೆಗೆ.
ಆದಿನ ಸಣ್ಣ ಪುಟ್ಟ ವಸ್ತುಗಳೆಲ್ಲಾ ನಮ್ಮ ಸೋಫಾದ ಹಿಂಬದಿಯಲ್ಲಿ ಸಿಕ್ಕಿದವು, ಆದರೆ ನಮ್ಮ ಮೌತ್ ಆರ್ಗನ್..?
ಮೂರನೇಯ ಮಹಡಿಯ ಕಿಟಿಕಿಯ ಹೊರಗೆ ಇಣಿಕಿ ನೋಡಿದಾಗ ಕಂಡಿತ್ತು. ಅದು ನಮ್ಮ ಮೊದಲನೆಯ ಮಹಡಿಯ ಕಿಟಿಕಿಯ ಚಜ್ಜಾ ದ ಮೇಲೆ ಪವಡಿಸಿತ್ತು, ಮಳೆ ಗಾಳಿ ಬಿಸಿಲಿನಿಂದಾಗಿ ತನ್ನ ಬಣ್ಣ ಕಳೆದುಕೊಂಡು ಅಜೀರ್ಣಾವಸ್ಥೆಯಲ್ಲಿ....ಗುಜರಿ??

ಆಗಲೇ ಕಾರಣವೂ ಗೊತ್ತಾಗಿದ್ದು

ನಮ್ಮ ಪುಟ್ಟ ಅನೂ ತನಗೆ ಬೇಡವಾದ ವಸ್ತುಗಳನ್ನೆಲ್ಲಾ ಕಿಟಿಕಿಯಲ್ಲಿ "ಟ್ರು..ವೇಲ್" ಮಾಡಿ ( ಎಸೆದು) ಬಿಡುತ್ತಿದ್ದ, ಅದು ಆಕಾಶದಲ್ಲಿ ಅಂತರದಲ್ಲಿ ಕೆಳಗೆ ಬೀಳುವುದು ಅವನಿಗೆ ಖುಷಿ ಕೊಡುತ್ತಿತ್ತೋ ಅಥವಾ ಅವನೆಡೆ ನಮ್ಮನ್ನು ಆಕರ್ಷಿಸಲು ತೊಂದರೆ ಕೊಡುವ ವಸ್ತುಗಳ ಮೇಲೆ ಅವನಿಗೆ ಮತ್ಸರವೋ..ಗೊತ್ತಿಲ್ಲ...

ನಾವು ಒಮ್ಮೆ ಬೊಂಬಾಯಿಯಿಂದ ಊರಿಗೆ ಬರುತ್ತಿದ್ದೆವು. ನಮ್ಮಲ್ಲೊಂದು ಚೆಂದ ದ ಟರ್ಕಿ ಟವೆಲ್ ಇತ್ತು. ಅದನ್ನ ಒಣಗಲು ಅಂತ ಕಿಟಿಕಿಯ ಸರಳಿನ ಮೇಲೆ ಹೊರಗಡೆ ಒಣಗಿಸಿದ್ದೆ. ನನ್ನ ಸಹಧರ್ಮಿಣಿ ಬೇಡವೆಂದರೂ ಕೇಳದೇ. ಅವಳೊಮ್ಮೆ ಬಾತ್ ರೂಮಿಗೆ ಹೋದಾಗ... ನಮ್ಮ ರೈಲು ಏರಿಸಿದ ವೇಗಕ್ಕೆ ಏಕಾಏಕಿ ನಮ್ಮ ಆ ಟವೆಲ್ ಗಾಳಿಯಲ್ಲಿ ಹಾರಿ ಒಮ್ಮೆಲೇ ಕಣ್ಮರೆಯಾಯ್ತು, ನನಗೆ ಅದನ್ನು ಹಿಡಿದು ಕೊಳ್ಳಲೂ ಸಾಧ್ಯವಾಗಿರಲಿಲ್ಲ. ಅಷ್ಟು ವೇಗದಿಂದ .
ಅಮ್ಮ ಬಾತ್ ರೂಮಿನಿಂದ ಬರುತ್ತಲೇ ಪುಟ್ಟ ಅನೂ ಕೂಗಿದ
"ಮಮ್ಮೀ ಪಪ್ಪ ನಿನ್ನ ಟವೆಲ್ ಅನ್ನು ಟ್ರುವೇಲ್ ಮಾಡಿ ಬಿಟ್ಟರು"
ಆ ವಿಷಯ ಈಗಲೂ ನೆನಪಾಗಿ ಚೇಡಿಸುತ್ತಿದ್ದಾರೆ, ಹೇಗೆ ಅನೂ ತರಹ ನೀವೂ ಟವೆಲ್ ಬಿಸಾಕಿದ್ದು ಅಂತ..



೮. ಪ್ರಶ್ನೋತ್ತರ ಸ್ತರ


ಮಕ್ಕಳು ಪ್ರತೀ ವಿಷಯವನ್ನು ಪ್ರತಿ ಕ್ಷಣ ಕಲಿಯುತ್ತಲಿರುತ್ತಾರೆ, ಅವರ ಹಾಗಿನ ಒಬ್ಸರ್ವರ್ ನಿಮಗೆ ಬೇರೆಲ್ಲಿಯೂ ಸಿಗಲಾರರು.  ನಮಗೆ ತಿಳಿದಿದ್ದ ವಿಷಯಗಳನ್ನು ನಿರ್ಲಕ್ಷ ಮಾಡ್ತೇವೆ ಅವರು ಹಾಗಲ್ಲ. ಪ್ರತಿ ಬಾರಿ ಪ್ರಶ್ನೆ ಕೇಳಿ ಉತ್ತರ ದೊರಕಿಸಿಕೊಳ್ಳುತ್ತಾರೆ, ನೀವು ಉತ್ತರ ಕೊಟ್ಟಿರೋ ಇಲ್ಲವೋ ಅವರಿಗೆ ಅರ್ಥ ಆಗುವವರೆಗೆ ಅದು ಪ್ರಶ್ನೆಯೇ. ಮಕ್ಕಳ ಈ ದಾಹವನ್ನು ತೀರಿಸುವದು ನಮ್ಮ ಅಂದರೆ ಪೋಷಕರ ಕರ್ತವ್ಯ. ನೀವು ಉತ್ತರ ಕೊಡದಿದ್ದರೆ ಮಕ್ಕಳು ಬೇರೆ ಎಲ್ಲಿಂದಾದರೂ ಅದಕ್ಕೆ ಉತ್ತರ ಖಂಡಿತಾ ಹುಡುಕಿಕೊಳ್ಳುತ್ತವೆ.
ಪ್ರಶ್ನೆ ಅವರದ್ದು ಸಹಜ ಸಾಮಾನ್ಯವಾದರೂ ನಮಗದು ಉತ್ತರಿಸಲು ಹಿಂಜರಿತವನ್ನುಂಟು ಮಾಡುತ್ತವೆ ಕೆಲವೊಮ್ಮೆ. ಪ್ರಾಯಷಃ ನಾವು ಅವರ ಸ್ತರವನ್ನು ಆ ಕ್ಷಣಕ್ಕೆ ತಲುಪದೇ ಹೋದುದು ಕಾರಣವಾಗಿರುತ್ತದೆ.

ಒಮ್ಮೆ ನನ್ನ ಅಣ್ಣನ ಮನೆಗೆ ಹೋಗಿದ್ದೆ. ಬೆಳಗಿನ ಹೊತ್ತು, ಆತ ತನ್ನ ಮುಖ ಕ್ಷೌರ ಮಾಡಿಕೊಳ್ಳುತಲಿದ್ದ,
ಪಕ್ಕದಲ್ಲಿಯೇ ಆರು ಮತ್ತು ನಾಲ್ಕು ವರ್ಷದ ಅವನ ಮಕ್ಕಳು. ದೊಡ್ಡವ ಅಣ್ಣ ಕಿರಿದು ತಂಗಿ.
ಅವನ ಕೆಲಸವನ್ನೇ ತದೇಕ ಚಿತ್ತದಿಂದ ನೋಡುತ್ತಾ ಕುಳಿತಿದ್ದ ತಂಗಿ ಕೇಳಿದಳು.
ಚಿಕ್ಕಾ .... ಈ ಗಡ್ಡ ಯಾಕೆ ಬರುತ್ತದೆ?
ಪ್ರಶ್ನೆ ಕೇಳಿದ್ದು ನಾಲ್ಕು ವರ್ಷದ ಪೋರಿ.. ಆದರೆ ಇದಕ್ಕೆ ಉತ್ತರ...?

ನಾನೂ ನನ್ನ ಅಣ್ಣನೂ ಮುಖ ಮುಖನೋಡಿಕೊಂಡೆವು..?
ಇದಕ್ಕೆ ಉತ್ತರ ಎಲ್ಲಿ ಅಂತ ಹುಡುಕುವುದು?

ಯಾವ ಪುಸ್ತಕದಲ್ಲಿ..?
ನಿಮಗೇನಾದರೂ ಗೊತ್ತಿದೆಯಾ..?


ದೊಡ್ಡವರಿಬ್ಬರಿಗೂ ಉತ್ತರಿಸಲಾಗದ ಈ ಪ್ರಶ್ನೆಗೆ ಉತ್ತರಿಸಿದ್ದು ೬ ವರ್ಷದ ಅವಳ ಅಣ್ಣನೇ....
ನಮ್ಮನ್ನು ಗಣನೆಗೇ ತಂದು ಕೊಳ್ಳದೇ ಅಣ್ಣ ಉತ್ತರಿಸಿದ್ದ:
"ಗಡ್ದ ಯಾಕೆ ಬರುತ್ತೆ ಅಂದರೆ ತೆಗೆಯೋದಕ್ಕೆ ಪುಟ್ಟಿ"



೯: ಸಂಸಾರದ ಹರಹು


ಈಗಿನ ಯಾಂತ್ರಿಕ ಯುಗದಲ್ಲಿ ಎಲ್ಲವೂ ಹೃಸ್ವ. ಮನೆಯಲ್ಲಾದರೆ ತಂದೆ ತಾಯಿ ಮಕ್ಕಳು ಅಷ್ಟೇ ಸಂಸಾರ. ಯಾರಾದರೂ ಬಂದರೆ ರವಿವಾರ ಅಥವಾ ರಜೆಗಳಲ್ಲಿ ಅದೇ ಕೂಡಲೇ ಹೊರಟು ಹೋಗುವರು. ಹಾಗಾಗಿ ಮನಮನೆಗಳಲಿ ಅದೇ ಜನ ಅದೇ ಸಾಮಾನು ಹೊಸತು ಎಂದರೆ ಮನೆ ಬದಲಾವಣೆಯಾದಲ್ಲಿ ಮಾತ್ರ. ನಾವು ನಮ್ಮ ಬದುಕನ್ನು ಕ್ಲಪ್ತವಾಗಿರಿಸಿಕೊಂಡರೆ ಮಕ್ಕಳೂ ಅದನ್ನೇ ತಮ್ಮ ಸರ್ವಸ್ವ ಇಷ್ಟೇ ನಮ್ಮ ಸಾಮ್ರಾಜ್ಯ ಅಂತ ಎಣಿಸಿಕೊಂಡಿರುತ್ತಾರೆ. ಇದರಲ್ಲೊಂದು ಮಹಾ ತಪ್ಪು ಘಟಿಸಿರುತ್ತದೆ. ಪ್ರಾಯಷಃ ಈ ಘಟನೆ ಓದಿದರೆ ನಿಮಗರ್ಥವಾಗುತ್ತದೆ ಅಂದು ಕೊಂಡಿದ್ದೇನೆ.
ಶೇಖರ ಒಬ್ಬ ಮಲೆಯಾಳಿ. ಅವರ ಸಂಸಾರ ಎಂದರೆ ಅವರ ಪತ್ನಿ ಇಬ್ಬರು ಹೆಣ್ಣು ಮಕ್ಕಳು. ಸ್ವಾಭಾವಿಕವಾಗಿ ಮೂರು ವರ್ಷಕ್ಕೆ ಗುಳೆ ಎತ್ತುವ ಕೇಂದ್ರ ಸರಕಾರೀ ನೌಕರ. ಮಕ್ಕಳಿಬ್ಬರೂ ತುಂಬಾ ಚೂಟಿ.
ಪ್ರೀತಿಸಿ ಮದುವೆಯಾದರಲ್ಲವಾದರೂ ಹಳ್ಳಿಯಿಂದ ಬಂದವರಾದುದರಿಂದ ಅವರ ಮನೆಗೆ ಸಂಭಂದಿಗಳೆಂತ ಯಾರೂ ಬರುತ್ತಿರಲಿಲ್ಲ.
ಒಮ್ಮೆ ಹೀಗಾಯ್ತು ಅವರ ಪತ್ನಿಯ ಸ್ವಂತ ತಮ್ಮಬಂದಿದ್ದ. ತುಂಬಾ ವರ್ಷಗಳಾದ ಮೇಲೆ ಬಂದ ತಮ್ಮನಿಗೆ ತುಂಬಾನೇ ಹುರುಪಿನಿಂದ ಬರಮಾಡಿಕೊಂಡರು ದಂಪತಿಗಳು.
ಸಂಜೆ ಆಯ್ತು,
ಚಿಕ್ಕವಳು ಅಮ್ಮನನು ಕೇಳಿದಳು
ಅಮ್ಮಾ ಈ ಅಂಕಲ್ ಯಾವಾಗ ಅವರ ಮನೆಗೆ ಹೋಗ್ತಾರೆ?
ಅಮ್ಮ ಅಪ್ಪ ಇಬ್ಬರೂ ನಿರುತ್ತರರಾದರು.
******* ********
ಬೊಂಬಾಯಿಂದ ಒಮ್ಮೆ ಊರಿಗೆ ಬಂದಿದ್ದಳು ಪುಟ್ಟ ರಾಣಿ.
ಅವಳ ಮನೆಯವರೆಲ್ಲಾ ಇರೋದು ಬೊಂಬಾಯಿಯಲ್ಲೇ. ಅವಳು ಅಲ್ಲಿ ಹುಟ್ಟಿ ಬೆಳೆದವಳಾದುದರಿಂದ ಹಳ್ಳಿಯ ಸಂಸ್ಕೃತಿ ವಾತಾವರಣ ತೀರಾ ಹೊಸದು.
ಪಟ್ಟಣದ ಗಿಜಿಗಿಜಿ ಧಾವಂತ ಇಲ್ಲಿಲ್ಲ. ಇಲ್ಲಿ ತನ್ನದೇ ಆದ ಸ್ತರದಲ್ಲಿ ವೇಗದಲ್ಲಿ ನಡೆಯುವ ವಿದ್ಯಮಾನ, ಜೀವನ.ಅಲ್ಲಿಯೋ ಹತ್ತು ಹತ್ತರ ರೂಮಿನಲ್ಲೇ ಎರಡೆರಡು ಸಂಸಾರ ನಡೆಯಬೇಕು.

ಇಲ್ಲಿಯೋ ಹಳ್ಳಿಗಳಲ್ಲಿ ಮನೆ ಕೋಣೆ ಎಲ್ಲವೂ ತುಂಬಾನೇ ದೊಡ್ಡವು.
ಚಿಕ್ಕಮ್ಮನಲ್ಲಿ ಕೇಳಿತು ಪುಟಾಣಿ ರಾಣಿ
ಚಿಕ್ಕಮ್ಮಾ ನಾನು ಪಕ್ಕದ ಮನೆಗೆ ಹೋಗಿ ಬರಲಾ..?
ಅವಳು ತೋರಿಸಿದ್ದು ಬಚ್ಚಲು ಮನೆಯನ್ನು....

ಮೇಲಿನ ಎರಡು ಘಟನೆ ನಿಮಗೆ ತಪ್ಪಾದುದೆಲ್ಲಿ ಅಂತ ತಿಳಿಸಿ ಕೊಡುತ್ತಾ..?


೧೦. ಕಿತಾಪತಿ ಮಾಡಿ......


ಮಕ್ಕಳು ತುಂಬಾ ಹುಡುಕು ಪ್ರಿಯರು. ಸುಮ್ಮನೆ ಒಂದೆಡೆ ಕುಳಿತಿರುವುದಿಲ್ಲ ಅವರು, ನೀವೇ ಅವರ ಚಟುವಟಿಕೆಗಳನ್ನು ಪರಿಶೀಲಿಸಿ. ಪ್ರತಿಕ್ಷಣ ಏನಾದ್ರೊಂದು ಹೊಸ ಹೊಳಹು ಹೊಸ ಕಲಿಕೆ ಹೊಸ ಪ್ರಶ್ನೆ. ಅದಕ್ಕೆ ತಕ್ಕ ಸಮಜಾಯಿಸಿ ಕೊಡೋದು ನಮ್ಮ ಅಂದರೆ ಅವರ ಪೋಷಕರ ಜವಾಬ್ದಾರಿ. ನಮ್ಮ ಅಕ್ಕನ ಮಗಳು ಪುಟ್ಟಿ ಒಮ್ಮೆ ಅವರಮ್ಮನನ್ನು ಕೇಳಿದಳು ಅಮ್ಮಾ ನಾನು ಹೇಗೆ ಬಂದೆ
ವಿಜ್ಞಾನದ ಪಧವೀಧರೆ ಆಕೆಯ ತಾಯಿ ಒಮ್ಮೆ ಬೆಚ್ಚಿದಳು
ಮಗುವಿನ ಬಾಯಲ್ಲಿ ಎಂತಹ ಪ್ರಶ್ನೆ?
ಒಂದೇ ಕ್ಷಣ ವಿಚಲಿತಳಾದ ಅಕೆ ಸುಮ್ಮನಾದರೆ ಆಕೆ ಬಿಡಲ್ಲ ಅಂತ ಗೊತ್ತಿದೆ, ನಿನ್ನಪ್ಪನಲ್ಲಿ ಕೇಳು ನನಗೀಗ ಕೆಲಸ ಇದೆ ಎಂದಳು.
ಮಹಾ ತಾಳ್ಮೆಯ ಪುಟ್ಟಿ ಅಪ್ಪನ ಬಳಿ ಹೋಗಿ ಇದೇ ಪ್ರಶ್ನೆ ಕೇಳಿದಳು
ಅಪ್ಪಾ ನಾನು ಹೇಗೆ ಹುಟ್ಟಿದೆ?
ತಂದೆ ಡಬಲ್ ಗ್ರಾಜುಯೇಟ್ ಇಂತಹ ಪ್ರಶ್ನೆಗೆ ಉತ್ತರ ವೈದ್ಯ ರೇ ಕೊಡುವುದಾದರೂ ಹಿಂದೆ ಮುಂದೆ ನೋಡಿಯಾರು....
ಹಾಗಿರುವಾಗ ...
ನಾನು ಪೇಪರ್ ಓದ್ತಾ ಇದ್ದೀನಿ ಅಮ್ಮನ ಹತ್ರ ಕೇಳು ಅವಳೇ ಹೇಳ್ತಾಳೆ...
ಜಾರಿಕೊಂಡರು..
ಪುನ ಪುಟ್ಟಿ ಅಮ್ಮನ ಬಳಿ ಬಂದಳು
ಈ ಆಚೆ ಮತ್ತು ಈಚೆ ಎರಡೆರಡು ಬಾರಿ ಪುನರಾವರ್ತನೆ ಆಯ್ತು.
ನಿಜವಾಗಿಯೂ ಪುಟ್ಟಿಗೆ ಈಗ ಕೋಪ ಬಂತು.
ನೀವಿಬ್ಬರೂ ಏನೋ ಕಿತಾಪತಿ ಮಾಡಿದ್ದಿರ ಬೇಕು ಅಂದಳು.


**************************************


ನನ್ನ ಮಗ ಆಗ ಎರಡನೇ ತರಗತಿಯಲ್ಲಿ ಓದುತ್ತಿದ್ದ,, ದೂರದರ್ಶನದ ಎಲ್ಲಾ ಧಾರಾವಾಹಿ ಅಮ್ಮನ ಜತೆ ತಾನೂ ಕೂತು ನೋಡುತ್ತಿದ್ದ ಕಾತರದಿಂದ.
ನನಗೆ ಪ್ರೊಜೆಕ್ಟ್ ಕೆಲಸವಾದುದರಿಂದ ಸರಿಯಾದ ಸಮಯಕ್ಕೆ ಮನೆಗೆ ಬರಲಾಗುತ್ತಿರಲಿಲ್ಲ.
ದಿನಾ ನೋಡುತ್ತಿದ್ದವ ಒಮ್ಮೆ ಅಮ್ಮನನು ಕೇಳಿಯೇ ಬಿಟ್ಟ
ಅಮ್ಮ ಏನಾದರೂ ಬೇರೆ ಚಕ್ಕರ್ ಇರಬಹುದಾ ಪಪ್ಪನಿಗೆ ಅಲ್ಲವಾದರೆ ದಿನಾ ಹೀಗೆ ತಡವಾಗಿ ಮನೆಗೆ ಬರ್ತಾ ಇದ್ದಾರೆ..?



ಉತ್ತರ ಅವರವರ ಸ್ತರಕ್ಕೆ,,,


೧೧, ಸಂಭಂಧಗಳು

ಇದೇ ಮಾಮ ಇಷ್ಟ.

ಮಕ್ಕಳಿಗೆ ನಮ್ಮ ಹತ್ತಿರದ ಮತ್ತು ದೂರದವರ ಸಂಭಂಧ ಮತ್ತು ಸಂಭಂಧಿಗಳ ಬಗ್ಗೆ ವಿವರಿಸಿ ಹೇಳಬೇಕಾಗುತ್ತದೆ. ಯಾಕೆಂದರೆ ಹಿರಿಯರ ಮಕ್ಕಳ ಯೋಚನಾ ಸ್ಥರ ಬೇರೆ ಬೇರೆಯಾದುದರಿಂದಲೂ, ದೊಡ್ದವರು /ಪೋಷಕರ ಲಹರಿ ಸ್ತರಗಳನ್ನೂ ತಮ್ಮದೇ ರೀತಿಯಲ್ಲಿ ತಮ್ಮದೇ ದೃಷ್ಟಿಯಲ್ಲಿ ಯೋಚಿಸುತ್ತಾ ಬೆಳೆಸಿಕೊಂಡ ಮಕ್ಕಳು ಸರಿಯಾಗಿ ಕಲಿಸದಿದ್ದರೆ ಒಮ್ಮೊಮ್ಮೆ ಅಪ್ಯಾಯವೇ ಅಪಾಯವಾಗೋ ಸಂಧರ್ಭಗಳಿರುತ್ತವೆ.

ನನ್ನ ಸಹೋದ್ಯೋಗೀ ಗೆಳೆಯ ನಾಯರ್ ರವರಿಗೆ ಇಬ್ಬರು ಹೆಣ್ಣು ಮಕ್ಕಳು ದೊಡ್ಡವಳು ಸುನಿ ೫ ನೇ ಕ್ಲಾಸ್ , ಚಿಕ್ಕವಳು ಬಿಟ್ಟೂ. ೨ ನೇ ಕ್ಲಾಸ್
ನಾನೂ ನನ್ನ ಧರ್ಮ ಪತ್ನಿ ಅವರ ಮನೆಗೆ ಪ್ರತೀ ರವಿವಾರ ಮಹಾಭಾರತಕ್ಕೆ ಹಾಜರಿರುತ್ತಿದ್ದೆವು, ನಾವಾಗ ಮದುವೆಯಾದ ಹೊಸತು. ನನ್ನ ಪತ್ನಿ ಗರ್ಭಿಣಿ ಬೇರೆ. ಅವರ ಮಕ್ಕಳಿಗೆ ನಾವಿಬ್ಬರೂ ಅಚ್ಚುಮೆಚ್ಚು. ಆ ಮಕ್ಕಳ ಪ್ರತಿ ಸಮಸ್ಯೆ ಅವಿಷ್ಕಾರ, ಮತ್ತು ನೋವು ನಲಿವಿನಲ್ಲಿ ನಾವೇ ಜತೆಗಿರೋದ್ರಿಂದ ನಮ್ಮ ನಡುವಿನಲ್ಲೊಂದು ಅವಿನಾಭಾವ ಸಂಭಂಧ ಏರ್ಪಟ್ಟಿತ್ತು.
ಕೇರಳದವಾಗಿದ್ದರೂ ನಮ್ಮಿಬ್ಬರನ್ನು ತಮ್ಮ ಸಂಬಂಧಿಗಳೆಂತಲೇ ಭಾವಿಸುವಂತಿತ್ತು ನಮ್ಮ ಅವರ ಪರಸ್ಪರ ಪ್ರಿತಿ ವಿಶ್ವಾಸ.

ಅವರ ಪತ್ನಿ ದೊಡ್ಡ ಕುಟುಂಬದವರು, ಆರೇಳು ಅಣ್ಣ ತಮ್ಮಂದಿರು ಅವರಿಗೆ. ಕೇರಳದವರಾದುದರಿಂದ ಸಹಜವಾಗಿ ಅವರ ಅಣ್ನ ತಮ್ಮಂದಿರೆಲ್ಲರೂ ಹೊರದೇಶದಲ್ಲಿದ್ದು ವರುಷಕ್ಕೊಮ್ಮೆಯೋ ಆರು ತಿಂಗಳಿಗೊಮ್ಮೆಯೋ ಬಂದು ಹೋಗುವವರಾಗಿದ್ದರು. ಬಂದಾಗ ನಾಯರ್ ಕುಟುಂಬಕ್ಕೆ ಹೊರ ದೇಶದ ಹೊಸ ಹೊಸ ತುಟ್ಟಿ ಉಪಹಾರವೂ ಕಟ್ಟಿಟ್ಟ ಬುತ್ತಿಯಾಗಿತ್ತು.
ಒಮ್ಮೆ ಮಾತನಡುತ್ತಾ ಆಡುತ್ತಾ ನಾಯರ್ ಅವರ ಪತ್ನಿ ತಮ್ಮ ಮಕಳನ್ನು ಕೇಳಿದರಂತೆ ಮಕ್ಕಳೇ ನಿಮಗೆ ಯಾವ ಮಾವ ಇಷ್ಟ,?
ಅವರ ಮನಸ್ಸಿನಲ್ಲಿ ತಮ್ಮ ಅಣ್ಣತಮ್ಮಂದಿರಲ್ಲಿ ಯಾರಾದೊಬ್ಬರ ಹೆಸರು ಹೇಳುತ್ತಾರೆ ಅಂತಿತ್ತು.
ಮಕಳಿಬ್ಬರೂ ಕೋರಸ್ ನಲ್ಲೇ ನಮಗೆ ಗೋಪಿ ಮಾಮ ಮತ್ತು ಶಾಂತಿ ಆಂಟಿ ಇಷ್ಟ ಎಂದು ಬಿಟ್ಟರು.
ನಾಯರ್ ದಂಪತಿಗಳು ಪೆಚ್ಚಾದರು

ಈಗ ಅವರೆಲ್ಲಿದ್ದಾರೋ ತಿಳಿಯದು ಅವರ ಮಕ್ಕಳ ಆ ನಿಷ್ಕಲ್ಮಷ ಪ್ರೀತಿಯ ನೆನಪೇ ಮನದಲ್ಲಿ ಇನ್ನೂ ಹಸಿರಾಗಿದೆ.



ನಗೆ ಚಾಟಿ

1.    ಮೇಲಕ್ಕೆಗರಲಿಲ್ಲ ಯಾಕೆ?

ಮಾಸ್ತ್ರರು ರಾಕೇಟಿನ ಬಗ್ಗೆ ವಿವರಿಸುತ್ತಿದ್ದರು.
ತನ್ನಲ್ಲಿನ ಇಂಧನವನ್ನು ಸಮಕ್ಷಮವಾಗಿ ಬಳಸಿ ರಾಕೇಟು ವಾತಾವರಣದಲ್ಲಿ ಆಕಾಶದಲ್ಲಿ ಮೇಲೆ ಹೋಗುತ್ತೆ.
ತಾನು ಹೊರ ಬಿಡೋ ಶಕ್ತಿಯನ್ನು ಬಳಸಿಯೇ ಮೇಲಕ್ಕೆ ಎಗರುತ್ತದೆ..

ಚಿಲ್ಟಾರಿ ಮುತ್ಯಾ ಎದ್ದು ನಿಂತ.
ಕೆಳಕ್ಕೆ ಜಾರುತ್ತಿರೋ ಚಡ್ಡಿಯನ್ನು ಮೇಲಕ್ಕೆತ್ತಿ ಹಿಡಿದುಕೊಂಡು..
ಹೇಳು ಮರಿ..
ಎಲ್ಲ ವಸ್ತುಗಳೂ ಹಾಗೇಯೇ ಎಗರುತ್ತವೆಯಾ ಮಾಶ್ತ್ರೇ..
ಹೌದು ಹೌದು..
ಹಾಗಾದರೆ ..??
ಹೇಳಪ್ಪಾ..?
ಮಧ್ಯಾಹ್ನ ಅಷ್ಟು ಗ್ಯಾಸ್ ಬಿಡುತ್ತಿದ್ದರೂ ಡ್ರಾಯಿಂಗ್ ಮಾಸ್ತ್ರರು ಮೇಲಕ್ಕೆಗರಲಿಲ್ಲ ಯಾಕೆ...??
.....................................



2.  ಫ್ರೀ ಚಟ್ನಿ 

ಅಂಕಲ್ ಮಸಾಲೆ ದೋಸೆಗೆಷ್ಟು

ಮೂವತ್ತು ರೂಪಾಯಿ ಮರಿ

ಮತ್ತೆ ಮಸಾಲೆಗೆ

ಅದು ಫ್ರೀ 

ಮತ್ತೆ ಇಡ್ಲೀ ಸಾಂಬಾರ್

ಅದು ಇಪ್ಪತ್ತೈದು ರೂಪಾಯಿ

ಮತ್ತೆ ಚಟ್ನಿ ಗೆ ?

ಅದೂ ಫ್ರೀ ಕಣೋ

ಪಕ್ಕಾ......?

ಹೌದು ಮರೀ

ಹಾಗಾದರೆ ನಂಗೆ ನಾಲ್ಕೈದು ಪ್ಲೇಟು ಮಸಾಲೆ ಎರಡು ಪ್ಲೇಟ್ ಚಟ್ನಿ ಕೊಡಿ

ಮತ್ತೆ ದೋಸೆ

ಅದು ಮನೇಲಿ ಮಾಡ್ಸಕೋತೀನಿ ಬಿಡಿ ಅದನ್ನು ಫ್ರೀ ತಗೋಳ್ಳೋಕೆ ನನ್ನ ಮನಸ್ಸು ಒಪ್ಪಲ್ಲ







ಚಂದ್ರ ಗುಪ್ತ ಮೌರ್ಯ ಯಾರು?

ಮುತ್ತನ ಮಗ ಚಿಲ್ಟಾರಿ ಮುತ್ಯಾ ಮತ್ತು ಮರಿತ್ಯಾಂಪ ಗಳಸ್ಯ ಕಂಠಸ್ಯ ಗೊತ್ತಲ್ಲ ನಿಮಗೆ?
ಚಿಲ್ಟಾರಿ ಕೇಳಿದ
ಅಲ್ಲಯ್ಯಾ ಮರಿ ತ್ಯಾಂಪ ಚಂದ್ರ ಗುಪ್ತ ಮೌರ್ಯ ಯಾರಾ..?
ಅಷ್ಟೂ ಗೊತ್ತಿಲ್ವಾ.. ನಿಂಗೆ ಈ ಗಣಪತಿ ಬಪ್ಪಾ ಮೊರಿಯಾ ನ ಸಂಭಂಧಿ ಇರಬೇಕು...ಕಣೋ.



4

ಐ ಫೋನ್ ಯಾವ ಕಂಪೆನಿದೂ..!!!

ಹುಡುಗ: ನಾನೊಂದು ಐ ಫೋನ್ ೫ ತೆಗೆದೆ ಗೊತ್ತಾ..??
ಹುಡುಗಿ: ವಾವ್ ತುಂಬಾ ಚೆನ್ನು.. ಯಾವ ಕಂಪೆನಿದೂ..??!!
ಹುಡುಗ: ಹೋಗು ತಂಗೀ ಮನೆಗೆ ಹೋಗು..!! ರಿಬೋಕ್ ಕಂಪೆನಿದು.





5 ಏನೆಲ್ಲಾ ಸಿಗತ್ತೆ..?


ಗಗನ ಸಖಿ ಪೂಜಾರಿಗೆ: ನೀವು ಏನು ತಕ್ಕೊಳ್ತೀರಾ,, ಸಾಹೇಬರೇ
ಶಾಸ್ತ್ರಿ: ಇಡ್ಲಿ ವಡೆ ದೋಸೆ, ಪೂರಿ ಇದ್ದರೆ ಅಥವಾ ಪಾಯಸ.
ಗಗನಸಖಿ: ನೀವು ಕಿಂಗ್ ಫಿಷರ್ ವಿಮಾನದಲ್ಲಿದ್ದೀರಾ, ವಿಜಯ ಮಲ್ಯರವರ ಮದುವೆಯಲ್ಲಿ ಅಲ್ಲ.






6 ಇವತ್ತು ಪೌಡರ್ ಕೇಳ್ತಿರೋದು, ನಾಳೆ ಬೇರೇನೂ ಕೇಳ್ಬಹುದು




ಮಾರಾಟಗಾರ: ಸರ್ ಜಿರಳೆಗೆ ಪೌಡರ್ ತಗೋತೀರಾ..?
ಜೋಗ: ಇಲ್ಯಾ, ನಾವೆಲ್ಲ, ಜಿರಳೆಯನ್ನ ಅಷ್ಟೊಂದು ಪ್ರೀತಿಸಲ್ಲ, ಅಲ್ಲ ಇವತ್ತು ಪೌಡರ್ ಕೊಟ್ಟರೆ ನಾಳೆ ಬೇರೆ ಕ್ರೀಮೂ, ಡಿಯೋ ಎಲ್ಲಾ ಕೇಳೋದಿಲ್ಲ ಅಂತ ಯಾವ ಗ್ಯಾರಂಟೀ..?