Search This Blog

Sunday, August 11, 2013

ಕುಡಿತ

ಕುಡಿತ




ಇಂದಲ್ಲಾ ನಾಳೆ ಮರೆಯುವ ಮನಸಿಗೆ ಬೇಕೇ ಬೇರೆ ಕಾರಣ



ಇದೆಲ್ಲಾ ಚಟ ಬೆಳಸಲು ಕುಡಿಯುದ ಬಳಸುವ ನಮ್ಮ ಹೂರಣ




Saturday, August 10, 2013

ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ

ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ

0

ಬಾನಂಗಳದೇ ತಾರೆಯ ಲೋಕದೆ ಚಂದ್ರಮ ಬಂದನು ವರನಾಗೀ
ಓ ನಿರ್ಮೋಹೀ ಪ್ರಿಯತಮ ಬಾರೋ ನಲ್ಲೆಯು ಕಾದಿಹೆ ನಿನಗಾಗಿ


ಇನಿಯನ ಕರೆದಿದೆ ಕೋಗಿಲೆ ಮುದದೇ ಕುಹು ಕುಹು ದನಿಯಲಿ ಉತ್ತರಿಸೀ
ನನ್ನೀ ದೇಹದ ಅಣು ಅಣು ಮಿಡಿದಿದೆ ನಿನ್ನಾಸರೆಯಾ ಬಿತ್ತರಿಸೀ
  ನಿದಿರೆಯು ಕಳೆದಿದೆ ಎಲ್ಲೋ ಏನೋ ಸಿಹಿಸಿಹಿ ನೆನಪಲಿ ತತ್ತರಿಸೀ  //ಬಾನಂಗಳದೇ ತಾರೆಯ //


ಜಗವರಿಯದ ಈ ಕೋಮಲ ತನುವಿದು ನಿನಗಾಗಿಯೇ ಇದೆ ಕನವರಿಸೀ
ಎಂದೂ ಯಾರೂ ಮುಟ್ಟದ ಹೂವಿದು ನಿನಗೇ ಮೀಸಲು ಅವತರಿಸೀ
ಹರಡಿದೆ ಮಲ್ಲಿಗೆ ಘಮ ಘಮ ಕಂಪೂ ಅರಳುತೆ ಕೆರಳುತೆ ಅವಸರಿಸೀ  //ಬಾನಂಗಳದೇ ತಾರೆಯ //


ನೀಬಳಿಯಿರೆ ಈ ಜಗವೇ ನನ್ನದು ಇರುತಿರೆ ನನ್ನೊಳು ಒಂದಾಗೀ
ನೀ ಇರದಿರೆ ಈ ಇಳೆಯೇ ನರಕವು ಪೌರ್ಣಮಿ ತಂಪೂ ಬಿಸಿಯಾಗೀ
ಓ ನಿರ್ಮೋಹೀ ಪ್ರಿಯತಮ ಬಾರೋ ನಲ್ಲೆಯು ಕಾದಿಹೆ ನಿನಗಾಗೀ   //ಬಾನಂಗಳದೇ ತಾರೆಯ //
ತಟ



ಅಲೆಗಳ
ವೇದನೆ
ಅರ್ಥವಾಗಿಯೇ
ತಾನೇ
ಸದಾ
ತನ್ನೆದೆಯೊಳಿಟ್ಟು
ಕಕ್ಕುಲತೆಯಿಂದ
ಸಂತೈಸುತ್ತಿರುವುದು

Monday, August 5, 2013

ಮಧುರ ನಿನ್ನಯ ಲಾಲಿ ನನ್ನ ಕಿವಿಗಳಿಗಿಂಪು


ಅಮ್ಮ



 
 
 
 
 
 
 
 
 
 
 
 
 
 
 
 
ನನ್ನ ಎದೆಯಾಳದಲಿ ಬಚ್ಚಿಟ್ಟ ಕನಸಿನಲೂ
ಕಂತು ಕಂತಿಗೂ ನಿನ್ನ ನೆನಪಿನಳಲೂ

ಎಲ್ಲ ನೋವನು ತನ್ನ ಮನದಲ್ಲೇ ಬಚ್ಚಿಟ್ಟು
ಹೊರಗೆ ಅರಳುವೆ ನೀನು ಪ್ರೀತಿ ಕೊಟ್ಟು

ಮಧುರ ನಿನ್ನಯ ಲಾಲಿ ನನ್ನ ಕಿವಿಗಳಿಗಿಂಪು
ಮತ್ತೆ ಬಿಸಿಯುಸಿರ ಆ ಪ್ರೀತಿಯೊನಪು

ಇನಿದನಿಯ ಜೋಗುಳದ ಅಕ್ಕರೆಯ ಕುಡಿನೋಟ
ಒಲವಿನಕ್ಕರೆಯ ಆ ತುತ್ತಿನೂಟ

ಮಗುವಿನಕ್ಕರೆಯ ತೊದಲು ನುಡಿಗಳ ತಂಟೆ
ವಿಶ್ವಕೋಶದಕ್ಕರಕೂ ಕಡಿಮೆಯುಂಟೇ

ಬದುಕಿನೋಣಿಯ ತುಂಬ ಒಲುಮೆಯಮೃತ ಹನಿಸಿ
ನನ್ನ ಭಾಗ್ಯವ ಬರೆದೆ ಪ್ರೀತಿಯುಣಿಸಿ

ಮನೆಯ ಕಜ್ಜದ ಹೊರೆಯ ಹೊತ್ತು ಪ್ರೀತಿಯ ಹೊಸೆದು
ನನ್ನ ಬೆಳೆಸಿದೆ ನಿನ್ನ ನೆತ್ತರೆರೆದು

ಉಕ್ಕಿತೆನ್ನಯ ಅಕ್ಷಿಪಟಲದಾಚೆಯು ಸತ್ಯ
ಇಳೆಯ ದೇವರು ನೀನೆ ಸತ್ಯ ನಿತ್ಯ

ಕಣ್ಣಾಳದಲ್ಲೆಲ್ಲ ಹರಿಯಿತೊಲುಮೆಯ ಜಲವು
ನಿನ್ನ ತ್ಯಾಗವ ನೆನಸಿ ಅಮ್ಮ ನಿಜವು

ನಿನ್ನ ಪ್ರೀತಿಯ ಋಣವ ನಾ ಹೇಗೆ ತೀರಿಸಲಿ
ನಿನ್ನಮ್ಮನಾಗಿ ನಾ ಹುಟ್ಟಿ ಬರಲೇ


Friday, August 2, 2013

ಜೀವನದ ಬಗೆಗಿನ ಕೆಲವು ಮೆಲುಕು ಹಾಕುವಂತ ನುಡಿಗಳು: ಮಧ್ಯವಯಸ್ಸಿನ ನಂತರ





೧. ಜೀವನದ ರಹಸ್ಯ
ಮಧ್ಯವಯಸ್ಸಿನ ವರೆಗೆ : ಹೆದರ ಬೇಡಿ
ಮಧ್ಯವಯಸ್ಸಿನ ನಂತರ : ಬೇಸರ ಪಡಬೇಡಿ

೨. ನೀವು ಸಾಧ್ಯವಾಗುವಾಗ ನಿಮ್ಮ ಜೀವನವನ್ನು ಅನುಭವಿಸಿ




೩. ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ ಪಡಿಸಲೂ ಸಾಧ್ಯವಾಗದಷ್ಟು ಮುದುಕರಾಗುವ ವರೆಗೆ ಮುಂದೂಡಬೇಡಿ, ಎಲ್ಲಿಯವರೆಗೆ ನಿಮ್ಮಿಂದ ಸಾಧ್ಯವೋ ಅಲ್ಲಿಯವರೆಗೆ ಮೊದಲೇ ನೀವು ನೋಡಬೇಕೆಂದಿರುವ ಸ್ಥಳಗಳನ್ನು ಭೇಟಿ ಕೊಡಿ, ನೋಡಿ ಬಿಡಿ.

೪. ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಹಳೆ ಸ್ನೇಹಿತರು ಗುರು ಹಿರಿಯರು ಇವರುಗಳನ್ನು ಬೇಟಿಯಾಗಿಬಿಡಿ, ಮುಂದೆ ಅವರೆಲ್ಲರನ್ನು ನೋಡುವ ಅವಕಾಶ ಸಿಗುತ್ತೋ ಇಲ್ಲವೋ.

೫. ಬ್ಯಾಂಕುಗಳಲ್ಲಿ ಇಟ್ಟ ನಿಮ್ಮ ಹಣ ನಿಮ್ಮದಾಗಿ ಇರದಿರಬಹುದು, ಅದಕ್ಕೇ ಅದನ್ನ ಖರ್ಚು ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಎಂಜೋಯ್ ಮಾಡಿ, ನೀವು ನಾಳೆಯ ಬಗ್ಗೆ ಯೋಚಿಸ ಬೇಕಿಲ್ಲ

೬. ಏನೆಲ್ಲಾ ತಿನ್ನ ಬೇಕೆನಿಸುತ್ತೋ ತಿಂದು ಬಿಡಿ, ನೀವು ಖುಷಿ ಯಾಗಿರುವುದು ಮಾತ್ರ ಮುಖ್ಯ ಆದರೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳನ್ನು ಯಾವಾಗಲೂ ತಿನ್ನಿ, ಅದೇ ನಿಮ್ಮ ಆರೋಗ್ಯಕ್ಕೆ ಹಾನಿಕರವಾದವುಗಳನ್ನು ತಿನ್ನಲೇಬೇಕೆನಿಸಿದಲ್ಲಿ ಕೆಲವು ಸಾರಿ ಮಾತ್ರ ಸ್ವಲ್ಪವೇ ತಿನ್ನಿ.

೭. ಅನಾರೋಗ್ಯವನ್ನು ಸರಿಯಾದ ರೀತಿಯಲ್ಲೇ ಕೃಮಿಸಿ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಪ್ರತಿಯೊಬ್ಬರೂ ಹುಟ್ಟು, ವಯಸ್ಸು, ಅನಾರೋಗ್ಯ, ಮತ್ತು ಸಾವು ಈ ಚಕ್ರದಲ್ಲೇ ಸುತ್ತಬೇಕು. ಇದಕ್ಕೆ ಶಾಶ್ವತವಾದ ಪರಿಹಾರ ಎಂದೂ ಇಲ್ಲವೇ ಇಲ್ಲ. ಇದೇ ಜೀವನ.

೮. ನೀವು ಅನಾರೋಗ್ಯವಾಗಿರುವಾಗ ಹೆದರುವುದೂ ಬೇಡ, ಬೇಸರವೂ ಬೇಡ. ನಿಮ್ಮದೇನಾದರೂ ಬಾಕಿ/ ನೀವು ಪರಿಹರಿಸಬೇಕಾದ /ಇತ್ಯರ್ಥವಾಗಬೇಕಾದ ಸಮಸ್ಯೆ ಇದ್ದರೆ ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಮತ್ತು ನಿರಾಳರಾಗಿ.

೯. ನಿಮ್ಮ ದೇಹವನ್ನು ವೈದ್ಯರೂ, ಜೀವನವನ್ನು ದೇವರೂ/ ಪ್ರಕೃತಿಯೂ ಮತ್ತು ನಿಮ್ಮ ಮನಸ್ಥಿತಿಯನ್ನು ನೀವೂ ನೋಡುತ್ತಿರಿ.

೧೦. ನಿಮ್ಮ ಚಿಂತೆ ನಿಮ್ಮ ಅನಾರೋಗ್ಯವನ್ನು ಸರಿ ಪಡಿಸುವದಾದರೆ ನೀವು ಸದಾ ಚಿಂತಿಸಿ, ನಿಮ್ಮ ಆಯುಷ್ಯವನ್ನು ಚಿಂತೆ ಹೆಚ್ಚಿಸುವುದಾದರೆ ನೀವು ಸದಾ ಚಿಂತಿಸಿ, ಮತ್ತು ಸಂತೋಷಗಳಿಗೆ ಚಿಂತೆಗಳನ್ನು ಬದಲಿಸ ಬಹು ದಾದರೆ ಹಾಗೇ ಮಾಡಿ .

೧೧. ಮಕ್ಕಳು ಅವರ ಭವಿಷ್ಯವನ್ನು ಖುದ್ದು ಮಾಡಿಕೊಳ್ಳುತ್ತಾರೆ.

೧೨. ಹಳೆಯ ನಾಲ್ಕು ಖಜಾನೆಯನ್ನು ಸರಿಯಾಗಿ ನೋಡಿಕೊಳ್ಳಿ ೧. ನಿಮ್ಮ ಹಳೆಯ ದೇಹ : ನಿಮ್ಮ ಆರೋಗ್ಯ ಮತ್ತು ದೇಹಸ್ಥಿತಿಯ ಬಗೆಗೆ ಜಾಸ್ತಿ ಕಾಳಜಿ ನಿಮ್ಮದೇ ಇರಲಿ ೨. ನಿಮ್ಮ ಆರ್ಜಿತ ಧನ ನಿಮ್ಮ ಕೈಯಲ್ಲೇ ಇಟ್ಟುಕೊಳ್ಳುವುದು ಅತ್ಯಂತ ಒಳ್ಳೆಯದು. ೩. ನಿಮ್ಮ ಹಳೆಯ ಸಂಗಾತಿ ಅತ್ಯಂತ ಅಮೂಲ್ಯ ಖಜಾನೆಯಿದು, ಪ್ರತಿ ಕ್ಷಣವೂ ಅನ್ಯೋನ್ಯವಾಗಿ ಸಹಚರರಂತೆ ಬಾಳಲು ಪ್ರಯತ್ನ ಪಡಿ , ನಿಮ್ಮಿಬ್ಬರಲ್ಲಿ ಒಬ್ಬರು ಮೊದಲು ಕೈ ಬಿಡುವಿರಿ ( ಈ ಜಗದಿಂದ) ೪. ನಿಮ್ಮ ಹಳೆಯ ಸ್ನೇಹಿತರು: ಇವರನ್ನು ಸಿಗಲು ಸಾಧ್ಯವಾಗುವ ಪ್ರತಿ ಕ್ಷಣಗಳನ್ನೂ ಸಿಕ್ಕಿ ಅಸ್ವಾದಿಸಿ, ಏಕೆಂದರೆ ಕಳೆಯುತ್ತಿರುವ ಪ್ರತಿ ಕ್ಷಣಗಳೂ ನಿಮಗೆ ಅಮೂಲ್ಯವಾಗಿ ಕಡಿಮೆಯಾಗುತ್ತಲಿರುತ್ತದೆ.
೧೨. ದಿನಾ ನೀವು ಅವಶ್ಯ ಮಾಡಲೇಬೇಕಾದ ಮುಖ್ಯ ಎರಡು ಕೆಲಸಗಳು " ಹಸನ್ಮುಖಿಯಾಗಿ ಮತ್ತು ನಗುತ್ತಿರಿ
೧೩. ಹರಿಯುತ್ತಿರುವ ನೀರು ಹಿಂದಕ್ಕೆ ತಿರುಗದು,ಅಂತೆಯೇ ನಮ್ಮ ಜೀವನ, ಅದಕ್ಕೇ ಸಂತಸವಾಗಿಸಿರಿ.

೧೪. ದೇವರು ನಿಮ್ಮ ಚೆನ್ನಾಗಿ ಖುಷಿಯಲ್ಲಿಟ್ಟಿರಲಿ.

ಕೊನೆಯ ಹಾರೈಕೆ

೧೫. ನಿಮ್ಮ ಸಂತೋಷ ಪೆಟ್ರೋಲ್ ಬೆಲೆಯಂತೆ ಏರುತ್ತಿರಲಿ ಮತ್ತು ನಿರಾಶೆ ಅಥವಾ ಕಳವಳ ರುಪಾಯಿ ಬೆಲೆಯಂತೆ ಇಳಿಯುತ್ತಿರಲಿ


ಲಹರಿ
















ಕಾದಿದ್ದೆ

ನಿದ್ದೆಯಿಲ್ಲದ ಹಲವು ರಾತ್ರೆ
ಬೇಕಾದುದೆಲ್ಲವ ಜತೆಗಿಟ್ಟು
ಆದರೂ ಬರಲಿಲ್ಲ
ನೀನು

ಶಿವನೇರಿ ಏರಿದ್ದೆ, ಹತ್ತಿದ್ದೆ ನಂದಿ
ಕಳೆದಿದ್ದೆ ಹತ್ತು ದಿನ
ಆದರು ಸುಳಿವೇ ಇಲ್ಲ
ನಿನ್ನದು

ಬೀಸ ಬಯಲಲ್ಲೂ
ತುಂಬು ಮಡುವಲ್ಲೂ
ಹರಿವ ತೊರೆಯಲ್ಲು
ನಿಂತು ಕಾದೆ
ಪತ್ತೆಯೇ ಇಲ್ಲ
ನೀನು

ನಿಗಿ ನಿಗಿ ಕೆಂಡದ ಬಿರು ಬಿಸಿಲಲ್ಲಿ
ಇನ್ನೇನು ಬದಲಾಗೋ ಸಂಕೇತದ
ಆ ಕ್ಷಣ ಪ್ರತ್ಯಕ್ಷ
ನೀನು

ಕಾರಿರುಳ ದಾರಿಯ ಮಿಂಚು

















ಕತ್ತಲೆಯ ದಾರಿಯಲಿ
ಕಂಡ ಮಿಂಚು ನೀನು

ಮರಳ ನೆಲದಲಿ ಬಸಿದ
ಆ  ಪ್ರೀತಿಯೊರತೆ

ಮನದ ಕೋಟೆಯ ಬಿತ್ತಿ
ಮತ್ತೆ ನೆನಪಲಿ ಮುತ್ತಿ
ಮಳೆಯ ಮುಂದಿನ ಹಸಿಯ
ಹುಲ್ಲ ನೆನಪು

ನಡೆದ ದಾರಿಯ ನೆನಸೆ
ಮತ್ತೆ ಬಸಿದಾ ವರತೆ
ನಿನ್ನ ನೆನಪಿನ ಸುತ್ತಿ
ತೆರೆದ ಕವಿತೆ

ಮೂಡಿ ನಲಿಯಿತು ನೆನಪು
ಮನದ ಬಾನಲಿ ನನ್ನ
ನವಿಲ ನೃತ್ಯದ ಮಿಹಿಯ
ಮೊದಲ ಮಳೆಯ 

ಬದುಕಿನಿರುಳಲಿ ಮತ್ತೆ
ಮಿಂಚಬಾರದೇ ನೀನು
ಇರುಳ ದಾರಿಯಲಿ
ಅಂದು ಬೆಳಗಿದಂತೆ

ಆಸರೆಯ ಮನದಿನಿಯೆ
ಕಾತರದೆಕಾದಿಹಳು
ಮೊದಲ ಮಳೆಹನಿಗೆ
ಬುವಿ ಕಾಯುವಂತೆ

ಗಮನ



ದಿನಾ ನನ್ನನ್ನೇ
ಕೊಂದುಕೊಳ್ಳಲು
ಗೆಳೆಯನೊಬ್ಬನ
ಸಂಪಾದಿಸಿದೆ
ಆತನೋ
ತುಂಬಿದ ನದಿ
ಹುಟ್ಟೇ ಇಲ್ಲದ
ನಾವೆಯಲ್ಲಿ
ತಾನೇ
ಗಮ್ಯವನ್ನರಸುವ
ಪಯಣಿಗ
ಈಜಲು
ಬರದಿದ್ದರೂ
ನಿರ್ಭಯ ನಾನು
ಬೆಳಕಿನೆಡೆಗಲ್ಲವೇ

ಗಮ್ಯ
ಗಮನ

ಗಾಳಿಯಲ್ಲಿ ಬರೆದ ಬರಹ





ಗುಳೆ ಹೊರಟಿದ್ದೆವಂದು
ತಿಂಗಳಬೆಳಕಿನ ಹೊನಲಲ್ಲಿ
ಮಣ್ಣಿನ ರಸ್ತೆಯಲ್ಲಿ
ಹಸು ಕರು ಬೆಕ್ಕು ನಾಯ ಕಟ್ಟಿಕೊಂಡು
ಮನೆಯ ಪರಿಕರವೆಲ್ಲ
ಎತ್ತಿನ ಗಾಡಿಯಲ್ಲಿ ತುಂಬಿಕೊಂಡು
ನಡೆಯಲು ಆಡಲು ಬೆಳೆಯಲು ಕಲಿಸಿದ್ದ
ಹಳ್ಳಿಯ ಪರಿಸರ ಹಿಂದೆ ಬಿಟ್ಟು
ತಂದೆತಾಯಿ ಅಕ್ಕ ತಮ್ಮ ಅಣ್ಣನೊಡನೆ
ನಮ್ಮೆಲ್ಲರ ಮುಂದಿನ ಭವಿತವ್ಯದ
ಬೆನ್ನು ಹತ್ತಿ
ಕ್ರಮಿಸಿದ್ದೆವು ದಾರಿ
ಚುಮುಚುಮು ಬೆಳಕಿನವರೆಗೆ
ಪಟ್ಟಣದತ್ತ



2

ಹಾಗೆಯೇ ಕ್ರಮಿಸಿತ್ತು
ನಮ್ಮ ಕಲಿಕೆ ಬದುಕಿನ ಕಾಲದ ಬಂಡಿಯ ಜತೆ
ಗಾಲಿಗಳುರುಳಿದ್ದೇ ಉರುಳಿದ್ದು
ಬೆಳ್ಳಿಯ ಹಬ್ಬದವರೆಗೆ
ಆಗಿನ ಪೋಷಕರ ಪಾತ್ರವೂ
ಜಾಗತಿಕ ಕದಡಿನ ಜತೆ
ಹಳೆಯ ವೃಕ್ಷಗಳು ಧರೆಗುರುಳಿ
ನುಗ್ಗಿವೆ ಮನಮನೆಗಳೊಳಕ್ಕೆ
ಹೂಬಿಟ್ಟ ಕಳ್ಳಿ ಹೊಸ ಬೋನ್ಸಾಯ್
ಮನುಷ್ಯನ ಮನಸ್ಸೂ ಬದುಕೂ
ಕಿರಿದಾಗುತ್ತಾ ಆಗುತ್ತಾ
ಚಿರುಟುತ್ತಾ ನಡೆದಂತೆ
ಬಲಿಯುತಿವೆ ಕುಬ್ಜವಾಗಿ
ಅವುಗಳಂತೆ


3

ಈಗಲೂ ಅನ್ನಿಸುತ್ತೆ ಕೆಲವೊಮ್ಮೆ, ಆಗ
ಹುರುಳಿತ್ತು ಆಸೆ ಆಕಾಂಕ್ಷೆಗಳ ಬದುಕಿಗೆ
ಮಾತಿಗೆ ಒಲವಿಗೆ, ಈಗಿಲ್ಲದ
ಹೊಂದಾಣಿಕೆ ಲವಲವಿಕೆ ಪ್ರಕೃತಿಯ ನಲಿವಿಗೆ
ಆಗಿಲ್ಲದ ಯಾಂತ್ರಿಕತೆ ಹೊಸ
ತಂತ್ರಜ್ಞಾನದ ಮಾಂತ್ರಿಕತೆ
ಈಗಿರುವ ಮೇರುತ್ವದಲ್ಲೂ ಎಲ್ಲಿಯೋ ತನ್ನನ್ನೇ
ಕಳೆದುಕೊಳ್ಳುತ್ತಿರುವ ಅನುಭವ
ಸುತ್ತಿದ ನೂಲುಂಡೆಯ ಉದ್ದಕ್ಕುರುಳುರುಳಿದ
ಎಳೆಯಂತೆ ಆ ನೆನಪು
ನಡೆವಾಗ ಗಾಳಿಯಲ್ಲಿ ಬರೆದ ಅಕ್ಷರದಂತೆ
ಬರೆ ಎಳೆ ರೇಖೆ ಮಾತ್ರ
ಉಳಿಯುವ ಭ್ರಮೆ




4

ಎಂಭತ್ನಾಲ್ಕರ ಈ ಇಳಿವಯಸ್ಸಿನಲ್ಲೂ
ಪ್ರತಿ ಹೊಸತ ಕಲಿಯ ಬಯಸುವ ಅಮ್ಮ
ಹಳೆತೆಲ್ಲವೂ ಬೋರೆನ್ನುವ
ಮಗ, ತಿನಿಸುಣಿಸಲ್ಲೇ ಎಲ್ಲರ ಮನಸೆಳೆವ ಸತಿ
ನನ್ನ ಸುವರ್ಣ ಸಂಭ್ರಮದ
ನಿತ್ಯ ಹೊಸತಾಗಲು ತವಕಿಸೋ ಮನಸ್ಸು
ಇನ್ನೂ ಸಾಗುತಲಿದೆ ಬದುಕು
ಮತ್ತೆ ಉಳಿಯುವ ಭ್ರಮೆಯ
ಅಶಾಶ್ವತ ಬದುಕಿನ ಅಶಾಶ್ವತ -ಪರಿಸರದಲ್ಲಿ


                                                                 ಕಾಲಾತೀತನ ಕಾಲಾತೀತ ಜಗತ್ತಿನಲ್ಲಿ
                                                                 ಮತ್ತೆ ಮತ್ತೆ ಅರಿತಿದ್ದೂ
                                                                 ಸದಾ ಅಳಿವಿನಂಚಿನಲ್ಲಿದ್ದೂ
                                                                 ಉಳಿವ ರಮ್ಯ ಕನಸಿನ 
                                                                 ಮನಸ್ಸಿನೊಂದಿಗೆ
                                                                 ಅಂತ್ಯದ ಆರಂಭಕ್ಕೆ
                                                                 ಪ್ರತಿ ಮುಂಜಾವಿನೊಂದಿಗೆ
                                                                 ಇಂಚಿಂಚೇ ಹೊಸ ಮಜಲಿಗೆ,
                                                                 ಮರುಹುಟ್ಟಿಗೆ ಎಡ ತಾಕುವ
                                                                 ದಿನದ ಹರಹಿನೊಂದಿದೆ