Search This Blog

Monday, May 31, 2010

ಪ್ರಹರಿ

ಪ್ರಹರಿ


ಅರಿವಿಲ್ಲದವನೆಡೆಗೆ ಎಸೆಯದಿರಿ ಹೂವುಗಳ
ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ
ಕಾರ್ಗಿಲ್ನ ಅಘಾತ ಮರೆಸಿತ್ತು ಅರಿವುಗಳ
ಕರಟಿಸಿ ಕದಿರೊಡೆದ ಭಾವನೆಯ ಚಿಗುರುಗಳ

ಪ್ರಹರಿಯಾದ ನನ್ನಾಸೆ ಅರಳಿತ್ತು ಆಗೊಮ್ಮೆ
ಟಿಸಿಲೊಡೆದ ಭಾವನೆಯ ಚಿಗುರುಗಳ ಕಡೆಗೊಮ್ಮೆ
ಹಸಿರುನೆಲ ತಿಳಿನೀಲದಂಬರದ ರಕ್ಷೆಯಲಿ
ತನ್ನವರ ಸ್ಥಿರನೆಲೆಯ ಸುಖನಗೆಯ ಕಕ್ಷೆಯಲಿ

ಸುಡುಸುಡುವ ಬಿಸಿಲಿರಲಿ ಮೈಕೊರೆವ ಚಳಿಯಿರಲಿ
ಬಸಿದ ಕಣ್ಣೀರಿರಲಿ ಹರಿದ ಕೆನ್ನೀರಿರಲಿ
ನೊವಿರಲಿ ನಲಿವಿರಲಿ ತನ್ನವರ ನೆನಪಿನಲಿ
ಕಾವನೀ ಪರಿ ಪ್ರಹರಿ ಬತ್ತದಾವೇಶದಲಿ

ಕೊಚ್ಚಿ ಬಿಸುಟರೂ ಸಖರ, ಮತ್ತೆ ತರಿದರೂ ಹಲರ
ಒರಸಿ ನಡೆವರು ಮುಂದೆ ಸೆಲೆಯೊಡೆವ ಕಣ್ಣೀರ
ತಮ್ಮೊಡಲ ಪ್ರಿಯಸಖರ ,ಏಕಾಂಗೀ ಕಳೆವರವ
ಬಿಟ್ಟು ಕೊಡುವರು ಜೀವ, ಕಾಯೆ ತಾಯಿಯ ನೆಲವ

ಯಾರದೋ ಸ್ವಾರ್ಥಕ್ಕೆ ಕಾಟ ಸೆಣಸಾಟಕ್ಕೆ
ಸೆಣೆಸಿ ನಿಲುವರು ತಮ್ಮ ಪ್ರಾಣ ಬಲಿದಾನಕ್ಕೆ
ಉಳಿಯೆ ಕಾಯ್ವರು ಮತ್ತೆ ಮಲೆ ಹತ್ತಿ ಗಡಿ ಸುತ್ತೆ
ಅಳಿದುಳಿವ ಕೆಚ್ಚೊಲವು ಇದುವೆ ಪ್ರಹರಿಯ ನಿತ್ತೆ

ಮುಗಿಯದೀ ಸೆಣಸಾಟ ಈ ಹೂಟ ಕೆಣಕಾಟ
ಅಳಿದವರ ಮನೆಮನೆಯ ಕಣ್ಣೊರಸೋ ಹೆಣಗಾಟ
ಮತ್ತೆ ದುರ್ಲಭ ಅವರ ಹೆತ್ತೊಡಲ ಸರಸಾಟ
ಪ್ರಹರಿಯಾ ಪ್ರಿಯಜನರ ಹುಸಿನಗೆಯ ಸವಿಯೂಟ

ನನಗೀಗ ಬಲುದೂರ ಕರಗುವಾ ಬೆಳ್ಸೆರಗು
ಮಿಡುಕುವಾ ಹಸಿರೆಲೆಯ ಪ್ರಕೃತಿಯ ನಲ್ಸೆರಗು
ಅರಿವಿಲ್ಲದವನೆಡೆಗೆ ಎಸೆಯದಿರಿ ಪುಷ್ಪಗಳ
ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ


 (ಸಮಗ್ರ ಕರ್ನಾಟಕದ ಕವಿತೆ ಸ್ಪರ್ದೆಯಲ್ಲಿ ದೊಡ್ಡ ರಂಗೆ ಗೌಡರ ಮೆಚ್ಚುಗೆ ಪಡೆದ ಕವಿತೆ )

2 comments:

  1. ಸಕತ್... ಸೈನಿಕರ ಬವಣೆಗಳ ಬಗ್ಗೆ ಬ೦ದ ಒ೦ದು ಸು೦ದರ ಕವನ. ಕೀಪ್ ಇಟ್ ಅಪ್.. ಸಿಪಾಯಿಗಳ ಬಗ್ಗೆ ಬರುತ್ತಿರಲಿ ಇನ್ನೂ ನಿಮ್ಮಿ೦ದ ನೂರಾರು ಮಾತುಗಳು.
    ಒಲವಿರಲಿ. ನಿಮ್ಮವ ನಾವಡ.

    ReplyDelete
  2. ನಾವಡರೇ ನಿಮ್ಮ ಮೆಚ್ಚುಗೆಗೆ ಧನ್ಯ

    ReplyDelete