Search This Blog

Sunday, September 15, 2013

ಹುತವಹ
 






"ಏಯ್.....??"
ಮುಖ ಎತ್ತಿದಳು. ಅಶ್ರು ತುಂಬಿದೆ ಅವಳ ಕಣ್ಣುಗಳಲ್ಲಿ.
"ಏನಾದರೂ ತಿನ್ನೋಣವೇ?"
" ಬೇ... ಬೇಡ... ನನಗೆ ಹಸಿವಿಲ್ಲ.."
ಅದೋ ಸಂಜೆ ಆಗಲು ಬಂತು, ನಿನ್ನೆಯಿಂದ ಏನೂ ತಿಂದಿಲ್ಲ.. ನೋಡೂ ನಮಗೆ ಬೇಸರವಾದಾಗ, ಮನ ವ್ಯಘ್ರವಾದಾಗ ನಮಗೆ ಜಾಸ್ತಿ ತಾಕತ್ತು ಬೇಕಂತೆ, ನಮ್ಮನ್ನು ನಾವು ಸಂಭಾಳಿಸಲು.. ಅಂತೆಯೇ ನಮಗೂ ಈಗ ಜಾಸ್ತಿ ಶಕ್ತಿ ಬೇಕಾಗಿದೆ.... ಅದಕ್ಕೆ ಏನಾದರೂ ತಿನ್ನಲೇ ಬೇಕು"
"ಯಾಕೆ ನಾನು ಮಾತ್ರಾನಾ, ನೀವೂ ನಿನ್ನೆಯಿಂದ ಏನೂ ತಿಂದಿಲ್ಲ ಅಲ್ಲವಾ...??" 
"ನನ್ನ ಕಥೆ ಬಿಡು, ನಾನು ಹೊರಗಡೆ ತಿಂದು ಬಂದಿದ್ದೇನೆ"
ಆ ಸ್ಥಿತಿಯಲ್ಲೂ ನಗು ಬಂತು ಅವಳಿಗೆ.." ನಿಮಗೆ ಸುಳ್ಳು ಹೇಳಲೂ ಬರುವುದಿಲ್ಲ... ಅದೂ ನನ್ನಲ್ಲಂತೂ.....!!"
ಒತ್ತಾಯಕ್ಕೆ ಒಳಕ್ಕೆಳೆದುಕೊಂಡೇ ಹೋದೆ. ಅನ್ನ ಬಟ್ಟಲಿಗೆ ಹಾಕಿದೆ, ಸಾರೊ ಏನನ್ನೋ ಹಾಕಿ ಕಿವುಚಿದೆ......... ಆಗಲೇ..............
ಪಪ್ಪಾ ಮಮ್ಮೀ... ಪಾಪು ನಿದ್ದೆಯಲ್ಲೇ ನರಳಿತು....
ನಾಲ್ಕು ಕಣ್ಣುಗಳಲ್ಲೂ ಅಶ್ರು ಧಾರೆ......
ಇಲ್ಲ ತಿನ್ನಲಾಗುವುದಿಲ್ಲ....... 
ಒಂದಗಳೂ ಕೂಡಾ....
ಇಲ್ಲ..
ಮನಸ್ಸಿಲ್ಲ
ಮನಸ್ಸೇ...... ಇಲ್ಲ.
 
ಅವನು
 
ನೀನಾಗ ತುಂಬಾ ಚಿಕ್ಕವ. ನಿನಗೆ ನಾಲ್ಕೋ ಐದೋ ತಿಂಗಳಿರಬಹುದೇನೊ ಅಷ್ಟೇ. ಆಗೆಲ್ಲಾ ಅಮ್ಮನ ಮಡಿಲೇ ನಿನಗೆ ಸರ್ವಸ್ವವಾಗಿತ್ತು. ಬೇರೆ ಪ್ರಪಂಚವೇ ಇಲ್ಲ.ಕಡಿಮೆ ಎಂದರೂ ೧೪-೧೬ ಘಂಟೆ ಮಲಗುತ್ತಿದ್ದೆ ನೀನು. ಡಾಕ್ಟರು ಹೇಳುತ್ತಿದ್ದರು. ಮಕ್ಕಳು ತಾವು ಆರೋಗ್ಯವಾಗಿದ್ದರೆ ಮಾತ್ರ ಸುತ್ತಲ ಪ್ರಪಂಚವನ್ನೂ ಆರೋಗ್ಯಕರವಾಗಿಯೇ ಇಡುತ್ತಾರೆ ಅಂತ. ನನ್ನ ತಮ್ಮ ನಿನ್ನ ಚಿಕ್ಕಪ್ಪ ಒಮ್ಮೆ ಹೇಳುತ್ತಿದ್ದನಂತೆ" ಏನತ್ತಿಗೇ ನನ್ನ ಗೆಳೆಯರೆಲ್ಲಾ ಹೇಳುತ್ತಿದ್ದರು, ಏನೂ ಅಣ್ಣ ಅಣ್ಣನ ಹೆಂಡತಿ ಮತ್ತು ಮಗು ಮನೆಗೆ ಬರುತ್ತ್ತಲಿದ್ದಾರಾ... ಹಾಗಾದರೆ ರಾತ್ರೆ ನಿದ್ದೆಗೆಡಲು ಈಗಲೇ ಅಭ್ಯಾಸ ಮಾಡಿಕೋ ಅಂತ ಅಂತದ್ದೇನೂ ನಡೆಯಲೇ ಇಲ್ಲವಲ್ಲಾ..ನಮಗಂತೂ ಚಿಕ್ಕ ಮಗುವೊಂದು ಮನೆಯಲ್ಲಿದೆ ಅಂತ ಅನ್ನಿಸಲೇ ಇಲ್ಲ.. ಅಷ್ಟು ಸಾಧುವಪ್ಪಾ ನಿಮ್ಮ ಹುಡುಗ ಅನ್ನುತ್ತಿದ್ದನಂತೆ" ಆದರೆ ನೀನು ನನ್ನ ಬಳಿ ಬರುತ್ತಿರಲಿಲ್ಲ. ನನಗೆ ಆಶ್ಚರ್ಯ ಬೇಸರ ಎರಡೂ ಆಗುತ್ತಿತ್ತು. ನನ್ನಮ್ಮನಲ್ಲಿ ಹೇಳಿಕೊಂಡಾಗ ನಕ್ಕು ಹೇಳಿದ್ದಳವಳು " ಇಲ್ಲ ಮಗಾ, ಚಿಕ್ಕ ಮಕ್ಕಳು ಮೊದಮೊದಲು ಅಮ್ಮನನ್ನು ಹಚ್ಚಿಕೊಳ್ಳುವುದು ಸಹಜ, ಇದೆಲ್ಲಾ ಕೆಲವೇ ಸಮಯ ಅಷ್ಟೇ, ತಾನು ಮತ್ತು ತಾಯಿ ಮಾತ್ರವಲ್ಲ ಬೇರೆಯೂ ವಿಶ್ವವಿದೆ ಅಂತ.ಒಮ್ಮೆ ಅರಿತರೆ ಸಾಕು ವಿಶ್ವವನ್ನು ತೊರಿಸುವಾತ ತನ್ನ ಅಪ್ಪಯ್ಯ ಅಂತ ಗೊತ್ತಾದ ಮೇಲೆ ನೋಡು... ನಿನಗೆ ನಾನು ಹೇಳಿದುದರಲ್ಲಿ ಸತ್ಯವಿದೆ ಅಂತ ಅರ್ಥವಾಗುತ್ತೆ". ಎರಡೇ ತಿಂಗಳು!!! ನನ್ನಮ್ಮ ಹೇಳಿದ ಹಾಗೇ ಆಯ್ತಲ್ಲಾ... ಹೊರಗಡೆ ತಿರುಗಾಡಿಸಲು ನಾನೇ ಬೇಕಿತ್ತಲ್ಲ ನಿನಗೆ, ಆಫೀಸಿಗೆ ಹೋಗುವ ಮೊದಲು, ಆಫೀಸಿನಿಂದ ಬಂದ ಕೂಡಲೇ... ನಿನ್ನನ್ನು ತಿರುಗಾಡಿಸಲೇ ಬೇಕಿತ್ತು. 
 
ಪುಟ್ತಾ ನಿನಗೆ ನೆನಪಿದೆಯಾ ಆ ದಿನ ನಾವೆಲ್ಲಾ ಊರಲ್ಲಿನ ದೇವಸ್ಥಾನ ನಿನಗೆ ತೋರಿಸಿ ವಾಪಾಸ್ಸು ಬರುತ್ತಿದ್ದೆವು.ಬರುವ ದಾರಿಯಲ್ಲಿನ ಗಿಡಮರಗಳನ್ನು ನಿನಗೆ ಪರಿಚಯಿಸುತ್ತಲಿದ್ದೆ. ತೋಟಕ್ಕೆ ತಾಗಿ ಪಕ್ಕದ್ಸಲ್ಲೇ ಹರಿಯುತ್ತಿದ್ದ ನೀರಿನ ತೊರೆ( ತೋಡು) ಯ ಸಂಕ ( ಸಣ್ನ ಸೇತುವೆ- ಅಡ್ಡಲಾಗಿ ಹಾಕಿದ್ದ ಅಡಿಕೆ ಮರ) ದ ಮೇಲಿಂದ ಬರುತ್ತಿರುವಾಗ ನಮ್ಮಿಬ್ಬರ ಭಾರಕ್ಕೆ ಅದು ತುಂಡಾಗಿ ನಾವಿಬ್ಬರೂ ಹರಿಯುತ್ತಿರುವ ನಿರಿಗೆ ಬಿದ್ದಿದ್ದೆವು ನಾನು ಮೊದಲು, ನನ್ನ ಮೇಲೆ ನೀನು. ಅದಕ್ಕೇ ನಿನಗೆ ಪೆಟ್ಟಾಗಿರಲಿಲ್ಲ. ಆದರೆ ಬೀಳುವಾಗಿನ ಹೆದರಿಕೆಯಿಂದ ಹೊರಬರದೇ ನೀನು ಅಳುತ್ತಲೇ ಮನೆಗೆ ತಲುಪಿದಾಗ ಅಜ್ಜನಿಗೆ ಕಂಪ್ಲೈಂಟ್ ಕೊಟ್ಟಿದ್ದೆ. " ಅಜ್ಜಾ ಪಪ್ಪ ನನ್ನನ್ನು ಪಾಂಪೆ( ಸೇತುವೆ) ಯಿಂದ ಕೆಳಗೆ ಬೀಳಿಸಿದ" ಅಜ್ಜನೂ ಹುಸಿ ಹುಸಿಯಾಗಿಯೇ ನನ್ನನ್ನೂ ಬೈದಿದ್ದರು. ಆದರೂ ಹಿಂದಿನಿಂದ ಎಲ್ಲರೂ ನಗುತ್ತಿದ್ದರು.,
"ನೋಡೋಣ ಏಳು ಮರೀ... 
ಈಗ ಒಮ್ಮೆ ಎದ್ದು ಹಾಗೇ ಕಂಪ್ಲೈಂಟ್ ಮಾಡು.
ನೊಡೂ ಅಜ್ಜ ಅಜ್ಜಿ ಎಲ್ಲರೂ ಇಲ್ಲಿಯೇ ಇದ್ದಾರೆ...""
 
ಸಂಭಂದಗಳಿಂದ ನಾವು ದೂರವಿದ್ದರೂ ಸಂಬಂಧಗಳನ್ನು ಉದ್ದೀಪಿಸುವ ಗುಣಗಳನ್ನು ನಿನ್ನಿಂದಲೇ ಕಲಿಯಲೇಬೇಕಿತ್ತು ನಾವೆಲ್ಲಾ. ನಮ್ಮ ಮನೆಗೆ ಒಂದೇ ಒಂದು ಸಾರಿ ಬಂದವರೂ ನಿನ್ನ ಆಪ್ತರೇ ಆಗಿ ಬಿಡುತ್ತಿದ್ದರು. ಆ ಒಂದೊಂದು ಉದಾಹರಣೆಯೂ ಎಲ್ಲಾ ದೊಡ್ದವರೆನ್ನುವರ ಕಣ್ಣೂ ತೆರೆಸುತ್ತದೆ.ಮನೆಗೆ ದಿನಾ ಬರುವ ನಮ್ಮ ಹೂಗಿಡಗಳನ್ನೂನೋಡಿಕೊಳ್ಳುವ ಮತ್ತು ಸ್ನಾನಗೃಹ ತೊಳೆಯುವ ಮಾಲಿಗೆ ನೀನಿತ್ತ ಹೆಸರು ’ ಕಚಡ ಮಾಮ’. ಶಾಲೆಯಿಂದ ಬಂದವನೇ ( ಆಗೆಲ್ಲಾ ನಿನ್ನ ಶಾಲೆ ಹನ್ನೆರಡೂವರೆ , ಒಂದಕ್ಕೆ ಬಿಡುತ್ತಿತ್ತು) ಮೊದಲು ಕೇಳುವ ಮಾತೇ, ಆತ ಇರಲಿ ಇಲ್ಲದಿರಲಿ, ಮಮ್ಮೀ ಕಚಡಾ ಮಾಮನಿಗೆ ತಿಂಡಿ ಕೊಟ್ಟೆಯಾ" ಅಂತ. ಆತ ಮನೆಯಲ್ಲಿ ಆಗ ಇದ್ದರಂತೂ ಆತ ಎಷ್ಟೇ ಪ್ರತಿಭಟಿಸಿದರು ಕೇಳದೇ ಊಟದ ತಟ್ಟೆಯನ್ನು ಅವನು ಯಾವಾಗಲೂ ಕುಳಿತುಕೊಳ್ಳುವ ಹಾಲ್ ನ ಒಂದು ಮೂಲೆಯಲ್ಲಿ ಅವನ ಜತೆಗೇ ಹಾಕಿಕೋಂಡು ಇಲ್ಲೇ ಅವನ ಜತೆಗೇ ಬಡಿಸು ಎನ್ನುತ್ತಿದ್ದೆಯಲ್ಲಾ. ಆತ ಎಷ್ಟೇ ದೂರ ಸರಿದರೂ ನೀನು ಅವನ ಹತ್ತಿರ ಹತ್ತಿರಕ್ಕೆ ತಟ್ಟೆಯನ್ನೂ ಸರಿಸಿಕೊಂಡೇ ಹೋಗುತ್ತಿದ್ದೆ ತಿಂಡಿಯನ್ನು ಜತೆಗೇ ತಿನ್ನಲು. ಆ ಸಂಭಂಧ ಎಷ್ಟು ಆಪ್ತ ಹಾಗೂ ಗಾಢವಾಗಿತ್ತೆಂದರೆ ನಾವು ಬೇರೆಡೆ ವರ್ಗವಾಗಿ ಹೋಗುವಾಗ ಆತ ಅತ್ತೇ ಬಿಟ್ಟಿದ್ದ. ಅಮ್ಮ ಇವರು ದೇವರಂತಹ ಮನುಷ್ಯ ಇವರನ್ನು ಸರಿಯಾಗಿ ಸಾಕಿ ಎಂದು ಬಿಕ್ಕಿ ಬಿಕ್ಕಿ ಅತ್ತು ಹೇಳುತ್ತಿದ್ದ. ನಮ್ಮೆಲ್ಲರ ಕಣ್ಣೂಗಳೂ ಹನಿಗೂಡಿದ್ದವು ಆಗ. ಅವನ ಮಾತುಗಳು ಇನ್ನೂ ನನ್ನ ಕಿವಿಗಳಲ್ಲಿ ಅನುರಣಿಸುತ್ತಿವೆ, 
ಇನ್ನೊಮ್ಮೆ ನೀನು ಯಾವಾಗ ಹಾಗೆ ಹೇಳುತ್ತೀ..??
 
 
 
ಅಮ್ಮ
 
ಎಲ್ಲವೂ ಈಗಲೇ ಯಾಕೆ ನೆನಪಾಗಿ ನನ್ನ ಮನಸ್ಸನ್ನು ಘಾಸಿ ಮಾಡುತ್ತಿದೆಯೋ ಗೊತ್ತಾಗುವುದಿಲ್ಲ ಕಣೋ, ಊರಿಗೆ ಹೋದಾಗ ಮೊದಲ ಸಾರಿ ನನ್ನ ಚಿಕ್ಕಪ್ಪನ ಮನೆಯಲ್ಲಿ ( ನಿನ್ನ ಅಜ್ಜನ ಮನೆ) ಎಲ್ಲರೂ ಊಟಕ್ಕೆ ಕುಳಿತಾಗ ನೀನು ಚಕ್ಕಳ ಮಕ್ಕಳ ಹಾಕಿಕೊಂಡು ಊಟಕ್ಕೆ ಕುಳಿತು ಬಿಟ್ಟೆ ಅದನ್ನು ನೋಡಿ ಅವರು ಎಂತಹ ಸಂಸ್ಕಾರ ಕಲಿಸಿದ್ದೀ ಮಗನಿಗೆ ಭೇಷ್ ಎಂದಿದ್ದರು, ನಾವು ನಿನಗೆ ಕಲಿಸಿದ್ದಕ್ಕಿಂತ, ನೀನು ಸ್ವತಃ ಕಲಿತದ್ದು ಮತ್ತು ನಮಗೆ ಕಲಿಸಿದ್ದೂ ಜಾಸ್ತಿ ಕಣೋ.ನಾವು ಆಗ ಬೊಂಬಾಯಿಯಲ್ಲಿದ್ದೆವು, ನನ್ನ ಅಪ್ಪ ಅಮ್ಮ ಊರಿಂದ ಬರುವವರಿದ್ದರು. ಏನನ್ನುತ್ತಾರೋ   ಅಂತ ನಮಗೆ ಆತಂಕವಿದ್ದರೆ, ಒಂದು ವರ್ಷದವನಾದ ನೀನು ಅವರೊಡನೆ ನನ್ನ ಅಜ್ಜ ನನ್ನ ಅಜ್ಜ ಅಂತ ಹಿಂದೆ ಮುಂದೆ ತಿರುಗಾಡುತ್ತ ಕ್ಷಣದಲ್ಲೇ ಆಪ್ತವಾಗಿಬಿಟ್ಟೆ, ಮೂಲತಃ ಉಪಾಧ್ಯಾಯ ವ್ರತ್ತಿಯವರಾದ ಅವರು ಕಥೆ ಹೇಳೋದೇನು, ಕಲಿಸೋದೇನು, ಜತೆಗೆ ನಿನ್ನ ಮಮ್ಮಿಗೇ  ಒಳೆಯ ರೀತಿಯಲ್ಲೇ ಸಾಕಿದ್ದೆ ಮಗನನ್ನ ಅಂತ ಬಿರುದು ಬೇರೆ ಕೊಟ್ಟಿದ್ದರು. ಇಲ್ಲಪ್ಪಾ ಯಾರಿಗೂ ಗೊತ್ತಾಗಲೇ ಇಲ್ಲವಲ್ಲ, ಎಂತಹ ವಿಚಿತ್ರವಿದು ನೋಡು. ಅದಕ್ಕೇ ಏನೋ ಲೆಕ್ಕದಲ್ಲೂ ಅಷ್ಟೇ ನೀನು ಒಂದನೇ ವರ್ಷ (ಕೇ ಜಿ) ಲ್ಲಿರುವಾಗಲೆ ಎರಡನೆಯ( ಅಪ್ಪರ್ ಕೇ ಜಿ) ಕ್ಲಾಸಿನ ಗಣಿತವನ್ನೂ ಕರಾರುವಾಕ್ಕಾಗಿ ಕ್ಷಣದಲ್ಲಿ ಮಾಡುತ್ತಿದ್ದೆ. ನಿನ್ನನ್ನು ಎರಡನೇ ಕ್ಲಾಸಿಗೆ ಸೇರಿಸುವಾಗ ಆ ಟೀಚರ್ ಗೆ ಈ ವಿಷಯ ಹೇಳಿದರೆ ಅವಳು ಏನೆಂದಳು ಗೊತ್ತಾ..?" ಏನೂ ತೊಂದರೆಯಿಲ್ಲ ಬಿಡಿ, ಮುಂದಿನ ೬ ತಿಂಗಳು ಅವನ ಹತ್ತಿರ ಗಣಿತವನ್ನು ಕಲಿಸುವುದೇ ಇಲ್ಲ ನಾನು ತನ್ನಿಂತಾನೇ ಆತ ಬೇರೆ ಎಲ್ಲ ಮಕ್ಕಳ ಮಟ್ಟಕ್ಕೆ ಬರುತ್ತಾನೆ , ನೋಡು ಕೆಲವರ ಬೌದ್ಧಿಕ ಮಟ್ಟ ಹೇಗಿರುತ್ತದೆ ಅಂತ.
 
ಆದಿನ ಅವರ ಸ್ನೇಹಿತರೊಬ್ಬರು ಮನೆಗೆ ಬಂದಿದ್ದರು. ನೀನು ಮನೆಯ ಒಳಗೆಲ್ಲೋ ಇದ್ದೆ.  ಆ ದಿನವೇ ನಿನಗೆ ಸಿಕ್ಕಿದ ಹೊಸ ಕಪ್ಪು ಮಿಂಚುತ್ತಿತ್ತು ಮೇಜಿನ ಮೇಲೆ. ಅಪ್ಪ ಬಂದ ಕೂಡಲೇ ಅದನ್ನು ಕಾಣಲಿ ಅಂತ ನೀನೇ ಇಟ್ಟಿದ್ದೆ.  ಅದು ಕಣ್ಣಿಗೆ ಬಿದ್ದಾಗ ಸಹಜವಾಗಿ ಅವರು ಕೇಳಿದರು, ಯಾವುದರಲ್ಲಿ ಸಿಕ್ಕಿತ್ತು ಎಂದರೆ "ಉತ್ತಮ  ಧಿರುಸು ಧರಿಸುವುದರಲ್ಲಿ" ಎಂದಿದ್ದೆ ನಾನು. ದಿನಾ ಬಿಳಿ ಚಡ್ಡಿ ಬಿಳಿ ಅಂಗಿ ಅದು ಇಸ್ತ್ರಿ ಹಾಕಿದ ಠಾಕು ಠೀಕಿನ ಧಿರುಸು ತೊಟ್ಟು ಹೊರಟಾಗ ಎಲ್ಲರೂ ಅವನತ್ತ ತಿರುಗಿ ನೋಡಬೇಕು ಅನ್ನಿಸುವುದು. ದಿನಾ ದೃಷ್ಟಿ ತೆಗೆದೇ ಅವನನು ಮನೆಯೊಳಕ್ಕೆ ಕರೆಯುವುದು ನಾನು. ಹೌದಾ ಕರಿಯಿರಿ ಅವನನ್ನು ಅಂದಾಗ ನಾನುಕರೆದಾಗ ಒಳಗಿನಿಂದ ಹಾಗೇ ಓಡಿ ಬಂದಿದ್ದೆ ನೀನು ಹುಟ್ಟುಡುಗೆಯಲ್ಲಿ.ಅಂದು  ಎಲ್ಲರೂ ನಕ್ಕಿದ್ದೆವು .............. ಇಲ್ಲ... ಈಗ ಜಪ್ಪಯ್ಯ ಅಂದರು ಹೊರ ಬರಲಾಗದು ಆ ನಗು. 
 
ಕೆಳಮನೆಯ ರಾವ್ ಅವರ ಹೆಂಡತಿಯೊಮ್ಮೆ . ಮನೆಯ ಇದಿರು ಕುಳಿತುಕೊಂಡಿರುವಾಗ ( ನೀನೂ ಬಂದಿದ್ದೆ ಅಲ್ಲಿಗೇ.) ತನ್ನ ಕೈಯ್ಯಲ್ಲಿರುವ ಕೋಲನ್ನು ತೋರಿಸಿ ಕೇಳಿದರವರು" ಯಾಕೋ ನನ್ನ ಮಗನಿಗೆ ಹೊಡೆದೆಯಂತಲ್ಲಾ ಎಷ್ಟು ಧೈರ್ಯ ನಿನಗೆ..? ಅದು ಹೇಗೆ ಹೊಡೆದೆಯೋ  ಹೇಳು..?" ಅವರ ಮುಖವನ್ನೇ ನೋಡುತ್ತಾ ಹೇಳಿದ್ದೆ ನೀನು  " ಆ ಕೋಲು ಕೊಡಿ ಆಂಟೀ" ನಿನ್ನ ಪ್ರಶ್ನೆಗೆ ಮರು ಮಾತನಾಡದೇ ಕೋಲು ಕೊಟ್ಟಿದ್ದರವರು.  ಅವರ ತೆರೆದ ಅಂಗೈ ಮೇಲೆಯೇ ಅದೇ ಕೋಲಿನಿಂದ ಒಂದು ರಪ್ಪನೆ ಕೊಟ್ಟು " ಹೀಗೇ ಹೊಡೆದಿದ್ದೆ ಆಂಟೀ" ಅಂದಿದ್ದೆ ನೀನು. ಅವರು ನಿನ್ನ ಧೈರ್ಯ ನೋಡಿ ಬೆಕ್ಕಸ ಬೆರಗಾಗಿದ್ದರು. ಮೆಚ್ಚಿದ್ದರು ನಾವೆಲ್ಲರೂ ಮನಸೋ ಇಚ್ಛೆ ನಕ್ಕಿದ್ದೆವು , ಆ‌ಅ ನಗುವಿನಲ್ಲೇ ನೀನೂ ಶಾಮೀಲಾಗಿದ್ದೆ.
 
ಇನ್ನೊಮ್ಮೆ ಅವರೆಲ್ಲ ಬೆಳಗಿನ ತಿಂಡಿ ತಿನ್ನುತ್ತಿದ್ದಾಗ ನೀನು ಅಲ್ಲಿಗೆ ಹೋಗಿದ್ದೆ. ಎಲ್ಲರ ಪ್ಲೇಟಿನಲ್ಲಿದ್ದ ಮೊಟ್ಟೆಯನ್ನು ನೋಡಿ ನಿನಗೇನನ್ನಿಸಿತ್ತೋ. ಅವರು ತಿನ್ತೀಯಾ ಅಂದರೆ ನೀನು ಹ್ಞೂ ಅಂದು ಬಿಟ್ಟಿದ್ದೆ. ಅವರು ಖುಷಿಯಿಂದ ನಿನಗೂ ಬಡಿಸಿದ್ದರು. ಅವರಿಗೆ ಗೊತ್ತಿತ್ತು ನಾವು ಸಸ್ಯಾಹಾರಿಗಳು ಅಂತ. ಬಾಯಿಯವರೆಗೆ ಕೊಂಡು ಹೋದ ನೀನು ಆಂಟಿ ಇದು ವಾಸನೆ ಬರ್ತಿದೆ ಬೇಡ ನಿಮಗೆ ಇಡ್ಲಿ  ಮಾಡಲು ಬರಲ್ಲಾ, ನನ್ನ ಅಮ್ಮನಿಂದ ಕಲಿತುಕೊಳ್ಳಿ ಎಂದಿದ್ದೆ. ನಿನ್ನ ಮಾತು ಕಡು, ನೇರ ಸತ್ಯ ಆದರೂ ನಡವಳಿಕೆ ಆಪ್ತ, .ಸ್ವಲ್ಪ ದೊಡ್ಡವನಾದಾಗ ಕೇಕು ಕೊಟ್ಟರೂ ಇದರಲ್ಲಿ ಮೊಟ್ಟೆ ಇದೆಯಾ ಅಂತ ಕೇಳ್ತಿದ್ದೆ. ನೀನು ಯಾಕೋ ಮೊಟ್ಟೆ ಹಾಕಬಾರದಾ ಅಂತ ಯಾರಾದರೂ ಕೇಳಿದರೆ ಅದರಲ್ಲಿ ಒಂದು ಚಿಕ್ಕ ಕೋಳಿ ಮರಿ ಇರುತ್ತದೆ, ಅದನ್ನು ಕೊಂದ ಹಾಗೆ  ಅನ್ನುತ್ತಿದ್ದೆ ನೀನು. ಈಗ ನಾವೇ ನಿನ್ನ ಆಸ್ಥಿತಿಗೆ ತಂದೆವಲ್ಲಾ ಪುಟ್ಟಾ....
 
ಅಪ್ಪ 
 
ನೋಡಿ ಕರುಳು ಚುರುಕ್ ಎಂತು
ಮುದ್ದಾದ ಕಂಗಳಲ್ಲಿ ತುಂಬಿದ ಕಣ್ಣೀರು
ದಿನಾ ಎತ್ತಿ ಮುದ್ದಿಡುತ್ತಿದ್ದ ಮುಖವೀಗ............. ತುಂಬು ಕಳವಳ ಆತಂಕ ನನಗೆ
ಸಿಟ್ಟಾ ಕಂದ..?
ಇಲ್ಲ ಮುಖ ಆ ಕಡೆ ತಿರುಗಿಸಿತು ಪಾಪು.. ಅಂದರೆ ಪಕ್ಕಾಸಿಟ್ಟಾಗಿದ್ದಾನೆ
ನೋಡು ಇಲ್ಲಿ ..ಏನಿದು..??? ಇಲ್ಲ........ ಇಂತಾ ಚೀಪ್.......... ಟ್ರಿಕ್ ನಡೆಯದು ...........ಈಗಂತೂ
ಅವನದ್ದೇ ಆದ ಗತ್ತಿನಲ್ಲಿ ಸ್ವಲ್ಪ ಈಕಡೆ ತಿರುಗಿಸಿದ ಮುಖ.....
ಕಂಡ ಅರ್ಧ ಮುಖ..... ಎದೆಯಾಳದಲ್ಲೆಲ್ಲೋ ಭಗ್ಗನೆ ಜ್ವಲಿಸಿದ ಚಳಿಯೊಮ್ಮೆಲೇ ಮೈಯ್ಯ ಅಣು ಅಣುವೂ ವ್ಯಾಪಿಸಿ ಅಲುಗಾಡಿಸಿ ಬಿಟ್ಟಿತು.
 
"ಯಾರ್ರೀ........... ನೀವಾ ಈ ಮಗುವಿನ ಅಪ್ಪ ಅಮ್ಮ, ಏನ್ರೀ ಮಕ್ಕಳನ್ನು ಸಾಕುವುದು ಹೀಗೇನಾ.... ನೀವು??"
 
ನನ್ನ ದನಿಯಲ್ಲಿ ನಂಗೇ ನಂಬಿಕೆಯಿಲ್ಲ...  
 
"ಯಾ......ಯಾಕೆ ಏನಾಯ್ತೀಗ....?" ಕಂಪಿಸಿತಾ ಸ್ವರ..?
 
ಹೌದು ಯಾಕೆ ನಮಗೆ ಗೊತ್ತಾಗಲಿಲ್ಲ, ನಮ್ಮದೇ ರಕ್ತ ಮಾಂಸ ಹಂಚಿ ಬೆಳೆದ ಪುಟ್ಟಕಂದ....ಇವ, 
ಈ ನಾಲ್ಕು ವರ್ಷಗಳಲ್ಲಿಯೂ ..........ನಮಗೆ ಗೊತ್ತಾಗಲೇ ಇಲ್ಲ  ಅಂದರೆ
ಒಂದು ಸಾರಿಯೂ ಈ ವ್ಯತ್ಯಾಸ ಗೊತ್ತಾಗಲೇ ಇಲ್ಲ....ಯಾಕೆ..?  ಯಾಕೆ??
ಈಗಲಂತೂ   ವ್ಯತ್ಯಾಸ ಸರಿಯಾಗಿ ಗೊತ್ತಾಗ್ತಾ ಇದೆ........ ಅದೂ     ಅವರು.......ಆ.......... ಡಾಕ್ಟರ್ ಹೇಳಿದ ಮೇಲೆ.
ಮುದ್ದಾದ ರೇಶ್ಮೆಯಂತ ಮುಖದ ಮೇಲೆ ಹಣೆಯಿಂದ ಮೂಗಿನ ನೇರಕ್ಕೆ ಗೆರೆ ಎಳೆದರೆ ವ್ಯತ್ಯಾಸ ಸರಿಯಾಗಿ ಅರ್ಥವಾಗುತ್ತೆ ನಿಮಗೆ
ಪಾಪುವಿನ ಮುಖದಲ್ಲಿ ಎಡಬದಿ ಮತ್ತು ಬಲಬದಿಯಲ್ಲಿನ ವ್ಯತ್ಯಾಸ...
ಮುಖದ ಎಡಬಾಗ ಸಣ್ಣದು ಬಲಭಾಗ ದೊಡ್ಡದು, ವ್ಯತ್ಯಾಸ ಎದ್ದು ಕಾಣುತ್ತಿದೆ........... ಈಗ .... ಅವರು ಹೇಳಿದ ಮೇಲೆ..
ಯಾಕೆ ಗೊತ್ತಾಗಲಿಲ್ಲ..........?........ ಯಾಕೆ?. ಯಾಕೆ??......... ಯಾಕೆ..????.
"ನೋಡಿ... "           ಮುಂದುವರಿಸಿದರು ಅವರು..
"ಮರಿ ಈಕಡೆ ತಿರುಗು.. ........."  
ಗಲ್ಲ ಎಡಗಡೆ ತಿರುಗಿಸಿತು......... ಪಾಪು, ಗಲ್ಲ ಬುಜಕ್ಕೆ ತಾಗಿತು.  
"ಈಗ....... "   
ಈ ಕಡೆ ತಿರುಗು ಮರಿ............. ನೋಡೋಣ"
ಪಾಪು ಪ್ರಯತ್ನಿಸಿತು  ಸ್ವಲ್ಪ ..........ಅಷ್ಟೆ
ಇಲ್ಲ......... ಈ ಕಡೆ ಹೋಗುತ್ತಿಲ್ಲ ಮುಖ.. ಪ್ರಯತ್ನ ಪಟ್ಟರೂ... ಸಹ 
 ಆರೂ.........        ಕಣ್ಣುಗಳಲ್ಲೀಗ ಮಡುಗಟ್ಟಿದೆ  .......ಕಂಬನಿ
 
ಈ ಮಗುವಿನ ತಂದೆ ..ತಾಯಿ ನಾವೇ..................??
 
ಯಾಕೆ ಹೀಗಾಯ್ತು............ ಎಲ್ಲಿ ತಪ್ಪಾಯ್ತು????
 
 
"ರೀ ನೋಡಿ ಒಂದೇ ಕಡೆಯ ಹಾಲು ಮಾತ್ರ ಕುಡಿಯುತ್ತಿದ್ದಾನೆ ಪಾಪು, ಇನ್ನೊಂದು ಕಡೆ ಮುಖವೂ ತಿರುಗಿಸುತ್ತಿಲ್ಲ, ಮಲಗುವಾಗಲೂ....."
ನನ್ನವಳು ಹೇಳಿದ್ದಳು..........ಮೊದ ಮೊದಲು...............  ಇದೇ ಪಾಪು ಚಿಕ್ಕವನಿರುವಾಗ
ಈಗ ನೆನಪಾಗುತ್ತಿದೆ 
ಒಂದೇ ಕಡೆ ಮುಖ ಮಾಡಿ ಮಲಗುತ್ತಿದ್ದ.
ಒಂದೊಂದೇ ಈಗ ಅರ್ಥವಾಗುತ್ತಿದೆ. 
ಈಗ ..........ಇವರು ಹೇಳಿದ ಮೇಲೆ
ಪಾಪುವಿನ ಬಲ ಕಿವಿಯ ಕೆಳಗಿನ ಕುತ್ತಿ‌ಗೆಯಿಂದ ನೇರವಾಗಿ ಮೇಲೆ ಬರುತ್ತಿದ್ದ ನರವೊಂದು ಗಟ್ಟಿಯಾಗಿದೆ......... ನಮ್ಮೆಲ್ಲರ ನರದಂತೆ ಮೆತ್ತಗಿಲ್ಲ!!!!
ಮುಂದುವರಿಸಿದರು ಅವರು
"ಹೀಗೇ ಬಿಟ್ಟಿದ್ದರೆ......... ಏನಾಗುತ್ತಿತ್ತು ಗೊತ್ತಾ..?"
 
ಕೇಳಿ ಕಿವಿಯಲ್ಲಿ ಕಾದ ಎಣ್ಣೆ ಹೊಯ್ದ ಹಾಗಾಯ್ತು!!!
 
"ಮುಖಕ್ಕೆ ರಕ್ತ ಸರಿಯಾಗಿ ಸರಬರಾಜಾಗದೇ ಎಡ ಮತ್ತು ಬಲಗಡೆಯ  ವ್ಯತ್ಯಾಸ ಜಾಸ್ತಿಯಾಗುತ್ತಾ ಹೋದ ಹಾಗೇ ಒಂದೋ ಪಾರ್ಶ್ವ ವಾಯು ಬರಬಹುದು ಅಥವಾ ... "  ನಿಲ್ಲಿಸಿದರು ಅವರು
 
."........ಅಥವಾ ಏನು ಸಾರ್..?"  ಹೇಗೋ ಕಷ್ಟ ಪಟ್ಟು     .........ಕೇಳಿದೆ 
"ಮುಂದೆ......."
ಉ... ಉಹ್ಞು  ..........ಕೇಳಲಾಗಲಿಲ್ಲ .......ನನಗೆ!!
 
ನಮ್ಮ ಪ್ರೀತಿಯ ಕಂದಮ್ಮ ತಾನು ಏನೂ  ತಪ್ಪು ಮಾಡದೇ... ಜೀವ ಮಾನವಿಡೀ......... ಅಂಗ........ ವಿಕಲನಾಗಿ ಅಥವಾ..... ಹಾಗೇ ಮುಖದ ವ್ಯತ್ಯಾಸ ಜಾಸ್ತಿಯಾಗುತ್ತಾ ಹೋಗಿ... ಮ...... ರ........ಣ..
 
ಯಾಕೋ ಕಣ್ಣ ಮುಂದಿನ ಏನನ್ನೂ ಕಾಣಲಾಗುತ್ತಿಲ್ಲ ನನಗೆ... ಏನಾಯ್ತು, ನನಗೇನಾದರೂ....
"ರೀ ಕಣ್ಣೊರೆಸಿಕೊಳ್ಳಿ.. ಮಗು ನೋಡಿದರೆ ಕಷ್ಟ.."    ನನ್ನವಳು
"ಈ..... ........."  ಗದ್ಗದಿಸಿತು ಕಂಠ. 
"ಇದಕ್ಕೆ ಪರಿಹಾರ.. ಇಲ್ಲವೇ ಡಾಕ್ಟರ್?" ನನ್ನ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಕೇಳಿದ ಪದ ಅದು.
 
"ಮತ್ತಿನ್ನೇನು ... ಆಪರೇಷನ್!!!"
ಇಷ್ಟು ಚಿಕ್ಕ ಮಗುವಿಗೆ.................... ಆಪರೇಷನ್..?
ನವಂಬರ್ ೨೧ ಕ್ಕೆ ನಾಲ್ಕು ತುಂಬುತ್ತದೆ ಪಾಪುಗೆ, ನಾಲ್ಕೂ ತುಂಬದ ಮಗುವಿಗೆ...
"ಮೂರು ವರ್ಷದ ಮೊದಲೇ ಮಾಡ ಬೇಕಿತ್ತು ಈ ಆಪರೇಶನ್..."
"ಆಗ ಈತ ಹುಟ್ಟಿದ್ದಷ್ಟೇ ಡಾಕ್ಟರ್.....".  ನನ್ನ ...ವ್ಯಂಗ್ಯ...!!!!!
"ಹೌದು....... ಆಗಲೇ..........."   ದನಿ ಮೊದಲಿಗಿಂತ  ಗಡುಸಾಗಿತ್ತು..
"ಕಿವಿಯ ಪಕ್ಕದ ಗಟ್ಟಿಯಾದ ನರವನ್ನು ಕೊಯ್ದು ಒಳಗಿನ ಗಟ್ಟಿ ರಕ್ತವನ್ನು ಹೊರತೆಗೆದು ಪುನ ಮೊದಲಿನ ಹಾಗೇ ಹೊಲಿದಿಡಬೇಕು.
ಆತನ  ಎದೆಯ ಭಾಗ ದೊಡ್ಡದಿದ್ದುದರಿಂದ ಅವನು ಹುಟ್ಟುವಾಗ ದಾದಿ ತಿಳಿಯದೆಯೋ ತಿಳಿದೋ ಫೋರ್ಸೆಪ್ಸ್ ಉಪಯೋಗಿಸುವಾಗ ಆದ ಅನಾಹುತವಿರಬೇಕಿದು............"
ಈ ಡಾಕ್ಟರುಗಳು ಖಂಡಿತಾ ಪಾಷಾಣ ಹೃದಯಿಗಳು
ಅಲ್ಲ ಇಷ್ಟು ಚಿಕ್ಕ ಮಗುವಿಗೆ ಆಪರೇಷನ್ನಾ..?
 
( ನಾಳೆಗೆ ಮುಂದುವರಿಯುವುದು)
***********  **************  *********  **********
 
 
 
 
ಮನಸ್ಸಿನ ನೋವು ನನ್ನನ್ನು ಎಷ್ಟು ಘಾಸಿಗೊಳಿಸಿತ್ತೆಂದರೆ ಹಿಡಿದು ಒಂದು ಕಡೆ ಕುಳ್ಳಿರಿಸಲೂ ಕಷ್ಟವಾಗಿತ್ತು. 
ಮಗನ ತಲೆ ಬೋಳಿಸಿಕೊಳ್ಳುವುದು ಅವನ ತಂದೆ ಅಥವಾ ತಾಯಿ  ಸತ್ತ ಸಂದರ್ಭದಲ್ಲಿ 
ಇಲ್ಲಿ ಸ್ವತಃ ಜೀವಂತವಿದ್ದ  ತಂದೆಯೇ ತನ್ನ ಮಗನ ತಲೆ ಬೋಳಿಸುತ್ತಿದ್ದಾನೆ, 
ಹೌದು ಪುಟ್ಟಾ, ನಿನ್ನ ತಂದೆ ಇದ್ದರೂ ಇಲ್ಲದಂತೆ ಈ ಕ್ಷಣ.
ನಿನ್ನ ಗಲಾಟೆ ಹದ್ದು ಮೀರಿದ್ದು.
ನಾನು ಮಾತ್ರ ಯಾಕೆ ಕಟ್ ಮಾಡಿಕೋ ಬೇಕು..?, ನನ್ನ ಜತೆ ನೀನೂ ತಲೆ ಕೂದಲು ಕಟ್ ಮಾಡಿಕೋ. ಪಕ್ಕದವರದ್ದೂ ಮಾಡು
ಕ್ಷೌರಿಕನದ್ದು ಒಂದೇ ವರಾತ ನೀವು ಸರಿಯಾಗಿ ಹಿಡಿದುಕೊಂಡಿಲ್ಲ ಮಗುವನ್ನ.... ಸರಿಯಾಗಿ ಗಟ್ಟಿಯಾಗಿ ಹಿಡಿದುಕೊಳ್ಳಿ
ಮಗುವನ್ನು ಮಾತ್ರವೇನಾ, ನನಗೆ ಮನಸ್ಸನ್ನೂ , ಹೃದಯವನ್ನೂ ಗಟ್ಟಿ ಮಾಡಿಕೊಳ್ಳಲೂ ಬರಲ್ಲವಲ್ಲಾ ಏನು ಮಾಡಲಿ .....
ಕ್ಷೌರಿಕನಿಗೆ ಇದು ಹೇಗೆ ತಿಳಿದೀತು....? ಇದು ಅವನಿಗೆ ನಿತ್ಯ ಸಾಮಾನ್ಯ ...
ಅಳಲಾಗದು, ದುಃಖ ಒತ್ತೊತ್ತಿ ಬಂದರೂ,............. ಯಾಕೆಂದರೆ ಗಂಡಸರು ಅಳಬಾರದಲ್ಲಾ.....
ಕೂದಲೆಲ್ಲಾ ತೆಗೆದು ಬೋಳಾದ  ಮುಖ ನೋಡಿದರೆ ಮುಖದ ಎಡ ಬಲಗಳ ವ್ಯತ್ಯಾಸ ನಿಖರವಾಗಿ ಕಾಣುತ್ತಿತ್ತು.
ನಮ್ಮನ್ನು ಬಿಟ್ಟು ಈ ಪ್ರಪಂಚದಲ್ಲಿ ಇರುವವರೆಲ್ಲರೂ ಸುಖಿಗಳೇ.......
ಸ್ವತಃ ತಂದೆ ತಾಯಿ ಮಗನನ್ನು ಕೊಂಡು ಹೋಗುತ್ತಿದ್ದಾರೆ...
ಮನೆಗೋ....ಮಸಣಕ್ಕೋ ... ಯಾರೂ ಹೇಳಲಾರರು.
ಒಂದು ಕ್ಷಣ ಈ ಒಂದು ಕ್ಷಣ ಕಳೆಯಲಾರದಂತಹ ನಮಗೆ ಇಡೀ ರಾತ್ರೆ ........... ಹೇಗೆ ಕಳೆದೀತು.....
 
ಅಮ್ಮ
 
ನೋಡಿ ರಾತ್ರೆಯಿಡೀ ನೀರು ಕೂಡಾ  ಕೊಡಲೇ ಬಾರದು
ಕೊಟ್ಟರೆ ಆಪರೇಶನ್ ಕಷ್ಟವಾಗುತ್ತೆ
ಕೆಮ್ಮಂತೂ ಬರಲೇ ಬಾರದು ರಕ್ತ ಶ್ವಾಸ ಕೋಶದೊಳಗೆ ನುಗ್ಗಿದರೆ ಮತ್ತೆ ಯಾರೂ ಬದುಕಿಸಲಾರರು ನಿಮ್ಮ ಮಗುವನ್ನ, ಆಪರೇಶನ್ ನ ದಿನ ಗೊತ್ತಾದ ಮೇಲೆ ಮಗುವಿಗೆ ಶೀತ ಆಗದ ಹಾಗೆ ನೋಡಿಕೊಂಡಿರಿ, ಶೀತವೆಂದರೆ ಪುನಹಃ  ಕೆಮ್ಮು...ಬರಲೂ ಬಹುದು.....
ಎಚ್ಚರಿಕೆ,ಎಚ್ಚರಿಕೆ,.......  ಎಚ್ಚರಿಕೆ,.................ಎಚ್ಚರಿಕೆ!!!!!
ಪಾಪು ರಾತ್ರೆಗೆ ಜಾಸ್ತಿ ನೀರು ಕುಡಿಯುತ್ತಾನೆ, ೨-೩ ಸಲವಾದರೂ ನೀರು ಕೇಳಿಯೇ  ಕೇಳುತ್ತಾನೆ ಮನೆಯಲ್ಲಿ
ಯಾಕಮ್ಮ ನೀರು ಕೊಡೋಲ್ಲ ನೀನು....
ಆಪರೇಷನ್ ನಾಳೆ ಬೆಳಿಗ್ಗೆ 
ಅಲ್ಲಿಯವರೆಗೆ ಈತನಿಗೆ ಊಟವಿಲ್ಲ ತಿಂಡಿ ಇಲ್ಲಾ
ಹಲ್ಲು ಕಚ್ಚಿ ಕುಳಿತಿದ್ದೆ. ಅವುಡು ಗಟ್ಟಿಯಾಗಿ ಕಚ್ಚಿದ್ದಕ್ಕೋ ಏನೋ ರಕ್ತ ಒಸರಿತು... ಬಾಯೆಲ್ಲಾ ಉಪ್ಪುಪ್ಪು.
ಇದೇ ರಕ್ತ ಹಂಚಿಕೊಂಡು ಹುಟ್ಟಿದ್ದ ಪಾಪು.
 
ಇಲ್ಲಿಯವರೆಗೆ ಅವನು ಉಸುರಿದ ಪ್ರತಿ ವಸ್ತುವೂ ಪ್ರತ್ಯಕ್ಷ ಆಗುತ್ತಿದ್ದವು ಮರುಕ್ಷಣದಲ್ಲಿ...
ನಮ್ಮಿಬ್ಬರ ಪ್ರೀತಿಯ ಗಂಗೆಯಲ್ಲಿ ಮುಳುಗೇಳದ ದಿನವಿಲ್ಲ, ಕೆಲವೊಮ್ಮೆ ಇವರೇ ಜಾಸ್ತಿ ಪ್ರೀತಿ ಒಳ್ಳೆಯದಲ್ಲ ಅನ್ನುತ್ತಿದ್ದರು, ಆದರೂ ಅವನು ಕೇಳಿದ್ದನ್ನೆಲ್ಲಾ ಮೊದಲು ತಂದು ಕೊಡುವುದು ಅವರೇ.
 
" ಅಮ್ಮಾ ಹಸಿವೂ... ಸ್ವಲ್ಪ ನೀರಾದರೂ ತಂದು ಕೊಡು.."
ಅಮ್ಮಾ....
ಇಲ್ಲ ಕೊಡಲಾರೆ... ಕೊಡಲಾಗದು..
ಕಲ್ಲಿನಂತೆ ಕುಳಿತಿದ್ದೆ... ದೇವರೇ  ನನಗೇ ಯಾಕೆ ಈ ಶಿಕ್ಷೆ..??
ಹೋಗಲಿ ಎಂದರೆ ... ನೀ..ರೂ ಕೂಡಾ ಇಲ್ಲ...ಕೊಡಲೇ ಬಾರದು.
ದೇವರೇ ......
ಯಾಕಾಗಿ ಈ ಶಿಕ್ಷೆ
ಅಮ್ಮಾ ನೀರೂ.............. 
 
ಕಣ್ಣಲ್ಲಿ ಪಳಕ್ಕನೆ ಉಕ್ಕಿತು, ಆದರೂ ಕುಳಿತಿದ್ದೆ , ಮನಸ್ಸನ್ನು ಕಲ್ಲು ಮಾಡಿಕೊಂಡು, ಮುಖ ಆ ಕಡೆ ತಿರುಗಿಸಿದ್ದೆ.......    ಗೊತ್ತಾಗಬಾರದಲ್ಲ.
ಸೆರಗು ಹಿಡಿದು ಎಳೆಯುತ್ತಾ ಇದ್ದಾನೆ, 
ಪಕ್ಕದಿಂದ ಗೊತ್ತಾಗುತ್ತಿದೆ ಅವನ ಬಾಯಿ ಒಣಗಿದೆ ಸ್ವರವೂ ...........
ನಿನ್ನ ಹತ್ತಿರವಿಲ್ಲದಿದ್ದರೆ ಹೋಗಲಿ, ಪಕ್ಕದಲ್ಲಿ ಆಂಟಿಯ ಹತ್ತಿರ ಇದೆಯಲ್ಲ ತೆಗೆದು ಕೊಡಮ್ಮಾ........... ನನಗೆ ಅಂತ ಕೇಳಿದರೆ ಕೊಡುತ್ತಾರೆ........ಅಮ್ಮಾ...
ಇದಕ್ಕಿಂತ ನಾನು ಸತ್ತರೇ ಒಳ್ಳೆಯದಿತ್ತು.....
ಮಧ್ಯಾನ್ನದಿಂದ ಏನೂ ಹೋಗಿರಲಿಲ್ಲ ಮಗುವಿನ ಹೊಟ್ಟೆಗೆ.......... ಊಟ... ತಿಂಡಿ..... ಬೇಡ ..... ಒಂದು... ಹನಿ.......... ನೀರೂ..... ಸಹಾ
ನನ್ನೆದೆ ಬೆಂಕಿಯ ಜ್ವಾಲೆಯಲ್ಲಿ ನಾನೇಕೆ ಸುಟ್ಟು ಕರಗಿ ಹೋಗುವುದಿಲ್ಲ........
ಅಮ್ಮಾ..... 
ಕರಗುತ್ತಿದ್ದೇನಾ..... 
ಇಲ್ಲ..... ನಾನು ...........ಕರಗಬಾರದು
ಇಲ್ಲ ಹಲ್ಲು ಕಚ್ಚಿ ಕುಳಿತಿದ್ದೆ, ಅವುಡು ಗಟ್ಟಿಯಾಗಿ ಕಚ್ಚಿದ್ದಕ್ಕೋ ಏನೋ ರಕ್ತ ವಸರಿತು, ಬಾಯೆಲ್ಲಾ  ಉಪ್ಪುಪ್ಪು 
ಇದೇ ರಕ್ತ ಹಂಚಿಕೊಂಡು ಹುಟ್ಟಿದ ಪಾಪು.
ಇಲ್ಲಿಯವರೆಗೆ ಅವನು ಉಸುರಿದ ಪ್ರತಿ ಶಬ್ದವೂ  ಕೇಳಿದ ವಸ್ತು ಉಧ್ಭವ ಆಗುತ್ತಿತ್ತು, ಆ ಕ್ಷಣದಲ್ಲಿ....
 
ನಮ್ಮಿಬ್ಬರ ಪ್ರೀತಿಯಲ್ಲಿ ಆತ  ಮುಳುಗೇಳದ ದಿನವಿಲ್ಲ, ಕೆಲವೊಮ್ಮೆ ಇವರೇ ಜಾಸ್ತಿ ಪ್ರೀತಿ ಒಳೆಯದಲ್ಲ ಅನ್ನುತ್ತಿದ್ದರು ಆದರೂ ಮೊದಲು ತಂದು ಕೊಡುವವರು ಅವರೇ...
 
ಅಮ್ಮ ಹಸಿವೆ ಆಗ್ತಾ ಇದೆಯಮ್ಮಾ, ಸ್ವಲ್ಪ ನೀರಾದರೂ ಕೊಡು...
ಇಲ್ಲ.......ಕೊಡಲಾರೆ....ಕೊಡಲಾಗದು....
ಕಲ್ಲಿನಂತೆ ಕುಳಿತಿದ್ದೆ.... ದೇವರೇ.....ನನಗೇ ಯಾಕೆ ಈ ಶಿಕ್ಷೆ!!!!!!
 
ಅಪ್ಪ
 
ಅದೇಕೋ ನಿನ್ನ ಜತೆಯಲ್ಲಿರುವಾಗಿನ ಲವಲವಿಕೆ ಈಗ ಎಲ್ಲೂ ಕಾಣಿಸುತ್ತಿಲ್ಲ. ನಿನ್ನ  ಹಾಗೆಯೇ ಎಲ್ಲೆಲ್ಲೂ ಎಲ್ಲ್ರೂ ಮುನಿಸಿಕೊಂಡೇ ಇರುವಂತೆ ಕಾಣುತ್ತಿದೆ. ಆಸ್ಪತೆಯ ಇಡೀ ಕಾರಿಡಾರೇ ದುಖಃದಲ್ಲಿ ಮುಳುಗಿರುವಂತೆ ಕಾಣುತ್ತಿದೆ. ಇಲ್ಲಿನ ಡೆಟ್ಟಾಲಿನ ಕಂಪಿಗೂ ಈ ನಿನ್ನ ವಿರಹದ ನೋವೇ ಬೆರೆತಿರುವಂತೆ ಅನ್ನಿಸುತ್ತಿದೆ. ಅದಕ್ಕೇ ಏನೋ ಆಚೆ ಈಚೆ ಓಡಾಡುತ್ತಿರುವ ದಾದಿಗಳ ವೈದ್ಯರುಗಳ ಮುಖದಲ್ಲೂ ಬೇಸರದ ಛಾಯೆಯೇ.
 
ನನ್ನ ನಿನ್ನಮ್ಮನ ಕಣ್ಣುಗಳಲ್ಲೀಗ ಅಶ್ರುಗಳೇ ಬತ್ತಿ ಹೋಗಿವೆಯೇನೋ ಅನ್ನಿಸುತ್ತಿದೆ ಕಣೋ. ಆಸ್ಪತ್ರೆಯ ಐ ಸೀ ಯೂ ನ ಮುಚ್ಚಿದ ಬಾಗಿಲಿನ ಮೇಲಿನ ಕೆಂಪು ದೀಪವನ್ನೇ ನೋಡುತ್ತಾ ನೋಡುತ್ತಾ ನಿದ್ದೆಯೇ ಇಲ್ಲದ ಎರಡು ಮೂರು ರಾತ್ರೆಗಳ ನೆನಪೂ ಕೆಂಪಾಗಿದೆ.ನೀನನುಭವಿಸಿದ ನರಕ ಯಾತನೆ ಮನಸ್ಸಿಗೆ.
ಪ್ರಾಯಶಃ ಇಡೀಪ್ರಪಂಚದಲ್ಲೇ ನಮ್ಮಂತಹ ನತದೃಷ್ಟ ತಾಯ್ತಂದೆಗಳಿರಲಿಕ್ಕಿಲ್ಲ ಪುಟ್ಟಾ, ಕೆಲವೊಮ್ಮೆಯಂತೂ ನಾವೇ ನಿನ್ನನ್ನುಈ ನರಕದ ದಳ್ಳುರಿಗೆ ದೂಡಿ ಬಿಟ್ಟೆವಲ್ಲಾ ಅನ್ನಿಸುತ್ತಿದೆ ಪುಟ್ಟಾ, ಇದಕ್ಕೆ ಪ್ರಾಯಶ್ಚಿತ್ತವೇ ಇಲ್ಲವೇನೋ... ನಮ್ಮನ್ನು ಕ್ಷಮಿಸುತ್ತೀಯಲ್ಲಾ...!!
 
ನಿನ್ನ ಆಗಮನಕ್ಕಾಗಿ ಕೋಗಿಲೆ ವಸಂತನಿಗಾಗಿ ಕಾದಂತೆ ನಾವಿಬ್ಬರೂ ಕಾಯುತ್ತಿದ್ದೇವೆ ಕಣೋ. ಆ ಬಾಗಿಲ ಮೇಲಿನ ಓಟಿ ಎಂಬ ಎರಡಕ್ಷರಗಳು ನಮ್ಮನ್ನು ಅಣಕಿಸುವಂತೆ ಭಾಸವಾಗುತ್ತಿದೆ. ಆ ಬಾಗಿಲ ಮೇಲಿನ ಕೆಂಪು ದೀಪದ ಬೆಲಕು ಯಮರಾಜನ ವಾಹನದ ಕಣ್ಣಾಗಿ ಕಾಣುತ್ತಿದೆ. ಕಾಯುತ್ತಿದ್ದೇವೆ ಜೀವಚ್ಚವಗಳಾಗಿ, ಅದು ಹಸಿರಾಗೋ ಕಾಲಕ್ಕಾಗಿ
ಈಗ ಬಾಗಿಲು ತೆರೆದು ಹೊರ ಬಂದ ವೈದ್ಯರು ನಮ್ಮ ಮನೆದೀಪವನ್ನು ನಮ್ಮಿಬ್ಬರ ಕೈಗಿಟ್ಟು ಹೇಳುವರು
ಆಪರೇಶನ್ ಸಕ್ಸಸ್
ಬಾರೋ ಪುಟ್ಟಾ...
ಅಗೋ ಬಾಗಿಲಿನ ಮೇಲಿನ ದೀಪ ಹಸಿರಾಯ್ತು.
ಓಟಿಯ ಬಾಗಿಲೂ ತೆರೆಯಿತು.
ವೈದ್ಯರೂ ಹೊರಬಂದರು.

ಮತ್ತೊಂದು ದಿವ್ಯ ಸಮ್-ದರ್ಶನ



ಇವತ್ತು ನನ್ನ ತಮ್ಮನ ೫೦ ನೇ ಹುಟ್ಟುಹಬ್ಬ.
ಅದಕ್ಕೆಂದೇ ಕೆಲಸಕ್ಕೆ ರಜೆ ಹಾಕಿ ಬೆಳಿಗ್ಗೆನೇ ಮಡದಿಯೊಡನೆ  ದೇವಸ್ಥಾನಗಳಿಗೆ ಹಾಜರಿಹಾಕಲು ಹೊರಟೆ.
ಅನತಿ ದೂರವಿರುವಾಗಲೇ ಗುಡಿಯ ಘಂಟಾ ನಿನಾದ ಕೇಳತೊಡಗಿತು. ಗುಡಿಯ ನೋಡಿರಣ್ಣ ಎನ್ನುತ್ತಲೇ ಬಳಿಸಾಗಿದರೆ, ಮೇಲಿನ ಗರ್ಭ ಗುಡಿಯ ದ್ವಾರವಂತೂ ಮುಚ್ಚಿಯೇ ಇದೆ ಕೆಳಗಡೆಯ ಗೇಟನ್ನೂ ಮುಚ್ಚಿ ಕಾಯುತ್ತಿದ್ದಾರೆ ಗುಡಿಯ ಸಮವಸ್ತ್ರದ ಸೇವಕರು .ಕೇಳಿದರೆ ಪುಣ್ಯಕ್ಕೆ ಕನ್ನಡದಲ್ಲೇ ಈಗ ದೇವರಿಗೆ ನೈವೇಧ್ಯ ನಡೆಯುತ್ತಿದೆ, ಇನ್ನೂ ಸಮಯವಿದೆ, ಎಂಟಕ್ಕೆ ತೆರೆಯುತ್ತಾರೆ ಎಂದ, ಸ್ವಲ್ಪ ಸಮಯಕ್ಕೇ ಅದೇಕೋ ನಮ್ಮ ಮೇಲೆ ಕರುಣೆ ಹುಟ್ಟಿ ಹೊರ ದ್ವಾರದ ಬಾಗಿಲು ತೆರೆದು ಒಳ ಹೋಗಲು ಅನುಮತಿ ನೀಡಿದ.ನಾನು ಅಲ್ಲಿಂದ ಸಪತ್ನೀಕನಾಗಿ ಮೇಲೆ ( ಮೆಟ್ಟಿಲು)  ಹತ್ತಲು ಅನುವಾಗುವುದರೊಳಗಾಗಿ ದೇವನ ಉಗ್ರ ಭಕ್ತಾದಿಗಳಲ್ಲನೇಕರು ನನಗಿಂತ ಮುಂದೆ ನನ್ನ ದಾಟಿ ಹೊರಟರು. ಸುಮ್ಮನಿದ್ದೆ ನನ್ನ ದರ್ಶನದ ಸಮಯವನ್ನಂತೂ ಅವರು ಕಸಿಯುವದಿಲ್ಲವಲ್ಲ .ಮುಚ್ಚಿದ ಬಾಗಿಲ ಹೊರಗೆ ನಾವೆಲ್ಲ ನಿಂತು "ಬಾಗಿಲನು ತೆರೆದು... " ಅಂತ ಗುಣುಗುಣಿಸುತ್ತಿರಬೇಕಾದರೆ ದೇವಾಲಯದ ನೈವೇಧ್ಯಾಅರತಿಯ ಪಕ್ಕವಾಧ್ಯಗಳು ಮೊಳಗುತಿರಲು ತಂತಾನೇ ನನ್ನ ಕಣ್ಮುಚ್ಚಿತು, ಗಣೇಶರ ಬರಹದಲ್ಲಿನ ಹಾಗೆ ದೇವರೇ ಬಂದರು.
ಕೇಳ್ವೆ: ದೇವಾಧಿದೇವಾ ನಿನ್ನ ಈ ಭಕ್ತರಲ್ಲಿಯೇ ತಾರತಮ್ಯವೇಕೆ ? ಇಲ್ಲಿಂದ ನಿನ್ನ ಆಸ್ಥಾನಕ್ಕೆ ಹೋಗಲು ಸಾಧ್ಯವಾಗದವರು ಇಲ್ಲಿಯೇ ಕನ್ನಡದಲ್ಲಿ ನಿನ್ನ ದರ್ಶನ ಪಡೆಯಬಹುದೆಂದು ಕೊಂಡರೆ... ಹೀಗೇಕೆ..?
ಉತ್ತರ: ಹಾಗಲ್ಲ ಭಕ್ತಾ! ನೀನು ಸುರೇಶ ಹೆಗ್ಡೆಯವರ ಲೇಖನ (http://sampada.net/b...) ಎರಡೆರಡು ಬಾರಿ ಓದಿದ್ದೀಯಲ್ಲ, ಅವರವರ ಭಾವಕ್ಕೆ ಅವರವನ್ನು ಬಿಡು.
ಕೇಳ್ವೆ: ಅದು ಸರಿ, ಅದು ಸರಿ, ಹಾಗಿದ್ದಲ್ಲಿ ನಿನಗೆ ಇಷ್ಟೆಲ್ಲಾ ಆಢಂಬರದ ದುಂದು ವೆಚ್ಚದ ಮಹಲೇಕೆ?
ಉತ್ತರ: ಅದೆಲ್ಲಾ ಭಕ್ತರ ಕಾಣಿಕೆಯಲ್ಲವೇ,  ಇದು ವ್ಯಾವಹಾರಿಕ ಜಾಹೀರಾತಿನ ಯುಗ. ವಿಶ್ವದಲ್ಲೇ ವಿಖ್ಯಾತನಾದ ನನಗೆ ಇಷ್ಟಾದರೂ ಮಾಡದಿದ್ದರೆ ಹೇಗೆ? ಎಲ್ಲರೂ ನಿನ್ನ ಹಾಗೆ ಜಿಪುಣರಲ್ಲವಲ್ಲ ?.
ಕೇಳ್ವೆ: ಹಾಗೆಲ್ಲಾ ವಯ್ಯಕ್ತಿಕವಾಗಿ ಮಾತನಾಡಬಾರದು ದೇವಾ, ಭಕ್ತಿ ಭಾವ ಮನಸ್ಸಿಗೇ ತಾನೇ ? ನಮ್ಮೆಲ್ಲರ ಮನಸ್ಸೂ ನಿನ್ನದೇ ಅಲ್ಲವೇ ?
ಉತ್ತರ : ಹಾಗೆಲ್ಲಾ ಹೇಳಿ ನನ್ನನ್ನು ಇಮೋಶನಲ್ ಬ್ಲಾಕ್ ಮೇಲ್ ಮಾಡಬೇಡ.
ಕೇಳ್ವೆ: ಅದಿರಲಿ ದೇವಾ, ಗರ್ಭಗುಡಿಯ ಇದಿರಿನ ಬಲಿ ಕಂಬದ ಬುಡ ಚಿನ್ನದಿಂದ ತಗಡಿನಿಂದ ಆವ್ರತ ವಾಗಿದೆ, ಆದರೆ ನಿನ್ನ ಮೇಲೂ ಅಷ್ಟು ಚಿನ್ನವಿಟ್ಟಿಲ್ಲ ವಲ್ಲ ಏಕೆ?
ಉತ್ತರ: ತೀರಾ ವಯ್ಯಕ್ತಿಕ ವಿಷಯದ ಕೇಳ್ವೆಗೆ ಆಸ್ಪದವಿಲ್ಲ. ಬೇರೆಯೇನಾದರೂ ಕೇಳು,
ಕೇಳ್ವೆ: ನೀನ್ಯಾಕೆ ಸಪತ್ನೀಕನಾಗಿಲ್ಲ, ನಾನು ನೋಡು ಎಲ್ಲಿಗೇ ಹೋದರೂ ಸಪತ್ನೀಕನಾಗಿಯೇ ಹೋಗುತ್ತೇನೆ.
ಉತ್ತರ: ನೆನಪಿನಲ್ಲೀಡು ,ನೀನು ಈಗ ಸೈನ್ಯದಲ್ಲಿ ಇಲ್ಲ, ಎಲ್ಲಾ ಕಡೆಗೂ ನಿನ್ನ ಹಾಗೇ ಹೋಗಬೇಕೆಂದೇನೂ ಇಲ್ಲ, ಹಾಗೂ ಕಾಲ ತುಂಬಾನೇ ಮುಂದುವರಿದಿದೆ, ಮುಂದಿನ ಕಾಲದ ಗೃಹಸ್ಥರಿಗೆ ಮುಜುಗರವಾಗಬಾರದೆಂದು ನಾನು ಹೀಗೆ ಇದ್ದೇನೆ.
ಕೇಳ್ವೆ: ಸರಿ ಕಳ್ಳರು ಕಾಕರು , ಮೋಸ ಮಾಡುವವರು ಅವರೆಲ್ಲರಿಗೂ ನೀನೆಂದರೆ ತುಂಬಾ ಅಭಿಮಾನವೇಕೆ?, ಆ ಹಣ ತೆಗೆದುಕೊಳ್ಳುವುದು ತಪ್ಪಲ್ಲವಾ? ಅದು ಕಪ್ಪು ಹಣ.
ಉತ್ತರ: ನನ್ನ ಭಕ್ತರೆಲ್ಲರೂ ನನ್ನ ಭಕ್ತರೇ, ಅವರು ಏನು ಮಾಡುತ್ತಾರೆ ನನಗೆ ಅದರ ಅವಶ್ಯಕಥೆಯಿಲ್ಲ,
ಕೇಳ್ವೆ: ಅರ್ಥ ಆಗಲಿಲ್ಲ.
ಉತ್ತರ: ಈಗ ನೀನು ಎರಡೆರಡು ಕಡೆ....... ತೀರಾ ವಯ್ಯಕ್ತಿಕ ಮಾತಾಗುತ್ತೆ ಬೇಡ ಬಿಡು. ಈಗ ನಿನ್ನ ಸಂಪದದ ಹರಿಪ್ರಸಾದ ನಾಡಿಗರನ್ನೇ ತೆಗೆದುಕೋ ಅವರಿಗೆ ಈ ಸಂಪದದಲ್ಲಿ ಯಾರ್ಯಾರು ಫೇಕ್ ಗುರುತು ಇಟ್ಟುಕೊಂದು ಯಾರ್ಯಾರ ಕಾಲ್ ಎಳೀತಾರೆ ಅಂತ ಗೊತ್ತು, ಆದರೂ ಅವರು ಯಾರಿಗಾದರೂ ಹೇಳ್ತಾರಾ ನೋಡು ಇಲ್ಲ ಅಲ್ಲವಾ? ಹಾಗೆ ,ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಅವರು ಮಾಡಿದ್ದಕ್ಕೆ ಅವರೇ ಹೊಣೆ, ನಾನು ಯಾರಿಗೂ ಇದು ಹಾಕಿ ಅದು ಹಾಕಿ ಅದು ಮಾಡಿ ಎನ್ನುತ್ತೇನೆಯೋ.. ಇಲ್ಲವಲ್ಲ ಅವರವರ ಭಾವ. ನಾನಂತೂ ಯಾವಾಗ ಅಲ್ಲಿಗೆ ಹೋದೇನು ಅಂತ ಕಾಯುತ್ತಿರುತ್ತೇನೆ, ರಾತ್ರೆಯಂತೂ ಜಬ್ಬರ್ದಸ್ತ್ ಬೀಗ ಹಾಕಿ ಇಟ್ಟಿರುತ್ತಾರೆ, ಹಗಲಿಗೆ ಪೂಜಾರಿಗಳು ಬಿಡುವುದಿಲ್ಲ, ನನ್ನ ಮಂಡೆ ಬಿಸಿ ನನಗೆ. ಈಗ ನೀನೇ ನೋಡು ನನ್ನ ಬಳಿ ಬಂದೆಯಲ್ಲ..?
ಕೇಳ್ವೆ: ನಾನು ನನಗಾಗಿ ಬರಲಿಲ್ಲ, ನಾನೇನಾದರೂ ಕೇಳಿದ್ದೇನಾ ನಿನ್ನ ಹತ್ತಿರ..? ಇವತ್ತು ನನ್ನ ತಮ್ಮನ ಹುಟ್ಟುಹಬ್ಬ, ಅವನ ಹೆಸರಿನಲ್ಲಿ ಅರ್ಚನೆ ಮಾಡಿಸಲು ಬಂದಿದ್ದೆ.
ಉತ್ತರ: ಸರಿ , ನನ್ನ ಪ್ರಸಾದವಾದ ಈ ಲಡ್ಡುವಿನ ಆಸೆಯಿಂದಲಾದರೂ ಬಂದೆಯಲ್ಲ, ಆಸೆ ಆಸೆಯೇ, ಸಣ್ಣದಿರಲಿ ದೊಡ್ಡದಿರಲಿ.

ಕೇಳ್ವೆ:      ದೇವಾ ನನ್ನ ಹಿಂದಿನದ್ದೆಲ್ಲ ನನಗೆ ಗೊತ್ತಿದೆ, ಮುಂದಿನದ್ದೇನಾದರೂ ಕೇಳಲೇ?
ಉತ್ತರ :   ಕೇಳು, ನಿನ್ನ ಭೂತವೆಂದಾದರೂ ಭವಿಷ್ಯತ್ತಿಗೆ ಅಡ್ಡಿಯಾಗಬಾರದೆಂದಿದ್ದರೆ ನಿನ್ನ ವರ್ತಮಾನವನ್ನೇ ಸರಿಪಡಿಸಿಕೋ, ಭವಿಷ್ಯವೆಂದೂ ನಿನಗೆ ತೊಂದರೆ ಕೊಡೋಲ್ಲ.
ಕೇಳ್ವೆ:      ಅರ್ಥೈಸಲಾಗಲಿಲ್ಲ. ಉತ್ತರ ಇನ್ನೂ ಸರಳವಾಗಿಸು.
ಉತ್ತರ:    ನೀನಿರುವುದು ನಿನ್ನ ವರ್ತಮಾನದಲ್ಲಿ, ನನಗೆ ನಿನ್ನ ಮುಂದಿನ ನೂರೂ ತಲೆಮಾರೂ ವರ್ತಮಾನವೇ, ನಿನ್ನ ಭವಿಷ್ಯವೆಂದರೆ ಈಗಿರುವ ನೀನೇ, ನಿಜವಾದ ನೀನು ನನ್ನ ಹಾಗೇ ಅವಿನಾಶಿ, ಗತಿ ಮತ್ತು ಸ್ಥಿತಿಗಳಂತರ ನಿನಗೆ ಕಾಣುವುದು ಕ್ಷಣಿಕವಷ್ಟೇ,
ಕೇಳ್ವೆ:      ಇಲ್ಲ ,ಇನ್ನೂ ಸರಳವಾಗಿಸು
ಉತ್ತರ:     ನಿನಗೆ ಅರ್ಥೈಸಿಕೊಳ್ಳಬೇಕು ಅಂತ ಇದ್ದರೆ ತಾನೇ, ಇರಲಿಬಿಡು ಇನ್ನೊಮ್ಮೆ ಶಾಸ್ತ್ರಿಗಳ ಕ್ಲಾಸಿಗೆ ಹೋಗು ಅರ್ಥವಾಗುತ್ತದೆ. ಬೇರೇನಾದರೂ ಇದ್ದಲ್ಲಿ ಕೂಡಲೇ ಕೇಳು , ನೈವೇಧ್ಯವೋ ಬಲಿಯೋ ಬಿಸಾಡುತ್ತಿದ್ದಾರೆ, ಕಾಲ ಬಳಿ, ಅಂದರೆ ನನ್ನ ಸಾಮಾನ್ಯ ಪಾಳಿ ಶುರುವಾಯ್ತು ಅಂತ ಅರ್ಥ.
ಕೇಳ್ವೆ:       ದೇವಾ, ನವ ವಿವಾಹಿತರು ಕೆಲವು ದೇವಾಲಯಗಳಿಗೆ ಹೋಗಬಾರದೆಂದು ಹೇಳ್ತಾರಂತಲ್ಲ ಯಾಕೆ, ನಮ್ಮ ಸಂಪದಿಗರೇ ಆದ ಜಯಂತ್ ಹತ್ತಿರ ಎಲ್ಲಾ ಹಾಗೇ ಹೇಳಿದ್ದರಂತೆ.
ಉತ್ತರ:     ಅಸಾಮಾನ್ಯರು ನೀವು, ನಿಮ್ಮ ಹಾಗೇ ನಮ್ಮನ್ನೂ ಇರಗೊಡಲು ಬಯಸುತ್ತೀರಾ, ನಮ್ಮ ಕಾಲಕ್ಕೂ ನಿಮ್ಮ ಕಾಲಕ್ಕೂ ಅಜಗಜಾಂತರವಿದೆ . ಯಾವುದು ಸತ್ಯ ಮಿಥ್ಯ ಅಂತ ಹೊರಗೆ ಹುಡುಕುತ್ತೀರಲ್ಲ, ಒಳಗೆ ಹುಡುಕಿದರಲ್ಲವೇ ಸತ್ಯ ದರ್ಶನವಾಗುವುದು. ಎಲ್ಲ ಕೇಳ್ವೆಗೂ ನಿನಗೆ ಅನುಗುಣವಾದ ಉತ್ತರವಿರಲೇಬೇಕು ಎಂಬ ಆಸೆ ಏಕೆ? ಅಥವಾ ಇನ್ನೊಬ್ಬರಿಂದಲೇ ಉತ್ತರ ಏಕೆ ಬೇಕು?
ಕೇಳ್ವೆ:  ಅಲ್ಲ ಸಂಪದ ಎಂಬುದು ಉತ್ತಮ ಬ್ಲಾಗ್, ಅದರಲ್ಲಿ ಸಂಶಯವೇ ಇಲ್ಲ, ಇತ್ತೀಚೆಗೆ ಕೆಲವರಿಗೆ ಸಂಶಯವಾಗತೊಡಗಿದೆಯಲ್ಲ, ಪಾರ್ಥರೂ, ನಾವಡರೂ ಎಲ್ಲಾ ಕವಿತೆ ಬರೆಯ ತೊಡಗಿದ್ದಾರೆ, ಹೆಗ್ಡೆಯವರ, ಮಂಜೂರವರ ಬರಹಗಳು ಇತ್ತೀಚೆಗೆ ನಿಯತಕಾಲಿಕಗಳಲ್ಲೂ ಪ್ರಕಟವಾಗತೊಡಗಿವೆ.ಮೊದಲ ಕಾಲೆಳೆಯುವಯುಗ ಮುಗಿದು ಸಾಹಿತ್ಯ ಕಮ್ಮಟ ಶುರುವಾಯ್ತಾ ಹೇಗೆ ಅಂತ.
ಉತ್ತರ: ಕೇಳ್ವೆ ಬಾಲಿಶವಾಗಿದೆ, ಕವನ ಅಥವಾ ಕವಿತ್ವ ಹುಟ್ಟುವುದು ಮನದ ಚಿಂತನೆಯ ಮೂಲಕವಷ್ಟೇ? ಚಿಂತನೆಗಳು ಸಾರ್ವಕಾಲೀಕ, ಇದರ ಕೃಷಿಯೇ ಉತ್ತಮ ಬೆಳೆಯತ್ತ ಸಾಗುತ್ತದೆ. ಅದರ ಫಲಿತಾಂಶವೇ ಇದೆಲ್ಲಾ.
ಕೇಳ್ವೆ:  ಹಾಗಿದ್ದಲ್ಲಿ ಇಲ್ಲಿಗೆ ಬಂದವಲ್ಲನೇಕರು ಕಾಣೆಯಾಗತೊಡಗಿದ್ದಾರಲ್ಲ ಇದಕ್ಕೆ ಕಾರಣವೇನು? ಸಂಪದದ ಭವಿಷ್ಯ..?
ಉತ್ತರ: ಪುನಃ ಬಾಲಿಶವಾದ ಕೇಳ್ವೆ . ನೋಡು, ನಿನ್ನ ಸಂಪದಕ್ಕೆ ತನ್ನ ಸ್ವಾರ್ಥಕ್ಕಾಗಿ ಬಂದವರು ಹಲವರು, ಕಲಿಯಲು ಬಂದವರು ಕೆಲವರು, ಕಲಿಸಲೂ ಬಂದವರನೇಕರು, ಇಲ್ಲಿ ಸಂಪದ ಮಾತ್ರ ಮುಖ್ಯ, ಬರುವವರು ಹೋಗುವವರಲ್ಲ, ಸುತ್ತಲಿನ ನಿನ್ನ ಪ್ರಪಂಚದಂತೆ. ಭವಿಷ್ಯಕ್ಕೆ ಮೊದಲಿನ ಕೇಳ್ವೆಯ ಉತ್ತರ ಇನ್ನೊಮ್ಮೆ ಓದಿಕೋ.
ಕೇಳ್ವೆ:ಜಪಾನ್ ನಲ್ಲಿ ಅಷ್ಟೊಂದು ಅನಾಹುತ ನಡೆಯಿತಲ್ಲ, ಹಾಗೆಲ್ಲಾ ಆದರೆ ನಿಮಗೆ ಬೇಸರವಿಲ್ಲವಾ? ನೀವು ತಡೆಯಲಿಲ್ಲ ಯಾಕೆ?
ಉತ್ತರ: ಯಾರು ಮಾಡಿದ ಅನಾಹುತವಿದು? ಏಕಾಯ್ತು? ನಾನು ಯಾವುದಕ್ಕೆ ಬೇಸರಪಡಲಿ? ಗಟ್ಟಿಯಿದೆ ಅಂತ ಕಲ್ಲಿಗೆ ತಲೆ ಹೊಡೆದುಕೊಂಡದ್ದಕ್ಕಾ? ಅಥವಾ ಒಂದೇ ತಾಯಿಮಕ್ಕಳೇ ಹೊಡೆದುಕೊಂಡು ಸತ್ತದಕ್ಕಾ? ಇದು ಪ್ರಕೃತಿ ನಿಯಮವಷ್ಟೇ!, ಈಗ ನಿನ್ನ ಯಾವುದಾದರೂ ಅಂಗಕ್ಕೇನಾದರೂ "ಶೈತ್ಯ ಕೊಳೆತ" ಶುರುವಾದರೆ ಏನು ಮಾಡುತ್ತೀಯಾ?
ಕೇಳ್ವೆ: ದೇಹಕ್ಕೆಲ್ಲಾ ಹರಡುವ ಮೊದಲು ಆ ಅಂಗವನ್ನೇ ಕತ್ತರಿಸಿಕೊಳ್ಳುತ್ತೇನೆ.
ಉತ್ತರ: ಈಗ ನಾನು ಮಾಡಿದ್ದೂ ಅದೇ.
ಕೇಳ್ವೆ: ಆದರೆ ಜಪಾನೇ ಏಕೆ?
ಉತ್ತರ:( ನಗು) ಬೇರೆ ಎಲ್ಲಿಯಾದರೂ ಅಗಿದ್ದರೆ ನೀವ್ಯಾರಾದರೂ ಉಳಿತಿದ್ರಾ?
ಕೇಳ್ವೆ: ಮತ್ತೊಂದು ಪ್ರಶ್ನೆ...... ಮತ್ತೆ...
ಉತ್ತರ:ನಾನೇ ಹೇಳುತ್ತೇನೆ ಕೇಳು, ನಿನ್ನ ಮನೆಯಲ್ಲಿ ನೀನು ಹೇಗೆ ತಂದೆ, ಮಗ, ಅಣ್ಣ , ತಂದೆ ,ಮಾವ, ಚಿಕ್ಕಪ್ಪ ಹೇಗೋ ಹಾಗೇ ನನ್ನದೇ ಬೇರೆ ಬೇರೆ ಹೆಸರು ವಿಶ್ವದಲ್ಲೆಲ್ಲಾ ಪೂಜಿಸಲ್ಪಡುತ್ತಿದೆ, ಎಲ್ಲವೂ ನನ್ನದೇ.
ಕೇಳ್ವೆ: ಮ...ಮತ್ತೆ ಇದೆಲ್ಲದಕ್ಕೆ ಕೊನೆ ಎಂದು.?
ಉತ್ತರ:ಪ್ರಳಯ ಅಂದರೆ ಅಂತ್ಯ ಕಣಪ್ಪಾ........ ಎಲ್ಲರೂ ಒಬ್ಬರನ್ನೊಬ್ಬರು ಪ್ರೀತಿಸಲು ಆರಂಭ ಮಾಡಿದಾಗಲೇ ಇದರ ಅಂತ್ಯ.
ಬೆಳಕಿನ ಭ್ರಮೆ ಕರಗಿತ್ತೇ.. ..ನನಗೆ ಎಚ್ಚರವಾಯ್ತಾ, ಅಥವಾ... ಪಕ್ಕದಲ್ಲಿಯೇ ಇದ್ದ ಶ್ರೀಮತಿ ಕುಟ್ಟಿದಳಾ ಅರ್ಥವಾಗಲಿಲ್ಲ. ಒಮ್ಮೆಲೇ ಪಕ್ಕವಾದ್ಯ, ಗುಡಿಗಂಟೆಗಳ ನಿನಾದ ನಿಂತು ಬಿಟ್ಟಿದ್ದವು.  "ಏನ್ರೀ ದೇವಸ್ಥಾನಕ್ಕೆ ಬಂದೂ ತೂಕಡಿಸ್ತಾ ಇದ್ದೀರಲ್ಲಾ, ಪಕ್ಕದವರು ಹಿಡಿದುಕೊಳ್ಳದೇ ಇದ್ದಿದ್ದರೆ ನಿಮ್ಮನ್ನ ಕೆಳಗಿನಿಂದ ಹೆಕ್ಕಿಕೊಂಡು ಬರಬೇಕಾಗಿತ್ತು." ಸುಮ್ಮನಿರಿಸಿದೆ.

ಬಾಗಿಲು ತೆರೆಯಿತು,

ಮತ್ತೆ ನೂಕು ನುಗ್ಗಲು ಆರಂಭವಾಯ್ತು.

ಅಂತೂ ಒಳಹೊಕ್ಕೆವು, ದೇವರನ್ನು ನೋಡುತ್ತಲೇ ನನ್ನ ಹಿಂತಲೆಯಲ್ಲೊಂದು ವಿದ್ಯುತ್ ಸ್ಪರ್ಶವಾದಂತಾಯ್ತು.

ನಾನು ಯಾವುದೋ ಲೋಕದಲ್ಲಿದ್ದ ಹಾಗೆ ಅನ್ನಿಸಿತ್ತು.

ಅಂತೂ ತೀರ್ಥ ಪ್ರಸಾದ ತೆಗೆದುಕೊಂಡು ಮನೆಗೆ ಬಂದೆವು.

ಈಗಲೂ ಅದೇ ಗುಂಗಿನಲ್ಲಿದ್ದೇನೆ.

ಕಲೆ

ಕಲೆ

ಯಾವಾಗ ಆಯ್ತೋ ಗೊತ್ತಿಲ್ಲ
ಒಮ್ಮೆ ಹಾಗೇ ಕಣ್ಣಾಡಿಸೋವಾಗ
ಕಂಡಿತ್ತು,
ಎಣ್ಣೆ ಹಾಕಿದ್ದ ತಲೆಯಿಟ್ಟು ಸದಾ ನಿದ್ದೆ ಮಾಡಿದಾಗ ಆಗುತ್ತಲ್ಲ ಹಾಗೆ
ಅಥವಾ ಒಂದೇ ರೀತಿಯ ನಿತ್ಯ ಘರ್ಷಣೆಯಿಂದಲೂ ಆಗಿರಬಹುದು
ಅಥವಾ ರಕ್ತ ಕುಡಿಯೋ ತಗಣೆ ಸೊಳ್ಳೆಗಳ ಹೊಸಕಿದ್ದರಿಂದಲೋ ಏನೋ
ಅದರಲ್ಲೊಂದು ಆಕ್ರತಿ ಕಾಣ್ತಾ ಇದೆ
ಮುಖವೇ ಹೌದು
ಉಬ್ಬು ಹಲ್ಲಿನ
ವಿಕಾರ ಒಂಟಿ ಕಣ್ಣಿನ
ಬದಲಾಗುತ್ತಿರೋ ಮುಖಾಕ್ರತಿ
ಕೆಕ್ಕರಿಸೋ ಹಾಗೆ ತರಹೇವಾರಿ
ಕಾಣದ ಕೈ ತಿದ್ದುತ್ತಿದ್ದ ಹಾಗೆ ಅಳುವ, ನಗುವ ಎಲ್ಲಾ
ಭಾವಗಳು
ಇದು ಕಲೆಯೋ, ತಿದ್ದುತ್ತಿರುವವನ ಕಲೆಯೋ ಗೊತ್ತಾಗುತ್ತಿಲ್ಲ
ಕೆಲವೊಮ್ಮೆ ಏನಿಲ್ಲದ ಹಾಗೆ
ಮತ್ತೊಮ್ಮೆ ಮೇರು ಕೃತಿಯ ಹಾಗೆ
ಇದು ನಿಜವಾಗಿಯೂ ಅಲ್ಲಿದೆಯೋ
ಅಥವಾ ನನ್ನ ಭ್ರಮೆಯೋ
ಅಥವಾ ದಿನನಿತ್ಯದ ನಮ್ಮ ಭಾವನೆಯೋ
ಗೊತ್ತಿಲ್ಲ

'ಅಣ್ಣಿ ನಾಯ್ಕ' ಹಳ್ಳಿಯ ನಡೆದಾಡುವ ಬಜಾರ್

'ಅಣ್ಣಿ ನಾಯ್ಕ' ಹಳ್ಳಿಯ ನಡೆದಾಡುವ ಬಜಾರ್

ಹಳ್ಳಿಯ ದೈನಂದಿನ ಕಾರ್ಯ ಚಟುವಟಿಕೆಗೂ ಪಟ್ಟಣದಲ್ಲಿನ ಚಟುವಟಿಕೆಗಳಿಗೂ ತುಂಬಾ ಅಂತರವಿದೆ. ಪಟ್ಟಣದಲ್ಲಿ ಧಾವಂತವೇ ಮುಖ್ಯವಾಗಿದ್ದರೆ ಹಳ್ಳಿಯ ವಾತಾವರಣದಲ್ಲೇ ಮುಗ್ಧತೆ ಮನೆ ಮಾಡಿದೆ, ಸರಳತೆಯ ಶಾಂತತೆಯ ಬಿಂಬವಿದೆ. ನಿಧಾನ ಅಲ್ಪ ಸಂತೋಷ, ಚೇತೋಹಾರೀ ವಾತಾವರಣದ ಬೆಡಗಿದೆ, ಹರಿಯುತ್ತಿದ್ದ ಬೆವರಲ್ಲಿ ಪಟ್ಟಣದಲ್ಲಿಯಾದರೆ ಒಂದು ನಿಮಿಷ ನಿಲ್ಲಲಾರದಾದರೆ ಹಳ್ಳಿಯಲ್ಲಿನ ಜನರು ಬೆವರು ಸುರಿಸಿ ಆಯಾಸವೆನಿಸದೇ ಕೆಲಸ ಮಾಡಬಲ್ಲರು. ಅಲ್ಲಿನ ಅನಿವಾರ್ಯತೆಯೇ ಇದಾದರೂ ಅಲ್ಲಿನ ಕೆಲಸದ ಜತೆಗೆ ಒಬ್ಬರನ್ನೊಬ್ಬರ ಅರ್ಥೈಸುವಿಕೆ ಹೊಂದಾಣಿಕೆ ಮತ್ತು ಪ್ರೀತಿತುಂಬಿದ ಸಮಾನತಾ ಮನೋಭಾವನೆಯ ಬದುಕೇ ಇದಕ್ಕೆ ಕಾರಣೀಭೂತವೆಂದರೂ ತಪ್ಪಾಗಲಾರದು. ಇವೆಲ್ಲವೂ ಪಟ್ಟಣವಾಸಿಗಳಿಗೆಲ್ಲಿ ಸಿಗಬೇಕು?.ಹಳ್ಳೀಯಲ್ಲಿ ಯಾರದ್ದಾದರೂ ಮನೆಯಲ್ಲಿ ಸಮಾರಂಭವಿದ್ದರೆ ಊರಿಗೆ ಊರೇ ಹೆಗಲು ಕೊಡುವುದು, ಸುಖ ದುಖದಲ್ಲಿ ಕೆಲಸ ಕಾರ್ಯಗಳಲ್ಲಿ. ನನ್ನ ತಂದೆಯವರು ಬದುಕಿ ಬಾಳಿದ ಮನೆ ( ಅವಿಭಕ್ತ ಕುಟುಂಬ) ಯಲ್ಲಿರುವಾಗ ಪ್ರತಿ ಹಬ್ಬ ಹರಿದಿನಗಳಲ್ಲಿ ನಮ್ಮ ತಿಂಡಿ, ಸಿಹಿ ಗಳೆಲ್ಲಾ ವಿನಿಮಯಿಸಿಕೊಳ್ಳುತ್ತಾ ಬರ ಹೋಗುವ ನೆಂಟರ ಮಧ್ಯದ ಆ ಮಾತುಕಥೆ ' ಹಬ್ಬ ಹರಿದಿನಗಳ ಸಂಭ್ರಮ, ಅಷ್ಟೇಕೆ, ನಮ್ಮ ಹಳ್ಳಿಯಲ್ಲೊಮ್ಮೆ ಹಂದಿ ಹಿಡಿಲು ನಮ್ಮ ಹೊಲದಲ್ಲಿಯೇ ಅಟ್ಟ ಕಟ್ಟಿ ಬೇಟೆಯಾಡಿದಾಗ ನಮ್ಮ ಮನೆಯ ನಾಯಿ ಕೂರನೂ ಅದಕ್ಕೆ ಸಹಾಯ ಮಾಡಿದ್ದು, ಆ ಹಂದಿಯನ್ನು ಬೇಟೆಯಾಡಿದ ನಂತರ ಊರವರೆಲ್ಲಾ ಹಂಚಿಕೊಂಡದ್ದೂ ನಾವು ಮಾಂಸಾಹಾರಿಗಳಲ್ಲವಾದುದರಿಂದ ನಮಗೆ ಕೊಟ್ಟ ಪಾಲನ್ನು ನಮ್ಮ ಕೆಲಸಗಾರ ಕುಟುಂಬ ಹಂಚಿಕೊಂಡದ್ದೂ ನೆನಪಿಗೆ ಬರುತ್ತಿದೆ. ಅಲ್ಲಿ ಶ್ರಮ ಕ್ಕಿಂತ ಹೆಚ್ಚಾಗಿ ಹಂಚಿ ತಿನ್ನುವ ಗುಣ ಮತ್ತು ಆತರಹದ ಕಾರ್ಯಗಳು ತಮ್ಮ ಹಕ್ಕು ಮತ್ತು ಕರ್ತವ್ಯ ಎಂಬಂತೆ ಬಿಂಬಿತವಾದ ಆ ನಡವಳಿಕೆ ಹೆಚ್ಚು ಸಮಾಧಾನವನ್ನೂ ಹೆಚ್ಚು ಹೆಚ್ಚು ಗರ್ವವನ್ನು ಕೊಡತಕ್ಕಂತಹ ವಿಷಯಗಳು. ನಮಗೆ ಹಾಗೆಯೇ ಯಾರಾದರೂ ನೆಂಟರು ಬರಲೀ ಎಂದು ಹಾರೈಸುತ್ತಾ ಕಾಲ ಕಳೆದ ದಿನಗಳು ಈಗಲೂ ನನಗೆ ನೆನಪಿಗೆ ಬರುತ್ತಿದೆ. ಕೆಲಸ ಕಾರ್ಯಗಳಲ್ಲಿಯೂ ಅಷ್ಟೇ ಹಣಕ್ಕಿಂತ ವಿನಿಮಯವೇ ಜಾಸ್ತಿ ಪ್ರಾಧಾನ್ಯ ಪಡೆದುಕೊಳ್ಳುತ್ತಿತ್ತು. ಅದರಿಂದ ಏನಾಗುತ್ತಿತ್ತು ಎಂದರೆ ಸಣ್ಣ ಪುಟ್ಟ ಜಗಳಗಳೇರ್ಪಟ್ಟರೂ ಅದು ಜಾಸ್ತಿ ಸಮಯ ಉಳಿಯುತ್ತಿರಲ್ಲಿಲ್ಲ.
ಮೇಲಿನದು ದೊಡ್ದವರ ಕೆಲಸ ಕರ್ಯಗಳಾದರೆ ಮಕ್ಕಳಲ್ಲೂ ಅಷ್ಟೇ, ಈಗಿನ ಮಕ್ಕಳಿಗೆ ದೇವಾಲಯದ ಓಟ, ಸಿಟ್ಟಿನ ಹಕ್ಕಿಗಳು ಮಾರಿಯಾ, ಮುಂತಾದ ಆಟಗಳಿದ್ದರೆ ನಮಗೆಲ್ಲಾ ಹಳ್ಳೀಯಲ್ಲಿ ಹಳೆಯ ಸೈಕಲ್ ಟಯರೇ ರೇಸಿಗೆ ಆಹ್ವಾನವಾಗಿತ್ತು. ಹಳೇಯ ಗೆರಟೆಗಳನ್ನು ಹಿಂದಿನಿಂದ ಒಂದಕ್ಕೊಂದು ತಂತಿಯಿಂದ ಕಟ್ಟಿ ಗಾಡಿಯಾಟ ಆಡುತ್ತಿದ್ದೆವು, ಕಬ್ಬಡ್ಡಿ, ಕೋಕೋಮುಂತಾದ ಆಟಗಳು ಸರ್ವೇ ಸಾಮಾನ್ಯ, ಇನ್ನು ಮದುವೆ ಮುಂಜಿ ಮತ್ತಿತರ ದಿನಗಳಿಗಾಗಿ ಕಟ್ಟಿದ ಚಪ್ಪರದಲ್ಲಿ ಕಂಬಗಳನ್ನು ಒಬ್ಬೊಬ್ಬರು ಹಿಡಿದು ಮುಟ್ಟಾಟ ಆಡುತ್ತಿದ್ದೆವು ರಜೆ ಬಂದರೆ ಸಾಕು ಎಲ್ಲಿಂದಲ್ಲಿ , ಹೊಳೆಯನ್ನರಸಿ ಕಾಡಿನ ಹಣ್ಣನ್ನರಸಿ, ಮಳೆಗಾಲದಲ್ಲಿ ಮರ ಕೆಸವನ್ನರಸಿ ಹೊರಡುತ್ತಿದ್ದೆವು. ತೆಂಗಿನ ಹಸಿ ಓಲೆಯಿಂದ ತರಹೇವಾರಿ ಆಭರಣ, ಗಾಳಿಯಲ್ಲಿ ಗಿರಗಿರನೆ ತಿರುಗುವ ಗಿರಗಿಟ್ಲೆ ಇವೆಲ್ಲದರ ಮಜಾ ಕಲಿಯುವಿಕೆ ಮತ್ತು ಆಟ ಸೇರಿಸಿದ ಅದೊಂದು ವಿಶಿಷ್ಟ ಅನುಭವ.ಇನ್ನು ಪೈರು ಬೆಳೆದು ಕತ್ತರಿಸಿದ ಮೇಲೆ ಆ ಗದ್ದೆಯಲ್ಲಿ ನಾವೆಲ್ಲಾ ಸಂಜೆ ಬೆಳಗಿನ ಹೊತ್ತು ನಮ್ಮದೇ ತರಹೇವಾರಿ ಹೊಸ ಹೊಸ ಆಟಗಳನ್ನು ಉತ್ಪತ್ತಿ ಮಾಡಿಕೊಂಡು ನಿರ್ವಹಿಸುತ್ತಿದ್ದೆವು. ಪಕ್ಕದ ಮಂಜರ ಮನೆಯಲ್ಲೊಮ್ಮೆ ಬೆಂಕಿ ಬಿದ್ದಾಗ ಅವರ ಮನೆಯ ಮಕ್ಕಳೆಲ್ಲವೂ ನಮ್ಮ ಮನೆಯಲ್ಲಿಯೇ ಇದ್ದರು ಹೊಸ ಮನೆ ಕಟ್ಟುವ ವರೆಗೆ, ಇಡೂ ಊರೇ ಸಹಾಯ ಮಾಡಿತ್ತು ಅವರಿಗೆ ಆಗ. ಇವನ್ನೆಲ್ಲವನ್ನೂ ಮಾತುಗಳಲ್ಲಿ ಅಥವಾ ಬರೇ ಶಬ್ದಗಳಲ್ಲಿ ಕಟ್ಟಿಡಲಾಗದು.
ಅರೇ ಎಲ್ಲಿಂದ ಎಲ್ಲಿಗೆ ಹೋಗ್ತಾ ಇದೆ ಅಂದ್ಕೊಂಡ್ರಾ ಇಲ್ಲ ಇಲ್ಲ, ಅಲ್ಲಿಗೇ ಬರ್ತಾ ಇದ್ದೇನೆ ಬಿಡಿ. ಇವೆಲ್ಲದರ ಜತೆ ಅಗಿನ ನಮ್ಮ ಹಳ್ಳಿಯ ಜೀವನದ ಅವಿಭಾಜ್ಯ ಅಂಗ ಎಂದರೆ ನಡೆದಾಡುವ ಬಾಜಾರ್ ಉರ್ಫ್ ಅಣ್ಣೀ ನಾಯ್ಕ. ಆರರಿಂದ ಹತ್ತು ಕಿಲೋಮೀಟರ್ ದೂರ ವಾರಕ್ಕೊಮ್ಮೆ ಜರಗುವ ಸಂತೆಗೆ ಹೋಗದವರಿಗಾಗಿ, ೧೦-೧೫ ಕಿ ಮೀ ದೂರದಲ್ಲಿರುವ ಪೇಟೆಗೆ ಹೋಗದವರಿಗಾಗಿ, ಅಲ್ಲಿಂದ ತರಲಾಗದ, ದಿನ ನಿತ್ಯದ ಅಥವಾ ವಿಶಿಷ್ಟ ಸಮಾರಂಭಕ್ಕೇ ಅಂತ ಅಪರೂಪಕ್ಕೊಮ್ಮೆ ಉಪಯೋಗಿಸಿವ ವಸ್ತುಗಳಿಗಾಗಿ, ಹೀಗೆ ಎಲ್ಲಾ ತರಹದ ತರಹೇವಾರಿ ಉಪಯುಕ್ತ ವಸ್ತುಗಳು ಅವನಿಂದಲೇ ಹಳ್ಳೀಯವರಿಗೆ ಸರಬರಾಜಾಗುತ್ತಿರುತ್ತದೆ. ಹಲಕೆಲವೊಮ್ಮೆ ಟೆಲಿಗ್ರಾಮ್ ತಾರ್, ಮತ್ತು ಅಂಚೆಯಲ್ಲಿ ಬರುವ ಪತ್ರ ಗಳನ್ನೂ ಸಹಾ ಆತನೇ ಬಟವಾಡೆ ಮಾಡುವುದೂ ಇತ್ತು .
ಅವನು ಅಲ್ಲಿಂದ ತಂದು ಕೊಡುವ/ ಕೊಟ್ಟ ವಸ್ತುಗಳನ್ನು ತೆಗೆದು ಕೊಳ್ಳಲೇ ಬೇಕೆಂತ ಏನೂ ಇಲ್ಲ, ತೆಗೆದುಕೊಂಡ ಸಮಾಧಾನ ಸಂತೃಪ್ತಿ ಸಿಕ್ಕರೆ ಮಾತ್ರ , ಇಲ್ಲವಾದರೆ ಅವನೇನೂ ಅಂದು ಕೊಳ್ಳುವುದಿಲ್ಲ, ಇವರಲ್ಲವಾದರೆ ಮತ್ತೊಬ್ಬರು, ಮಗದೊಬ್ಬರು ಅಂತ ಹಳ್ಳೀಯಲ್ಲಿ ಅದೆಲ್ಲವೂ ಮಾರಾಟ ಅಥವಾ ವಿನಿಮಯವಾಗುತ್ತಿರುತ್ತವೆ, ಶಾನುಭಾಗರ ಮಗಳಿಗೆ ಪರಕಾರ, ಮೊಮ್ಮಗಳಿಗೆ ರಿಬ್ಬನ್ನು,ಅಂಡಾಲಜ್ಜಿಗೆ ಪಿನ್ನು , ಸೀತಕ್ಕನ ಹೇರ್ ಪಿನ್, ರಾಮಕ್ಕನ ತಲೆ ಕೂದಲಲ್ಲಿ ಇಟ್ಟುಕೊಳ್ಳುವ ತುರುಬಿನ ಚೆಂಡು, ಮಂಗಕ್ಕನ ತುರುಬು ( ಈಗಿನ ಭಾಷೆಯಲ್ಲಿನ ವಿಗ್). ಪಟೇಲರ ಮಗಳ ಮೇಲುದೆ, ಒಳ ವಸ್ತ್ರ, ಮುಖ್ಯ ಅಧ್ಯಾಪಕರ ತಲೆಕೂದಲಿಗೆ ಹಾಕುವ ಕಪ್ಪು ಬಣ್ಣ, ಸೀನನ ಹೆಂಡತಿ ಲಕ್ಷ್ಮಿಗೆ ಮಲ್ಲಿಗೆ ದಂಡೆ, ಹೊಸ ಸೀರೆ, ಲಂಗ , ಶೆಟ್ರು ಮಾಶ್ಟ್ರಿಗೆ ಅಂಗ್ರೇಜೀ ಸೋಡಾ ( ಚಿಕ್ಕವನಿರುವಾಗ ನಾನು ಅದನ್ನ ತಪ್ಪು ತಿಳಕೊಂಡು ಮಾಷ್ಟ್ರು ಶ್ಯಾಯಿ ಕುಡೀತಾರೆ ಅಂತ ಮನೆಯಲ್ಲಿ ಹೇಳಿ ಪೆಟ್ಟೂ ತಿಂದಿದ್ದೆ), ಹೀಗೆ ಅವನ ವ್ಯಾಪಾರದ ಹರಹಿನ ಕಬಂಧ ಬಾಹುಎಲ್ಲಿಯವರೆಗೆ ಚಾಚಿತ್ತು ಅಂತ ನನಗೆ ಅದು ಯೋಚಿಸಿದರೆ ಈಗಲೂ ಸೋಜಿಗವೇ .ಹೀಗೆ ಅತ ನಮ್ಮ ಹಳ್ಳಿಯ ಚಲ್ತಾ ಫಿರ್ತಾ ದೂಕಾನ್ ಅರ್ಥಾತ್ ಬಿಗ್ ಬಜಾರ್. ಅಂದರೆ ಆತ ಮಾಡುವುದು ಸಕಲ ಗೃಹೋಪಯೋಗೀ ವಸ್ತುಗಳ ವಿನಿಮಯ. ಅದಕ್ಕೇ ಆತನನ್ನು ಆಗಿನ ಕಾಲದ ಅಲೆದಾಡುವ ಮಾಲ್ ಅಥವಾ ಬಾಜಾರ್ ಅಂದುಕೊಳ್ಳಬಹುದು.
ಇಡೀ ಊರೂರುಗಳನ್ನೇ ತನ್ನ ಕೈಯ್ಯಲ್ಲಿಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ಈ ಅಣ್ಣಿ ನಾಯ್ಕ ಎಂಬ ಜಂಗಮ ಬಜಾರ್ ನ ವ್ಯವಹಾರ ಕುಶಲತೆಯ ಮುಖ್ಯ ಕಾರ್ಯ ರೂಪೀ ವಿಧಾನದ ಅವಶ್ಯಕ ಸಾಮಗ್ರಿಗಳು ಎಷ್ಟಿರಬಹುದೆಂದುಕೊಂಡಿರಿ. ನೀವು.? ಇಲ್ಲಿನ ಹಾಗೆ ದೊಡ್ಡ ದೊಡ್ಡ ಲಾರಿ ಟ್ರಕ್ಕುಗಳನ್ನೆಂದುಕೊಂಡರೆ ಕೆಟ್ಟಿರಿ ನೀವು, ಯಾಕೆಂದರೆ ಯಾವುದೇ ದೊಡ್ಡ ಎರಡು ಚಕ್ರದ ವಾಹನ ನೋಡಬೇಕಾದರೂ ೧೦ ೧೨ ಕಿ ಮೀ ದೂರ ನಡೆದುಕೊಂಡೇ ಹೋಗ ಬೇಕಾದ ಆ ಕುಗ್ರಾಮಗಳಲ್ಲಿ ಇವೆಲ್ಲಾಎಲ್ಲಿಂದ ಬಂದಾವು? ಅಸಲು ರಸ್ತೆಯೂ ಇರಬೇಕಲ್ಲ ಆ ನಾಲ್ಕು ಚಕ್ರದ ವಾಹನಗಳನ್ನು ಹೊತ್ತು ಸಾಗಲು. ನಾನು ಚಿಕ್ಕವನಿರುವಾಗ ನೋಡಿದಂತೆ ಒಂದು ಗೋಣೀ ಚೀಲ ಅದೂ ಆತನ ಹಳೇ ಸೈಕಲ್ ನಲ್ಲಿನ ಹಿಂದಿನ ಕ್ಯಾರಿಯರ್ ನಲ್ಲಿ ಮಡಚಿಟ್ಟದ್ದು ಮತ್ತು ಒಂದು ತಕ್ಕಡಿ. ತಕ್ಕಡಿಯೆಂದರೆ ಅಂತಿಂಥ ತಕ್ಕಡಿ ಅಲ್ಲ ಮರಾಯರೇ, ನೀವು ಸೀದಾ ಪೇಟೆಯಲ್ಲಿ ಈಗೀಗ ಕಾಣ ಸಿಗುವ ಡಿಜಿಟಲ್ ಬ್ಯಾಲೆನ್ಸ್ ತರಹದ್ದೂ ಅಲ್ಲ , ಅದು ಹೀಗಿದೆ ನೋಡಿ: ಒಂದು ತೋರ ಬೆರಳು ಗಾತ್ರದ ಮಾರುದ್ದದ ಬಿದಿರಿನ ಕೋಲಿನ ಎರಡೂ ತುದಿಗೆ ಕಟ್ಟಿದ ಮೂರು ಮೂರು ಹಗ್ಗಗಳು ಕೆಳಗಿಳಿದು ಹೊರ ಬದಿಯಲ್ಲಿ ಮೂರು ತೂತು ಮಾಡಿ ಕಟ್ಟಿಟ್ಟ ಚಪ್ಪಟೆಯಾದ ಹಳೆಯ ಎರಡು ಅಲ್ಯುಮಿನಿಯಮ್ ಊಟದ ತಟ್ಟೆಗಳು. ಆ ಕೋಲಿನ ಸರೀ ಮಧ್ಯ ಭಾಗದಲ್ಲಿ ಇನ್ನೊಂದು ಮೇಲಿನಿಂದ ಮುಷ್ಟಿಯಲ್ಲಿ ಹಿಡಿದುಕೊಳ್ಳುವಷ್ಟೇ ಹಗ್ಗ ಕಟ್ಟಿದ್ದು ತೂಗುವಾಗ ಹಿಡಿದು ಕೊಳ್ಳಲು ಸಹಾಯಕ್ಕಾಗಿ. ಇನ್ನು ತೂಕದ ಬಟ್ಟುಗಳೋ ಅಥವಾ ತೂಕದ ಕಲ್ಲುಗಳು.... ಹೌದು ತೂಕ ಎನ್ನುವುದನ್ನು ನುಂಗಿದರೆ ಉಳಿಯುವದೇ ಕಲ್ಲುಗಳು. ಉರುಟುರುಟಾದ ಎರಡು ಮೂರು ಬೇರೆ ಬೇರೆ ಗಾತ್ರದ ಬೆಣಚು ಕಲ್ಲುಗಳೇ ಅವುಗಳು. ಒಂದು ಅರ್ಧಕೇಜಿ ಇನ್ನೊಂದು ಕಾಲು, ಮತ್ತೊಂದು ನೂರು ಗ್ರಾಂ ಇದು ಆತನೇ ಹೇಳುವ ಹಾಗೆ. ಪ್ರತಿ ವರ್ಷ ಅದರ ಕೆಲಿಬ್ರೇಷನ್ ಮಾಡೋ ಅಗತ್ಯವೇ ಇಲ್ಲ. ಅಲ್ಲ ಹಳ್ಳೀಗಳಲ್ಲಿ ಅಷ್ಟೊಂದು ತಿಳಿದವರಾರಿರಲಿಲ್ಲ, ಅಲ್ಲದೇ ಇನ್ನೊಂದು ವಿಷಯವೆಂದರೆ ಹಳ್ಳೀಯ ಎಲ್ಲರಿಗೂ ಅವರವರಿಗೆ ಬೇಕಾದ ಅಗತ್ಯದ ವಸ್ತುಗಳು ಬೇಕಾದ ಸಮಯದಲ್ಲಿ ಪೂರೈಸುತ್ತಾ ಇರುವ ಅತನ ಕ್ಲಪ್ತತೆಯಲ್ಲದೇ ಇನ್ನೊಂದು ಮುಖ್ಯವಾದ ವಿಷಯವೂ ಇದ್ದು.... ಅದು......ಆತುರ ಬೇಡ ಮುಂದೆ ಗೊತ್ತಾಗುತ್ತೆ.

"ಸೀತಕ್ಕಾ ಹ್ಯಾಂಗಿದ್ದೀರಾ, ತಗೊಳ್ಳಿ ನಿಮ್ಮ ಹ್ಯಾರ್ ಪಿನ್ ಎರಡೂಡಜನ್ ತಂದಿದ್ದೇನೆ, ತುಂಬಾ ಚೆನ್ನಾಗಿದೆ, ಅದಕ್ಕಿಂತಲೂ ಹೆಚ್ಚು ನಿಮಗೆ ಒಪ್ಪುತ್ತೆ, ನೀವು ಇದನ್ನ ಹಾಕ್ಕಂಡ್ರೆ ನಿಮ್ ಗಂಡ ಬೇರೆ ಯಾರ ಹತ್ರಾನೂ ಹೋಗಲ್ಲ, ಏನೂ ದುಡ್ಡಿಲ್ಲ ಅಂದ್ರ, ಅದೆಲ್ಲಿ ಹೋಗತ್ತೆ, ನಿಮ್ಮ ಹತ್ರಾನೇ ಇರತ್ತೆ, ಈಸಲ ಅಲ್ಲ ಮುಂದಿನ ಕೊಟ್ಟರಾಯ್ತು ಬಿಡಿ. ಅಂದ ಹಾಗೇ ಈ ಸಲ ಅಡಿಕೆ ಎಷ್ಟು ಕೊಡ್ತೀರಿ, ಅಂದ ಹಾಗೇ ಬಾಳೆ ಕೊನೆ ಎಷ್ಟಿದೆ, ಕಳೆದ ಸಾರಿ ನೀವು ಕೊಟ್ಟ ಬಾಳೆ ಕೊನೆಯಲ್ಲಿ ಒಂದು ಚಿಹುರು ಕೊಯ್ದದ್ದರಿಂದ ಹಣ್ಣಾಗಲೇ ಇಲ್ಲ, ಮತ್ತೆ ವೀಳ್ಯದೆಲೆ..? ಬ್ಯಾಡ ಬಿಡಿ ಬರೇ ನೂರು ಗೇರು ಬೀಜವೋ ಅಡಿಕೇನೋ ಕೊಡಿ ಸಾಕು. ಅದೂ ಇಲ್ಲಂದ್ರೆ ಮುಂದಿನ ಸಲ ನೋಡೋಣ ಆಯ್ತಾ ನಾನು ಬರ್ತೀನಿ, ಈ ಗೋಣೀ ಚೀಲ ಇಲ್ಲಿರಲಿ ಆಮೇಲೆ ಬಂದು ತಗೋತೇನೆ.
ತಗೊಳ್ಳೀ ಅಣ್ಣೀ ನಾಯ್ಕರೇ ಆ ಮೂಲೆಯಲ್ಲಿ ಅಡಿಕೆ, ಪಕ್ಕದಲ್ಲೇ ಗೇರು ಬೀಜ ಕೂಡಾ ಇದೆ ನೋಡಿ ಅದರಲ್ಲಿ ಇನ್ನೂರು ಇನ್ನೂರು ತಕೊಳ್ಳಿ ನಿಮ್ಗೆ ಇಲ್ಲ ಅನ್ನೊಕಾಗ್ತದಾ..??
ಸರಿ ಈಗ ಅಣ್ಣಿನಾಯ್ಕನ ನಿಜವಾದ ವ್ಯಾಪಾರದ ಜಾಣತನ ಇರೋದು. ಆತನ ಹಳೇ ಗೋಣೀ ಚೀಲದಲ್ಲಿ ಗೇರು ಬೀಜ ಮತ್ತು ಅಡಿಕೆ ಲೆಕ್ಕಾ ಮಾಡಿ ಹಾಕುವ ಲೆಕ್ಕಾಚಾರ!!!
ಅಲ್ಲಿಂದ ಸೀದಾ ಅಡಿಕೆಯ ಲೆಕ್ಕಾಚಾರವೇ, ಅಂಗೈಯ್ಯಲ್ಲಿ ೫-೫ ರ ಜೋಡಿ ಲೆಕ್ಕ ಒಂದು ಒಂದು,,,, ಎರಡೂ ಎರಡು, ಅಂತ ಶುರುವಾಗತ್ತೆ, "ಮತ್ತೆ ಸೀತಕ್ಕಾ ಯಜಮಾನರು ಎಲ್ಲ್ಗೆ ಹೋದರು ಅಂದ್ರೀ"
ಲೆಕ್ಕ ಐದು ಐದು, ಅರು ಆರು, ಮತ್ತೆ ಮಗಳು ಚೆನ್ನಾಗಿ ಓದುತ್ತಾಳಾ ಹೇಗೆ? ಲೆಕ್ಕಾ ಮಾತಿನ ವಿನಿಮಯದ ನಡುವೆ ಎಪ್ಪತ್ತೈದು ಮುಂದುವರಿದಾಗ ಮತ್ತೆ ನಿಮ್ಮ ಗಂಡ ದುಗ್ಗು ಹತ್ರ ಹೋಗ್ತಾ ಇದ್ದಾನಾ ಈಗಲೂ, ... ಸೀತಕ್ಕನ ಉತ್ತರ ಬರುವಾಗ ನೋಡಿ... ಇಪ್ಪತೈದು ಇಪ್ಪತೈದು.... ಇಪ್ಪತ್ತಾರು ಇಪ್ಪತ್ತಾರು.... ಇದೇ ಆತನ ಯಶಸ್ಸಿನ ಗುಟ್ಟು. ಆದರೆ ಇದು ಗೊತ್ತಾಗಿ ಕೆಲವರು ಆತನ ಇದಿರಿಗೇ ಕುಳಿತುಕೊಂಡು ಲೆಕ್ಕ ಮಾಡಿಸುತ್ತಾರೆ, ಆದರೆ ಸಾಮಾನ್ಯವಾಗಿ ಹಳ್ಳೀಯಲ್ಲಿ ಗಂಡಸು ದಿನದಲ್ಲಿ ಹೊರಗೆ ಹೋದರೆ ಈ ಅಣ್ಣೀ ನಾಯ್ಕನಿಗೆ ಮನೆಯಲ್ಲಿ ಉಳಿಯುವ ಹೆಂಗಸರಿಂದ ಈತನ ವ್ಯಾಪರದ ಭರಾಟೆಯೂ ಲಾಭವೂ ಜಾಸ್ತಿಯೇ.
ಮತ್ತೆ ಆ ತಕ್ಕಡಿಯಲ್ಲಿ ತೂಗುವ ವಸ್ತುಗಳು ಆತನ ಕಾರ್ಯಕ್ಷಮತ್ವತೆ ಮತ್ತು ಇದಿರಿನಲ್ಲಿರುವವರ ವ್ಯವಹಾರ ಕುಶಲತೆಯನ್ನವಲಂಬಿಸಿ ಏರು ಪೇರಾಗುತ್ತಲೇ ಇರುತ್ತದೆ. ಆ ತಕ್ಕಡಿಯನ್ನೆತ್ತಿ ಹಿಡಿದ ಅವನ ಮುಷ್ಟಿ ಮತ್ತು ಎರಡೂ ಕಡೆಯ ತಟ್ಟೇಗಳನ್ನು ನೋಡುತ್ತಾ ನೀವು ಅವನೊಂದಿಗೆ ವ್ಯಾಪಾರ ನಡೆಸಿದಿರಾದರೆ ನೀವು ಕೆಟ್ಟಿರಿ. ಯಾಕೆಂದರೆ ಆತನ ಮುಷ್ಟಿಯಿಂದ ಕೆಳಗಿಳಿವ ಆತನತೋಳು ತೂಕದ ಬಟ್ಟನ್ನಿಟ್ಟಿರುವ ಕಡೆಗೇ ಜಾಸ್ತಿ ಒತ್ತಡವನ್ನು ಕೊಡುತ್ತಾ ಪಕ್ಕದ ತಟ್ಟೆಯಲ್ಲಿನ ವಸ್ತುಗಳ ನಿಜವಾದ ತೂಕ ಐದು ಕೇಜಿ ಆದರೂ ಈ ತೂಕದ ಬಟ್ಟುಗಳಿಟ್ಟಿರುವ ತಟ್ಟೆ ಅರ್ಧ ಕೇಜಿಗಿಂತ ಯಾವುದೇ ಸಂದರ್ಭದಲ್ಲೂ ಮೇಲೇರದು. ಒಮ್ಮೆ ಈ ರೀತಿಯ ವ್ಯಾಪಾರ ಮಾಡಿ ಜಯಶೀಲನಾದರೆ ( ಅಂದರೆ ಇದಿರಿನವರಿಗೆ ಆತನ ಮೋಸದ ಸುಳಿವು ಗೊತ್ತಾಗದೇ ಹೋದರೆ) ಮತ್ತೆ ಈ ಬಟ್ಟನ್ನು ಆತ ಉಪಯೋಗಿಸದೇ ಅದೇ ವಸ್ತುಗಳನ್ನೇ ಎರಡೂ ಕಡೆ ಇಟ್ಟುಕೊಳ್ಳುತ್ತಾ ತನ್ನ ಪ್ರಾಮಾಣಿಕತೆ ಮೆರೆದು ತನ್ನ ವ್ಯವಹಾರದ ಲಾಭ ಪಡೆಯುವ.
ಆದರೆ ಈತನ- ಎಲ್ಲರಿಗೂ ಸಹಾಯ ಮಾಡುವ ಮನೋಭಾವ, ಮಾತನಾಡುವ ಚಾಲೂಕುತನ, ಪಕ್ಕದ ಊರುಗಳನ ವಿಶೇಷ ಸಮಾಚಾರ ಗಳನ್ನೆಲ್ಲಾ ತಿಳಿದುಕೊಳ್ಳುವ ಆಸಕ್ತಿ, ಮತ್ತು ಮಾರಾಟದ ಕೊಡ ಕೊಳ್ಳುವ ವ್ಯವಹಾರದ ಅಪೇಕ್ಷೆ, ದಿನ ನಿತ್ಯದ ದಿನಸಿ ಸಾಮಾನುಗಳ ಬೇಡಿಕೆಯ ಮರು ಪೂರಣ, ಹಣದ ಅವಶ್ಯಕಥೆಯೂ ಇಲ್ಲದ ವಿನಿಮಯ ಮನೋಭಾವ ಇರೋದ್ರಿಂದ ಆತನ ಈ ವ್ಯಾಪಾರೀ ಮನೋಭಾವದ ಲಾಭಂಶ ಕೂಡಾ ಹಳ್ಳಿಗರ ಮನಸ್ಸಿನಲ್ಲಿ ಕಡೆಗಣಿಸಬಹುದಾದಂತಹ ಅತೀ ಚಿಕ್ಕ ವಿಷಯ.
ನನಗೆ ಈಗಲೂ ಅಚ್ಚರಿಯಾಗುತ್ತದೆ, ಅಲ್ಲ ಗುಡ್ಡ ಬೆಟ್ಟಗಳನ್ನು ದಾಟಿ ಗದ್ದೆ ಬಯಲು ತೋಟಗಳನ್ನೂ ಕ್ರಮಿಸುತ್ತಾ ಬಂದು ಅದೇ ಹಳೇ ಸೈಕಲ್ ಮತ್ತು ಗೋಣೀ ಚೀಲ ಹೊತ್ತು ಬರುವ ಆತ ಈ ವ್ಯಾಪಾರದಲ್ಲಿ ಎಷ್ಟು ಲಾಭ ಮಾಡಿಕೊಂಡಾನು..?ಅಷ್ಟೇಲ್ಲಾ ಮಾಡಿದ್ದರೂ ಆತನ ಮನೆಯಲ್ಲೂ ನಾಗರೀಕ ಜೀವನದ ಕುರುಹುಗಳಿಲ್ಲ, ಕಾರಣ ಆತನಲ್ಲಿ ಧೂರ್ತತೆಯಿಲ್ಲ, ಆಸೆ ಬುರುಕತನವಿಲ್ಲ, ತನ್ನ ದುಡಿಮೆ ತನ್ನ ಇಂದಿಗೆ ಮಾತ್ರ ಎನ್ನುವ ಧ್ಯೇಯ ವಾಕ್ಯದ ಗುಣವಿದೆ . ಮಹಡಿಯ ಮೇಲೆ ಮಹಡಿ ಕಟ್ಟುತ್ತಾ ತಾನು ಮಾತ್ರ ಶ್ರೀಮಂತನಾಗ ಬೇಕು, ತನ್ನ ಮಕ್ಕಳು ಐಷಾರಾಮೀ ಕಾರುಗಳಲ್ಲೇ ಶೋಕೀಲಾಲರಂತೆ ತಿರುಗಾಡ ಬೇಕೂ ಎನ್ನುವ ಹಪಹಪಿಯಿಲ್ಲ. ಈಗಿನ ಜೀವನದಲ್ಲಿ ಬರೇ ಬಣ್ಣದ ನೀರಿಗೇ ಮಣ ಗಟ್ಟಲೆ ಸುರಿಯುವ ನಾವು..... ಇದನ್ನು ಅರ್ಥ ಮಾಡಿಕೊಳ್ಲಬಲ್ಲೆವಾ..??
ನಮ್ಮ ರಾಜ್ಯದಲ್ಲಿ ಸುಮಾರು ಹಳ್ಳಿಗಳಲ್ಲಿ ವಿಧ್ಯುತ್ ಮತ್ತು ರಸ್ತೆಯಂತಹ ಸಾಮಾನ್ಯ ಅವಶ್ಯಕಥೆಯೂ ಇರದಂತಹ ಹಳ್ಳಿಗಳಲ್ಲಿ ಅಣ್ಣಿ ನಾಯ್ಕರಂತವರೇ ನಾಗರೀಕ ಮತ್ತು ಹಳ್ಳಿಯ ಜೀವನದ ಸೇತುವೆಗಳು. ಹಳ್ಳಿಯ ಅವಿಭಾಜ್ಯ ಅಂಗವಾದ ಈ ಅಣ್ಣೀ ನಾಯ್ಕನಂತವರು ಪಟ್ಟಣವಾಗುತ್ತಿರುವ ಈಗೀಗಿನ ಬೆಳೆದ ಹಳ್ಳಿಗಳಲ್ಲಿ ಅಪರೂಪವೇ ಮಾತ್ರವಲ್ಲ ಇಲ್ಲವೇ ಇಲ್ಲ ವೆನ್ನಲೂ ಬಹುದು. ಪೇಟೆಯ ಸ್ವಾರ್ಥೀ ಮುಖವಾಡದ, ವಿದೇಶೀ ವಸಾಹತು ವ್ಯಾಪಾರ ವ್ಯವಹಾರಗಳಲ್ಲಿ ದುಂದು ಖೋರರಿಗೆ ಮಣೆ ಹಾಕುವ ರಾಜಕೀಯ ಮುತ್ಸದ್ದಿಗಳಿರುವ ವರೆಗೂ ಅಣ್ಣಿ ನಾಯ್ಕನಂತವರು ಪಳೆಯುಳಿಕೆಗಳೇ. ಈಗಲೂ.
ಈಗಲೂ ಕಳೆದ ಸಾರಿ ಹಳ್ಳಿಗೆ ಹೋದಾಗ ಸೈಕಲ್ಲಿನ ಪೊಂ ಪೊಂ ಶಬ್ದ, ಟ್ರಿಣ್ ಟ್ರಿಣ್ ಕಿವಿಗೆ ಬಿದ್ದು ಅಣ್ಣೀ ನಾಯ್ಕನೇ ಬಂದ ಹಾಗಾಗಿ ಮೈಯೆಲ್ಲಾ ಕಣ್ಣಾಗಿಸಿ ಆತನ ಸಂದರ್ಶನಕ್ಕೆ ಕಾಯುತ್ತಿದ್ದೆ. ಆ ಸುಸಂದರ್ಭ ಎಂದು ಸಿಗುವುದೋ ನೋಡಬೇಕು.
ಬೆಳ್ಳಾಲ ಗೋಪೀನಾಥ ರಾವ್