Search This Blog

Monday, May 31, 2010

ಪ್ರಹರಿ

ಪ್ರಹರಿ


ಅರಿವಿಲ್ಲದವನೆಡೆಗೆ ಎಸೆಯದಿರಿ ಹೂವುಗಳ
ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ
ಕಾರ್ಗಿಲ್ನ ಅಘಾತ ಮರೆಸಿತ್ತು ಅರಿವುಗಳ
ಕರಟಿಸಿ ಕದಿರೊಡೆದ ಭಾವನೆಯ ಚಿಗುರುಗಳ

ಪ್ರಹರಿಯಾದ ನನ್ನಾಸೆ ಅರಳಿತ್ತು ಆಗೊಮ್ಮೆ
ಟಿಸಿಲೊಡೆದ ಭಾವನೆಯ ಚಿಗುರುಗಳ ಕಡೆಗೊಮ್ಮೆ
ಹಸಿರುನೆಲ ತಿಳಿನೀಲದಂಬರದ ರಕ್ಷೆಯಲಿ
ತನ್ನವರ ಸ್ಥಿರನೆಲೆಯ ಸುಖನಗೆಯ ಕಕ್ಷೆಯಲಿ

ಸುಡುಸುಡುವ ಬಿಸಿಲಿರಲಿ ಮೈಕೊರೆವ ಚಳಿಯಿರಲಿ
ಬಸಿದ ಕಣ್ಣೀರಿರಲಿ ಹರಿದ ಕೆನ್ನೀರಿರಲಿ
ನೊವಿರಲಿ ನಲಿವಿರಲಿ ತನ್ನವರ ನೆನಪಿನಲಿ
ಕಾವನೀ ಪರಿ ಪ್ರಹರಿ ಬತ್ತದಾವೇಶದಲಿ

ಕೊಚ್ಚಿ ಬಿಸುಟರೂ ಸಖರ, ಮತ್ತೆ ತರಿದರೂ ಹಲರ
ಒರಸಿ ನಡೆವರು ಮುಂದೆ ಸೆಲೆಯೊಡೆವ ಕಣ್ಣೀರ
ತಮ್ಮೊಡಲ ಪ್ರಿಯಸಖರ ,ಏಕಾಂಗೀ ಕಳೆವರವ
ಬಿಟ್ಟು ಕೊಡುವರು ಜೀವ, ಕಾಯೆ ತಾಯಿಯ ನೆಲವ

ಯಾರದೋ ಸ್ವಾರ್ಥಕ್ಕೆ ಕಾಟ ಸೆಣಸಾಟಕ್ಕೆ
ಸೆಣೆಸಿ ನಿಲುವರು ತಮ್ಮ ಪ್ರಾಣ ಬಲಿದಾನಕ್ಕೆ
ಉಳಿಯೆ ಕಾಯ್ವರು ಮತ್ತೆ ಮಲೆ ಹತ್ತಿ ಗಡಿ ಸುತ್ತೆ
ಅಳಿದುಳಿವ ಕೆಚ್ಚೊಲವು ಇದುವೆ ಪ್ರಹರಿಯ ನಿತ್ತೆ

ಮುಗಿಯದೀ ಸೆಣಸಾಟ ಈ ಹೂಟ ಕೆಣಕಾಟ
ಅಳಿದವರ ಮನೆಮನೆಯ ಕಣ್ಣೊರಸೋ ಹೆಣಗಾಟ
ಮತ್ತೆ ದುರ್ಲಭ ಅವರ ಹೆತ್ತೊಡಲ ಸರಸಾಟ
ಪ್ರಹರಿಯಾ ಪ್ರಿಯಜನರ ಹುಸಿನಗೆಯ ಸವಿಯೂಟ

ನನಗೀಗ ಬಲುದೂರ ಕರಗುವಾ ಬೆಳ್ಸೆರಗು
ಮಿಡುಕುವಾ ಹಸಿರೆಲೆಯ ಪ್ರಕೃತಿಯ ನಲ್ಸೆರಗು
ಅರಿವಿಲ್ಲದವನೆಡೆಗೆ ಎಸೆಯದಿರಿ ಪುಷ್ಪಗಳ
ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ


 (ಸಮಗ್ರ ಕರ್ನಾಟಕದ ಕವಿತೆ ಸ್ಪರ್ದೆಯಲ್ಲಿ ದೊಡ್ಡ ರಂಗೆ ಗೌಡರ ಮೆಚ್ಚುಗೆ ಪಡೆದ ಕವಿತೆ )

ಶಿಸ್ತಿನ ಕೋಟೆಯಲ್ಲೊಂದು ಬಿರುಕು


ಶಿಸ್ತಿನ ಕೋಟೆಯಲ್ಲೊಂದು ಬಿರುಕು
-೧-

ನಾನು ಹೊರಗಿಳಿಯುತ್ತಿದ್ದಂತೆ ಹೊರಗಿನ ಚಳಿ ಕೆನ್ನೆಗೆ ರಪ್ಪನೆ ಬಾರಿಸಿದಂತಾಯಿತು. ಮೊದಲನೆಯ ಸಾರಿ ಇಲ್ಲಿ ಇಳಿಯುತ್ತಿದ್ದೇನೆ. ಆದರೆ ನನ್ನೊಳಗಿನ ಸಿಪಾಯಿಗೆ ಹಾಗೆ ಅನ್ನಿಸಲೇ ಇಲ್ಲ, ಕಾರಣ ಎಲ್ಲಿಯೂ ಯಾವ ಸ್ಥಿತಿಯಲ್ಲೂ ಯಾವ ಗಳಿಗೆಯಲ್ಲೂ, ಎಲ್ಲಾಕಡೆಯಲ್ಲೂ, ಸನ್ನದ್ಧನಾಗಿರೋದೇ ಸಿಪಾಯಿಯ ಮುಖ್ಯ ಗುರಿ.ಇದನ್ನು ಸರಿ ಸುಮಾರು ಒಂದು ವರುಷ ತರಭೇತಿ ಕೊಡುತ್ತಾರಲ್ಲ, ಅದರಲ್ಲಿ ನಮಗೆ ಅದನ್ನೇ ಕಲಿಸುತ್ತಾರಲ್ಲ.
ನನ್ನ ಜತೆಗೆ ಬಂದಿದ್ದ ಅಧಿಕಾರಿ ನನ್ನ ಕೈ ಕುಲುಕಿ, ತನ್ನ ಗಮ್ಯದ ತಾಣ ತೋರಿಸಿ ತನ್ನ ಚಾಲಕನನ್ನು ಕರೆದು ನನ್ನ ರೆಜಿಮೆಂಟಿಗೆ ಬಿಡಲು ಹೇಳಿದ. ಎಲ್ಲೆಲ್ಲೂ ಹಸಿರು , ಹಸಿರು ಹಸಿರು.ಗಾಡಿಗಳು, ಸೈನಿಕರು.


ಗಾಡಿ ಒಂದು ದೊಡ್ಡ ಮಹಾದ್ವಾರವೊಂದು ನನ್ನ ರೆಜಿಮೆಂಟಿನ ಫಲಕ ಸೂಚಿಸುತ್ತಿತ್ತು, ಅದೆಲ್ಲಾ ಇಲ್ಲಿನವರೇ ಮಾಡಿದ್ದು, ಅದರ ಮೂಲಕ ಒಳ ನುಗ್ಗಿ, ಅನತಿ ದೂರದಲ್ಲಿನ ಸಣ್ಣ ಗೇಟಿನ ಮುಂದೆ ನಿಲ್ಲಿಸಿ ನನ್ನಿಂದ ಬೀಳ್ಕೊಂಡ.ನಾನು ನನ್ನ ಬೆಡ್ ಹೋಲ್ಡಾಲ್ ಮತ್ತು ಸೂಟ್ ಕೇಸ್ ಕೆಳಗಿಳಿಸಿಕೊಂಡು ಕೆಳಗಿಳಿದ ನಾನು ಬರೇ ನಾಲ್ಕು ಹೆಜ್ಜೆ ಹಾಕಿದ್ದೆನಷ್ಟೆ.ಬವಳಿಬಂದಂತಾಯ್ತು, ನನಗರ್ಥವಾಗಲಿಲ್ಲ, ಯಾಕೆ ಇವತ್ತಿಷ್ಟು ಕ್ಷೀಣತೆ? ಗೇಟ್ ಕಾಯುತಲಿದ್ದ ಜವಾನನೊಭ್ಭ ಓಡಿ ಬಂದಿದ್ದ. ನಾನಿಳಿದಿದ್ದ ಗಾಡಿಯಿಂದ ನನ್ನನಳೆದಿದ್ದನಾತ.ನನ್ನ ಕೈಯಲ್ಲಿದ್ದ ಅಧಿಕಾರಪತ್ರ ಆತನಿಗಿತ್ತೆ, ನೋಡಿದ ಆತ ನನಗೆ ಸೆಲೂಟ್ ಕೊಟ್ಟ.ನನ್ನ ಸಾಮಾನು ಸರಂಜಾಮು ತಾನು ತೆಗೆದುಕೊಂಡು ನನ್ನನ್ನು ಕರೆದೊಯ್ದ. ಆದರೆ ನಾನು ಅಂತಹ ಸ್ವಲ್ಪ ಏರಿಳಿತದ ದಾರಿಯಲ್ಲೂ ನನಗ್ಯಾಕೆ ನಡೆಯಲಾಗಲಿಲ್ಲ. ಯಾಕೆ ಹೀಗೆ? ಆಗಲೇ ಕಥೆಯಲ್ಲೆಲ್ಲಾ ಓದಿದ್ದು ನೆನಪಿಗೆ ಬಂತು , ಓಹ್ ಇದು ಲೇಹ್!!! ಆಮ್ಲಜನಕದ ಕೊರತೆಯಿಲ್ಲಿ ಮೊದಲ ಬಾರಿಗೆ ಹೋಗುತ್ತಿರುವ ಎಲ್ಲರಿಗೂ ಬಾಧಿಸದೇ ಇರದು.ನಾಲ್ಕಾರು ಹೆಜ್ಜೆ ನಡೆದಮೇಲೆ ಸ್ವಲ್ಪ ಧೀರ್ಘ ಉಸಿರು ತೆಗೆದುಕೊಳ್ಳಲೇ ಬೇಕಾಗುತ್ತದೆ.

ಪರವಾನಿಗೆ ಪತ್ರ ತೆಗೆದುಕೊಂಡವ ನನ್ನನ್ನೂ ಸಿದಾ ಅಲ್ಲಿನ ಮುಖ್ಯಸ್ಥರ ಬಳಿ ಕರೆದೊಯ್ದ.ಆದರದಿಂದ ಬರಮಾಡಿಕೊಂಡ ಆತನನಗೆ ಕುಡಿಯಲು ನೀರು ಕೊಡಿಸಿದ. ಚಹ ಬೇಡವೆಂದೆ, ಕಾಫಿ ಇರಲಿಲ್ಲವಲ್ಲ.
ಆರ್ಡರ್ಲಿಯನ್ನು ಕರೆದು ನನಗೆ ನನ್ನ ರೂಮು ತೋರಿಸಲು ಕಳುಹಿಸಿಕೊಟ್ಟ.
ಗೂಡು ಅದು!!!
ಶಿಸ್ತಿನ ಕೋಟೆಯಲ್ಲೊಂದು ಬಿರುಕು  (೧ ಅ)



ಟಿನ್ ಶೀಟುಗಳಿಂದ ಮಾಡಿದ ಗೋಡೆಯ ಮತ್ತು ಮಾಡಿನ ಹೊದಿಕೆಯುಳ್ಳ ಆ ತಾತ್ಕಾಲಿಕ ಶೆಡ್ ನಮ್ಮ ಹೊಲಗದ್ದೆಗಳ ತಾತ್ಕಾಲಿಕ ಹಳ್ಳಿಮನೆಗಳನ್ನು ನೆನಪಿಸುತ್ತಿತ್ತು. ಪಕ್ಕದ ಕಕ್ಕಸ್ಸು ಖಾನೆಯೊ ದೇವರೇ ಗತಿ. ನಾನು ಯಾಕಯ್ಯಾ ? ನನ್ನ ಅಂತಸ್ತಿಗೆ ತಕ್ಕಂತಹ ರೂಮಾದರು ಕೊಡಬಾರದಾ? ಎಂದು ಕೇಳಿದ್ದಕ್ಕೆ ತಾತ್ಕಾಲಿಕವಾಗಿ ಬರುವವರಿಗಾಗಿರುವ ಟೆಂಟ್ ಇದೇ ಸರ್ ಎಂದನಾತ.
ಅಯ್ಯೋ ನಾನೆಲ್ಲಯ್ಯಾ ತಾತ್ಕಾಲಿಕ ? ಇಲ್ಲಿಯೇ ಶಾಶ್ವತವಾಗಿ ಮೂರೂವರೆ ನಾಲ್ಕು ವರುಷ ನಿಮ್ಮ ಜತೆಗಿರಲು ಬಂದವನು ನಾನು ಎಂದೆ ಗಾಬರಿಯಿಂದ.
ದಿನದ ಹನ್ನೊಂದೂವರೆಯ ಸಮಯವದು, ಚಳಿಯ ಕುಹರ ನನ್ನ ದೇಹದ ಅಂಗಾಂಗಗಳನ್ನು ಬಾಧಿಸುತ್ತಿತ್ತು. ಈಗಲೇ ಹೀಗಿದ್ದರೆ ರಾತ್ರೆಯು ಹೇಗೋ..?
ನನ್ನ ಮನಸ್ಸು ಇನ್ನೂ ನನ್ನ ಮಡದಿ ಮಕ್ಕಳ ಜತೆಗೆ ಕಳೆದ ಆ ಅಬಾದಿತ ನೆನಪುಗಳ ಗೃಅಂಥಿಯಿಂದ ಹೊರಬರಲು ಅಧ್ವಾನ ಪಡುತ್ತಿತ್ತು, ಇಲ್ಲಿನ ಈಗಿನ ಚಳಿಯೇ ವರ್ಣನಾತೀತ ಇನ್ನು ರಾತ್ರೆಯ ನವೆಂಬರ ದ ನಂತರದ ಫೆಬ್ರವರಿ ಮಾರ್ಚನ ವರೆಗಿನ ಕಾಲವಂತೂ ಅಮ್ಮಮ್ಮಾ, ಅದು ಹೇಗೆ ಕಳೆದೇನು..?
ಈಗಿನ ನಿಮಿಷವು ದುಸ್ತರವಾಗಿರುವಾಗ ನಾಳೆ ನಾಡಿದ್ದನ್ನು ನೆನಸುವುದರಲ್ಲಿ ಅರ್ಥವೆಲ್ಲಿದೆ.
ಮತ್ತೆ ಎನೂ ಅನ್ನದೇ ಆತ ಹೊರಟು ಹೋದ. ಹೋಗುವ ಮೊದಲು ಆತ ಹೇಳಿದ ಮಾತು ನನ್ನನ್ನು ದಿಗಿಲುಗೊಳಿಸಿತ್ತು. ಇನ್ನು ೬ ದಿನ ನಾನು ಈ ರೂಮಿನಲ್ಲೇ ಇರಬೇಕು , ಹೊತ್ತಿಗೆ ಸರಿಯಾಗಿ ಊಟತಿಂಡಿ ಇಲ್ಲಿಗೇ ಬರುತ್ತೆ.ಸಂಜೆ ನನ್ನ ಹೊಸ ಅತೀ ಶೀತಕಾಲೀನ ಉಡುಪುಗಳನ್ನು ಅವರ "ಧಿರುಸಾಗಾರ"ದಿಂದ ಪಡೆದುಕೊಳ್ಳಬೇಕು. ಹೊಸದಾಗಿ ಲೇಹ್ ಬಂದವರಿಗೆ ೭ ದಿನಗಳ ಕಾಲದ ಒಂದು ಕವಾಯತು ಇದೆ,
ಅದಕ್ಕೆ ಇಲ್ಲಿನ "ಪರಿಸರಕ್ಕೆ ಹೊಂದಿಕೊಳ್ಳಲು  ನಮ್ಮ ದೇಹಕ್ಕೆ ಆಸ್ಪದಕೊಡುವ ಹೊಂದಾಣಿಕೆಯ ಕವಾಯತು", ಅದು ಸರಿಯಾಗಿ ನಮ್ಮ ದೇಹ ಹೊಂದಿಕೊಳ್ಳದೇ ಇದ್ದರೆ..ಮತ್ತೆ ವಾಪಾಸು ಬಂದಲ್ಲಿಗೇ ಹೊರಡಬೇಕು.
ಈ ಹಳ್ಳಿಮನೆಯಲ್ಲಿ ನಾನು ಒಬ್ಬಂತಿಗನಾಗಿ ೭ ದಿನ ಇರಬೇಕು, ನನ್ನ ದೇಹ ಇಲ್ಲಿಗೆ ಹೊಂದಿಕೊಳ್ಳಲು ದಿನಾ ಸ್ವಲ್ಪ ಸ್ವಲ್ಪವೇ ಕವಾಯತನ್ನು ಜಾಸ್ತಿ ಮಾಡಿಸಿಕೊಳ್ಳುತ್ತಾ ೭ ನೇ ದಿನ ಸರಿಯಾಗಿ ಇಲ್ಲಿನವನೇ ಆಗಿಹೋಗುತ್ತೆನೆ.
ಇಲ್ಲದಿದ್ದರೆ...     ಅದೇಕೋ ಆ ಸ್ಥಿತಿಯಲ್ಲೂ ನನಗೆ ಒಳ್ಲೆಯದೆನ್ನಿಸಲಿಲ್ಲ ಇಂತಹ ಅಲೋಚನೆ, ನಾನು ನಮ್ಮವರೊಡನೆ ಸೇರ ಬಹುದಾಗಿತ್ತಾದರೂ.
ಇದೇ ಅಲ್ಲವೇ ಒಬ್ಬ  ನಿಜವಾದ ಸೈನಿಕನ ಮನಸ್ಥಿತಿ. ನನ್ನ ಎರಡೂವರೆ ವರುಷದ ರಾಗು ತನ್ನ ಅತ್ಯಂತ ಪ್ರೀಪಾತ್ರ ಆ ಆಟಿಕೆಯ ಕೋವಿಯನ್ನೆತ್ತಿ ನನಗೆ ಕೊಡುತ್ತಾ ಪಪ್ಪಾ ತಗೊ ಇದನ್ನು ತೆಗೆದುಕೊಂಡು ಹೋಗು ತೇರಾ ಕಾಮ್ ಆಯೇಗಾ, ಅಂದದ್ದು ನೆನಪಾಗಿ ಹೃದಯ ದೃವಿಸಿತು. ಹೇಗಿರಬಹುದು ಈಗ ಅವರೆಲ್ಲಾ...?
ಈಗಲೇ ಹಾರಿ ಹೋಗಿ ಅವರನ್ನು ನೋಡುವ ಹಾಗಿದ್ದರೆ... ಎಲ್ಲಾ ರೆ ಗಳ ಪ್ರಪಂಚವೇ....
ಅವರನ್ನೆಲ್ಲಾ ಪುನ ಯಾವಾಗ ನೋಡುತ್ತೇನೆಯೋ...?
 ಅಥವಾ ಇಲ್ಲವೋ ಯಾರಿಗೆ ಗೊತ್ತು..?

ಪ್ರಹರಿ

ತನ್ನವರೆಲ್ಲರನ್ನೂ ಮರೆತು ದೇಶಕ್ಕೋಸ್ಕರ ತನ್ನ ಪ್ರಾಣವನ್ನು ಬೇಕಾದರೂ ಅವಶ್ಯಕಥೆ ಬಂದರೆ ಬಲಿಕೊಡಬಲ್ಲ ಹೃದಯವಂತನಿಗೆ ಈ ತಾಣ ಮೀಸಲು