Search This Blog

Sunday, September 15, 2013

ಮತ್ತೊಂದು ದಿವ್ಯ ಸಮ್-ದರ್ಶನ



ಇವತ್ತು ನನ್ನ ತಮ್ಮನ ೫೦ ನೇ ಹುಟ್ಟುಹಬ್ಬ.
ಅದಕ್ಕೆಂದೇ ಕೆಲಸಕ್ಕೆ ರಜೆ ಹಾಕಿ ಬೆಳಿಗ್ಗೆನೇ ಮಡದಿಯೊಡನೆ  ದೇವಸ್ಥಾನಗಳಿಗೆ ಹಾಜರಿಹಾಕಲು ಹೊರಟೆ.
ಅನತಿ ದೂರವಿರುವಾಗಲೇ ಗುಡಿಯ ಘಂಟಾ ನಿನಾದ ಕೇಳತೊಡಗಿತು. ಗುಡಿಯ ನೋಡಿರಣ್ಣ ಎನ್ನುತ್ತಲೇ ಬಳಿಸಾಗಿದರೆ, ಮೇಲಿನ ಗರ್ಭ ಗುಡಿಯ ದ್ವಾರವಂತೂ ಮುಚ್ಚಿಯೇ ಇದೆ ಕೆಳಗಡೆಯ ಗೇಟನ್ನೂ ಮುಚ್ಚಿ ಕಾಯುತ್ತಿದ್ದಾರೆ ಗುಡಿಯ ಸಮವಸ್ತ್ರದ ಸೇವಕರು .ಕೇಳಿದರೆ ಪುಣ್ಯಕ್ಕೆ ಕನ್ನಡದಲ್ಲೇ ಈಗ ದೇವರಿಗೆ ನೈವೇಧ್ಯ ನಡೆಯುತ್ತಿದೆ, ಇನ್ನೂ ಸಮಯವಿದೆ, ಎಂಟಕ್ಕೆ ತೆರೆಯುತ್ತಾರೆ ಎಂದ, ಸ್ವಲ್ಪ ಸಮಯಕ್ಕೇ ಅದೇಕೋ ನಮ್ಮ ಮೇಲೆ ಕರುಣೆ ಹುಟ್ಟಿ ಹೊರ ದ್ವಾರದ ಬಾಗಿಲು ತೆರೆದು ಒಳ ಹೋಗಲು ಅನುಮತಿ ನೀಡಿದ.ನಾನು ಅಲ್ಲಿಂದ ಸಪತ್ನೀಕನಾಗಿ ಮೇಲೆ ( ಮೆಟ್ಟಿಲು)  ಹತ್ತಲು ಅನುವಾಗುವುದರೊಳಗಾಗಿ ದೇವನ ಉಗ್ರ ಭಕ್ತಾದಿಗಳಲ್ಲನೇಕರು ನನಗಿಂತ ಮುಂದೆ ನನ್ನ ದಾಟಿ ಹೊರಟರು. ಸುಮ್ಮನಿದ್ದೆ ನನ್ನ ದರ್ಶನದ ಸಮಯವನ್ನಂತೂ ಅವರು ಕಸಿಯುವದಿಲ್ಲವಲ್ಲ .ಮುಚ್ಚಿದ ಬಾಗಿಲ ಹೊರಗೆ ನಾವೆಲ್ಲ ನಿಂತು "ಬಾಗಿಲನು ತೆರೆದು... " ಅಂತ ಗುಣುಗುಣಿಸುತ್ತಿರಬೇಕಾದರೆ ದೇವಾಲಯದ ನೈವೇಧ್ಯಾಅರತಿಯ ಪಕ್ಕವಾಧ್ಯಗಳು ಮೊಳಗುತಿರಲು ತಂತಾನೇ ನನ್ನ ಕಣ್ಮುಚ್ಚಿತು, ಗಣೇಶರ ಬರಹದಲ್ಲಿನ ಹಾಗೆ ದೇವರೇ ಬಂದರು.
ಕೇಳ್ವೆ: ದೇವಾಧಿದೇವಾ ನಿನ್ನ ಈ ಭಕ್ತರಲ್ಲಿಯೇ ತಾರತಮ್ಯವೇಕೆ ? ಇಲ್ಲಿಂದ ನಿನ್ನ ಆಸ್ಥಾನಕ್ಕೆ ಹೋಗಲು ಸಾಧ್ಯವಾಗದವರು ಇಲ್ಲಿಯೇ ಕನ್ನಡದಲ್ಲಿ ನಿನ್ನ ದರ್ಶನ ಪಡೆಯಬಹುದೆಂದು ಕೊಂಡರೆ... ಹೀಗೇಕೆ..?
ಉತ್ತರ: ಹಾಗಲ್ಲ ಭಕ್ತಾ! ನೀನು ಸುರೇಶ ಹೆಗ್ಡೆಯವರ ಲೇಖನ (http://sampada.net/b...) ಎರಡೆರಡು ಬಾರಿ ಓದಿದ್ದೀಯಲ್ಲ, ಅವರವರ ಭಾವಕ್ಕೆ ಅವರವನ್ನು ಬಿಡು.
ಕೇಳ್ವೆ: ಅದು ಸರಿ, ಅದು ಸರಿ, ಹಾಗಿದ್ದಲ್ಲಿ ನಿನಗೆ ಇಷ್ಟೆಲ್ಲಾ ಆಢಂಬರದ ದುಂದು ವೆಚ್ಚದ ಮಹಲೇಕೆ?
ಉತ್ತರ: ಅದೆಲ್ಲಾ ಭಕ್ತರ ಕಾಣಿಕೆಯಲ್ಲವೇ,  ಇದು ವ್ಯಾವಹಾರಿಕ ಜಾಹೀರಾತಿನ ಯುಗ. ವಿಶ್ವದಲ್ಲೇ ವಿಖ್ಯಾತನಾದ ನನಗೆ ಇಷ್ಟಾದರೂ ಮಾಡದಿದ್ದರೆ ಹೇಗೆ? ಎಲ್ಲರೂ ನಿನ್ನ ಹಾಗೆ ಜಿಪುಣರಲ್ಲವಲ್ಲ ?.
ಕೇಳ್ವೆ: ಹಾಗೆಲ್ಲಾ ವಯ್ಯಕ್ತಿಕವಾಗಿ ಮಾತನಾಡಬಾರದು ದೇವಾ, ಭಕ್ತಿ ಭಾವ ಮನಸ್ಸಿಗೇ ತಾನೇ ? ನಮ್ಮೆಲ್ಲರ ಮನಸ್ಸೂ ನಿನ್ನದೇ ಅಲ್ಲವೇ ?
ಉತ್ತರ : ಹಾಗೆಲ್ಲಾ ಹೇಳಿ ನನ್ನನ್ನು ಇಮೋಶನಲ್ ಬ್ಲಾಕ್ ಮೇಲ್ ಮಾಡಬೇಡ.
ಕೇಳ್ವೆ: ಅದಿರಲಿ ದೇವಾ, ಗರ್ಭಗುಡಿಯ ಇದಿರಿನ ಬಲಿ ಕಂಬದ ಬುಡ ಚಿನ್ನದಿಂದ ತಗಡಿನಿಂದ ಆವ್ರತ ವಾಗಿದೆ, ಆದರೆ ನಿನ್ನ ಮೇಲೂ ಅಷ್ಟು ಚಿನ್ನವಿಟ್ಟಿಲ್ಲ ವಲ್ಲ ಏಕೆ?
ಉತ್ತರ: ತೀರಾ ವಯ್ಯಕ್ತಿಕ ವಿಷಯದ ಕೇಳ್ವೆಗೆ ಆಸ್ಪದವಿಲ್ಲ. ಬೇರೆಯೇನಾದರೂ ಕೇಳು,
ಕೇಳ್ವೆ: ನೀನ್ಯಾಕೆ ಸಪತ್ನೀಕನಾಗಿಲ್ಲ, ನಾನು ನೋಡು ಎಲ್ಲಿಗೇ ಹೋದರೂ ಸಪತ್ನೀಕನಾಗಿಯೇ ಹೋಗುತ್ತೇನೆ.
ಉತ್ತರ: ನೆನಪಿನಲ್ಲೀಡು ,ನೀನು ಈಗ ಸೈನ್ಯದಲ್ಲಿ ಇಲ್ಲ, ಎಲ್ಲಾ ಕಡೆಗೂ ನಿನ್ನ ಹಾಗೇ ಹೋಗಬೇಕೆಂದೇನೂ ಇಲ್ಲ, ಹಾಗೂ ಕಾಲ ತುಂಬಾನೇ ಮುಂದುವರಿದಿದೆ, ಮುಂದಿನ ಕಾಲದ ಗೃಹಸ್ಥರಿಗೆ ಮುಜುಗರವಾಗಬಾರದೆಂದು ನಾನು ಹೀಗೆ ಇದ್ದೇನೆ.
ಕೇಳ್ವೆ: ಸರಿ ಕಳ್ಳರು ಕಾಕರು , ಮೋಸ ಮಾಡುವವರು ಅವರೆಲ್ಲರಿಗೂ ನೀನೆಂದರೆ ತುಂಬಾ ಅಭಿಮಾನವೇಕೆ?, ಆ ಹಣ ತೆಗೆದುಕೊಳ್ಳುವುದು ತಪ್ಪಲ್ಲವಾ? ಅದು ಕಪ್ಪು ಹಣ.
ಉತ್ತರ: ನನ್ನ ಭಕ್ತರೆಲ್ಲರೂ ನನ್ನ ಭಕ್ತರೇ, ಅವರು ಏನು ಮಾಡುತ್ತಾರೆ ನನಗೆ ಅದರ ಅವಶ್ಯಕಥೆಯಿಲ್ಲ,
ಕೇಳ್ವೆ: ಅರ್ಥ ಆಗಲಿಲ್ಲ.
ಉತ್ತರ: ಈಗ ನೀನು ಎರಡೆರಡು ಕಡೆ....... ತೀರಾ ವಯ್ಯಕ್ತಿಕ ಮಾತಾಗುತ್ತೆ ಬೇಡ ಬಿಡು. ಈಗ ನಿನ್ನ ಸಂಪದದ ಹರಿಪ್ರಸಾದ ನಾಡಿಗರನ್ನೇ ತೆಗೆದುಕೋ ಅವರಿಗೆ ಈ ಸಂಪದದಲ್ಲಿ ಯಾರ್ಯಾರು ಫೇಕ್ ಗುರುತು ಇಟ್ಟುಕೊಂದು ಯಾರ್ಯಾರ ಕಾಲ್ ಎಳೀತಾರೆ ಅಂತ ಗೊತ್ತು, ಆದರೂ ಅವರು ಯಾರಿಗಾದರೂ ಹೇಳ್ತಾರಾ ನೋಡು ಇಲ್ಲ ಅಲ್ಲವಾ? ಹಾಗೆ ,ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಅವರು ಮಾಡಿದ್ದಕ್ಕೆ ಅವರೇ ಹೊಣೆ, ನಾನು ಯಾರಿಗೂ ಇದು ಹಾಕಿ ಅದು ಹಾಕಿ ಅದು ಮಾಡಿ ಎನ್ನುತ್ತೇನೆಯೋ.. ಇಲ್ಲವಲ್ಲ ಅವರವರ ಭಾವ. ನಾನಂತೂ ಯಾವಾಗ ಅಲ್ಲಿಗೆ ಹೋದೇನು ಅಂತ ಕಾಯುತ್ತಿರುತ್ತೇನೆ, ರಾತ್ರೆಯಂತೂ ಜಬ್ಬರ್ದಸ್ತ್ ಬೀಗ ಹಾಕಿ ಇಟ್ಟಿರುತ್ತಾರೆ, ಹಗಲಿಗೆ ಪೂಜಾರಿಗಳು ಬಿಡುವುದಿಲ್ಲ, ನನ್ನ ಮಂಡೆ ಬಿಸಿ ನನಗೆ. ಈಗ ನೀನೇ ನೋಡು ನನ್ನ ಬಳಿ ಬಂದೆಯಲ್ಲ..?
ಕೇಳ್ವೆ: ನಾನು ನನಗಾಗಿ ಬರಲಿಲ್ಲ, ನಾನೇನಾದರೂ ಕೇಳಿದ್ದೇನಾ ನಿನ್ನ ಹತ್ತಿರ..? ಇವತ್ತು ನನ್ನ ತಮ್ಮನ ಹುಟ್ಟುಹಬ್ಬ, ಅವನ ಹೆಸರಿನಲ್ಲಿ ಅರ್ಚನೆ ಮಾಡಿಸಲು ಬಂದಿದ್ದೆ.
ಉತ್ತರ: ಸರಿ , ನನ್ನ ಪ್ರಸಾದವಾದ ಈ ಲಡ್ಡುವಿನ ಆಸೆಯಿಂದಲಾದರೂ ಬಂದೆಯಲ್ಲ, ಆಸೆ ಆಸೆಯೇ, ಸಣ್ಣದಿರಲಿ ದೊಡ್ಡದಿರಲಿ.

ಕೇಳ್ವೆ:      ದೇವಾ ನನ್ನ ಹಿಂದಿನದ್ದೆಲ್ಲ ನನಗೆ ಗೊತ್ತಿದೆ, ಮುಂದಿನದ್ದೇನಾದರೂ ಕೇಳಲೇ?
ಉತ್ತರ :   ಕೇಳು, ನಿನ್ನ ಭೂತವೆಂದಾದರೂ ಭವಿಷ್ಯತ್ತಿಗೆ ಅಡ್ಡಿಯಾಗಬಾರದೆಂದಿದ್ದರೆ ನಿನ್ನ ವರ್ತಮಾನವನ್ನೇ ಸರಿಪಡಿಸಿಕೋ, ಭವಿಷ್ಯವೆಂದೂ ನಿನಗೆ ತೊಂದರೆ ಕೊಡೋಲ್ಲ.
ಕೇಳ್ವೆ:      ಅರ್ಥೈಸಲಾಗಲಿಲ್ಲ. ಉತ್ತರ ಇನ್ನೂ ಸರಳವಾಗಿಸು.
ಉತ್ತರ:    ನೀನಿರುವುದು ನಿನ್ನ ವರ್ತಮಾನದಲ್ಲಿ, ನನಗೆ ನಿನ್ನ ಮುಂದಿನ ನೂರೂ ತಲೆಮಾರೂ ವರ್ತಮಾನವೇ, ನಿನ್ನ ಭವಿಷ್ಯವೆಂದರೆ ಈಗಿರುವ ನೀನೇ, ನಿಜವಾದ ನೀನು ನನ್ನ ಹಾಗೇ ಅವಿನಾಶಿ, ಗತಿ ಮತ್ತು ಸ್ಥಿತಿಗಳಂತರ ನಿನಗೆ ಕಾಣುವುದು ಕ್ಷಣಿಕವಷ್ಟೇ,
ಕೇಳ್ವೆ:      ಇಲ್ಲ ,ಇನ್ನೂ ಸರಳವಾಗಿಸು
ಉತ್ತರ:     ನಿನಗೆ ಅರ್ಥೈಸಿಕೊಳ್ಳಬೇಕು ಅಂತ ಇದ್ದರೆ ತಾನೇ, ಇರಲಿಬಿಡು ಇನ್ನೊಮ್ಮೆ ಶಾಸ್ತ್ರಿಗಳ ಕ್ಲಾಸಿಗೆ ಹೋಗು ಅರ್ಥವಾಗುತ್ತದೆ. ಬೇರೇನಾದರೂ ಇದ್ದಲ್ಲಿ ಕೂಡಲೇ ಕೇಳು , ನೈವೇಧ್ಯವೋ ಬಲಿಯೋ ಬಿಸಾಡುತ್ತಿದ್ದಾರೆ, ಕಾಲ ಬಳಿ, ಅಂದರೆ ನನ್ನ ಸಾಮಾನ್ಯ ಪಾಳಿ ಶುರುವಾಯ್ತು ಅಂತ ಅರ್ಥ.
ಕೇಳ್ವೆ:       ದೇವಾ, ನವ ವಿವಾಹಿತರು ಕೆಲವು ದೇವಾಲಯಗಳಿಗೆ ಹೋಗಬಾರದೆಂದು ಹೇಳ್ತಾರಂತಲ್ಲ ಯಾಕೆ, ನಮ್ಮ ಸಂಪದಿಗರೇ ಆದ ಜಯಂತ್ ಹತ್ತಿರ ಎಲ್ಲಾ ಹಾಗೇ ಹೇಳಿದ್ದರಂತೆ.
ಉತ್ತರ:     ಅಸಾಮಾನ್ಯರು ನೀವು, ನಿಮ್ಮ ಹಾಗೇ ನಮ್ಮನ್ನೂ ಇರಗೊಡಲು ಬಯಸುತ್ತೀರಾ, ನಮ್ಮ ಕಾಲಕ್ಕೂ ನಿಮ್ಮ ಕಾಲಕ್ಕೂ ಅಜಗಜಾಂತರವಿದೆ . ಯಾವುದು ಸತ್ಯ ಮಿಥ್ಯ ಅಂತ ಹೊರಗೆ ಹುಡುಕುತ್ತೀರಲ್ಲ, ಒಳಗೆ ಹುಡುಕಿದರಲ್ಲವೇ ಸತ್ಯ ದರ್ಶನವಾಗುವುದು. ಎಲ್ಲ ಕೇಳ್ವೆಗೂ ನಿನಗೆ ಅನುಗುಣವಾದ ಉತ್ತರವಿರಲೇಬೇಕು ಎಂಬ ಆಸೆ ಏಕೆ? ಅಥವಾ ಇನ್ನೊಬ್ಬರಿಂದಲೇ ಉತ್ತರ ಏಕೆ ಬೇಕು?
ಕೇಳ್ವೆ:  ಅಲ್ಲ ಸಂಪದ ಎಂಬುದು ಉತ್ತಮ ಬ್ಲಾಗ್, ಅದರಲ್ಲಿ ಸಂಶಯವೇ ಇಲ್ಲ, ಇತ್ತೀಚೆಗೆ ಕೆಲವರಿಗೆ ಸಂಶಯವಾಗತೊಡಗಿದೆಯಲ್ಲ, ಪಾರ್ಥರೂ, ನಾವಡರೂ ಎಲ್ಲಾ ಕವಿತೆ ಬರೆಯ ತೊಡಗಿದ್ದಾರೆ, ಹೆಗ್ಡೆಯವರ, ಮಂಜೂರವರ ಬರಹಗಳು ಇತ್ತೀಚೆಗೆ ನಿಯತಕಾಲಿಕಗಳಲ್ಲೂ ಪ್ರಕಟವಾಗತೊಡಗಿವೆ.ಮೊದಲ ಕಾಲೆಳೆಯುವಯುಗ ಮುಗಿದು ಸಾಹಿತ್ಯ ಕಮ್ಮಟ ಶುರುವಾಯ್ತಾ ಹೇಗೆ ಅಂತ.
ಉತ್ತರ: ಕೇಳ್ವೆ ಬಾಲಿಶವಾಗಿದೆ, ಕವನ ಅಥವಾ ಕವಿತ್ವ ಹುಟ್ಟುವುದು ಮನದ ಚಿಂತನೆಯ ಮೂಲಕವಷ್ಟೇ? ಚಿಂತನೆಗಳು ಸಾರ್ವಕಾಲೀಕ, ಇದರ ಕೃಷಿಯೇ ಉತ್ತಮ ಬೆಳೆಯತ್ತ ಸಾಗುತ್ತದೆ. ಅದರ ಫಲಿತಾಂಶವೇ ಇದೆಲ್ಲಾ.
ಕೇಳ್ವೆ:  ಹಾಗಿದ್ದಲ್ಲಿ ಇಲ್ಲಿಗೆ ಬಂದವಲ್ಲನೇಕರು ಕಾಣೆಯಾಗತೊಡಗಿದ್ದಾರಲ್ಲ ಇದಕ್ಕೆ ಕಾರಣವೇನು? ಸಂಪದದ ಭವಿಷ್ಯ..?
ಉತ್ತರ: ಪುನಃ ಬಾಲಿಶವಾದ ಕೇಳ್ವೆ . ನೋಡು, ನಿನ್ನ ಸಂಪದಕ್ಕೆ ತನ್ನ ಸ್ವಾರ್ಥಕ್ಕಾಗಿ ಬಂದವರು ಹಲವರು, ಕಲಿಯಲು ಬಂದವರು ಕೆಲವರು, ಕಲಿಸಲೂ ಬಂದವರನೇಕರು, ಇಲ್ಲಿ ಸಂಪದ ಮಾತ್ರ ಮುಖ್ಯ, ಬರುವವರು ಹೋಗುವವರಲ್ಲ, ಸುತ್ತಲಿನ ನಿನ್ನ ಪ್ರಪಂಚದಂತೆ. ಭವಿಷ್ಯಕ್ಕೆ ಮೊದಲಿನ ಕೇಳ್ವೆಯ ಉತ್ತರ ಇನ್ನೊಮ್ಮೆ ಓದಿಕೋ.
ಕೇಳ್ವೆ:ಜಪಾನ್ ನಲ್ಲಿ ಅಷ್ಟೊಂದು ಅನಾಹುತ ನಡೆಯಿತಲ್ಲ, ಹಾಗೆಲ್ಲಾ ಆದರೆ ನಿಮಗೆ ಬೇಸರವಿಲ್ಲವಾ? ನೀವು ತಡೆಯಲಿಲ್ಲ ಯಾಕೆ?
ಉತ್ತರ: ಯಾರು ಮಾಡಿದ ಅನಾಹುತವಿದು? ಏಕಾಯ್ತು? ನಾನು ಯಾವುದಕ್ಕೆ ಬೇಸರಪಡಲಿ? ಗಟ್ಟಿಯಿದೆ ಅಂತ ಕಲ್ಲಿಗೆ ತಲೆ ಹೊಡೆದುಕೊಂಡದ್ದಕ್ಕಾ? ಅಥವಾ ಒಂದೇ ತಾಯಿಮಕ್ಕಳೇ ಹೊಡೆದುಕೊಂಡು ಸತ್ತದಕ್ಕಾ? ಇದು ಪ್ರಕೃತಿ ನಿಯಮವಷ್ಟೇ!, ಈಗ ನಿನ್ನ ಯಾವುದಾದರೂ ಅಂಗಕ್ಕೇನಾದರೂ "ಶೈತ್ಯ ಕೊಳೆತ" ಶುರುವಾದರೆ ಏನು ಮಾಡುತ್ತೀಯಾ?
ಕೇಳ್ವೆ: ದೇಹಕ್ಕೆಲ್ಲಾ ಹರಡುವ ಮೊದಲು ಆ ಅಂಗವನ್ನೇ ಕತ್ತರಿಸಿಕೊಳ್ಳುತ್ತೇನೆ.
ಉತ್ತರ: ಈಗ ನಾನು ಮಾಡಿದ್ದೂ ಅದೇ.
ಕೇಳ್ವೆ: ಆದರೆ ಜಪಾನೇ ಏಕೆ?
ಉತ್ತರ:( ನಗು) ಬೇರೆ ಎಲ್ಲಿಯಾದರೂ ಅಗಿದ್ದರೆ ನೀವ್ಯಾರಾದರೂ ಉಳಿತಿದ್ರಾ?
ಕೇಳ್ವೆ: ಮತ್ತೊಂದು ಪ್ರಶ್ನೆ...... ಮತ್ತೆ...
ಉತ್ತರ:ನಾನೇ ಹೇಳುತ್ತೇನೆ ಕೇಳು, ನಿನ್ನ ಮನೆಯಲ್ಲಿ ನೀನು ಹೇಗೆ ತಂದೆ, ಮಗ, ಅಣ್ಣ , ತಂದೆ ,ಮಾವ, ಚಿಕ್ಕಪ್ಪ ಹೇಗೋ ಹಾಗೇ ನನ್ನದೇ ಬೇರೆ ಬೇರೆ ಹೆಸರು ವಿಶ್ವದಲ್ಲೆಲ್ಲಾ ಪೂಜಿಸಲ್ಪಡುತ್ತಿದೆ, ಎಲ್ಲವೂ ನನ್ನದೇ.
ಕೇಳ್ವೆ: ಮ...ಮತ್ತೆ ಇದೆಲ್ಲದಕ್ಕೆ ಕೊನೆ ಎಂದು.?
ಉತ್ತರ:ಪ್ರಳಯ ಅಂದರೆ ಅಂತ್ಯ ಕಣಪ್ಪಾ........ ಎಲ್ಲರೂ ಒಬ್ಬರನ್ನೊಬ್ಬರು ಪ್ರೀತಿಸಲು ಆರಂಭ ಮಾಡಿದಾಗಲೇ ಇದರ ಅಂತ್ಯ.
ಬೆಳಕಿನ ಭ್ರಮೆ ಕರಗಿತ್ತೇ.. ..ನನಗೆ ಎಚ್ಚರವಾಯ್ತಾ, ಅಥವಾ... ಪಕ್ಕದಲ್ಲಿಯೇ ಇದ್ದ ಶ್ರೀಮತಿ ಕುಟ್ಟಿದಳಾ ಅರ್ಥವಾಗಲಿಲ್ಲ. ಒಮ್ಮೆಲೇ ಪಕ್ಕವಾದ್ಯ, ಗುಡಿಗಂಟೆಗಳ ನಿನಾದ ನಿಂತು ಬಿಟ್ಟಿದ್ದವು.  "ಏನ್ರೀ ದೇವಸ್ಥಾನಕ್ಕೆ ಬಂದೂ ತೂಕಡಿಸ್ತಾ ಇದ್ದೀರಲ್ಲಾ, ಪಕ್ಕದವರು ಹಿಡಿದುಕೊಳ್ಳದೇ ಇದ್ದಿದ್ದರೆ ನಿಮ್ಮನ್ನ ಕೆಳಗಿನಿಂದ ಹೆಕ್ಕಿಕೊಂಡು ಬರಬೇಕಾಗಿತ್ತು." ಸುಮ್ಮನಿರಿಸಿದೆ.

ಬಾಗಿಲು ತೆರೆಯಿತು,

ಮತ್ತೆ ನೂಕು ನುಗ್ಗಲು ಆರಂಭವಾಯ್ತು.

ಅಂತೂ ಒಳಹೊಕ್ಕೆವು, ದೇವರನ್ನು ನೋಡುತ್ತಲೇ ನನ್ನ ಹಿಂತಲೆಯಲ್ಲೊಂದು ವಿದ್ಯುತ್ ಸ್ಪರ್ಶವಾದಂತಾಯ್ತು.

ನಾನು ಯಾವುದೋ ಲೋಕದಲ್ಲಿದ್ದ ಹಾಗೆ ಅನ್ನಿಸಿತ್ತು.

ಅಂತೂ ತೀರ್ಥ ಪ್ರಸಾದ ತೆಗೆದುಕೊಂಡು ಮನೆಗೆ ಬಂದೆವು.

ಈಗಲೂ ಅದೇ ಗುಂಗಿನಲ್ಲಿದ್ದೇನೆ.

No comments:

Post a Comment