Search This Blog

Friday, August 2, 2013

ಗಾಳಿಯಲ್ಲಿ ಬರೆದ ಬರಹ





ಗುಳೆ ಹೊರಟಿದ್ದೆವಂದು
ತಿಂಗಳಬೆಳಕಿನ ಹೊನಲಲ್ಲಿ
ಮಣ್ಣಿನ ರಸ್ತೆಯಲ್ಲಿ
ಹಸು ಕರು ಬೆಕ್ಕು ನಾಯ ಕಟ್ಟಿಕೊಂಡು
ಮನೆಯ ಪರಿಕರವೆಲ್ಲ
ಎತ್ತಿನ ಗಾಡಿಯಲ್ಲಿ ತುಂಬಿಕೊಂಡು
ನಡೆಯಲು ಆಡಲು ಬೆಳೆಯಲು ಕಲಿಸಿದ್ದ
ಹಳ್ಳಿಯ ಪರಿಸರ ಹಿಂದೆ ಬಿಟ್ಟು
ತಂದೆತಾಯಿ ಅಕ್ಕ ತಮ್ಮ ಅಣ್ಣನೊಡನೆ
ನಮ್ಮೆಲ್ಲರ ಮುಂದಿನ ಭವಿತವ್ಯದ
ಬೆನ್ನು ಹತ್ತಿ
ಕ್ರಮಿಸಿದ್ದೆವು ದಾರಿ
ಚುಮುಚುಮು ಬೆಳಕಿನವರೆಗೆ
ಪಟ್ಟಣದತ್ತ



2

ಹಾಗೆಯೇ ಕ್ರಮಿಸಿತ್ತು
ನಮ್ಮ ಕಲಿಕೆ ಬದುಕಿನ ಕಾಲದ ಬಂಡಿಯ ಜತೆ
ಗಾಲಿಗಳುರುಳಿದ್ದೇ ಉರುಳಿದ್ದು
ಬೆಳ್ಳಿಯ ಹಬ್ಬದವರೆಗೆ
ಆಗಿನ ಪೋಷಕರ ಪಾತ್ರವೂ
ಜಾಗತಿಕ ಕದಡಿನ ಜತೆ
ಹಳೆಯ ವೃಕ್ಷಗಳು ಧರೆಗುರುಳಿ
ನುಗ್ಗಿವೆ ಮನಮನೆಗಳೊಳಕ್ಕೆ
ಹೂಬಿಟ್ಟ ಕಳ್ಳಿ ಹೊಸ ಬೋನ್ಸಾಯ್
ಮನುಷ್ಯನ ಮನಸ್ಸೂ ಬದುಕೂ
ಕಿರಿದಾಗುತ್ತಾ ಆಗುತ್ತಾ
ಚಿರುಟುತ್ತಾ ನಡೆದಂತೆ
ಬಲಿಯುತಿವೆ ಕುಬ್ಜವಾಗಿ
ಅವುಗಳಂತೆ


3

ಈಗಲೂ ಅನ್ನಿಸುತ್ತೆ ಕೆಲವೊಮ್ಮೆ, ಆಗ
ಹುರುಳಿತ್ತು ಆಸೆ ಆಕಾಂಕ್ಷೆಗಳ ಬದುಕಿಗೆ
ಮಾತಿಗೆ ಒಲವಿಗೆ, ಈಗಿಲ್ಲದ
ಹೊಂದಾಣಿಕೆ ಲವಲವಿಕೆ ಪ್ರಕೃತಿಯ ನಲಿವಿಗೆ
ಆಗಿಲ್ಲದ ಯಾಂತ್ರಿಕತೆ ಹೊಸ
ತಂತ್ರಜ್ಞಾನದ ಮಾಂತ್ರಿಕತೆ
ಈಗಿರುವ ಮೇರುತ್ವದಲ್ಲೂ ಎಲ್ಲಿಯೋ ತನ್ನನ್ನೇ
ಕಳೆದುಕೊಳ್ಳುತ್ತಿರುವ ಅನುಭವ
ಸುತ್ತಿದ ನೂಲುಂಡೆಯ ಉದ್ದಕ್ಕುರುಳುರುಳಿದ
ಎಳೆಯಂತೆ ಆ ನೆನಪು
ನಡೆವಾಗ ಗಾಳಿಯಲ್ಲಿ ಬರೆದ ಅಕ್ಷರದಂತೆ
ಬರೆ ಎಳೆ ರೇಖೆ ಮಾತ್ರ
ಉಳಿಯುವ ಭ್ರಮೆ




4

ಎಂಭತ್ನಾಲ್ಕರ ಈ ಇಳಿವಯಸ್ಸಿನಲ್ಲೂ
ಪ್ರತಿ ಹೊಸತ ಕಲಿಯ ಬಯಸುವ ಅಮ್ಮ
ಹಳೆತೆಲ್ಲವೂ ಬೋರೆನ್ನುವ
ಮಗ, ತಿನಿಸುಣಿಸಲ್ಲೇ ಎಲ್ಲರ ಮನಸೆಳೆವ ಸತಿ
ನನ್ನ ಸುವರ್ಣ ಸಂಭ್ರಮದ
ನಿತ್ಯ ಹೊಸತಾಗಲು ತವಕಿಸೋ ಮನಸ್ಸು
ಇನ್ನೂ ಸಾಗುತಲಿದೆ ಬದುಕು
ಮತ್ತೆ ಉಳಿಯುವ ಭ್ರಮೆಯ
ಅಶಾಶ್ವತ ಬದುಕಿನ ಅಶಾಶ್ವತ -ಪರಿಸರದಲ್ಲಿ


                                                                 ಕಾಲಾತೀತನ ಕಾಲಾತೀತ ಜಗತ್ತಿನಲ್ಲಿ
                                                                 ಮತ್ತೆ ಮತ್ತೆ ಅರಿತಿದ್ದೂ
                                                                 ಸದಾ ಅಳಿವಿನಂಚಿನಲ್ಲಿದ್ದೂ
                                                                 ಉಳಿವ ರಮ್ಯ ಕನಸಿನ 
                                                                 ಮನಸ್ಸಿನೊಂದಿಗೆ
                                                                 ಅಂತ್ಯದ ಆರಂಭಕ್ಕೆ
                                                                 ಪ್ರತಿ ಮುಂಜಾವಿನೊಂದಿಗೆ
                                                                 ಇಂಚಿಂಚೇ ಹೊಸ ಮಜಲಿಗೆ,
                                                                 ಮರುಹುಟ್ಟಿಗೆ ಎಡ ತಾಕುವ
                                                                 ದಿನದ ಹರಹಿನೊಂದಿದೆ

No comments:

Post a Comment