Search This Blog

Saturday, July 6, 2013

ತ್ಯಾಂಪನ ಗೋಳು...೧.



ಸರ್ ನಿಮ್ಮ ತ್ಯಾಂಪ ಸೀನರು ಬಂದಿದ್ದಾರೆ"
ಮಂಜು ಎಲ್ಲರಿಗೂ ಕೇಳುವಂತೆ ಕೂಗಿ ಹೇಳಿದ.
ನಾನೆಂದೆ "ಸರಿ, ಒಳ ಕಳಿಸು"
ಎಲ್ಲರೂ ನನ್ನ ಮುಖ ನೋಡಿದರು, ನಾನು ತಾರಸಿ ನೋಡಿದೆ
ಹದಿನೈದಿಪ್ಪತ್ತು ಜನರಿದ್ದೆವು, ಹೊಸದಾಗಿ ಬದಲಾಗಿಸಿದ ಏ ಸಿ ರೂಮದು, ಕಿಟಿಕಿಗಳೆಲ್ಲವೂ ಮುಚ್ಚಿದ್ದವು. ಪಟ್ಟಿ ಪರದೆಗಳೂ. ಅದಲ್ಲದೇ ಅಲ್ಲಲ್ಲಿ ಕ್ಯಾಬಿನ್ನುಗಳೂ ಇದ್ದವು ಅದರಲ್ಲೂ.
ಬಂದರು ನನ್ನ ಜನ್ಮದ ಗೆಳೆಯರು. ನಿಮಗೇ ತಿಳಿದಿದೆಯಲ್ಲಾ ತ್ಯಾಂಪ, ಸೀನನ ಸ್ವರ ಸ್ವಲ್ಪ ... ಸ್ವಲ್ಪ ....ಏನು ಗಟ್ಟೀಯೇ,
"ಏನೋ ಒಂತರಾ ವಾಸ್ನೆ ಅಲ್ವಾ" ಅಂದ ಸೀನ. "ತುಂಬಾನೆ ಸೆಖೆ ಫ್ಯಾನ್ ಹಾಕು ಅಂದ ತ್ಯಾಂಪ ತಾನೇ ಎದ್ದು ಕಿಟಿಕಿ ತೆಗೆಯಲು ಹೊರಟ,
"ಯಾಕೋ, ಏಸಿ ರೂಮಲ್ವಾ..??".ನಾನು.
"ನಿನ್ ಕರ್ಮ, ಬೇಡ ಅಂದ್ರೆ ಕೇಳಿದೆಯಾ, ಪಿಜ್ಜಾ ಅದರಜ್ಜಾ ಅಂತ ಹಾಳೂ ಮೂಳೂ ತಿನ್ಸಿದೆಯಲ್ಲಾ, ಮತ್ತೆ ಈಗ ವಾಸ್ನೆ ಅಂದ್ರೆ..? ಎಲ್ಲಿದೆಯಾ ಸಂಡಾಸು? ಕಿಟಿಕಿಯ ಪಕ್ಕದಿಂದಲೇ ಕೂಗಿ ಕೇಳಿದ ತ್ಯಾಂಪ.
ಪಕ್ಕದಲ್ಲಿರೋರು ಮುಖಕ್ಕೆ ಗಾಳಿ ಹಾಕೊಳ್ಳೋದು ಕಂಡಿತು. ತ್ಯಾಂಪನ್ನ ಹತ್ರ ಕರೆದೆ. "ನೋಡೂ ಆ ಪಕ್ಕ ಚೇಂಝ್ ರೂಂ ಅಂತ ಇದೆಯಲ್ಲಾ.. ಅದೇ... "
ಅದು ಪುಸ್ತಕಾಲಯ ತರ ಇದೆಯಲ್ಲ ಸೀನನ ಸಂಶಯ.
"ಅದು ಬರೇ ಪರದೆಯಷ್ಟೇ" , ಏನೋ ಒಂದು ಬದಲಾವಣೆ ಇರಲಿ ಅಂತ ಎಲ್ಲಾ ನವೀಕರಿಸಿದ್ದೆವು. ಇನ್ನೊಬ್ಬರ ಕಟ್ಟಡಗಳನ್ನು ಮಾಡಿಸಿ ಕೊಡುವ ನಮ್ಮ ಕಛೇರಿಯೂ ನವೀನವಾಗಿರಲಿ ಅಂತ, ಮಾರುಕಟ್ಟೆಯ ಹೊಸತೆಲ್ಲಾ ನಮ್ಮಲ್ಲಿ ಬಂದಿದ್ದುವು.
ವ್ಯಾಲಂಟೈನ್ ದಿನದ ಅವಾಂತರದಲ್ಲಿ ತ್ಯಾಂಪಿ ತುಂಬಾನೇ ಸಿಟ್ಟಾಗಿ ಓಡಿಸಿಬಿಟ್ಟಿದ್ದಳು ತ್ಯಾಂಪನನ್ನ. ಅವರ ಅನ್ಬನ್ ಸರಿಮಾಡಲು ಸೀನನೂ ಜತೆಗೇ ಇದ್ದನಲ್ಲ.
ಅದೇ ಸಿಟ್ಟಿನಲ್ಲಿ ತ್ಯಾಂಪ ಯಾವುದೋ ಬಸ್ಸಿನಲ್ಲಿ ಕುಳಿತು ಬೆಂಗಳೂರಿನ ಗೊತ್ತೇ ಇಲ್ಲದ ಯಾವುದೋ ಗಲ್ಲಿಗೆ ಹೋಗಿದ್ದ. ಆತನನ್ನು ಹುಡುಕಲು ನಾನೂ ಸೀನನೂ ತರಹೇವಾರಿ ಕಾರ್ಯಕ್ರಮ ಹಮ್ಮಿಕೊಂಡು ಸುಸ್ತಾಗಿದ್ದೆವು. ಆತನ ಕಯ್ಯಲ್ಲಿದ್ದ ಹೊಸ ಜಂಗಮವಾಣಿಯಿಂದಾಗಿ ಆತ ಬಿಳಿ ಮೈದಾನದ ಚೌಟರ ಹತ್ತಿರ ಹೋಗೋ ಬದಲು ಬನಶಂಕರಿಯ ಬಸ್ಸು ಹತ್ತಿ ಳಿದು ೬೦೦ ರಲ್ಲಿ ಕುಳಿತಿದ್ದ. ಊರೆಲ್ಲಾ ತಿರುಗಿ ಅದು ಹೇಗೋ ಗಾಂಧೀ ರಸ್ತೆಗೆ ಬಂದ, ನಮ್ ಮಂಜು ಅವನನ್ನ ನೋಡಿ ನನಗೆ ಕರೆ ಮಾಡಿದ್ದ. ಸೀನನನ್ನೂ ಅವನನ್ನೂ ಜತೆ ಮಾಡಿ ಕಳುಹಿಸಿದೆ, ಇಲ್ಲವಾದರೆ ಇನ್ನೊಂದು ಹುಡುಕಾಟಕ್ಕೆ ನಾನೇ ಹೊರಡ ಬೇಕಾಗಿತ್ತು.
ಸೀದಾ ಗಾಂಧೀ ರಸ್ತೆಯಲ್ಲಿರೋ ನಮ್ ಕಚೇರಿಗೇ ಬರುವವರು.. ಬಾತುಕೋಳಿಯದ್ದೋ ಮತ್ತೊಂದರದ್ದೋ ಗುಜರೀ ಆಹಾರದ ಖಾನಾವಳಿಯಲ್ಲಿ ತಿಂದು ಬಂದಿದ್ದಿರ ಬೇಕು. ಹವಾ ನಿಯಂತ್ರಿತ ಕಛೇರಿಯಲ್ಲಿ ಇದೂ ಒಂದು ಸಮಸ್ಯೆ... ಅದೇ ಹವೆಯನ್ನೇ ಬಾರಿ ಬಾರಿಗೂ........ ಬೇಡ ಬಿಡಿ.
ಯಾಕೋ ಸ್ವಲ್ಪ ಸಮಯ ಜಾಸ್ತಿ ಆಯ್ತು ಅನ್ನಿಸಿತು.
ಚೆಂಜ್ ರೂಮಿಗೆ ಹೋದವ ಬರಲಿಲ್ಲ..?? ಸೀನನನ್ನು ಕಳುಹಿಸಿದೆ......
ಸಮಯವಾಯ್ತು ಈತನೂ ಬರಲಿಲ್ಲ..
ನಾನೇ ಹೊರಟೆ..
ಏಯ್ ಏನಯ್ಯಾ? ನೀನೋಬ್ಬ ಭವನನಿರ್ಮಾಣಗಾರನಾ? ನೋಡು ಈ .. ಮಾಡುವುದನ್ನ ಇಷ್ಟು ಎತ್ತರದಲ್ಲಿ ಕಟ್ಟಿಸಿದ್ದೀಯಾ? ಅದೂ ಅಲ್ಲದೇ ನೀರು ಎಲ್ಲಿದೆ?
ತಿರುಗಿ ನೋಡಿದೆ ಬೇಸಿನ್ ನನ್ನು "ಒಂದ" ಕ್ಕಾಗಿ ಉಪಯೋಗಿಸುತ್ತಿದ್ದ ಸೀನನನ್ನು ತಡೆದೆ. ಅದು ಕೈ ತೊಳೆಯಲು ಉಪಯೋಗಿಸೋದು. ಎಲ್ಲಿ ತ್ಯಾಂಪ?
ಆತ ಸಂಡಾಸಿನೊಳಗಿದ್ದ, ತೊಳೆಯಲು ಒಂದು ಚೆಂಬೂ ಇಲ್ಲವಾ ಮರಾಯಾ? ಪಕ್ಕದಲ್ಲಿದ್ದ ನೀರೆರೆಚುವ ಗುರಾಣಿ ತೋರಿಸಿದೆ. ಹೊರ ಬಂದವ, ಯಾಕೆ ಒಂದೂ ನೀರುಬಳಸುವ ನಲ್ಲಿಗಳು ಕೆಲಸವೇ ಮಾಡಲ್ಲ ಕೇಳಿದ. ಅವನಿಗೆ ಇದು ನೀರಿನ ಬಳಕೆಯನ್ನು ಮಿತಗೊಳಿಸಲು ಉಪಯೋಗಿಸುವ ಸ್ವಯಂ ಚಾಲಿತ ನಲ್ಲಿಯ ಬಗ್ಗೆ ತಿಳಿಸಿಕೊಟ್ಟೆ. ಇಲ್ಲದಿದ್ದರೆ ಮಂಜು ನನಗೇ ಭಾಷಣ ಬಿಡುವ ಅಪಾಯವಿತ್ತು.
ಹೊರ ಹೊರಟೆ..ಇಬ್ಬರನ್ನೂ ಕರೆದುಕೊಂಡು....
ಇಲ್ಲಿಯೇ ಇದ್ದರೆ ಎಲ್ಲರೂ ಸೇರಿ ನನ್ನನ್ನೂ ಹೊರ ಹಾಕುವ ಅಪಾಯವೂ ಕಂಡಿತ್ತು ಅವರೆಲ್ಲರ ಕಣ್ಣುಗಳಲ್ಲಿ.
ಪಕ್ಕದ ಪಾರ್ಕನಲ್ಲಿ ಜನ ಸಮೂಹ...
ಯಾವ ಕಾರ್ಯಕ್ರಮವಿದು..? ಅತ್ತ ಕಡೆ ಹೊರಟ ತ್ಯಾಂಪ, ನಾವಿಬ್ಬರೂ ಆತನನ್ನ ಹಿಂಬಾಲಿಸಿದೆವು.
"ಅತ್ಮಕ್ಕೆ ಸಾವಿಲ್ಲ. ದೇಹ ಅನ್ನೋದು ಅಂಗಿ ಇದ್ದ ಹಾಗೆ. ನಾವೆಲ್ಲಾ ಒಂದು ಅಂಗಿ ಹಳೆಯದಾದಾಗ ಅದನ್ನು ಬಿಸಾಡಿ ಹೊಸ ಅಂಗಿ ತೊಟ್ಟು ಕೊಂಡ ಹಾಗೆ ಆತ್ಮಈ ಶರೀರವನ್ನು ಬದಲಾಯಿಸುತ್ತಾ ಇರುತ್ತದೆ. ಅದಕ್ಕೇನೆ ನಾವಂದೆವು ಆತ್ಮಕ್ಕೆ ಸಾವಿಲ್ಲ........
ನೆರೆದವರಲ್ಲಿ ಒಬ್ಬಳು ಕೇಳಿದಳು " ಸ್ವಾಮೀ ಈಜನ್ಮದಲ್ಲಿ ನನಗೆ ಮುಕ್ತಿ ಇಲ್ಲ, ಒಂದು ಗಂಡಾಂತಗ ಕಳೆಯಿತೋ ಇನ್ನೊಂದು ತಾಪತಗ,. ಅದು ಕಳೆದಡೆ ಇನ್ನೊಂದು ಗಂಡಾಂತಗ, ಅದಡ ಬೆನ್ನ ಹಿಂದೆ ಮಗದೊಂದು...
ತಾಯೀ ಇವೆಲ್ಲಾ ನಿಮ್ಮ್ ನಿಮ್ಮ ಪೂರ್ವ ಜನ್ಮದ ಕೃತ..ಇರಲಿ ಬಿಡು ನಿನಗೆ ಮುಂದೆ ಇವೆ ಸುದಿನಗಳು
ಯಾವಾಗ ಸ್ವಾಮೀಜಿ?
.ಅಂದ ಹಾಗೆ ನಾನು ಕೊಟ್ಟ ಭಸ್ಮ ತಿನ್ನಿಸಿದೆ ತಾನೇ?
ಅದೇ ಸ್ವಾಮೀ ಆ ಭಸ್ಮ ತಿಂದಾಗಿನಿಂದ ಕತ್ತೆ ಹಾಗೇ ದುಡೀತವ್ನೆ, ನನ್ನ ಪಕ್ಕಾನೇ ಬರೋದಿಲ್ಲ
" ನೋಡಮ್ಮಾ ನಿನ್ನ ಹಣೆ ಬರಹದಲ್ಲಿ ಸುಮಾರು ೪೦ ವರ್ಶ ಕಷ್ಟ ಇದ್ದೇ ಇದೆ"
ನನಗೀಗ ನಲವತ್ತೈದು ವರ್ಷ ಸ್ವಾಮೀ"
" ಇನ್ನೂ ಇಂತದ್ದೆಲ್ಲಾ ಅಭ್ಯಾಸ ಆಗ್ಲಿಲ್ವಾ ನಿಂಗೆ ? " ಸ್ವಾಮಿ ಮುಖ ಬೇರೆಡೆಗೆ ತಿರುಗಿಸಿದರು.
" ಭಕ್ತರೇ ಈ ಕಷ್ಟ ಕೋಟಲೆಗಳು ನಿಮ್ಮ ಈ ಜನ್ಮದವಲ್ಲ, ಇವೆಲ್ಲಾ ಒಂದೇ ಜನ್ಮದಲ್ ಮುಗೀತು ಅಂದ್ಕಂಡ್ರಾ ಅವರೇ ಬುದ್ದುಗಳು, ಅದೇನಿಲ್ಲ...ದೊಡ್ಡ ದೊಡ್ಡ ಶ್ರೀಮಂತರೆಲ್ಲ ದೊಡ್ಡೋರಾಗಿದ್ದುದು, ಪೂರ್ವ ಜನ್ಮದ ಸುಕೃತಗಳ ಫಲವಷ್ಟೇ, ನೀನು ಈಗಿನ ಜನ್ಮದಲ್ಲಿ ಒಳ್ಳೆಯ ಕೆಲ್ಸ ಮಾಡಿದ್ದು ಅದರ ಫಲ ಅನುಭವಿಸಿಯೇ .... ಅಂದ ಹಾಗೆ ನೀನು ಏನ್ ಕೆಲ್ಸ ಮಾಡ್ಕೊಂಡಿದ್ದೀ?
ನನ್ನ ಗಂಡ ಅಟೋರಿಕ್ಷಾ ಚಲಾಯಿಸುತ್ತಿದ್ದಾನೆ" ಭಾರೀ ಖುಷಿಯಲ್ಲಿ ಹೇಳಿದ್ದಳು ಆಭಕ್ತೆ.
ಸ್ವಾಮಿ ಉಗುಳು ನುಂಗುತ್ತಾ " ಈಗ ನೀನು ಹೇಳಮ್ಮಾ" ಇನ್ನೊಂದು ಕಡೆ ತಿರುಗಿದರು
ಏನು ನಿನ್ನ ಸಂಕಷ್ಟ..?
ನನ್ನ ಗಂಡ ಬೇರೆ ಹೆಂಗ್ಸನ್ನ್ ಮಡ್ಕೊಂಡಿದಾನೆ, ದಿನಾ ಕುಡ್ದು ಬಂದು ನಂಗೆ ಹೊಡೀತಾ ಇರ್ತಾನೆ’
ನೋಡಮ್ಮಾ ಈ ವಿಭೂತಿ ತಗೋ, ಇದನ್ನ ಜೇನು ತುಪ್ಪದಲ್ಲಿ ಕಲಸಿ ನಿನ್ನ ಗಂಡನಿಗೆ ತಿನ್ನಿಸು, ಮೂರೇ ದಿನದಲ್ಲಿ ಸರಿ ಹೋಗ್ತಾನೆ.
ಅಷ್ಟರಲ್ಲಿ ಇನ್ನೊಬ್ಬಳು " ಸ್ವಾಮೀ ನೀವು ಹೋದವಾರ ಕೊಟ್ಟ ಇಭೂತಿ ಚೆನ್ನಾಗಿ ಕೆಲ್ಸ ಮಾಡ್ತಾ ಇದೆ, ನನ್ನ ಗಂಡ ಮೂರೇ ಮೂರು ದಿನ್ದಲ್ಲಿ ಗಂಡ್ಸಾಗಿದ್ದಾನೆ; ಆದ್ರೆ ಅದು ಕಹಿ ಇತ್ತಂತೆ...!!" ನಾಚುತ್ತಾ ಹೇಳಿದಳು.
"ಅಲ್ಲಮ್ಮಾ ನಿಂಗೆ ಅದನ್ನ ತಿನ್ನಕ್ಕೆ ಹೇಳಿದ್ದಲ್ಲಮ್ಮ, ಅದನ್ನ ನಿನ್ ಮುಖಕ್ಕೆ ಹಚ್ಕೊಳ್ಳೊಕ್ ಅಲ್ವಾ ಹೇಳಿದ್ದೂ."..ಆತ ಸ್ವಾಮಿಯ ಪಟ್ಟದ ಸಿಷ್ಯ
ಅದೇ ಸಾಮೀ ನನ್ ಗಂಡ ಇನ್ನೊಂದಪ ಸಲ್ಪ ಸಿಹಿ ಆಗಿರೂ ಬಸ್ಮ ತತ್ತಾ ಅಂದೋ.
ಈಗ ನಾಚಿದ್ದು ಸ್ವಾಮಿಯೇ.."
ಸ್ವಾಮೀಜಿ ಗೆ ಜಯವಾಗಲಿ ಒಕ್ಕೊರಳಲ್ಲಿ ನೆರೆದ ಭಕ್ತರ ದಂಡು ಕೂಗಿತು.
ಅಷ್ಟರಲ್ಲಿ ಪಾನ್ ಬೀಡಾದವ ಬಂದ ಅಡ್ಡ ಬಿದ್ದು ಸ್ವಾಮಿಗೆ ಒಂದು ಹರಿವಾಣದಲ್ಲಿ ದುಡ್ಡಿನ ಕಂತೆಯನ್ನೇ ಇಟ್ಟು ಒಪ್ಪಿಸಿದ" ಸ್ವಾಮೀ ಗುಟ್ಕಾ ನಿಷೇಧ ಬಂದು ನನ್ ಸರ್ವ ನಾಶ ಆಯ್ತು ಅಂದ್ಕೊಂಡ್ ಇದ್ದೇ ಈಗ ಬೀಡಾ ವ್ಯಾಪಾರ ಜಬರ್ದಸ್ತ್ ಆಗಿ ಬಿಟ್ಟಿದೆ ನಿಮ್ ಮಂತ್ರ ಕೆಲ್ಸ ಮಾಡ್ತು ಸ್ವಾಮೀ ನಿಮ್ಮಿಂದ ನಮ್ ಜೀವನ ಪಾವನ ಆಯ್ತು"
ಮತ್ತೊಬ್ಬ, ಹಾಫ್ ಕಾಮ್ ಮಳಿಗೆಯವ, ತರಕಾರೀ ಮಾರುವವ ಎಲ್ಲರೂ ತಮ್ಮ ತಮ್ಮ ಲಾಭದಾಂಶ ಸ್ವಾಮಿಗೆ ತಲುಪಿಸಿದರು.
ಅಷ್ಟರಲ್ಲಿ ಯಾರದ್ದೋ ಕೂಗು ಕೇಳಿಸಿತು. " ಏಯ್ ತಲೆ ಕೆಟ್ಟ ಸ್ವಾಮೀ, ನಿನ್ನ ಮುಖಕ್ಕೆ ಬೆಂಕಿ ಬೀಳ.........
ಮೊದಲು ಸ್ವಾಮಿ ಹತ್ರ ಕಷ್ಟ ಸುಖ ಹಂಚಿಕೊಂಡವಳು ಅವನಿಗಡ್ಡ ಬಂದಳು
" ಥೂ ನಿನ್ !! ದೇವರಂತ ಸ್ವಾಮೀಗೆ ಬಯ್ತೀಯಾ, ನಿಂಗ್ ಒಳ್ಳೆದಾಗಲ್ಲ ನೋಡೂ....??"
"ಏನ್ ಒಳ್ಳೆದಾಗೋದು ಅವನಜ್ಜಿ ಪಿಂಡ... ಥೂ.. ಸ್ವಾಮಿ ಅಂತೆ ಸ್ವಾಮೀ, ಹೆಂಗಸರನ್ನ ಆಕರ್ಷಿಸೋಕೆ..ಇಂತದ್ದೆಲ್ಲಾ ಆಟ ಕಟ್ತಾನೆ..... ಅವನಿಗೆ ಬೇರೆ ಕೆಲ್ಸ ಇಲ್ಲ.."
"ನೋಡೀ ಹಾಗೆಲ್ಲಾ ಹೇಳ್ಬೇಡಿ.. ಅವರೇನಾರೂ ಶಾಪ ಕೊಟ್ರೆ ಮುಗೀತು ನಿಮ್ ಕಥೀ.."
"ಶಾಪ ಅಂತೆ ಶಾಪ ಇಂತ ಕಳ್ ಸನ್ಯಾಸಿಗಳನ್ನ್ ಸಾವ್ರ ಕಂಡಿದ್ದೀನಿ ನಾನು... "
"ಹಾಗೆಲ್ಲಾ ಹೇಳ್ಬೇಡಿ ಅವರು ಹಿಮಾಲಯಲ್ಲಿದ್ದು, ಜ್ಞಾನ ಪಡ್ಕಂಡ್ ಬಂದೋರು.."
ಜ್ಞಾನ ಅಂತೆ ಜ್ಞಾನ, ಏನಿಲ್ಲ, ನೀನ್ ಸುಮ್ನಿರು, ನಾನಿವತ್ತು ಈ ವಯ್ಯಂಗೇ ಜ್ಞಾನ ತೋರಿಸ್ತೀನ್ ನೋಡು..
ಈ ನಾಟಕ ನೋಡುತ್ತಿದ್ದ ಸ್ವಾಮಿ ಹೇಳಿದರು
" ಭಕ್ತಾ ಇದೆಲ್ಲಾ ಸರಿಯಾಗಲ್ಲ, ಕೋಪ ನಿಂಗೆ ಒಳ್ಳೆಯದಲ್ಲ ಬಿಟ್ಬಿಡು ಸರಿಯಾಗತ್ತೆ, ಅದಕ್ಕೆ ಈ ಪ್ರಸಾದ ತಿನ್ನು, ಒಂದರಿಂದ ಹತ್ತು ಎಣಿಸು, ಮನಸ್ಸು ತಿಳಿಯಾಗತ್ತೆ"
" ನಾನ್ ನಿನ್ನ ಭಕ್ತ ಅಲ್ಲ.......ಹತ್ತಲ್ಲ ನೂರು ಎಣಿಸ್ತೇನೆ, ಇಂತ ಬಣ್ಣದ ಮಾತುಗಳಿಗೆ ನಾನು ಬಲಿಯಾಗಲ್ಲ, ಹೆಣ್ಕಕ್ಕಳನ್ನ ಹೀಗೇ ಬಲಿಯಾಗಿಸ್ತೀಯಾ ಪಾಪಿ"
ಸ್ವಾಮಿಗಳು ಶಾಂತವಾಗಿ "ನೋಡು ಭಕ್ತಾ ಹಾಗೆಲ್ಲಾ ಮಾತಾಡಬಾರದು , ಮನಸ್ಸನ್ನು ಶಾಂತವಾಗಿಸುವುದು ಹೇಗೆ ಅಂತ ಯೋಗ ಕಲಿಸಿಕೊಡುತ್ತೆ ನಿಂಗೆ. ನಮ್ ಆಶ್ರಮಕ್ಕೆ ಸೇರ್ಕೋ..."
"ನೀನು ನಿನ್ ಭಕ್ತರು... ಎಲ್ಲರೂ ಢೋಂಗಿ ಗಳು, ಈ ಆಶ್ರಮವೂ ಢೋಂಗಿ..." ತನ್ನ ಕೈಯ್ಯಲ್ಲಿದ್ದ ಕೋಲನ್ನೆತ್ತಿ ಹೊಡೆಯಲು ಹೊರಟಾಗ.. ಕ್ರೋಧಗೊಂಡ ಭಕ್ತರ ಸಮೂಹವನ್ನು ತನ್ನ ಕಣ್ಣಲ್ಲೆ ಶಾಂತ ಮಾಡಿದ ಸ್ವಾಮಿ ತನ್ನ ಪಕ್ಕದಲ್ಲಿದ್ದ ಕಮಂಡಲವನ್ನೆತ್ತಿ ಅದರ ನೀರನ್ನು ತನ್ನ ಕೈಗೆ ಹಾಕಿಕೊಂಡು ಏನೋ ಮಂತ್ರ ಹೇಳುತ್ತಾ ಅವನ ಮೇಲೆ ಪ್ರೋಕ್ಷಿಸಿಯೇ ಬಿಟ್ಟರು.
ಆಶ್ಚರ್ಯ !!! ಹೊಡೆಯಲೆಂದು ಬಂದ ವ್ಯಕ್ತಿ ಅಚೇತನನಾಗಿ ಡಬ್ಬನೆ ಕೆಳಗೆ ಬಿದ್ದೇ ಬಿಟ್ಟ.
ಆ ಕ್ಷಣ ನಿಶ್ಶಬ್ದವಾಯ್ತು ಇಡೀ ಸಭೆಯೇ.....
"ಮತ್ತೆ ....ಅಂತ ದೊಡ್ಡ ಸ್ವಾಮಿಗೇ ಬಯ್ದರೆ ಹೆಂಗೆ ಅವರು ಬಿಟ್ಟಾರಾ..??? ತರಹೇವಾರಿ ಮಾತು ತರಹೇವಾರಿ ಗುಸುಗುಸು.
"ಶಾಂತಿ ಶಾಂತಿ" ಸ್ವಾಮಿಗಳು ಹೇಳಿದರು. ಅವನಿಗೇನೂ ಆಗಿಲ್ಲ, ಆತ ತುಂಬಾ ಒಳ್ಳೆಯವನೇ, ಆತನ ಹಳೆಯ ಜನ್ಮವನ್ನು ನಾನು ಜ್ಞಾಪಿಸಿದೆ ಅಷ್ಟೇ, ಇನ್ನು ಹತ್ತೇ ನಿಮಿಷದಲ್ಲಿ ಆತ ಎಚ್ಚರಾಗ್ತಾನೆ, ಹೇಳಿದೆನಲ್ಲಮ್ಮ ನಿನ್ನ ಗಂಡ ಈಗ ಮೊದಲಿನವನಾಗಿದ್ದಾನೆ ಬಿಡು"
ಮತ್ತೆ ಜಯಜಯಕಾರ ಮೊಳಗಿತು.
ಸ್ವಾಮಿಯ ಟೆಂಟಿನೊಳಗಿನ ಅಂಗಡಿಯ ಬಸ್ಮದ ಪ್ಯಾಕೇಟುಗಳು ಸಾವಿರ ಗಟ್ಟಳೆ ಖರ್ಚಾದವು.
ಯಾವುದಕ್ಕಿದೆ ಬಡತನ??.
ಕೆಳಕ್ಕೆ ಬಿದ್ದ ವ್ಯಕ್ತಿಗೆ ಎಚ್ಚ್ರವಾಯ್ತು. ಎದ್ದುಕುಳಿತ, ತಾನೆಲ್ಲಿದ್ದೇನೆ? ಪಕ್ಕದಲ್ಲಿನ ಆತನ ಹೆಂಡತಿ ಯನ್ನು ಗುರುತಿಸಿದ, ಅವಳು ವಿಷಯ ತಿಳಿಸಿದೊಡನೆಯೇ ಇಬ್ಬರೂ ಸ್ವಾಮಿಯ ಕಾಲಿಗೆ ಬಿದ್ದರು. ಕೈ ಕೈ ಹಿಡಿದು ಹೊರ ಹೊರಟರು. ಅವರ ಮನೆಯಲ್ಲಿ ಇನ್ನು ದೀಪಾವಳಿಯೇ
ಇದೆಲ್ಲಾ ನೋಡುತ್ತಿದ್ದ ತ್ಯಾಂಪ..
ಅರೆ...... ಈಸ್ವಾಮಿ ನನ್ನ ತ್ಯಾಂಪಿಯ ಸಂಭಂಧವನ್ನ ಸರಿ ಮಾಡಿಯಾನೇ....??

(ವಿವರ ಮುಂದಿನ ಭಾಗ ದಲ್ಲಿ...)

No comments:

Post a Comment