Search This Blog

Saturday, July 6, 2013

ಶೀನನ ಗುಟ್ಟು ಮತ್ತು ರಜೆಯ ಪ್ರವಾಸ


ಶೀನನ ಗುಟ್ಟು ಮತ್ತು ರಜೆಯ ಪ್ರವಾಸ


ಚಿಕ್ಕವನಾಗಿರುವಗ ಪಕ್ಕಾ ಮಾಸ್ಟ್ರ ಮಗನಾದ ನಾನು ಬಾಕಿ ಪಡ್ಡೆಗಳಿಗೆಲ್ಲಾ ಪ್ಯೂರ್ ಆಗಿ ಪುಳಿಚಾರ್ ಅನಿಸಿಕೊಂಡಿದ್ದೆ. ತುಂಬಾ ಸಮಯದಿಂದ ಹೆಚ್ಚು ಕಮ್ಮಿ ಒಂದು ವರ್ಷದಿಂದ ಕಾಯುತ್ತಿದ್ದ ಸಮಯವದು ಕೊನೆಗೂ ಬಂದೇ ಬಂತು. ಅದೇ ನಮ್ಮ ದೊಡ್ಡ ರಜೆ. ಓದಾಟ ಒದ್ದಾಟದ ಪರೀಕ್ಷೆಗಳ ಒತ್ತಡೊತ್ತಡದ ಸಮಯ ಮುಗಿದು ನಾವೆಲ್ಲಾ ಹಕ್ಕಿಗಳ ಹಾಗೆ ಸ್ವಚ್ಛಂದವಾಗಿ ವಿಹರಿಸಲನುವಾದ ಕಾಲವದು.ನಮ್ಮ ಹಳ್ಳಿಯ ಸಾಹಸ ಭರಿತ ಬದುಕಿನ ಹೊಸ ಹೊಸ ಅನ್ವೇಷಣೆಗಳ ಕಾಲವದು. ಅದಕ್ಕೇ ಅಷ್ಟೊಂದು ಹುರುಪು ಹುಮ್ಮಸ್ಸು. ನಮ್ಮೆಲ್ಲರ ಮನೆಯವರೂ ನನ್ನ ತಂದೆ ಶಾಲಾ ಮಾಸ್ತರಾಗಿದ್ದರಿಂದ ಇವಕ್ಕೆಲ್ಲಾ ರಜಾ ಕಾಲದಲ್ಲಿ ಹೇರಾಳ ಅವಕಾಶವಿರುತ್ತಿತ್ತು. ಇಡೀ ವರ್ಷದ ಶಾಲೆಯ ಜೀವನದ ಓದಾಟದ ಏಕತಾನತೆಯನ್ನು ನೀಗಿಸಲು ವರ್ಷಾಂತ್ಯದ ಪರೀಕ್ಷೆ ( ದೊಡ್ಡ ಪರೀಕ್ಷೆಯ)ನಂತರದ ವೆಕೇಶನ್ ರಜೆಯೇ ರಂಗ ಸಜ್ಜಿಕೆ. ಈ ಸಾರಿ ಹೊಸತೇನಾದರೂ ಸಿಗಲೆಂಬ ತುಡಿದಾಟದಲ್ಲಿರುವಾಗ ನನ್ನ ಓರಗೆಯ ಶೀನ ಬೆಟ್ಟಿಯಾಗಿದ್ದ. ಒಂದು ಅನೂಹ್ಯ ರೀತಿಯಲ್ಲಿ ಅವತ್ತು ಶನಿವಾರ ಸಂಜೆ ವಿಚಿತ್ರ ಸದ್ದು ಕೇಳಿಹೊರ ಬಂದರೆ ಶೀನ. ಹಾಗೆ ನಮಗೆಲ್ಲಾ ಶೀನ ಔಟ್ ಒಫ್ ಬೋಂಡ್!!, ಅತ ಓಡಿ ಹೋದವನಂತೋ ಅಥವಾ ಪಡ್ಡೆ ಅಂತಾನೊ ಏನೋ.ಒಂದು ಕಾರಣಕ್ಕಾಗಿ. "ಏಯ್ ನಾಳೆ ಬರ್ತೀಯಾ ಎಲ್ಲೋ ಒಂದ್ಕಡೆ ಹೋಗೋಣ" ಅಂದ "ಎಲ್ಲಿಗೆ ?" ಕೇಳಿದ್ದಕ್ಕೆ ಸರ್ಪ್ರೈಸ್ ಅಂದ. ಬೆಳಿಗ್ಗೆ ತಿಂಡಿ ತಿಂಡು ಹೊರಡೋಣವೇ ಎಂದು ಕೇಳಿದೆ, ನನಗೆ..? ಅಂತ ಪ್ರಶ್ನೆ ಹಾಕಿದ.. ಅಲ್ಲದೇ ಒಂದು ಪರಿಹಾರವೂ ಇತ್ತು ಅವನಲ್ಲಿ. ಮನೆಯ ಅಡುಗೆ ಮನೆಯ ಗೋಡೆಯಲ್ಲಿ ಒಂದು ಸಣ್ಣ ಗವಾಕ್ಷವಿದೆ ಅದು ಸೀದಾ ಕೊಟ್ಟಿಗೆಗೆ ತೆರೆಯುತ್ತೆ. ಹಳ್ಳಿಯ ಮನೆಯಲ್ಲಿ ಬೆಳ್ಳಂಬೆಳಿಗ್ಗೆ ಕರೆದ ತಂಬಾಲನ್ನು ಮನೆಯೊಳಕ್ಕೆ ತರುವಾಗ ಯಾರಾದರೂ ನೋಡಿ ದೃಷ್ಟಿ ತಾಕಿದರೆ ಕಷ್ಟ ಅಂತ ಅಮ್ಮ ಮಾಡಿಕೊಂಡ ಸ್ಪೆಷೆಲ್ ಏರ್ಪಾಡದು. "ತಾನು ಅಲ್ಲಿಯೇ ಇರ್ತೇನೆ ನೀನು ಅಲ್ಲಿಂದಲೇ ನನಗೆ ತಿಂಡಿ ಕೊಟ್ಟು ಬಿಡು" ಅಂದ. ಶೀನನೇ ನಮಗೆ ಔಟ್ ಒಫ್ ಬೋಂಡ್ ಇನ್ನು ಅವನಿಗೆ ದೋಸೆ ಕೊಟ್ಟದ್ದು ಗೊತ್ತಾದರೆ ನನ್ನ ಗತಿ..?.

ಈ ಸಾರಿಯ ನಮ್ಮ ಅಡ್ವಂಚರ್ ಹೀಗೆ ಆರಂಭವಾಯ್ತು , ಪ್ರತಿ ವರ್ಷದ ಶೀನನ ಇಂತಹಾ ಯೋಜನೆಯಲ್ಲಿ ಏನಾದರೊಂದು ವೈಶಿಷ್ಟ್ಯತೆ ಇದ್ದೇ ಇರುತ್ತದೆ.ಅದನ್ನು ನಾವೆಲ್ಲಾ ತಿಪ್ಪರಲಾಗ ಹಾಕಿದರೂ ಗೊತ್ತು ಮಾಡಿಸಿಕೊಳ್ಳಲಾರದಷ್ಟು ಸರ್ಪ್ರೈಸ್ ಆಗಿಯೇ ಇರುತ್ತದದು.. ಅಮ್ಮ ತೆಂಕಬೈಲು ಉಡುಪರ ಹೆಂಡತಿಯ ತಾನೇ ಹೊಲಿದಿಟ್ಟಿದ್ದ ಹೊಸಾ ಕುಬುಸವನ್ನು ಅದರ ಅಳತೆಗೆಂದು ಕೊಟ್ಟ ಹಳೆ ರವಿಕೆಯನ್ನೂ ಒಂದು ಪೇಪರಿನ ಪೊಟ್ಟಣದಲ್ಲಿ ಕೊಟ್ಟು ಜಾಗ್ರತೆಯಾಗಿ ಅವರಿಗೆ ತಲುಪಿಸಿ ಅವರು ಕೊಟ್ಟ ಹತ್ತು ರೂಪಾಯಿ ತರಲು ಹೇಳಿದಳು ಇದಕ್ಕೇ ನನಗೆ ಸುಲಭವಾಗಿ ಪರ್ಮಿಶನ್ ಸಿಕ್ಕಿತ್ತು. ಈ ಸಾರಿಯ ನಮ್ಮ ಯಾತ್ರೆ ಸುಮಾರು ಹತ್ತು ಕಿ ಮೀ ನಷ್ಟು ಇದ್ದುದರಿಂದ ನಾನೂ ರಾಮನೂ ಅಷ್ಟರೊಳಗೆ ಹ್ಯಾಗಾದರೂ ತಿಳಿದುಕೊಳ್ಳಲೇಬೇಕೆಂತ ಒಪ್ಪಂದ ಮಾಡಿಕೊಂಡಿದ್ದೆವು.ನಾವು ಪಯಣಿಸುತ್ತಿರುವುದು ನಮ್ಮ ಹುಟ್ಟೂರಿಗೆ ಅಂತ ಮಾತ್ರ ಅವನ ತಮ್ಮ ಪಿಣಿಯನಿಂದ ( ಅದೂ ಆತ ಅ ಬ ಪೆ ಆದುದರಿಂದ ) ಗೊತ್ತಾಗಿತ್ತಷ್ಟೇ.ಬರೇ ಒಂದು ಹಳೆ ಮೋಟು ಪಂಜೆ ಮತ್ತು ಒಂದು ಹಳೇ ಅಂಗಿಯ ಶೀನ ಶಾಲೆಯಲ್ಲಿ ಓದಿದವನಲ್ಲ. ಬರೇ ಗಂಟಿ( ಜಾನುವಾರು) ಮೇಯಿಸಿಕೊಂಡೇ ಆತ ನಮ್ಮೊಡನೆ ಬೆಳೆದದ್ದು. ಸಾಮಾನ್ಯ ಓದಲು ಅಂತ ನಮ್ಮಿಂದ ಆತ ಕಲಿತದ್ದು ಬಿಟ್ಟರೆ ಅವನಿಂದ ನಾವು ಕಲಿತದ್ದೇ ತುಂಬಾ ಜಾಸ್ತಿ, ಆದರೂ ಯಾವ ಕಲಿತವರಿಂತಲೂ ಕಮ್ಮಿಯೇನಲ್ಲ ಆತ.ಶೀನನೂ ನಾನೂ ಓರಗೆಯವರು, ಆತನೇ ನಮ್ಮಗುಂಪಿಗೆಲ್ಲಾ ಗುರು, ನಾಯಕ. ಶಾಲೆಯ ಪ್ರತೀ ಕ್ಲಾಸಿನಿಂದ ೬-೭ ಬಾರಿ ಓಡಿಹೋದ ಬಂಟನೀತ. ಓದೊಂದು ಬಿಟ್ಟು ಬಾಕಿ ಎಲ್ಲದರಲ್ಲಿಯೂ ಮಹಾ ಪಂಡಿತನೀತ. ಧೈರ್ಯದಲ್ಲೂ ಅಷ್ಟೇ. ನಮ್ಮೂರಿನ ಮಂಜರು ಒಮ್ಮೆ ಆತನಿಗೆ ದಿನಾ ಪೂಜೆ ಮಾಡಿ ಪುಣ್ಯ ಪಡೆದುಕೊಂಡ(?)ತನ್ನ ಮತ್ರ ಶಕ್ತಿಯೆಲ್ಲಾ ಈ ಜನಿವಾರದಲ್ಲೇ ಇದೆ ಎನ್ನುತ್ತಿದ್ದರು ಇವನಲ್ಲಿ, ಈತನಿಗೆ ಏನನ್ನಿಸಿತ್ತೋ ತಮಾಷೆ ಮಾಡಿದ. ಅವರು ಏಯ್ ಈ ಜನಿವಾರ ಹಿಡಿದರೆ ರಕ್ತ ಕಾರಿ ಸಾಯ್ತೀಯಾ ಎಂದರು ಪೂಜೆ ದೇವರು ಎಂದೆಲ್ಲಾ ಭಯವಿದ್ದ ನಮಗೆ ಏನಾದರೂ ಆಗಿಬಿಟ್ಟರೆ ಅಂತ ಹೆದರಿಕೆಯಿತ್ತು. ಕೊಡಿ ಎಂದು ಹೇಳಿದ ಆತ ಅವರ ಆ ಜನಿವಾರವನ್ನು ಹಿಡಿದು ಗದ್ದೆ ಬದು ದಾಟಿ ಕೆರೆಯ ಬಳಿ ನಡೆದೇ ಬಿಟ್ಟ. ಮಂಜರು ಜನಿವಾರ ಇಲ್ಲದೇ ಮನೆಗೆ ಹೋದರೆ ಮಧ್ಯಾಹ್ನ ಊಟಕ್ಕೆ ತೊಂದರೆಯಾದೀತು ಎಂದೆಣಿಸಿ ಅದನ್ನು ಅವನಿಂದ ವಾಪಾಸ್ಸು ಪಡೆದುಕೊಂಡು ದುರ್ದಾನ ಪಡೆದವರ ಹಾಗೆ ಹೊರಟೇ ಬಿಟ್ಟಿದ್ದರು, ಈತ ಮಹಾ ಯುದ್ಧವನ್ನೇ ಗೆದ್ದವರ ಹಾಗೆ ಖುಷಿಯಲ್ಲಿ ನಮ್ಮ ಕಡೆ ಹೆಜ್ಜೆ ಹಾಕಿದ್ದ.


ಹೊಲ ಗದ್ದೆ ಗಳ ಬದುವಿನ ಮೇಲೆ ಬೆಳ್ಳಂಬೆಳಗ್ಗೆ ಆ ಚುಮುಚುಮು ಚಳಿಯಲ್ಲಿ ನಡೆವ ಮಜವೇ ಬೇರೆ. ಹಸಿರೇ ಮೈವೆತ್ತು ನಿಂತಿದ್ದ ಪ್ರಕತಿಯ ಸೊಬಗು, ಮರಗಳ ಮೇಲಿನ ಹಕ್ಕಿಗಳ ಚಿಲಿಪಿಲಿ, ಹಸುಗಳ ಅಂಬಾ..... ನಮ್ಮ ಬದಿಕಿನ ಏಕತಾನತೆಯಲ್ಲಿ ಇದು ಮಾತ್ರ ನಿತ್ಯ ನಯನ ಮನೋಹರ ನಿತ್ಯ ನೂತನ. ಕಡೆಗೋಡ್ಲು ಶಂಕರ ಬಟ್ಟರ ಹಾಡು "........ ಜೀವದ ತುರುಗಳ ಮೇವುಗಳು.." ನೆನಪಾಯ್ತು.

ಹೊರಟು ನಿಂತೆವು ಬೆಳಗಿನ ತಿಂಡಿಯ ಪರಿವಿಲ್ಲದೇ ಬುತ್ತಿಯಲ್ಲಿ ಕಟ್ಟಿಕೊಂಡಿದ್ದು, ಆಗ ನೀರಿನ ಪರಿವೆಯಿರಲಿಲ. ದಾರಿಯಲ್ಲಿ ಸಿಗುವ ಚೇತೋಹಾರೀ ನದಿ ನೀರೇ ಈಗಿನ ಬಿಸ್ಲೆರಿ ಹೊರಡುತ್ತಿದ್ದ ಹಾಗೇ ರಾಮ ನನ್ನ ಕಿವಿಯಲ್ಲೇ ಪುಸುಗುಟ್ಟಿದ್ದ. ಶೀನನ ಕೈಚೀಲದಲ್ಲಿದೆ ಸರ್ಪ್ರೈಸ್. ಸಾಧ್ಯವಾದರೆ ನಾವು ಗುರಿ ಮುಟ್ಟುವ ಮೊದಲು ಗೊತ್ತಾಗುತ್ತೋ ನೋಡು ಎಂದಂದು ನಮ್ಮ ಕುತೂಹಲ ಹೆಚ್ಚಿಸಿಯೇ ಬಿಟ್ಟ. ಆ ಡಾಂಬರು ರಸ್ತೆಯಲ್ಲಿ ಆಗೊಮ್ಮೆ ಈಗೊಮ್ಮೆ ಚಲಿಸುತ್ತಿರುವ ವಾಹನಗಳು ಬೆಳಗಿನ ಚುಮುಚುಮು ಚಳಿಯಲ್ಲೂ ಆಗಾಗ್ಗೆ ಬಿಸಿ ಮುಟ್ಟಿಸುತ್ತಿದ್ದವು. ರಸ್ತೆಯ ಪಕ್ಕದಲ್ಲೇ ಉದ್ದಾನುದ್ದಕ್ಕೆ ಬೀಳಲೆಬ್ಬಿಸಿ ನಿಂತ ವಿದ್ಯುತ್ ಕಂಬಗಳಿಗಂಟಿಕೊಂಡ ಕಾಗೆಯಾಕಾರದ ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ನಂತಾದ ಕಾಗೆಯ ಕಳೇಬರ, ಪಕ್ಕದಲ್ಲಿದ್ದ ಗದ್ದೆ ಬಯಲು ನಡೆದ ಆಯಾಸ ಪರಿಹರಿಸಲೋಸುವೋ ಎಂಬಂತಿದ್ದ ಮೌರಿಗಳು, ನಮೆಲ್ಲರ ಉತ್ಸಾಹಕ್ಕೆ ಕೂರನೂ ಅಲ್ಲಲ್ಲಿ ಬರುತ್ತಿರುವ ಮೌರಿಯ ರಸ್ತೆಗಡ್ಡಲಾಗಿದ್ದ ಪೈಪ್ನೊಳಕ್ಕೆ ಈ ಕಡೆಯಿಂದ ನುಗ್ಗಿ ಆ ಕಡೆಯಿಂದ ಹೊರಬರುತ್ತಿತ್ತು.

ನೋಡನೋಡುತ್ತಿದ್ದಂತೆ ಮಾನವ ನಿರ್ಮಿತ ಕಪ್ಪು ಡಾಮರು ರಸ್ತೆಯನ್ನು ಬಿಟ್ಟು ನಾವು ಹಸಿರೇ ಉಸಿರಾದಂತಿರುವ ಗದ್ದೆ ಬಯಲುಗಳತ್ತ ನಡೆದು ಪ್ರಕೃತಿಯ ಸುರಮ್ಯ ನಿರಂತತೆಯ ಸೌಂದರ್ಯದ ಬದುಕಿನ ಹಾಡಿಯೊಳಕ್ಕೆ ನುಗ್ಗಿದೆವು. ಮಧುರ ಘಮಲಿನ ಮರಗಿಡ ಬಳ್ಳಿಗಳಿಂದಾವೃತವಾದ ಕಾಡಿದು. ಸುತ್ತಲ ಮನೋರಮ ಹಸಿರಿನ ನಡುವೆ ಪಾದಚಾರೀ ಮಾರ್ಗ. ಇದಿರಿಗೇ ಕಾಣುತ್ತಿದ್ದವು ಚಾಂಪಿ ಮತ್ತು ಮುರಿಹಣ್ಣಿನ ಮರಗಳು. ಒತ್ತೊತ್ತಾಗಿದ್ದ ಗೆಲ್ಲು( ಟೊಂಗೆ) ಗಳಲ್ಲಿ ಕೆಂಫು ಗುಲಾಬಿ ಹಸಿರು ಬಣ್ಣಗಳ ಮಾಗಿದ, ದೋರೆ ಮತ್ತು ಪೀಚುಕಾಯಿಗಳು ಸ್ವಲ್ಪ ಕುಳ್ಳಾಗಿಯೇ ಇದ್ದ ದೊಡ್ಡ ಗಾತ್ರದ ಮರ, ಇದರ ಕಾಂಡಗಳಲ್ಲಿದ್ದ ಚೂಪಾಗಿರುವ ಮುಳ್ಳುಗಳೇ ಹಣ್ಣು ಕೊಯ್ದು ತಿನ್ನುವ ಆಸೆಯಲ್ಲಿನ ಸಮಸ್ಯೆ. ಪ್ರಕೃತಿಯ ನೈಜ ಸೋಜಿಗವಿದು. ಉದ್ದಕ್ಕೆ ಬೆಳೆದ ಮುರಿನ ಮರವನ್ನು ಬಗ್ಗಿಸಿ ನನಗೆ ಬೇಕಾದಷ್ಟು ಮುರಿನ ಹಣ್ಣುಗಳನ್ನು ನನ್ನ ಜೋಳಿಗೆಯಲ್ಲಿ ತುಂಬಿಸಿಕೊಂಡೆ,ಹುಳಿಸಿಹಿ ರುಚಿಯ ಮುರಿನ ಹಣ್ಣು ಬೇಸಗೆಯಲ್ಲಿ ಒಳ್ಳೆ ವಿಟಾಮಿನ್. ತಿನ್ನುವುದೂ ಅರಗಿಸಿಕೊಳ್ಳುವುದೂ ಸುಲಭ. ನಡಿಗೆಯ ಆಯಾಸವೂ ತಿಳಿಯದಂತಾಗಿತ್ತು ನಮಗೆಲ್ಲಾ ಹಸಿರು ದೇವತೆಯ ಮಡಿಲಲ್ಲಿ. ಇಷ್ಟರಲ್ಲೇ ಎರಡೆರಡು ಬಾರಿ ರಾಮ ಮತ್ತು ಗಣಪ ಶೀನನ ಚೀಲವನ್ನು ತೆಗೆದು ಅದರಲ್ಲಿ ಏನೇನಿದೆ ಅಂತ ತಿಳಿಯುವ ವ್ಯರ್ಥ ಪ್ರಯತ್ನ ನಡೆಸಿಯಾಗಿತ್ತು. ಕಾನನದ ಪಕ್ಕದಿಂದ ಕಾಡನ್ನು ಒಂದು ನಮೂನೆಯಲ್ಲಿ ಸವರಿ ದೊಡ್ಡ ವಿದ್ಯುತ್ ಲೈನ್ ನ ಪಿರಮಿಡ್ ಆಕಾರದ ಸ್ತಂಭ್ಹಗಳು ಪ್ರಕೃತಿಯ ಸೋಜಿಗಕ್ಕೆ ಮನುಷ್ಯನ ಪ್ರಯತ್ನದ ಸವಾಲನ್ನು ಸ್ವೀಕರಿಸಿದಂತಿದ್ದುದು ಕಾಣಬಹುದಿತ್ತಾದರೂ ಪ್ರಕೃತಿಯ ಒಡಲಿನ ರಹಸ್ಯವಿನ್ನೂ ಜೀವಂತವಾಗಿತ್ತು.

ಕಾಡಿನ ದಾರಿಯಲ್ಲಿ ನಡೆಯುವಾಗ ತಲೆಯೆತ್ತಿ ನಿಂತ ಚಿತ್ರ ವಿಚಿತ್ರ ಆಕಾರದ ಮರಗಳು ಕೆಲವೊಮ್ಮೆ ಗಲಿಬಿಲಿಯ ವಾತಾವರಣವನ್ನೂ ಹುಟ್ಟು ಹಾಕುತ್ತವೆ. ಕಿಸ್ಕಾರ ಸಳ್ಳೆ ಬಿರ್ಕಿನ ಹಣ್ಣುಗಳನ್ನು ಹುಡುಕಿ ಮೆಲ್ಲುತ್ತಾ ಮುಂದುವರಿಯುತ್ತಿದ್ದೆವು. ಗುಡ್ಡ ಇಳಿದರೆ ಬಯಲು. ಮನೆ ಗಳ ಇದಿರು ಹಿಂದೆ ಹಿತ್ತಿಲಲ್ಲಿ ಬೆಳೆದ ತೊಂಡೆ ಹಣ್ಣು ಅಮಟೆ ಹಣ್ಣು ಗಳನ್ನು ಕೊಯ್ದು ಹೊರಡುವಾಗ ಶೀನನಿಗೆ ಚಿಗುರು ಸೌತೆ ಕಾಯಿ ಕಾಣಿಸಿತು. ಕೊಯ್ದು ತುಂಬಿಸಿಕೊಂಡ ಜೋಳಿಗೆಗೆ. ಆಗಲೇ ಏನೋ ಸದ್ದಾಯ್ತು. ಇಂತವಕ್ಕೆಲ್ಲಾ ಎಚ್ಚರವಿದ್ದ ಆತ ಓಡಿ ಅಂತ ಎಚ್ಚರಿಸಿ ಓಡಿಯೇ ಬಿಟ್ಟ. ಇದರಲ್ಲೆಲ್ಲಾ ನನ್ನೊಬ್ಬನನ್ನು ಬಿಟ್ಟು ಬಾಕಿ ಎಲ್ಲರೂ ಚುರುಕೇ. ಹೊಂಡ, ಬದುವಿನ ವಿಚಿತ್ರ ಕಾಂಬಿನೇಶನ್ ನಲ್ಲಿ ಓಡಲಾಗದೇ ಜಾರಿ ಬಿದ್ದಿದ್ದೆ, ಹಿಂದೆಯೇ ಬಂದಿತ್ತು ನಮ್ಮನ್ನೆಲ್ಲಾ ಹೆದರಿಸಿ ಓಡಿಸಿದ್ದ ಒಂದು ಕರಿ ನಾಯಿ, ಇನ್ನೇನು ನನ್ನ ಮೀನ ಕಂಡಕ್ಕೆ ಬಾಯಿ ಹಾಕಬೇಕು ಅಷ್ಟರಲ್ಲಿ ಟಕ್ ಅಂತ ಸದ್ದು, ನೋಡ ನೋಡುವಷ್ಟರಲ್ಲಿ ನನ್ನ ಹಿಂದಿದ್ದ ನಾಯಿ ಕಂಯಕ್ ಕುಂಯ್ಕ್ ಅನ್ನುತ್ತಾ ನಾಗಾಲೋಟದಲ್ಲಿ ಬಂದ ದಾರಿಯಲ್ಲೇ ಹಿಂದೆ ಓಡಿತು. ಈ ಕಡೆ ತಿರುಗಿದರೆ ಮುತ್ತ ನ ಕೈಯಲ್ಲಿ ಕಂಡಿತ್ತು ಕವಣೆ. ಗುರಿಯಲ್ಲಿ ಅವನಿಗೆ ಸಾಟಿ ಅವನೇ. ನಾನು ಏಳುವುದು ಸ್ವಲ್ಪ ಮೊದಲಾಗಿದ್ದರೂ ಅದು ನನಗೇ ತಾಗುತ್ತಿತ್ತು. ಕೇಳಿದ್ದಕ್ಕೆ ಹಾಗೆಲ್ಲಾ ಅಪುಕೆ ಸಾಧ್ಯವೇ ಇಲ್ಲ ಬಿಡಿ ಎಂದಿದ್ದ ಶೀನ ನಗುತ್ತಾ, ತಮ್ಮನ ಗುರಿಯ ಬಗ್ಗೆ ಅವನಿಗೂ ಅಭಿಮಾನ.

ನಾವೆಲ್ಲಾ ಓಡುತ್ತಾ ನಡೆಯುತ್ತಾ ನಲಿಯುತ್ತಾ ಕಾಲು ದಾರಿಯನ್ನು ನಡಿಗೆಯಲ್ಲಿ ಸವೆಸಿದೆವು ಅರ್ಧ ದಾರಿಕ್ರಮಿಸಿದ ನಂತರ ಸಿಕ್ಕಿತು, ಮರಗಳ ತೋಪಿನ ನಡುವೆ ದೊಡ್ದ ಕಲ್ಲು ಬಂಡೆಗಳೆಡೆಯಿಂದ ಜುಳು ಜುಳು ಹರಿಯುವ ಚಕ್ರ ನದಿ . ಮರಗಳ ನೆರಳಲ್ಲಿ ವಿಶ್ರಮಿಸೋಣವೆಂದ ಸೀನ, ಕುಳಿತು ತನ್ನ ಬೀಣಿ ಚೀಲದಿಂದ ಹೊರ ತೆಗೆದ, ತನ್ನ ಮೊದಲನೇ ಸರ್ಪ್ರೈಸ್. ನಾವೆಲ್ಲಾ ಬಿಟ್ಟ ಬಾಯಿಯಿಂದ ನೋಡುತ್ತಲೇ ಇದ್ದರೆ ಏನನ್ನೋ ನೋಡಿ ನೆನಪಾದ ಹಾಗೆ ಈಗ ಬರುತ್ತೇನೆ ಎಂದು ಹೇಳಿ ಮರಗಳ ನಡುವೆ ಎಲ್ಲಿಯೋ ಮಾಯವಾಗಿ ಬಿಟ್ಟ. ಅವನ ಪ್ಯಾಕೆಟ್ ನೋಡೋಣ ವೆಂದು ಕೊಂಡರೆ ಕೆಂಗಣ್ಣಿನ ಕೂರ ನಮ್ಮನ್ನೆಲ್ಲಾ ಬಾಯಿತೆರೆದು ನಾಲಿಗೆ ಚಾಚಿ ಹೆದರಿಸುತ್ತಿತ್ತು.

ಅದೆತ್ತಲಿಂದಲೋ ಪುನ ಕೈಯಲ್ಲಿ ಒಸರುತ್ತಿರುವ ಜೇನಿನ ಹುಟ್ಟು ಹಿಡಿದು ಪ್ರತ್ಯಕ್ಷನಾಗಿದ್ದ ಅದರ ಜತೆಯಲ್ಲೇ ಜೇನು ನೊಣಗಳ ಝೇಂಕಾರವೂ.ಅರೇ ಅದೆಲ್ಲಿ ಸಿಕ್ಕಿತು ಇದು ಎಂದರೆ ದಾರಿಯಲ್ಲಿ ಜೇನು ನೊಣ ಹಾರುವುದ ನೋಡಿದ್ದೆ. ಒಂದು ನೇರಳೆ ಮರದ ಪೊಟರೆಯಲ್ಲಿತ್ತು.,ಏನೂ ಹೆದರಬೇಡಿ ಕಚ್ಚುವ ಜಾತಿಯವಲ್ಲ ಇದು ಮಿಶ್ರಿ ಜೇನು ಬಹಳ ರುಚಿ ಇರತ್ತೆ ಎಂದ ನನಗೆ ಆಗಲೇ ನೆನಪಾಯ್ತು ನಾನು ತಂದ ದೋಸೆಗೆ ಇದು ತಕ್ಕ ಜೋಡಿ ಅಂತ. ಕ್ಷಣದಲ್ಲೇ ಅದೆಲ್ಲಾ ಚಪ್ಪರಿಸಿ ಬಿಟ್ಟೆವು. ನಮ್ಮ ಕುತೂಹಲ ಜಾಸ್ತಿ ಮಾಡುತ್ತ ಶೀನ ತನ್ನ ಮೊದಲನೇ ಪ್ಯಾಕೆಟ್ ಬಿಚ್ಚಿದ. ಅದರಲ್ಲೊಂಡು ಸಿಗರೇಟ್ ಪೆಟ್ಟಿಗೆ ಮತ್ತು ಬೆಂಕಿ ಪೊಟ್ಟಣ ವಿತ್ತು. ಅದರಿಂದ ಒಂದು ಸಿಗರೇಟ್ ತೆಗೆದು ಬೆಂಕಿ ಹಚ್ಚಿ ನನ್ನ ಕೈಗಿಡಲು ಬಂದ. ಏಯ್ ಪುಳಿಚಾರ್ ನಿನಗೆಂದೇ ತಂದದ್ದು ಇದು ಮೇಲೆ ಹೋಗಿ ಅವನಿಗೆ ( ಮೇಲೆ ತೋರಿಸಿ) ಏನು ಹೇಳ್ತೀಯಾ ಅಂತಂದು ಬಿಟ್ಟ. ರಾಮ, ಮುತ್ತ, ಎಲ್ಲರೂ ನನ್ನನ್ನೇ ನೋಡುತ್ತ ಅಣಕಿಸುತ್ತಿದ್ದಾರೆನಿಸಿ ಬೇಡವೆಂದೆ. ಆದರೂ ಈ ಎಲ್ಲರ ಒತ್ತಾಯದ ಮೇರೆಗೆ ತೆಗೆದುಕೊಂಡು ಬಾಯಲ್ಲಿಟ್ಟು ಎಳೆದೇ ಬಿಟ್ಟೆ ದಮ್ಮು. ನೋಡಿ.....ಬಂತು ಒತ್ತೊತ್ತಿ ಕೆಮ್ಮು,ನಾಲಗೆ, ಗಂಟಲೆಲ್ಲಾ ಒಣ ಉರಿ ಹತ್ತಿ ನೀರು ಅಮ್ಮಾ ಎಂದು ಕೂಗಿದೆ ಗಂಟಲನ್ನು ಕೈಯ್ಯಲ್ಲಿ ಒತ್ತಿ ಹಿಡಿದು. ನೀರು ಪಕ್ಕದಲ್ಲಿಯೇಇದೆಯಲ್ಲಾ, ಮುತ್ತ ಬೊಗಸೆಯಲ್ಲಿ ನದಿಯ ನೀರು ತಂದ ಕುಡಿದೆ. ಏನಾಗೋಲ್ಲ ಸೇದು ಎಂಬ ಒತ್ತಾಯ ಬೇರೆ.
ಹಸಿರು ಚಿಮ್ಮುವ ವಾತಾವರಣ ಮುಗಿದು ಮುಂದಿನ ಗುಡ್ಡ ಹತ್ತಲು ಮುಂದಾಯಿತು ನಮ್ಮ ತಂಡ. ಯಾವಾಗ ನಾನೂ ಅವನೂ ಗಣಪನೂ ಗುಡ್ಡದ ಮೇಲಿನ ಹೆಬ್ಬಲಸಿನ ಮರದಲ್ಲಿ ತೂಗಾಡುವ ಅರಶಿನ ಮಿಶ್ರಿತ ಹಸಿರು ಹಣ್ಣುಗಳನ್ನು ನೋಡಿದೆವೋ ಕೈಯಲ್ಲಿದ್ದ ಚೀಲವನ್ನು ಎಲ್ಲೆಂದರಲ್ಲಿ ಬಿಸಾಡಿ ಅವರಿಬ್ಬರೂ ಓಡಿ ಹತ್ತಲು ತೊಡಗಿದರು. ಬೋಳು ಬೋಳು ಎತ್ತರೆತ್ತರ ಬೆಳೆದ ಆ ಮರ ದಟ್ಟ ಎಲೆಗಳ ಬ್ರಹದ್ ವೃಕ್ಷವಾಗಿತ್ತು. ಅದನ್ನು ನೋಡುವುದೇ ಒಂದು ಸೊಗಸು. ಬೆಳೇದ ದಿವ್ಯಲಸಿನ ಕಾಯಿಯ ಗಾತ್ರದ ಹಣ್ಣುಗಳು ಮರದ ಹರಡಿದ ಕಾಂಡಗಳಲ್ಲಿ ಎಲ್ಲೆಂದರಲ್ಲಿ ಮೋಹಕವಾಗಿ ತೂಗಾಡುತ್ತಿದ್ದವು. ಬೋನಸಾಯ್ ಹಲಸಿನ ಹಣ್ಣಿನಹಾಗೇ ಇರುವ ಹಣ್ಣುಗಳು ಮುಳ್ಳುಗಳಿಂದ ಆವ್ರತವಾಗಿದ್ದು ಅದರ ಮೇಣದ (ಸೊನೆಯಿಲ್ಲದೇ ) ಗೋಜಿಲ್ಲದೇ ಬಿಡಿಸಲೂ ಮೆತ್ತಗಾಗಿದ್ದು ಹುಳಿ ಮಿಶ್ರಿತ ತೊಳೆಗಳು ತುಂಬಾ ರುಚಿಯಾಗಿರುತ್ತವೆ. 

ಅವರು ಮರ ಹತ್ತುವುದನ್ನೇ ಕಾಯುತ್ತಿದ್ದ ನಾನು ಶೀನನ ಚೀಲವನ್ನು ಎತ್ತಿಕೊಂಡು ಹತ್ತಿರದ ಪೊದೆಯತ್ತ ಹೆಜ್ಜೆ ಹಾಕಿದೆ.ಶೀನನ ಸರ್ಪ್ರೈಸ್ ನನ್ನ ತಲೆ ತಿನ್ನುತ್ತಿತ್ತು. ರಾಮನೂ ನನ್ನ ಮನದಿಂಗಿತವರಿತು ಅಡ್ದ ನಿಂತ. ಚೀಲದಲ್ಲಿ ಪೇಪರಿನಲ್ಲಿ ಸುತ್ತಿಟ್ಟ ಎರಡು ಪೊಟ್ಟಣ ಕಂಡೆ, ಒಂದು ಉದ್ದವಾಗಿತ್ತು, ಅದರಲ್ಲಿ ಕೊಳವೆಯಾಕಾರದ ಉದ್ದದ ವಸ್ತುಗಳಿದ್ದವು. ಇನ್ನೊಂದು ಚಿಕ್ಕ ಪೊಟ್ಟಣ. ನನ್ನ ಕೈ ಮೊದಲು ದೊಡ್ಡದನ್ನೇ ತೆಗೆಯಿತು ಇನ್ನೇನು ಮೇಲಿನ ಪೇಪರ್ ಹರಿಯಬೇಕು ಡಬ್ ಅಂತ ಶಬ್ದ ವಾಯ್ತು .ನನ್ನೆದುರೇ ಒಂದು ಹಣ್ಣೂ ನೆಲಕ್ಕೆ ಬಿದ್ದು ಪಚ್ಚಡಿಯಾಯ್ತು. ನೋಡುತ್ತೇನೆ.......... ಇದಿರಲ್ಲಿ ಶೀನ. ನನ್ನ ಬಾಯ ಪಸೆ ಆರಿತು ಪಕ್ಕದಲ್ಲೇ ಕೆಂಗಣ್ಣ ಕೂರ. ಅದರ ನಾಲಗೆ ನನ್ನನ್ನೇ ಅಣಕಿಸುವಂತಿತ್ತು. ಹೆಚ್ಚು ಕಮ್ಮಿ ನನ್ನ ಕೈಯ್ಯಿಂದ ಕಸಿದೇ ಬಿಟ್ಟಿದ್ದನಾತ ತನ್ನ ಚೀಲವನ್ನು.

ಉದ್ದಕ್ಕೂ ಕಾಣುತ್ತಿದ್ದ ಕಂಬಳದ ಗದ್ದೆ ನಾವು ನಿಂತ ಬದುವಿನಿಂದ ಎತ್ತರಕ್ಕೆತ್ತರಕ್ಕೆ ಬೆಳೆದ ತೆಂಗಿನ ಅಡಕೆಯ ಮರಗಳು ಗಾಳಿಗೆ ತಲೆವಾಗುತ್ತಿರುವಾಗ ಕೆಳಗೆ ಗದ್ದೆಯ ತಿಳಿನೀರಿನಲ್ಲಿ ಅವುಗಳಂತೆಯೇ ಇದ್ದ ಸುಂದರ ಪಡಿಯಚ್ಚು. ದೂರದಲ್ಲಿ ಗದ್ದೆಯ ಹಸಿರು ಹುಲ್ಲು ಮೇಯುತ್ತಿರುವ ತುರು ಮಂದೆಗಳು. ಲಾಲಿತ್ಯದ ಬೆಡಗು. ಗದ್ದೆಯ ಅಂತ್ಯದಲ್ಲೇ ಬದುವಿನುದ್ದಕ್ಕೂ ಹರಿಯುತ್ತಿರುವ ಒಂದು ನೀರಿನ ತೋಡು (ಸಣ್ಣ ತೊರೆ) ಅದರ ಮೇಲೆ ಬದುವಿನಿಂದ ಮುಂದಿನ ದಾರಿಯಾಗಿ ಒಂದು ಸಂಕ ( ಚಿಕ್ಕ ಅಡಿಕೆ ಮರದಿಂದ ನಿರ್ಮಿತವಾದ ಸೇತುವೆ) ಅಲ್ಲಿಂದಲೇ ಗುಡ್ಡ ಆರಂಭ.ಗುಡ್ಡವಿಳಿದರೇ ನಮ್ಮ ಗಮ್ಯವೆಂದ ಶೀನ. ಆಕಡೆಯಿಂದ ಮರಗ ತೋಪಿನ ಮೇಲಿನಿಂದ ಸುಳಿ ಸುಳಿಯಾಗಿ ಏಳುತ್ತಿರುವ ಹೊಗೆಯನ್ನು ನೋಡಿದಾಗಲೇ ನನಗೆ ಅವನ ಮೂರನೆಯ ಸರ್ಪ್ರೈಸ್ ನನಗೆ ಹೊಳೆಯಿತು. ನಾನು ಅತೀ ಎಚ್ಚರಿಕೆಯಿಂದ ಸಂಕವನ್ನು ದಾಟುತ್ತಿದ್ದರೆ ಮೊದಲೇ ಅದನ್ನು ಚಂಗನೆ ದಾಟಿದ್ದ ಶೀನ ಗಣಪ ಅಣಕಿಸುತ್ತಿದ್ದುದು ಕಂಡು ಬಂತು. ಮುಂದಿದ್ದ ಓಣಿಯನ್ನು ದಾಟಿ ದೊಡ್ಡ ತಾರೆ ಮರವನ್ನು ತಲುಪಿದಾಗ ನನ್ನ ಮೂಗಿಗೆ ಬಡಿದಿತ್ತು ಕಬ್ಬಿನ ರಸ ಬೇಯುತ್ತಿರುವ ಪರಿಮಳ. ನನ ಮೂಗೆಂದೂ ಯಾವುದನ್ನು ಮರೆತರೂ ಇದನ್ನು ಮರೆಯಲಾಗದು. ನನ್ನ ಫೇವರೈಟ್ .. ಅದೇ ಬೆಲ್ಲ ಸಿದ್ಧ ಮಾಡುವ ಮನೆ
ಆಲೆ ಮನೆ.

ಹತ್ತು ಕಿಮೀ ನಡೆದ ಆಯಾಸ ಕ್ಷಣದಲ್ಲಿ ಮರೆಯಾಯ್ತು ಹೇಳ ಹೆಸರಿಲ್ಲದೇ ಹಾರಿ ಹೋಯಿತು.ದಪ್ಪವಾದ ದೊಡ್ಡ ದೊಡ್ಡ ಕವಲು ಮರದ ಎಲೆಗಳನ್ನು ಮಡಿಸಿ ದೊಣ್ಣೆಯನ್ನಾಗಿಸಿಕೊಂಡು ಗುಡ್ಡದ ತಪ್ಪಲಿಂದ ಇಳಿದು ನಾವೆಲ್ಲರೂ ಅಲ್ಲಿಗೆ ಹೆಚ್ಚು ಕಮ್ಮಿ ಓಡಿಯೇ ಬಿಟ್ಟೆವು. ಇದಿರು ಕಾಣುತ್ತಿರುವ ರಾಶಿ ರಾಶಿ ಕಬ್ಬಿನ ಜಲ್ಲೆಗಳು ಒಂದೆಡೆಯಾದರೆ ಗಾಣದಿಂದ ಚಪ್ಪಡಿಯಾಗಿ ಹೊರ ಬರುತ್ತಿದ್ದ , ಬಂದಿದ್ದ ಕಬ್ಬಿನ ರಾಶಿ ರಾಶಿ ಸಿಪ್ಪೆಗಳು ಇನ್ನೊಂದೆಡೆ. ಉರುಟಾದ ದೊಡ್ಡ ದೊಡ್ಡ ಎರಡು ಒಲೆಗಳ ಉರಿಯುತ್ತಿರುವ ಬೆಂಕಿಯ ಮೇಲೆ ದೊಡ್ಡದಾದ ಎರಡು ಕೊಪ್ಪರಿಗೆಗಳು ಒಂದರಲ್ಲಿ ಬೇಯುತ್ತಿದ್ದ ಕಬ್ಬಿನ ಹಾಲು ಹಾಗೂ ಮತ್ತೊಂದರಲ್ಲಿ ಬಿಳಿ ಬಿಳಿ ನೊರೆಯೇಳುತ್ತಿರುವ ಬೆಲ್ಲವಾಗುತ್ತಿರುವ ಕಬ್ಬಿನ ರಸ . ಇವೆಲ್ಲವನ್ನು ನೋಡಿಯೇ ಭುಗಿಲೆದ್ದ ಉದರಾಗ್ನಿ ತಣಿಸಲು ಹಬೆಯಾಡುವ ನೊರೆಬೆಲ್ಲ ತಿನ್ನಲು ಕುಳಿತೆವು, ನಮ್ಮ ಉದರ ತುಂಬಿದಾಗಲೇ ಕೊನೆಯ ಸರ್ಪ್ರೈಸ್ ನೆನಪಾಗಿದ್ದು. ಯಾವ ಮಾಯದಲ್ಲೋ ಶೀನ ತಾನು ತಂದಿದ್ದ ಚೀಲದಿಂದ ತೆಗೆದ ವಸ್ತುವನ್ನು ನಾವೆಲ್ಲರೂ ನೋಡ ನೋಡುತ್ತಿದ್ದಂತೆಯೇ ಬಿಸಿ ಬಿಸಿಯಾಗಿ ಹಬೆಯಾಡುತ್ತಿದ್ದ ಒಲೆಯ ಕಡೆಗೆ ತೂರಿದ. ಅದು ಹೋಗಿ ಕೊಪ್ಪರಿಗೆಯೊಳಕ್ಕೆ ಬಿತ್ತು. 

No comments:

Post a Comment