
ಹಣಕಾಸಿನ ಕೀರ್ತಿ ಯಶಸ್ಸಿನ
ವಿಷಯದಲ್ಲಂತೂ ಸಂಶಯವೇ ಇಲ್ಲವಂತೆ
ಮನೆ ಮನಸ್ಸೂ ಮತ್ತು ಆರೋಗ್ಯ,
ಎಂದೆಂದಿಗಿಂತಲೂ ಉತ್ತಮವಂತೆ
ಮನೆಯವರು ಮಕ್ಕಳೂ ತುಂಬಾನೇ ಖುಷ್
ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ
ಅಮ್ಮ ಹೇಳ್ತಾ ಇದ್ದಳು ಮೊನ್ನೆ
ಎರಡು ತಿಂಗಳಿಂದ ಸಂಬಳ ಸಿಗ್ತಾ ಇಲ್ಲ
ರಿಸೆಷನ್ ಇನ್ನೂ ಮುಗಿದಿಲ್ಲವಂತೆ
ಇದು ಹೀಗೇ ಮುಂದುವರಿಯುತ್ತಂತೆ
ಕೇಳಲೇ ಬೇಡಿ ಇಡೀ ವರ್ಷ ಮತ್ತೆ
ಇಂಕ್ರಿಮೆಂಟೂ ಭಡ್ತಿಯೂ, ಬೋನಸ್ಸೂ ಭತ್ಯೆ,
ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ
ಅಮ್ಮ ಹೇಳ್ತಾ ಇದ್ದಳು ಮೊನ್ನೆ
ಈಗಂತೂ ಎಟಿಎಮ್ ಮಿಷನ್ನೂ
ಮೊನ್ನೆ ಕಿಚಾಯಿಸಿತು ನನ್ನನ್ನು
ಎಲ್ಲಿಂದಾದರೂ ಹಾಕಿ ನೋಡು ಹಣ
ಮತ್ತೆ ಬೇಕಾದರೆ ಮಾಡು ತಪಾಸಣೆ
ಇದ್ದರಲ್ವಾ ಕೊಡೋಕೆ ನಿನ್ನ ಹಣ
ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ
ಅಮ್ಮ ಹೇಳ್ತಾ ಇದ್ದಳು ಮೊನ್ನೆ
ಕಳೆದ ಸಾರಿ ತಗೊಂಡ ಸಾಲ
ಇನ್ನೂ ತೀರಿಸಿ ಆಗಿಲ್ಲ
ಮತ್ತೆ ಯಾರು ಕೊಡ್ತಾರೆ ಅಲ್ಲಾ
ಕೆಲಸ ಜಾಸ್ತಿಯೇ ಎಂದಿನಂತೆಯೇ ಎಲ್ಲಾ
ರಿಸೆಷನ್ ರಿಸೆಷನ್ ರಿಸೆಷನ್ ಅಲ್ಲಾ
ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ
ಅಮ್ಮ ಹೇಳ್ತಾ ಇದ್ದಳು ಮೊನ್ನೆ
ಮಾಲೀಕ ಮನೆ ಬಾಡಿಗೆ ಏರಿಸಿದ ಮೊನ್ನೆ
ಎಲ್ಲಾ ವಸ್ತುಗಳ ಬೆಲೆಯೂ ಜಾಸ್ತಿಯೇ ಇನ್ನೂ
ಊಟ ತಿಂಡಿ ಬಿಡಲು ಸಾಧ್ಯವಿಲ್ಲ ವಲ್ಲ
ನಾವು ಮಕ್ಕಳೊಂದಿಗಿನ, ಸಂಸಾರಸ್ಥರಲ್ವಾ
ಗಾಣದೆತ್ತಿನ ರೀತಿ ದುಡಿಯುವಂತಹರಲ್ವಾ
ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ
ಅಮ್ಮ ಹೇಳ್ತಾ ಇದ್ದಳು ಮೊನ್ನೆ
ಆರೋಗ್ಯ ಸರಿ ಯಾಗಿಯೇ ಇದೆ ಇನ್ನೂ
ಆದರೂ ಮೊನ್ನೆಯಿಂದ ಸಣ್ಣಕ್ಕೆ ಜ್ವರ ತಲೆನೋವು
ಇದೆಲ್ಲಾ ಏನಿಲ್ಲ ಬಿಡಿ ನಮಗೆ ಮಾಮೂಲು
ಇದೆ ಕೆಲವೊಮ್ಮೆ ಬೀಪಿ ಎದೆ ನೋವೂ
ನಡೆದರೂ ಸರಿ ದಮ್ಮೂ ಸ್ವಲ್ಪ ಕೆಮ್ಮೂ
ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ
ಅಮ್ಮ ಹೇಳ್ತಾ ಇದ್ದಳು ಮೊನ್ನೆ