ತಗೋ ಗೊಪೂ ನಿನ್ನ ಚಂದ್ರಿಕ ಸಾಬೂನು
ಅಪ್ಪಯ್ಯ ಸಂಜೆ ಬಂದು ಗೋಪೂ ಕೈಗೆ ಚಂದ್ರಿಕ ಸಾಬೂನು ಕೊಡುವಾಗ ಇಡೀ ಪ್ರಪಂಚ ತನಗೇ ಸಿಕ್ಕಿತು ಎಂಬ ಹಾಗೆ ಆತ ಖುಷಿಪಟ್ಟಿದ್ದರೆ, ಮನೆಯವರೆಲ್ಲರಿಗೂ ಒಂದೇ ಸಾಬೂನು ಉಪಯೋಗಿಸುವ ಆ ಕಾಲದಲ್ಲಿ ಅಣ್ಣ ಅಕ್ಕಂದಿರಿಗೆ ಅಸೂಯೆಯಾಗೋದು ಸಹಜ..
ಹಾಗಂತ ಈ ಸಾಬೂನೂ ಸುಮ್ಮನೇ ಕೈಗೆ ಬಂದಿರಲಿಲ್ಲ... ಅದರ ಹಿಂದೆ ಆತನ ಹತ್ತು ಹದಿನೈದು ದಿನಗಳ ಪ್ರಯತ್ನವಿತ್ತು. ಸುಮಾರು ಸಂಭಂದಿಗಳ, ಸ್ನೇಹಿತರ ವಶೀಲಿ ಇತ್ತು,
ಅದಕ್ಕೂ ಒಂದು ಸಕಾರಣವಿತ್ತು...
ಅದೇಕೋ ಮುಖದಲ್ಲಿ ಬೆಳ್ಳನೆಯ ಕಲೆ ( ಸಿಬ್ಬ) ಕಾಣ ತೊಡಗಿತ್ತು. ಪ್ರತಿ ಬಾರಿ ಕನ್ನಡಿ ನೋಡಿದಾಗಲೆಲ್ಲಾ ಗೋಪೂಗೆ, ಮತ್ತು ಪ್ರತಿ ಬಾರಿ ಬೇರೆಯವರು ಅದನ್ನೇ ತೋರಿಸಿ ಹಂಗಿಸಿದಾಗಲೆಲ್ಲಾ ಕಸಿವಿಸಿಯಾಗುತ್ತಿತ್ತು. ಹಲವಾರು ಬಾರಿ ಹಲವಾರು ಸನ್ನಿವೇಶಗಳಲ್ಲಿ ಖಳನಾಯಕನಾಗಿ ಕೆಲಸ ಮಾಡಿತ್ತದು. ಕಂಡ ಕಂಡವರೆಲ್ಲಾತಮ್ಮ ತಮ್ಮ ಸಲಹೆಗಳನ್ನು ಕೊಟ್ಟು, ಅವನ್ನು ಅನುಸರಿಸಿದರೂ ಮಾಯವಾಗದೇ ಜಾಸ್ತಿ ಹರಡತೊಡಗಿದಾಗ, ಅಸಹನೆಯಾಗಿ ಪರಿಣಮಿಸಿ, ಅಪ್ಪ ಅಮ್ಮ ಇಬ್ಬರೂ ಸುಮಾರು ದಿನದಿಂದ ಮಗ ಇಟ್ಟಿದ್ದ ಬೇಡಿಕೆಯನ್ನು ಈಡೇರಿಸಲು ನಿರ್ಧರಿಸಿದ್ದರು.
ಅದರ ಫಲಿತಾಂಶವೇ..
ಈ ಚಂದ್ರಿಕ ಸಾಬೂನು
ಮತ್ತೊಮ್ಮೆ ಅದನ್ನು ಬಿಚ್ಚುವ ಮೊದಲು ಆಘ್ರಾಣಿಸಿದ, ಬೇರೆ ಯಾರಿಗೂ ಇಲ್ಲ, ತನಗೆ ಮಾತ್ರ ಅನ್ನೋ ನೆನಪೇ ಎಷ್ಟು ಮಧುರ...
ಯಾವಾಗ ಅದನ್ನು ಉಪಯೋಗಿಸಿಯೇನು ಅನ್ನೋ ಆತುರ ಬೇರೆ..
ಏನು ಇದಂತೂ ಈಗಲೇ ಸ್ನಾನ ಮಾಡೋ ಹಾಗಿದೆ... ಅಂದಳು ಚಿಕ್ಕಕ್ಕ.. ಅವಳಿಗೆ ಮೊದಲು ಅಸೂಯೆ ಈತನ ಜಂಬ ನೋಡಿ..
ಆಗೆಲ್ಲಾ ಬೆಳಿಗ್ಗೆ ಎದ್ದ ಕೂಡಲೇ ಸ್ನಾನ ಮಾಡುವ ಅಭ್ಯಾಸ, ಈಗಿನ್ನೂ ಸಂಜೆ ಅಷ್ಟೇ, ಇನ್ನು ರಾತ್ರಿಯಾಗಿ.......
ಅದನ್ನುಹೊರಗಿನ ಕಾಗದ ಹರಿಯದೇ ತನ್ನ ಜಖೈರಿಯಲ್ಲಿನ ಹೊಸ ಸಾಬೂನು ಪೆಟ್ಟಿಗೆ ಹೊರತೆಗೆದ,
ಅದು ತರಗತಿಯಲ್ಲೇ ಮೊದಲಿಗನಾಗಿ ಬಂದದ್ದಕ್ಕೆ ಸಿಕ್ಕಿದ ಬಹುಮಾನ, ಅದೂ ತನ್ನ ಪ್ರೀತಿಯ ಮಾಸ್ಟ್ರು ಕೊಟ್ಟದ್ದು, ವಿಶೇಷವಾಗಿ ತನ್ನ ಎಲ್ಲರೊಡನೆ ಹೊಂದಿಕೊಂಡು ಹೋಗುವ ಅರಳು ಹುರಿದಂತೆ ಮಾತನಾಡುವ ಗುಣಕ್ಕೆ...ಮಾರು ಹೋಗಿ..
ಸಾಬೂನು ಪೆಟ್ಟಿಗೆಯಲ್ಲಿ ಇಟ್ಟು ಅದರ ಮುಚ್ಚಳ ಮುಚ್ಚಿ ಯೋಚಿಸಿದ ಇದನ್ನೀಗ ಎಲ್ಲಿ ಇಡೋದು..?
ಎಲ್ಲಿಟ್ಟರೆ ಯಾರ ಕಣ್ಣಿಗೂ ಬೀಳಲ್ಲ..?
ಆಗೆಲ್ಲಾ ಮನೆಗಳು ಹಂಚಿನ ಅಥವಾ ಒಣ ಹುಲ್ಲಿನ ಮನೆಗಳು...ಇವೆಲ್ಲಾ ಸುತ್ತಲಿನ ಗೋಡೆಯ ಮೇಲಿನಿಂದ ರೀಪು ಪಕ್ಕಾಸೆ ಮತ್ತು ಜಂತಿಯ ಜತೆ ಮಧ್ಯದಲ್ಲಿ ಎತ್ತರವಾಗಿರೋ ಇಳಿಜಾರು ಚಾವಣಿ..
ಮನೆಯ ಇದಿರು ಬಾಗಿಲು ದಾಟಿ ಒಳಗೆ ಬಂದರೆ ಹಜಾರ ಬಲಗಡೆ ಎರಡು ಕೋಣೆ, ಹಾಗೇ ಎಡಗಡೆ ಒಂದು ಕೋಣೆ. ಹಜಾರದ ಬಲ ಪಕ್ಕದಲ್ಲೇ ಒಳನುಗ್ಗಿದರೆ ನಮ್ಮ ಓದುವ ಕೋಣೆ ಅದರ ಹಿಂದೆ ಬಚ್ಚಲು ಮನೆ..
.................
ಮಾರನೆಯ ದಿನ ಬೆಳಗು ಎಲ್ಲಕ್ಕಿಂತ ಎಲ್ಲರಿಗಿಂತ..ಮುಂಚೆಯೇ...
ಗೋಪು ಎದ್ದು ಮೈ ಮುರಿದ...
ಎದ್ದವನೇ ಬಚ್ಚಲು ಮನೆಗೆ ಸವಾರಿ... ಸ್ನಾನಕ್ಕೆ ಬಿಸಿನೀರು ಬೇಕಲ್ಲ..
ಸಾಹೇಬರ ಅಂಗಡಿಯಿಂದ ತಂದ ಅಡಿಕೆ ಸಿಪ್ಪೆಯ ರಾಶಿಯಿಂದ ಸ್ವಲ್ಪ ತೆಗೆದು ಒಲೆಗೆ ಒಟ್ಟಿ ಅದರ ಮೇಲೆ ಒಣ ಸೌದೆ ಹಾಕಿ ಸಜ್ಜಾಗಿಸಿ, ಒಂದು ಚಿಮಣಿ ದೀಪ ಹಚ್ಚಿ ಒಂದು ತೆಂಗಿನ ಕಾಯಿಯ ಸಿಪ್ಪೆಯ ಮಧ್ಯ ಭಾಗದಲ್ಲಿ ಎರಡೇ ಎರಡು ಅಡಿಕೆ ಸಿಪ್ಪೆಯಿಟ್ಟು ಬೆಂಕಿ ಹೊತ್ತಿಸಿದ. ಈ ಬೆಂಕಿಯನ್ನುಮೊದಲು ಸಜ್ಜಾಗಿಸಿದ ಒಲೆಯೊಳಗಿನ ಒಣ ಸಲಕರಣೆ ಇದಿರು ಇಟ್ಟ,
ಬೆಂಕಿ ಭಗ್ಗನೆ ಹೊತ್ತಿಕೊಂಡಿತು..
ಇನ್ನು ಕೆಲವೇ ಹೊತ್ತು.. ಸೀದಾ ಹೊರಗೋಡಿ ಕಾಮತರ ಮನೆಯಂಗಳದಲ್ಲಿ ಬೆಳೆದಿದ್ದ ಮಾವಿನ ಎರಡು ಎಲೆ ತೆಗೆದುಕೊಂಡ, ಮಧ್ಯಕ್ಕೆ ಮಡಿಸಿ ಅದರ ದಂಟನ್ನು ಪರ್ರನೆ ಹರಿದು ಪಕ್ಕದಲ್ಲಿಟ್ಟ ನಾಲಗೆಯ ಅಗೃ ತೆಗೆಯಲು ಬರುತ್ತೆ.. ನಂತರ ಮಡಚಿದ ಎಲೆಯನ್ನು ಸುರುಳಿಯಾಗಿ ಸುತ್ತಿದ ಹಲ್ಲುಜ್ಜಲು...ಬ್ರಶ್ಷ್ ಅದು..
ಬಾವಿಯಿಂದ ಕೊಡಪಾನದಲ್ಲಿ ನೀರು ಸೇದಿ ಕೈಯಲ್ಲಿ ನೀರು ತುಂಬಿದ ಚೆಂಬು ಹಿಡಿದು ಬಯಲಿಗೆ ನಡೆದ ...
ಬರುವಷ್ಟರಲ್ಲಿ ನೀರು ಕಾದಿತ್ತು ..
ಪ್ರಪಂಚದ ಮೊದಲನೇ ಮನುಷ್ಯ ತನ್ನದೇ ಆದ ಬೇರೆ ಯಾರಿಗೂ ಇಲ್ಲದ ತನ್ನ ಸಾಬೂನಿನಿಂದ ನೊರೆ ನೊರೆ ಯಾಗಿ ಸ್ನಾನ ಮಾಡುತ್ತಾನೆ ಈಗ..
ತಾನು ಯಾರಿಗೂ ಸಿಗದಂತೆ ಅಡಗಿಸಿಟ್ಟ ಜಾಗಕ್ಕೆ ನಡೆದ....
ಜಂಘಾಬಲವೇ ಉಡುಗಿತು ಆತನ ಸಾಬೂನು ಅಲ್ಲಿಲ್ಲ...
ಪ್ರಪಂಚವೇ ಕೆಳಗೆ ಬಿದ್ದವರ ಹಾಗೆ ....
ಆಗಲೇ ಅಪ್ಪ ಎದ್ದಿದ್ದರು.. ವಿಷಯ ತಿಳಿಸಿ ಅತ್ತ,
ಅಪ್ಪಯ್ಯ ಮನೆಯವರೆಲ್ಲರನ್ನೂ ಎಬ್ಬಿಸಿ ವಿಚಾರಣೆ ಮಾಡಿಸಿದರು ಇಲ್ಲ ಇಲ್ಲ..
ಗೊತ್ತಾಗಲೇ ಇಲ್ಲ ಕಳ್ಳ ಸಿಗಲಿಲ್ಲ...
ಅಮ್ಮ ಅಲ್ಲಿಯೇ ಏಲಾನಿಸಿದಳು
ಇನ್ನು ನಿನಗೆ ಈ ಜನ್ಮದಲ್ಲಿ ಸಾಬೂನು ತಂದು ಕೊಡುವುದಿಲ್ಲ..
ಚಿಕ್ಕಕ್ಕ ನಕ್ಕಳು
ಕಳೆದುದು ಸಿಕ್ಕಿತು...ಆದರೆ..?
ಒಂದು ವಾರವಾದರೂ ಕಳ್ಳನ ಪತ್ತೆಯಾಗಲಿಲ್ಲ, ಮತ್ತು ಸಾಬೂನು ಕೈಗೆ ಬಂದರೂ ದಕ್ಕಲಿಲ್ಲ...
ನನಗೆ ಚಿಕ್ಕಕ್ಕನ ಮೇಲೆ ಸಂಶಯವಿದ್ದರೂ, ಅದಕ್ಕೆ ಆಧಾರವಿರಲಿಲ್ಲ..
ಮತ್ತೊಂದು ಸಾಬೂನಿನ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ
ಇನ್ನು, ಇನ್ನೇನಿದ್ದರೂ ನಾನಾಯ್ತು ನನ್ನ ಬಿಳಿ ಕಲೆ ಅಷ್ಟೇ...
ವಾರದ ಮ್ಲಾನವದನ ಕಂಡ ಬಾವ ಕೇಳಿದರು ಏನಾಯ್ತು. ಮತ್ತೆ ಪ್ರವರ ಬಿಚ್ಚಿಕೊಂಡಿತು...
ಹೋಗಲಿ ಬಿಡು, ನೀನು ಒಂದು ಉಪಾಯ ಮಾಡು ಪೇಟೆಯಲ್ಲಿ ಫೋಟೋ ಗ್ರಾಫರ್ ಅಂಗಡಿಯಲ್ಲಿ
ಕೇಳಿದರೆ ಹೈಪೋ ( ರಾಸಾಯನಿಕ ) ಸಿಗುತ್ತೆ. ಅದನ್ನು ಹಚ್ಚಿಕೊಂಡರೆ ನಿನ್ನ ಮುಖದ ಬಿಳಿ ಕಲೆ ಶಾಶ್ವತವಾಗಿ ಮಾಯ ಆಗುತ್ತೆ..
ಅದೇ ದಿನ ಸಂಜೆ ಶಾಲೆಯಿಂದ ಬರುವಾಗ ಆ ಹೈಪೋ ತಂದೆ..
ಅಂತೂ ಕಲೆ ಮಾಯವಾಯ್ತು...
ಮೂರ್ನಾಲ್ಕು ತಿಂಗಳ ಬಳಿಕ ನಮ್ಮ ವಾರ್ಷಿಕ ರಜೆ ಆರಂಭವಾಯ್ತು..
ರಜೆಯಲ್ಲಿ ನಮ್ಮ ಉಗ್ರಾಣ ಅಂದರೆ ಅಟ್ಟವನ್ನು ಅರಟುವದೇ ಮಕ್ಕಳ ಕಾಯಕ...
ಅದರಲ್ಲೂ ನಾನಂತೂ ಪುಸ್ತಕದ ಹುಳು...
ತಿಂಡಿ ತಿಂದು ಅಟ್ಟ ಹತ್ತಿದರೆ ಮಧ್ಯಾಹ್ನ ಊಟಕ್ಕೆ ಕರೆಯಬೇಕು ಅಲ್ಲಿಯವರೆಗೆ ಉಗ್ರಾಣದಲ್ಲಿದ್ದ ಹಳೇ ಚಂದಮಾಮ, ಸುಧಾ, ದೀಪಾವಳಿ ಸಂಚಿಕೆ ಕಥೆ ಕಾದಂಬರಿ ಏನಿದ್ದರೂ ..ಬೇಕು
ಹೀಗೇ ಒಮ್ಮೆ ನಮ್ಮ ಮಾವನ ಮನೆಯ ಯಾವುದೋ ಸಮಾರಂಭದಲ್ಲಿ ಅವರ ಮನೆಯ ಅಟ್ಟದಿಂದ ಒಂದು ಪುಸ್ತಕ ಹೆಸರು ಹೆಣ್ಣು ತೋಳ ತೆಕ್ಕೆಯಲ್ಲಿ ಅದು ಯಾರು ಬರೆದದ್ದು ಏನು ಕಥೆ ನೆನಪಿಲ್ಲ, ತಂದು ಓದುತ್ತಿರಬೇಕಾದರೆ ಮನೆಯ ಹಿರಿಯರು ಬಂದು ನಾನು ಓದುವುದನ್ನು ಗಮನಿಸಿ ಹತ್ತಿರ ಬಂದರು, ಆ ಕಥೆ ಪುಸ್ತಕದ ತಲೆ ಬರಹ ಗಮನಿಸಿ, ಹೇಯ್ ಈ ಪುಸ್ತಕ ಯಾರು ಕೊಟ್ಟರು ಈ ಹುಡುಗನಿಗೆ ಅಂತ ಬೈದು ನನ್ನ ಕೈಯಿಂದ ಕಸಿದುಕೊಂಡರು. ಮತ್ತೆಲ್ಲೋ ಇಟ್ಟು ಬಿಟ್ಟಿದ್ದರು, ಅಂತಹದ್ದೇನಿತ್ತು ಅದರಲ್ಲಿ ನೆನಪಿಲ್ಲ...
ಹೀಗೇ ಎಲ್ಲವನ್ನು ಓದಿ ಮುಗಿಸುತ್ತಾ ಇರಬೇಕಾದರೆ..ಯಾವುದೋ ಒಂದು ಪರಿಚಿತ ಸುಗಂಧ ನನ್ನ ನಾಸಿಕಕ್ಕೆ ತಗುಲಿತು..
ಅರೆ ಚಂದ್ರಿಕಾ..??
ಹಳೆ ಪುಸ್ತಕದ ರಾಶಿಯನ್ನು ಕೆದಕಿ ನನ್ನ ನಾಸಿಕ ಅರಚುತಿದ್ದ ನೇರ ದಾರಿಯಲ್ಲಿ....
ಎರಡು ಅಡ್ಡ ಜಂತಿ ಗಳ ನಡುವೆ ಬಿದ್ದುಕೊಂಡಿದೆ, ಅದನ್ನು ಸುತ್ತಿಟ್ಟ ಹೊರ ಕಾಗದಗಳನ್ನು ಸ್ವಲ್ಪವೇ ಕತ್ತರಿಸಿ
ಸಿಕ್ಕಿತು ಅನಾಘ್ರಾಣಿತ ಅಚೂತ ನನ್ನ ಚಂದ್ರಿಕಾ..
ಹೊಚ್ಚ ಹೊಸ ಚಂದ್ರಿಕಾನ ಮೇಲೆ ಎರಡು ಕಡೆಯ ಮುಕ್ಕೆದ್ದ ಇಲಿ ಹಲ್ಲಿನ ಗುರುತು....
ಆದರೇನು ಇನ್ನು ಇವಳ ಉಪಯೋಗವಿಲ್ಲವಲ್ಲ...
No comments:
Post a Comment